ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಗಳಲ್ಲಿ ನೀರಿನ ಗುಣಮಟ್ಟ ಪರೀಕ್ಷೆ

Last Updated 15 ಡಿಸೆಂಬರ್ 2012, 19:54 IST
ಅಕ್ಷರ ಗಾತ್ರ

ದಾವಣಗೆರೆ: ಕುಡಿಯುವ ನೀರು ಎಷ್ಟು ಸುರಕ್ಷಿತ ಎಂಬುದನ್ನು ಗುರುತಿಸಲು ಹಾಗೂ ಉತ್ತಮ ಗುಣಮಟ್ಟದ ಶುದ್ಧ ಕುಡಿಯುವ ನೀರಿನ ಲಭ್ಯತೆಯ ಪ್ರಮಾಣ ತಿಳಿಯಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ವತಿಯಿಂದ ರಾಜ್ಯದಲ್ಲಿ ಮಾಹಿತಿ ದಾಖಲಿಸುವ ಸಮೀಕ್ಷೆಗೆ ಚಾಲನೆ ನೀಡಲಾಗಿದೆ.

ಕೇಂದ್ರ ಸರ್ಕಾರವು  ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ನೀಡುತ್ತಿದೆ. ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿದ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಯೋಜನೆಗಳು ಯಾವ ಹಂತದಲ್ಲಿವೆ; ಶುದ್ಧ ಕುಡಿಯುವ ನೀರು ಕಲ್ಪಿಸುವ ಉದ್ದೇಶ ಎಷ್ಟರಮಟ್ಟಿಗೆ ಸಾಧ್ಯವಾಗಿದೆ ಎಂಬುದನ್ನು ಪತ್ತೆ ಹಚ್ಚುವುದು ಈ ಕಾರ್ಯಕ್ರಮದ ಉದ್ದೇಶ. ಇದಕ್ಕಾಗಿ, ಖಾಸಗಿ ಸಂಸ್ಥೆಗಳ ಮೂಲಕ ಮಾಹಿತಿ ದಾಖಲಿಸುವ ಕಾರ್ಯ ಆರಂಭಿಸಲಾಗಿದೆ. `ಸಂಚಾರಿ ಕುಡಿಯುವ ನೀರು ಗುಣಮಟ್ಟ ಪರೀಕ್ಷಾ ಘಟಕ (ಪ್ರಯೋಗಾಲಯ)'ಗಳ ಮೂಲಕ ಈ ಕಾರ್ಯಕ್ಕೆ ಚಾಲನೆ ದೊರೆತಿದೆ.

ನಿತ್ಯ 30 ಮಾದರಿ ಪರೀಕ್ಷೆ: ಪರೀಕ್ಷೆಯ ಫಲಿತಾಂಶ ದಾಖಲಾತಿ, ಇಲಾಖೆಯ ವೆಬ್‌ಸೈಟ್‌ಗೆ ಆನ್‌ಲೈನ್‌ನಲ್ಲಿ ಮಾಹಿತಿ ಅಳವಡಿಕೆ ಹಾಗೂ ಸಂಬಂಧಿಸಿದ ವಿಭಾಗ, ಉಪವಿಭಾಗಕ್ಕೆ ವರದಿ ಸಲ್ಲಿಕೆ ಕಡ್ಡಾಯ ಎಂದು ಏಜೆನ್ಸಿಗಳಿಗೆ ಸೂಚಿಸಲಾಗಿದೆ. ಇದಕ್ಕಾಗಿ ವಾಹನದಲ್ಲಿ `ಜಿಪಿಎಸ್' ಸಾಧನ ಜೋಡಣೆ, ಅಂತರ್ಜಾಲ ಸೌಲಭ್ಯದ ಕಂಪ್ಯೂಟರ್ ಇರಬೇಕು ಎಂದು ತಿಳಿಸಲಾಗಿದೆ.

ಕಾರ್ಯನಿರ್ವಾಹಕ ಎಂಜಿನಿಯರ್ ಅಥವಾ ಭೂ ವಿಜ್ಞಾನಿಗಳು ಆಯ್ಕೆ ಮಾಡುವ ನೀರಿನ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗುವುದು. ಪ್ರತಿ ದಿನ ಕನಿಷ್ಠ 30 ಮಾದರಿಗಳನ್ನು ಪರೀಕ್ಷಿಸಿ ವರದಿ ನೀಡಬೇಕು. ಕುಡಿಯಲು ಯೋಗ್ಯವಲ್ಲದ ನೀರಿನ ಮೂಲಗಳು ಇರುವ ಗ್ರಾಮಗಳನ್ನು `ನೀರು ಕಲುಷಿತ ಗ್ರಾಮ' ಎಂದು ಗುರುತಿಸಲಾಗುವುದು ಎನ್ನುತ್ತವೆ ಮೂಲಗಳು.
ರಾಜ್ಯದ ಇನ್ನೂ ಬಹುತೇಕ ಹಳ್ಳಿಗಳ ಜನ `ಫ್ಲೋರೈಡ್‌ಯುಕ್ತ' ನೀರು ಸೇವಿಸುತ್ತಿರುವ ಉದಾಹರಣೆಗಳಿವೆ.

ಇದರಿಂದ ಅವರು ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಅತಿ ಹಿಂದುಳಿದ ಹರಪನಹಳ್ಳಿ ತಾಲ್ಲೂಕೊಂದರಲ್ಲಿಯೇ 230 ಗ್ರಾಮಗಳ ಪೈಕಿ 133ನ್ನು `ನೀರು ಕಲುಷಿತಗೊಂಡ ಗ್ರಾಮ'ಗಳೆಂದು ಗುರುತಿಸಲಾಗಿದೆ. ಇವಕ್ಕೆ ಶುದ್ಧ ಕುಡಿಯುವ ನೀರು ಪೂರೈಸುವ ಪರ್ಯಾಯ ವ್ಯವಸ್ಥೆಗೆ ಗುಣಮಟ್ಟ ಪರೀಕ್ಷೆಯಿಂದ ಅನುಕೂಲ ಆಗಲಿದೆ ಎನ್ನುತ್ತಾರೆ ಅಧಿಕಾರಿಗಳು.

ಈ ಬಗ್ಗೆ `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಬಿ. ಹೇಮಚಂದ್ರ, ಜಿಲ್ಲೆಯಲ್ಲಿ ಒಂದೂವರೆ ತಿಂಗಳಿಂದ ಜಲ ಮೂಲಗಳ ಗುಣಮಟ್ಟ ಪರೀಕ್ಷೆ ನಡೆಯುತ್ತಿದೆ. ಎಲ್ಲ ತಾಲ್ಲೂಕುಗಳಲ್ಲಿಯೂ ಈ ಪ್ರಕ್ರಿಯೆ ನಡೆಯಲಿದೆ. ಆ ನೀರು ಕುಡಿಯಲು ಯೋಗ್ಯವೇ ಇಲ್ಲವೇ ಎಂಬ ಮಾಹಿತಿಯನ್ನು ಕೇಂದ್ರ ಸರ್ಕಾರದ ವೆಬ್‌ಸೈಟ್‌ಗೆ ದಾಖಲಿಸಲಾಗುವುದು. `ನೀರು ಕಲುಷಿತಗೊಂಡ ಗ್ರಾಮ'ಗಳಿಗೆ ಶುದ್ಧ ಕುಡಿಯುವ ನೀರು ಕಲ್ಪಿಸುವ ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಾಹಿತಿ ದಾಖಲಿಸುವುದು ಹೇಗೆ?
ಪ್ರತಿ ಜಿಲ್ಲೆಯಲ್ಲಿಯೂ ಖಾಸಗಿ ಸಂಸ್ಥೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ `ಏಜೆನ್ಸಿ'ಗಳನ್ನಾಗಿ ಆಯ್ಕೆ ಮಾಡಲಾಗಿದೆ. ಪ್ರಯೋಗಾಲಯ ವಾಹನದಲ್ಲಿ ನೀರಿನ ಗುಣಮಟ್ಟ ಪರೀಕ್ಷಾ ತಂತ್ರಜ್ಞರು, ಪ್ರಯೋಗಾಲಯ ಸಹಾಯಕರು ಇರುತ್ತಾರೆ. ಅಗತ್ಯ ಸಲಕರಣೆಗಳು ಇರುತ್ತವೆ. ನೀರಿನ ಮಾದರಿಯನ್ನು ಇಲ್ಲಿ ಪರೀಕ್ಷೆಗೆ ಒಳಪಡಿಸಲಾಗುವುದು.

ವರದಿಯನ್ನು (ನೀರಿನಲ್ಲಿರುವ ರಾಸಾಯನಿಕ ಅಂಶಗಳು, ಸೂಕ್ಷ್ಮಾಣುಗಳ ಪತ್ತೆ, ಬಣ್ಣ, ರುಚಿ, ವಾಸನೆ ಆಧಾರದಲ್ಲಿ ಪರೀಕ್ಷೆ ನಡೆಸಲಾಗುವುದು) ಜಿಲ್ಲಾ ಪಂಚಾಯ್ತಿಗೆ ನೀಡಲಾಗುವುದು. ಜಿಲ್ಲೆಯ ಎಲ್ಲ ಪಂಚಾಯ್ತಿಗಳ ಮಟ್ಟದಲ್ಲಿ ಪರೀಕ್ಷೆ ಮುಗಿದ ನಂತರ ಸಂಪೂರ್ಣ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಇಲಾಖೆ ಮೂಲಗಳು `ಪ್ರಜಾವಾಣಿ'ಗೆ ತಿಳಿಸಿವೆ.

ಮುಖ್ಯಾಂಶಗಳು
ನೀರು ಕಲುಷಿತಗೊಂಡ ಗ್ರಾಮಗಳ ಪತ್ತೆ
ಸಂಚಾರಿ ಪ್ರಯೋಗಾಲಯ ಬಳಕೆ
ಕೇಂದ್ರ ಸರ್ಕಾರಕ್ಕೆ ಮಾಹಿತಿ ರವಾನೆ
ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT