ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮದಲ್ಲಿ ಸೂತಕದ ಛಾಯೆ

ಭದ್ರಾಪುರ: ಮೂವರು ಸಹೋದರರ ಹತ್ಯೆ ಪ್ರಕರಣ
Last Updated 20 ಜುಲೈ 2013, 10:42 IST
ಅಕ್ಷರ ಗಾತ್ರ

ಶಿವಮೊಗ್ಗ: ಇದು ಇಡೀ ಮಲೆನಾಡನ್ನು ಬೆಚ್ಚಿ ಬೀಳಿಸಿದ ಘಟನೆ. ಕಟುಕ ಹೃದಯದವರೂ ಕೇಳಿದರೂ ಹೌಹಾರುವ ಕೃತ್ಯ. ಈ ಭೀಕರ ಘಟನೆಯಿಂದಾಗಿ ಅತ್ತ ಇಡೀ ಕುಟುಂಬ ದಿಕ್ಕುಕಾಣದಂತಾಗಿದ್ದರೆ, ಇತ್ತ ಇಡೀ ಹಳ್ಳಿಯೇ ಸಿಡಿಲು ಬಡಿದಂತೆ ಸ್ತಬ್ಧಗೊಂಡಿದೆ. ಗ್ರಾಮದಲ್ಲಿ ಬೀಡು ಬಿಟ್ಟ ಪೊಲೀಸ್ ವಾಹನ, ಜನರೇ ಸಂಚರಿಸದಂತೆ ಬಿಕೋ ಎನ್ನುವ ರಸ್ತೆಗಳು, ಸ್ಥಗಿತಗೊಂಡ ಕೃಷಿ ಚಟುವಟಿಕೆಗಳು, ಇದು ಮೂವರ ಸಹೋದರರ ಹತ್ಯೆಯ ಭೀಕರ ಘಟನೆ ನಂತರದ ಭದ್ರಾಪುರ ಗ್ರಾಮದ ಸ್ಥಿತಿ.
    
ಭದ್ರಾಪುರ ಅಪ್ಪಟ ಕೃಷಿಕರ ಊರು. ವ್ಯವಸಾಯ ಇಲ್ಲಿನ ಜನರ ಮುಖ್ಯ ಕಸುಬು ಈಗ ಗ್ರಾಮಸ್ಥರು ತೋಟ-ಜಮೀನಿಗೆ ಹೆಜ್ಜೆ ಇಡಲೂ ಹೆದರುತ್ತಿದ್ದಾರೆ. ಹೆಂಗಸರು, ಮಕ್ಕಳು ಮನೆ ಬಿಟ್ಟು ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಪೊಲೀಸರು ಊರಿನಲ್ಲಿ ಮೊಕ್ಕಾಂ ಹೂಡಿದ್ದರೂ ಅವರಲ್ಲಿ ಇನ್ನೂ ಭದ್ರತೆಯ ಭಾವ ಮೂಡಿಲ್ಲ.

ಜುಲೈ 15ರಂದು ಗ್ರಾಮದಲ್ಲಿ ನಡೆದ ಸಹೋದರರ ಹತ್ಯೆ ಗ್ರಾಮಸ್ಥರನ್ನು ಭಯಭೀತರನ್ನಾಗಿಸಿದೆ. ಈ ವರ್ಷ ವಾಡಿಕೆಗಿಂತ ಉತ್ತಮ ಮಳೆ ಆಗುತ್ತಿದೆ. ಮಲೆನಾಡಿನಾದ್ಯಂತ ಭತ್ತದ ನಾಟಿ ಕೆಲಸ ಭರದಿಂದ ಸಾಗಿದೆ. ಆದರೆ, ಭದ್ರಾಪುರದಲ್ಲಿ ಆವರಿಸಿರುವ ಸೂತಕದ ಛಾಯೆ ರೈತರನ್ನು ಕಂಗೆಡಿಸಿದೆ. ಗದ್ದೆ-ತೋಟ, ಹೊಲ-ಮನೆ ಎಂದರೆ ಗ್ರಾಮಸ್ಥರಿಗೆ ಜುಗುಪ್ಸೆ ಮೂಡಿದೆ.

ಗ್ರಾಮದ ಯಾರನ್ನೇ ಮಾತನಾಡಿಸಿದರೂ ಯಾರಿಗೆ ಬೇಕು ಭೂಮಿ, ಯಾರಿಗೆ ಬೇಕು ವ್ಯವಸಾಯ ಎಂಬ ವೈರಾಗ್ಯದ ಮಾತುಗಳನ್ನಾಡುತ್ತಾರೆ. ಪಕ್ಕದ ಊರುಗಳಲ್ಲಿ, ಶಿವಮೊಗ್ಗ ನಗರದಲ್ಲಿ ನೆಲಿಸಿರುವ ಭದ್ರಾಪುರ ಮೂಲದ, ಗ್ರಾಮದಲ್ಲೇ ಜಮೀನು ಹೊಂದಿರುವ ರೈತರು ಈ ಊರಿನ ಸಹವಾಸವೇ ಬೇಡ ಎಂದು ಸಿಗುವಷ್ಟು ಬೆಲೆಗೇ ಜಮೀನನ್ನು ಮಾರಾಟ ಮಾಡಲು ಆಲೋಚಿಸುತ್ತಿದ್ದಾರೆ.

ಅಂತ್ಯಸಂಸ್ಕಾರಕ್ಕೆಂದು ಭದ್ರಾಪುರಕ್ಕೆ ಆಗಮಿಸಿದ ಸುತ್ತಮುತ್ತಲ ಗ್ರಾಮಸ್ಧರು  `ಭದ್ರಾಪುರಕ್ಕೆ ಯಾರೂ ತಮ್ಮ ಹೆಣ್ಣು ಮಕ್ಕಳನ್ನು ಕೊಡಲೂ ಬಾರದು. ಇಲ್ಲಿಂದ ಸಂಬಂಧಗಳನ್ನು ಬೆಳೆಸಲೂ ಬಾರದು ಎಂಬ ನಿರ್ಧಾರ ಕೈಗೊಂಡಿದ್ದಾರೆ. ತಮ್ಮ ಮಗಳನ್ನು ಯಾರು ಮದುವೆ ಮಾಡಿಕೊಳ್ಳುತ್ತಾರೆ ? ಮಗನಿಗೆ ಎಲ್ಲಿ ಸಂಬಂಧ ಬೆಳೆಸಲಿ?' ಎಂಬ ದುಗುಡ ವ್ಯಕ್ತಪಡಿಸುತ್ತಾರೆ ಗ್ರಾಮದ ಹಿರಿಯರೊಬ್ಬರು. 

`ಕೆಲ ವರ್ಷಗಳ ಹಿಂದೆಯೂ ಜಮೀನೊಂದರ ವಿಷಯಕ್ಕೆ ಹೊಡೆದಾಟ ನಡೆದಿತ್ತು. ಇದರಿಂದ ಒಬ್ಬರ ಹತ್ಯೆಯೂ ಆಗಿತ್ತು. ಆಗ ಗ್ರಾಮದ ಹಿರಿಯರು ಇಂಥ ಘಟನೆ ಆಗಬಾರದೆಂಬ ಉದ್ದೇಶದಿಂದ ಸಭೆ ನಡೆಸಿ ಶಾಂತಿ ಕಾಪಾಡಿಕೊಳ್ಳುವ ಮಾತುಗಳನ್ನಾಡಿದ್ದರು. ಆದರೆ, ಈಗ ನಡೆದಿರುವ ಘಟನೆ ನೋಡಿದರೆ ಊರಿನಲ್ಲಿ ಮತ್ತೆ ಭಯಮುಕ್ತವಾಗಿ ನೆಮ್ಮದಿಯಿಂದ ಜೀವನ ಮಾಡುವುದು ಸಾಧ್ಯವಿಲ್ಲ ಎನಿಸುತ್ತಿದೆ' ಎನ್ನುತ್ತಾರೆ ಹೆಸರು ಹೇಳಬಯಸದ  ಮಹಿಳೆಯೊಬ್ಬರು.

`ಗ್ರಾಮದ ಗೌರವ ಮಣ್ಣುಪಾಲಾಗಿದೆ. ಗ್ರಾಮಸ್ಥರಲ್ಲಿದ್ದ ಪರಸ್ಪರ ನಂಬಿಕೆ ಮಾಯವಾಗಿದೆ. ಸಹಬಾಳ್ವೆ ಕಣ್ಮರೆಯಾಗಿದೆ.
ನಾವು ಕಂಡ, ಹುಟ್ಟಿ ಬೆಳೆದ ಊರು ಇದೆಯೇ ಎಂಬ ಅನುಮಾನ ಮೂಡುತ್ತಿದೆ. ಭದ್ರಾಪುರದವರ ಜೀವನ ಸರಿ ಆಗಬೇಕಾದರೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು. ಇದು ಮುಂದೆ ತಪ್ಪು ಮಾಡುವವರಿಗೆ ಎಚ್ಚರಿಕೆ ನೀಡಬೇಕು' ಎಂದು ಗದ್ಗದಿತರಾಗಿ ನುಡಿಯುತ್ತಾರೆ ಗ್ರಾಮದ ವೃದ್ಧರೊಬ್ಬರು.
-ಎನ್.ನಾಗರಾಜ್ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT