ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ ನಿರ್ಧಾರ

ಮೂಡಿಗೆರೆ: ಮೂಲಸೌಲಭ್ಯ ಕಾಣದ ಅಡ್ಡಗುಡ್ಡೆ ಗಿರಿಜನ ಹಾಡಿ
Last Updated 11 ಏಪ್ರಿಲ್ 2014, 5:18 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನ ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡ್ಡಗುಡ್ಡೆ ಗಿರಿಜನ ಕಾಲೊನಿಗೆ ಸೂಕ್ತ ಮೂಲ ಸೌಲಭ್ಯಗಳನ್ನು ಕಲ್ಪಿಸಿಲ್ಲ ಎಂದು ಆರೋಪಿಸಿ ಈ ಬಾರಿಯ ಲೋಕ­ಸಭಾ ಚುನಾವಣೆಯ ಬಹಿಷ್ಕಾರಕ್ಕೆ ಗ್ರಾಮಸ್ಥರು ನಿರ್ಧರಿಸಿದ್ದಾರೆ.

ತಾಲ್ಲೂಕು ಕೇಂದ್ರದಿಂದ ಸುಮಾರು 23 ಕಿ.ಮೀ. ದೂರದಲ್ಲಿರುವ ಅಡ್ಡಗುಡ್ಡೆ ಗ್ರಾಮವು, ಅಪ್ಪಟ ಗಿರಿಜನರಾದ ಮಲೆಕುಡಿಯ ಜನಾಂಗಕ್ಕೆ ಸೇರಿದ ಸುಮಾರು ಇಪ್ಪತ್ತು ಕುಟುಂಬಗಳು ವಾಸ ಮಾಡುತ್ತಿರುವ ಗ್ರಾಮವಾಗಿದ್ದು, ಮೂಲತಃ ಬೆಳ್ತಂಗಡಿ ತಾಲ್ಲೂಕಿನ ನೆರಿಯಾ ಪ್ರದೇ­ಶದ ಸುತ್ತಮುತ್ತಲಿನ ಪ್ರದೇಶಗಳಿಂದ ಸುಮಾರು ಒಂದು ದಶಕಗಳ ಹಿಂದೆಯೇ ಗ್ರಾಮಕ್ಕೆ ಬಂದು ನೆಲೆಸಿದವರಾಗಿದ್ದು, ಇದು­ವರೆಗೂ ಗ್ರಾಮಕ್ಕೆ ಕುಡಿಯುವ ನೀರು, ರಸ್ತೆ, ಸೇತುವೆಯಂತಹ ಮೂಲ ಸೌಕರ್ಯಗಳನ್ನು ಕಲ್ಪಸದೇ ಜನಪ್ರತಿನಿಧಿಗಳು ಗ್ರಾಮವನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿ ಈ ಬಾರಿಯ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

ಗ್ರಾಮದಲ್ಲಿ ಸುಮಾರು 70 ಜನರಿದ್ದು, 32 ಮತದಾರರಿದ್ದಾರೆ. ಕೆಲವು ಪೋಷಕರು ತಮ್ಮ ಮಕ್ಕಳನ್ನು ನೆರೆ ಹೊರೆಯ ನಂಟರ ಮನೆಗಳಲ್ಲಿ ಬಿಟ್ಟು ಶಿಕ್ಷಣ ನೀಡುತ್ತಿದ್ದರೆ, ಬಹುತೇಕ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಬದುಕುತ್ತಿದ್ದಾರೆ. ಗ್ರಾಮಕ್ಕೆ ಬಿಳ್ಳೂರು ಮತ್ತು ಗೌಡಳ್ಳಿ ಗ್ರಾಮ­ಗಳಿಂದ ಸಂಪರ್ಕ ರಸ್ತೆಯಿದ್ದು, ಇವೆರಡೂ ಸಂಧಿ­ಸುವ ಮೂಲರಹಳ್ಳಿ ತಿರುವಿನಿಂದ ಮೂರು ಕಿ.ಮೀ. ದುರ್ಗಮ ರಸ್ತೆಯಿದ್ದು, ಇದುವರೆಗೂ ಈ ರಸ್ತೆ ಜಲ್ಲಿ ಸಹ ಕಂಡಿಲ್ಲ. ಅಲ್ಲದೇ ಗ್ರಾಮದ ಸಮೀಪದಲ್ಲಿ ರಸ್ತೆಗೆ ಅಡ್ಡವಾಗಿರುವ ಊರುಬಗೆ ನದಿಗೆ ಸೇತುವೆಯಿಲ್ಲದೇ ಕಾಲು ಸಂಕವನ್ನೇ ಬಳಸಿಕೊಳ್ಳಲಾಗುತ್ತಿದೆ.

ಗ್ರಾಮಕ್ಕೆ ಕುಡಿಯುವ ನೀರಿಗಾಗಿ ಗ್ರಾಮದ ಸಮೀಪದಲ್ಲಿರುವ ಗುಡ್ಡದಿಂದ ನೀರಿನ ಸಂಪರ್ಕ ಕಲ್ಪಿಸಿದೆ­ಯಾದರೂ, ಅಧಿಕಾರಿಗಳ ಅವೈಜ್ಞಾನಿಕತೆ­ಯಿಂದ ಹತ್ತು ಲಕ್ಷ ವೆಚ್ಛ ಮಾಡಿದರೂ ಗ್ರಾಮಕ್ಕೆ ಇದುವರೆಗೂ ಕುಡಿಯುವ ನೀರು ಹರಿದಿಲ್ಲ. ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಮತ್ತು ಪ್ರಾಥಮಿಕ ಶಾಲೆ ವ್ಯವಸ್ಥೆಯಿಲ್ಲದಿರುವುದರಿಂದ, ಶಿಕ್ಷಣಕ್ಕಾಗಿ ಏಳು ಕಿ.ಮೀ ಸಾಗಬೇಕಾಗಿದ್ದು, ಶಿಕ್ಷಣ ಇಲ್ಲಿ ಮರೀಚಿಕೆಯಾಗಿದ್ದು, ಸಾಕ್ಷರತೆಗೆ ಶೂನ್ಯ ಕೊಡುಗೆಯಾಗಿದೆ. ಗ್ರಾಮದಿಂದ ಸುಮಾರು ಹದಿನೈದು ಕಿ.ಮೀ. ದೂರದ ಸತ್ತಿಗನಹಳ್ಳಿ ಗ್ರಾಮದಲ್ಲಿ ಪಡಿತರ ಕೇಂದ್ರವಿದ್ದು, ಸಾರಿಗೆ ವ್ಯವಸ್ಥೆಯಿಲ್ಲದೇ, ಬಹುತೇಕ ಜನರು ಪಡಿತರ ಸಾಮಾಗ್ರಿಗಳನ್ನೇ ಖರೀದಿಸುವುದಿಲ್ಲ, ಗ್ರಾಮದ ಬಹುತೇಕ ಜನರು ಸಣ್ಣಪುಟ್ಟ ರೈತರಾಗಿದ್ದು, ಕೂಲೆಯನ್ನೇ ನಂಬಿ ಬದುಕುತ್ತಿ­ರುವ­ವರಾಗಿದ್ದಾರೆ.

ಗ್ರಾಮಕ್ಕೆ ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ಹಲವು ಬಾರಿ ಒತ್ತಾಯ ಮಾಡಿದರೂ, ಇದುವರೆಗೂ ಗ್ರಾಮಕ್ಕೆ ಜನಪ್ರತಿನಿಧಿಗಳಾಗಲೀ, ಅಧಿಕಾರಿ­ಗಳಾಗಲೀ ಭೇಟಿ ನೀಡಿಲ್ಲ. ಪಕ್ಕದ ಗ್ರಾಮಗಳಿಗೆ ಮತಯಾಚನೆಗಾಗಿ ಆಗಮಿಸುವ ಜನಪ್ರತಿನಿಧಿ­ಗಳು, ಅಡ್ಡಗುಡ್ಡೆ ಗ್ರಾಮಕ್ಕೆ ಭೇಟಿ ನೀಡುವುದಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

ಗ್ರಾಮಕ್ಕೆ ರಸ್ತೆ, ಸೇತುವೆ ಮತ್ತು ಕುಡಿಯುವ ನೀರು ಅಗತ್ಯವಾಗಿದೆ. ಸೇತುವೆ ಇಲ್ಲದಿರುವು­ದರಿಂದ ಗ್ರಾಮಕ್ಕೆ ಯಾವುದೇ ಸಾರಿಗೆ ಸೌಕರ್ಯವಿಲ್ಲ. ಗ್ರಾಮದಲ್ಲಿ ಯಾರಿ­ಗಾದರೂ ಆರೋಗ್ಯದಲ್ಲಿ ಏರುಪೇರಾದರೆ, ಪ್ರಾಣಿಗಳನ್ನು ಹೊತ್ತು ತರುವಂತೆ ಮುಖ್ಯ ರಸ್ತೆಯವರೆಗೆ ಹೊತ್ತು ತರಬೇಕಾಗಿದೆ. ಇಂತಹ ದುಃಸ್ಥಿತಿಯಿಂದ ಹಲವರು ಪ್ರಾಣ ಕಳೆದುಕೊಂಡ ನಿದರ್ಶನ­ಗಳಿವೆ. ಆದುದ್ದರಿಂದ ಈ ಬಾರಿಯ ಲೊೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸ­ಲಾಗಿದ್ದು, ಸಮಸ್ಯೆಯನ್ನು ಪರಿಹರಿಸದಿದ್ದರೆ, ಬಹಿಷ್ಕಾರದ ಜೊತೆಯಲ್ಲಿ ಸತ್ತಿಗನಹಳ್ಳಿಯ ಮತಗಟ್ಟೆ ಕೇಂದ್ರಕ್ಕೆ ಬೀಗಹಾಕಿ ಪ್ರತಿಭಟಿಸ­ಲಾಗುವುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT