ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಸ್ಥರಿಂದ ಅಕ್ರಮ ಮರಳು ಸಂಗ್ರಹ: 28 ಲಕ್ಷ ಮೌಲ್ಯದ ಮರಳು ವಶ

Last Updated 20 ಆಗಸ್ಟ್ 2012, 8:25 IST
ಅಕ್ಷರ ಗಾತ್ರ

ಮದ್ದೂರು: ತಾಲ್ಲೂಕಿನ ಕೊಪ್ಪ ವ್ಯಾಪ್ತಿಯ ಕಿರಂಗೂರು ಬಳಿ ಶಿಂಷಾ ನದಿ ಪಾತ್ರದಿಂದ ಅಕ್ರಮ ವಾಗಿ ತೆಗೆಯಲಾದ 28 ಲಕ್ಷ ರೂಪಾಯಿ ಮೌಲ್ಯದ ಮರಳು ಸಂಗ್ರಹವನ್ನು ಜಿಲ್ಲಾಧಿಕಾರಿ ಕೃಷ್ಣಯ್ಯ ಅವರ ನೇತೃತ್ವದಲ್ಲಿ ಭಾನುವಾರ ವಶಪಡಿಸಿಕೊಳ್ಳಲಾಯಿತು.

ತಾಲ್ಲೂಕಿನ ಶಿಂಷಾ ನದಿ ಪಾತ್ರದಿಂದ ಮರಳು ತೆಗೆಯುವುದನ್ನು ನಿಷೇಧಿಸಲಾಗಿದ್ದು, 144 ನಿಷೇಧಾಜ್ಞೆ ಹೊರಡಿಸಲಾಗಿದೆ. ಆದರೆ ಮುಂಗಾರು ವೈಫಲ್ಯದಿಂದಾಗಿ ನವಿಲೆ ಕಿರು ಅಣೆಕಟ್ಟೆಯಲ್ಲಿ ನೀರು ಕ್ಷೀಣಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಗ್ರಾಮಸ್ಥರು ಜೆಸಿಬಿ, ಟಿಪ್ಪರ್‌ಗಳ ಸಹಾಯದಿಂದ ಅಕ್ರಮವಾಗಿ ಮರಳನ್ನು ನದಿಯಿಂದ ತೆಗೆದು ಬೃಹತ್ ದಾಸ್ತಾನು ಮಾಡಿದ್ದರು.
 
ಅಕ್ರಮ ದಾಸ್ತಾನಿನ ಬಗೆಗೆ ಖಚಿತ ವರ್ತಮಾನ ಸಿಕ್ಕಿದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಎಂ.ಕೆ.ಸವಿತಾ ನೇತೃತ್ವ ದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು, ಗಣಿ ಭೂ ವಿಜ್ಞಾನ ಇಲಾಖಾಧಿಕಾರಿಗಳು ಶನಿವಾರ ರಾತ್ರಿಯೇ ದಾಸ್ತಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.

ಭಾನುವಾರ ಸಂಜೆ ವೇಳೆಗೆ ದಾಸ್ತಾನು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕೃಷ್ಣಯ್ಯ ಅವರು, ಲೋಕೋ ಪಯೋಗಿ ಇಲಾಖೆಯ ಸಹಾಯದೊಂದಿಗೆ ಮರಳು ದಾಸ್ತಾನು ಸಂಗ್ರಹದ ಪರಿಶೀಲನೆ ನಡೆಸಿದರು. ಒಟ್ಟು 3100 ಕ್ಯೂಬಿಕ್ ಮೀಟರ್ ಮರಳು ಸಂಗ್ರಹ ವಾಗಿದ್ದು, ಇದನ್ನು ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಂತರ ಸುದ್ದಿಗಾರರೊಡನೆ ಮಾತನಾಡಿದ ಅವರು, ಪ್ರತಿಬಂಧಕಾಜ್ಞೆಯ ನಡುವೆ ಗ್ರಾಮಸ್ಥರು ನದಿಯಿಂದ ಮರಳು ಹೆಕ್ಕಿರುವುದು ಅಪರಾಧವಾಗಿದ್ದು, ಅಂತಹ ಗ್ರಾಮಸ್ಥರ ಪಟ್ಟಿಯನ್ನು ತಯಾರಿಸಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುವುದು. ಶಿಂಷಾ ನದಿಪಾತ್ರದಲ್ಲಿ ಈಗಾಗಲೇ ಸಾಕಷ್ಟು ಮರಳು ಗಣಿಗಾರಿಕೆ ನಡೆದಿದ್ದು, ಈ ವ್ಯಾಪ್ತಿಯ ಅಂರ್ತಜಲ ಮಟ್ಟ ತೀವ್ರ ಕುಸಿದಿದೆ.
 
ಅಲ್ಲದೇ ಇಲ್ಲಿನ ಜೈವಿಕ ಪರಿಸರದ ಮೇಲೂ ವ್ಯತಿರಿಕ್ತ ಪರಿಣಾಮವಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಅಕ್ರಮ ಮರಳು ಗಣಿಗಾರಿಕೆ ನಡೆಸಲು ಅವಕಾಶ ನೀಡುವುದಿಲ್ಲ. ಇನ್ನು ಮುಂದೆ ಇನ್ನಷ್ಟು ಸಂಚಾರ ತನಿಖಾ ದಳಗಳನ್ನು ನಿಯೋಜಿಸಿ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲಾಗುವುದು ಎಂದು ತಿಳಿಸಿದರು.

ಉಪ ವಿಭಾಗಾಧಿಕಾರಿ ಶಾಂತ ಹುಲ್ಮನಿ, ಎಎಸ್‌ಪಿ ರಾಜಣ್ಣ, ತಹಶೀಲ್ದಾರ್ ಎಂ.ಕೆ.ಸವಿತಾ, ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಲಕ್ಷ್ಮಮ್ಮ, ಕಿರಿಯ ವಿಜ್ಞಾನಿಗಳಾದ ಚಂದ್ರಶೇಖರ್, ಶೋಭರಾಣಿ, ನವೀನ್, ಕೊಪ್ಪ ಪಿಎಸ್‌ಐ ಮುನಿಯಪ್ಪ, ರಾಜಸ್ವ ನಿರೀಕ್ಷಕ ದೇವರಸೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT