ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಸಭೆ ಕಲಾಪವೂ ನೇರ ಪ್ರಸಾರ

ಮೊದಲ ಹಂತದಲ್ಲಿ 1000 ಗ್ರಾಮ ಪಂಚಾಯಿತಿಗಳಲ್ಲಿ ಜಾರಿ
Last Updated 2 ಜನವರಿ 2014, 6:27 IST
ಅಕ್ಷರ ಗಾತ್ರ

ಬೆಂಗಳೂರು: ಸಂಸತ್ ಮತ್ತು ವಿಧಾನಮಂಡಲ ಕಲಾಪದ ಹಾಗೆ ಗ್ರಾಮ ಪಂಚಾಯಿತಿಯ ಗ್ರಾಮಸಭೆಗಳನ್ನೂ ಟಿ.ವಿ.ಗಳಲ್ಲಿ ನೇರ ಪ್ರಸಾರ ಮಾಡಲು ಸರ್ಕಾರ ನಿರ್ಧರಿಸಿದೆ. ಈ ವ್ಯವಸ್ಥೆ ಮೊದಲ ಹಂತದಲ್ಲಿ 1,000 ಗ್ರಾಮ ಪಂಚಾಯಿತಿಗಳಲ್ಲಿ ಮಾರ್ಚ್‌ 1ರಿಂದ ಜಾರಿಗೆ ಬರಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ.ಪಾಟೀಲ್‌ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸ್ಥಳೀಯ ಕೇಬಲ್‌ ಟಿ.ವಿ. ಆಪರೇಟರ್‌ಗಳ ಸಹಕಾರದಿಂದ ಗ್ರಾಮಸಭೆಗಳ ಕಲಾಪವನ್ನು ನೇರ ಪ್ರಸಾರ ಮಾಡಲಾಗುವುದು. ಈ ಸಲುವಾಗಿ ₨ 10 ಕೋಟಿ ಮೀಸಲಿಡಲಾಗಿದೆ. ಮೂಲಸೌಲಭ್ಯಕ್ಕಾಗಿ ಒಂದೊಂದು ಗ್ರಾಮ ಪಂಚಾಯಿತಿಗೆ ₨1.5ರಿಂದ 2 ಲಕ್ಷ ಅನುದಾನ ನೀಡುವ ಉದ್ದೇಶ ಇದೆ ಎಂದು ಅವರು ಹೇಳಿದರು.

ಸದ್ಯಕ್ಕೆ ಕೇಬಲ್‌ ವ್ಯವಸ್ಥೆ ಇರುವ ಗ್ರಾಮಗಳಲ್ಲಿ ಇದು ಜಾರಿಗೆ ಬರಲಿದೆ. ಡಿ.ಟಿ.ಎಚ್‌ ಸೇವೆ ಇರುವ ಗ್ರಾಮಗಳಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ಚಿಂತನೆ ನಡೆದಿದೆ ಎಂದು ಅವರು ವಿವರಿಸಿದರು. ಗ್ರಾಮಸಭೆಗಳಲ್ಲಿ ಭಾಗವಹಿಸಲು ಸಾಧ್ಯವಾಗದ ಜನರಿಗೂ ಅಲ್ಲಿನ ತೀರ್ಮಾನಗಳ ಪೂರ್ಣ ಮಾಹಿತಿ ಇರಲಿ ಎನ್ನುವ ಕಾರಣಕ್ಕೆ ನೇರ ಪ್ರಸಾರದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಾಟೀಲ್‌ ತಿಳಿಸಿದರು.

ನರೇಗಾ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ (ನರೇಗಾ) ಈ ವರ್ಷ ದಾಖಲೆಯ ಮಾನವ ದಿನಗಳನ್ನು ಸೃಷ್ಟಿಸಲಾಗಿದೆ. 2010–11ರಲ್ಲಿ 206 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಲಾಗಿತ್ತು. 2013–14ನೇ ಸಾಲಿನ ನವೆಂಬರ್‌ ಅಂತ್ಯದವರೆಗೆ 228.73 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಿ, ₨ 1,187 ಕೋಟಿ ಖರ್ಚು ಮಾಡಲಾಗಿದೆ. ಕೇಂದ್ರ ಸರ್ಕಾರ ₨ 1,203 ಕೋಟಿ ಮಂಜೂರು ಮಾಡಿದ್ದು, ಬಾಕಿ ಇರುವ ₨ 900 ಕೋಟಿ ಬಿಡುಗಡೆಗೂ  ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ಆಟದ ಮೈದಾನ ಅಭಿವೃದ್ಧಿ, ಕಣ ನಿರ್ಮಾಣ, ಕೆರೆ ದುರಸ್ತಿ, ಭೂ ಅಭಿವೃದ್ಧಿ ಇತ್ಯಾದಿ 70 ಸಾವಿರ ಕಾಮಗಾರಿಗಳು ನಿರ್ಮಾಣ ಹಂತದಲ್ಲಿವೆ ಎಂದು ಹೇಳಿದರು. 

ಬಯೋಮೆಟ್ರಿಕ್‌ ಜಾರಿ: ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿಯೂ ಮಾರ್ಚ್‌ 1ರೊಳಗೆ ಬಯೊಮೆಟ್ರಿಕ್‌ ವ್ಯವಸ್ಥೆ ಜಾರಿ ಮಾಡಲಾಗುವುದು. ಸಿಬ್ಬಂದಿ ಹಾಜರಾತಿ ಆನ್‌ಲೈನ್‌ ಲಭಗ್ಯವಾಗಲಿದೆ ಎಂದರು.

ಕಿಯೋಸ್ಕ್‌ಗೆ ಚಾಲನೆ
ವಿವಿಧ ಕಡತ ಹಾಗೂ ಸಾರ್ವಜನಿಕರ ಪತ್ರಗಳ ಹಾಲಿ ಸ್ಥಿತಿ ಬಗ್ಗೆ ಮಾಹಿತಿ ನೀಡುವ ಕಿಯೋಸ್ಕ್‌ಗೆ ಸಚಿವರು ಈ ಸಂದರ್ಭದಲ್ಲಿ ಚಾಲನೆ ನೀಡಿದರು. ಬಹುಮಹಡಿ ಕಟ್ಟಡದಲ್ಲಿ ಅದನ್ನು ಸ್ಥಾಪಿಸಲಾಗಿದೆ.

2ನೇ ಸಲವೂ ಪ್ರಶಸ್ತಿ
ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಗಳಿಗೆ (ಆರ್‌ಸೆಟಿ) ನೀಡಿದ ಸಹಕಾರ ಮತ್ತು ಮಾರ್ಗದರ್ಶನಕ್ಕೆ ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ನೀಡುವ ಪ್ರಶಸ್ತಿ 2ನೇ ಬಾರಿಯೂ ರಾಜ್ಯ ಸರ್ಕಾರಕ್ಕೆ ಸಂದಿದೆ. ಇದು ಹೆಮ್ಮೆಯ ವಿಷಯ ಎಂದು ಪಾಟೀಲ್‌ ತಿಳಿಸಿದರು.

ಗ್ರಾಮೀಣಾಭಿವೃದ್ಧಿ ವಿವಿ: ರಂಗನಾಥ್‌ ನೇತೃತ್ವದಲ್ಲಿ ಸಮಿತಿ
ಬೆಂಗಳೂರು:
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯ ಸ್ಥಾಪಿಸಲು ನಿರ್ಧರಿಸಿರುವ ರಾಜ್ಯ ಸರ್ಕಾರ, ಅದರ ರೂಪುರೇಷೆಗಳ ಕುರಿತು ಸರ್ಕಾರಕ್ಕೆ ಸಲಹೆ ನೀಡಲು ನಿವೃತ್ತ ಐಎಎಸ್‌ ಅಧಿಕಾರಿ ಎಸ್‌.ವಿ.ರಂಗನಾಥ್‌ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ರಚಿಸಿದೆ.

ಡಾ.ಎ.ಎನ್‌.ಯಲ್ಲಪ್ಪರೆಡ್ಡಿ ಸೇರಿದಂತೆ 12 ಮಂದಿ ತಜ್ಞರು ಸಮಿತಿಯ ಸದಸ್ಯರಾಗಿದ್ದಾರೆ. ವಿಶ್ವವಿದ್ಯಾಲಯ ಸಂಪೂರ್ಣವಾಗಿ ಸಂಶೋಧನೆಗೆ ಮೀಸಲಾಗಿರಬೇಕೇ ಅಥವಾ ಕೋರ್ಸ್‌ಗಳನ್ನು (ಅಧ್ಯಯನ ವಿಷಯ) ಪ್ರಾರಂಭಿಸಬೇಕೇ? ಹಾಗೆ ಮಾಡುವುದಾದರೆ ಯಾವ ಕೋರ್ಸ್‌ಗಳು ಇರಬೇಕು ಇತ್ಯಾದಿ ಅಂಶಗಳ ಬಗ್ಗೆ ಸಮಿತಿ ಅಧ್ಯಯನ ನಡೆಸಿ, ಎರಡು ವಾರದಲ್ಲಿ ವರದಿ ನೀಡಲಿದೆ ಎಂದು ಸಚಿವ ಪಾಟೀಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT