ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಸಭೆಯಲ್ಲಿ ಭುಗಿಲೆದ್ದ ಜನರ ಆಕ್ರೋಶ

`ಅಪರಾಧ ನಿಯಂತ್ರಿಸದಿದ್ದರೆ ಕಾನೂನು ಕೈಗೆ'
Last Updated 22 ಡಿಸೆಂಬರ್ 2012, 6:02 IST
ಅಕ್ಷರ ಗಾತ್ರ

ಶನಿವಾರಸಂತೆ: `ಪಟ್ಟಣದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಚಾಲನಾ ಪರವಾನಗಿ ಇಲ್ಲದೇ ಬೈಕುಗಳನ್ನು ಓಡಿಸಲಾಗುತ್ತಿದೆ. ಹಲವಾರು ಕಳ್ಳತನಗಳು ನಡೆದಿವೆ. ಆದರೂ ಪೊಲೀಸರು ಕ್ರಮ ಕೈಗೊಂಡಿಲ್ಲ. ಹೀಗೆ ಮುಂದುವರಿದರೆ ನಾವೇ ಕಾನೂನು ಕೈಗೆತ್ತಿಕೊಳ್ಳಬೇಕಾಗುತ್ತದೆ...'

ಶನಿವಾರಸಂತೆಯಲ್ಲಿ ಗುರುವಾರ ನಡೆದ ಗ್ರಾಮಸಭೆಯಲ್ಲಿ ಜನರಿಂದ ಕೇಳಿಬಂದ ಆಕ್ರೋಶದ ಮಾತುಗಳಿವು.
ಶಾಲಾ- ಕಾಲೇಜು ಬಿಡುವ ಸಮಯದಲ್ಲಿ ಬೈಪಾಸ್ ರಸ್ತೆಯಲ್ಲಿ ಕೆಲ ಪುಂಡರು ವಿದ್ಯಾರ್ಥಿನಿಯರನ್ನು ಚುಡಾ ಯಿಸುತ್ತಾರೆ. ಪಾನಮತ್ತರಾಗಿ ಬಾಟಲಿಗಳನ್ನು ರಸ್ತೆಯಲ್ಲಿ ಒಡೆದು ಹಾಕುತ್ತಾರೆ. ಬೈಕುಗಳನ್ನು ಅತಿ ವೇಗವಾಗಿ ಓಡಿಸುತ್ತಾರೆ. ಟ್ರಾಫಿಕ್‌ಜಾಮ್ ಮಿತಿಮೀರಿದೆ. ಸುಳುಗಳಲೆ ಕಾಲೊನಿಯಲ್ಲಿ ನಡೆಯುತ್ತಿರುವ ಜೂಜಾಟದ ಬಗ್ಗೆ ಮಾಹಿತಿ ನೀಡಿದರೂ ಸ್ಪಂದಿಸುತ್ತಿಲ್ಲ ಎಂದು ಜನ ದೂರಿದರು.

ವಿದ್ಯುತ್ ಇಲಾಖೆ ವಿಪರೀತವಾಗಿ ಲೋಡ್ ಶೆಡ್ಡಿಂಗ್‌ನಿಂದ ವಿದ್ಯಾರ್ಥಿ ಗಳಿಗೆ ತುಂಬ ತೊಂದರೆಯಾಗುತ್ತಿದೆ ಎಂದೂ ಜನ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸೆಸ್ಕ್ ಎಂಜಿನಿಯರ್ ಪ್ರಸಾದ್, ರಾತ್ರಿ 10 ಗಂಟೆಯ ಮೇಲೆ ಎರಡು ಗಂಟೆಗೊಮ್ಮೆ ಲೋಡ್‌ಶೆಡ್ಡಿಂಗ್ ಮಾಡಲಾಗುವುದು ಎಂದರು.

ಪಂಚಾಯಿತಿ ಮೇಲ್ದರ್ಜೆಗೆ
ಶನಿವಾರಸಂತೆಯನ್ನು ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರಿಸುವ ಉದ್ದೇಶದಿಂದ 7 ವರ್ಷಗಳ ಹಿಂದೆ ಸಿಟಿ ಸರ್ವೇ ಕಾರ್ಯ ಕೈಗೊಳ್ಳಲಾಗಿತ್ತು. ಆದರೆ, ಇದೂವರೆಗೆ ಯಾವ ಬೆಳವಣಿಗೆಯೂ ನಡೆದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದರು. ಇಲಾಖೆಯ ದಿವ್ಯ ನಿರ್ಲಕ್ಷ್ಯದ ಬಗ್ಗೆ ಪಂಚಾಯಿತಿ ಅಧ್ಯಕ್ಷರೂ ದನಿಗೂಡಿಸಿದರು.

ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಅಭಿವೃದ್ಧಿ ಕಾಮಗಾರಿ ಮಾಡಿರುವ ಅಧ್ಯಕ್ಷರ ಕಾರ್ಯವೈಖರಿ ಬಗ್ಗೆಯೂ ಸಭೆಯಲ್ಲಿ ಪ್ರಶಂಸೆ ವ್ಯಕ್ತವಾಯಿತು. ತಾಲ್ಲೂಕು ಪಂಚಾಯಿತಿ ಸದಸ್ಯೆ ಸವಿತಾ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಸಲೀಂ ಪ್ರಗತಿಯಲ್ಲಿರುವ ಕಾಮಗಾರಿ ಬಗ್ಗೆ ವರದಿ ಮಂಡಿಸಿದರು. ವಿವಿಧ ಇಲಾಖಾಧಿಕಾರಿಗಳು ತಮ್ಮ ತಮ್ಮ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳ ವರದಿ ನೀಡಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಚಂದ್ರಕಲಾ, ಸದಸ್ಯರಾದ ಭುವನೇಶ್ವರಿ, ಜ್ಯೋತಿ, ಶಾಂತಾ, ಧನಲಕ್ಷ್ಮಿ, ಡಿ.ಎನ್. ರಾಜಶೇಖರ್,  ಮಹ್ಮದ್‌ಗೌಸ್, ಬಿ.ಎಸ್. ಮಂಜುನಾಥ್, ಪಿಡಿಒ ಬಿ.ಈ. ಶಿವಣ್ಣ ಇದ್ದರು. ಹಲವು ಗ್ರಾಮಸ್ಥರು ಪ್ರಶ್ನೆಗಳ ಸುರಿಮಳೆಗರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT