ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಕುಡಿಯುವ ನೀರು ಪೂರೈಕೆ ಯೋಜನೆ.....

Last Updated 14 ಅಕ್ಟೋಬರ್ 2011, 5:50 IST
ಅಕ್ಷರ ಗಾತ್ರ

ಧಾರವಾಡ: ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಈಗಾಗಲೇ ಓವರ್‌ಹೆಡ್ ಟ್ಯಾಂಕ್‌ಗಳನ್ನು ನಿರ್ಮಿಸಿದ್ದಲ್ಲಿ, ಅವುಗಳ ಪೂರ್ಣ ಬಳಕೆಯಾಗದೇ ಇರುವಾಗ ಮತ್ತೊಂದು ಟ್ಯಾಂಕ್ ನಿರ್ಮಿಸಲು ಕ್ರಮ ಕೈಕೊಳ್ಳದಂತೆ ಸಂಸದ ಪ್ರಹ್ಲಾದ ಜೋಶಿ ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಜಾಗೃತ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಕೇಂದ್ರ ಪುರಸ್ಕೃತ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದ ಕುಡಿಯುವ ನೀರು ಪೂರೈಕೆ ಯೋಜನೆ ಸಮರ್ಪಕವಾಗಿ ಜಾರಿಗೊಳ್ಳುತ್ತಿಲ್ಲ. ಇದಕ್ಕೆ ಕಾರಣ ಟ್ಯಾಂಕ್ ಕಟ್ಟುವವರು ಒಬ್ಬರು, ಪೈಪ್ ಹಾಕುವವರು ಒಬ್ಬರು. ಈ ನಡುವೆ ಅಧಿಕಾರಿಗಳ ವರ್ಗಾವಣೆ ಹೀಗಾಗಿ ಆ ಕಾಮಗಾರಿಗಳ ಉದ್ದೇಶವೇ ವಿಫಲವಾಗಿವೆ. ಅಧಿಕಾರಿಗಳು ಸಾರ್ವಜನಿಕ ಹಿತಾಸಕ್ತಿಯ ಕಾಮಗಾರಿಗಳಲ್ಲಿ ಕನಿಷ್ಠ ಆಸಕ್ತಿ, ಬದ್ಧತೆ ತೋರಿಸದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

ಉದ್ಯೋಗ ಖಾತರಿ ಯೋಜನೆಯಡಿ ಹಲವಾರು ತಪ್ಪುಗಳು ನಡೆದಿವೆ. ನೌಕರರು, ಅಂಗವಿಕಲರು, ಉಳ್ಳವರು ಹಾಗೂ ಗರ್ಭಿಣಿಯರನ್ನು ಈ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ಸೇರಿಸಲಾಗಿರುವುದನ್ನು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಸಭೆಯ ಗಮನಕ್ಕೆ ತಂದರು.

ಪ್ರತಿಯೊಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಕುರಿತಂತೆ ದೂರು ಇರುವ ಸಂದರ್ಭಗಳಲ್ಲಿ ಸೂಕ್ತ ಪರಿಶೀಲನೆ ನಡೆಸಿ ಕ್ರಮ ಕೈಕೊಳ್ಳಬೇಕು. ಈ ಯೋಜನೆಯಡಿ ಅವ್ಯವಹಾರವನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಜಿಲ್ಲೆಯ ಎಲ್ಲ ಪ್ರದೇಶಗಳಲ್ಲಿ ಬಯೋಮೆಟ್ರಿಕ್ ಸ್ಮಾರ್ಟ್‌ಕಾರ್ಡ್ ಬಳಕೆ ಮಾಡಬೇಕು ಎಂದು ಸಂಸದರು ಸೂಚಿಸಿದರು.

ಜಿಲ್ಲಾ ಜಲಾನಯನ ಇಲಾಖೆಯಿಂದ ನಿರ್ಮಿಸಲಾಗಿದ್ದ ಚೆಕ್‌ಡ್ಯಾಂ, ಕೃಷಿ ಹೊಂಡಗಳು ಕಳಪೆ ಗುಣಮಟ್ಟದಿಂದ ಕೂಡಿರುವ ಬಗ್ಗೆ ದೂರುಗಳು ಬಂದಿದ್ದು, ಈ ಕುರಿತು ಲೋಕಾಯುಕ್ತರು ತನಿಖೆ ನಡೆಸುವಂತೆ ತಿಳಿಸಿದರು. ತೋಟಗಾರಿಕಾ ಮಿಶನ್ ಯೋಜನೆ ಅಧಿಕಾರಿಗಳು ಕಳೆದ ಬಾರಿ ಸರಿಯಾಗಿ ಮಾಹಿತಿ ನೀಡಿರಲಿಲ್ಲ.

ಈ ಬಾರಿಯೂ ಪ್ರವಾಸದ ನೆಪವೊಡ್ಡಿ ಸಭೆಗೆ ಹಾಜರಾಗಿಲ್ಲ. ಹೀಗಾಗಿ ಈ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಅವರು ಸೂಚಿಸಿದರು. ಗ್ರಾಮಸಭೆಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಗಲಾಟೆಗಳು ಆಗುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಎಲ್ಲ ಗ್ರಾಮಸಭೆಗಳಲ್ಲಿ ತಾಲ್ಲೂಕಿನ ಸಂಬಂಧಿತ ಇಲಾಖೆಗಳ ಅಧಿಕಾರಿಗಳೆಲ್ಲರೂ ಹಾಜರಿರುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ತಾಲ್ಲೂಕು ಮಟ್ಟದ ಅಧಿಕಾರಿಯೊಬ್ಬರನ್ನು ಆ ಸಭೆಗೆ ನಿಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎಸ್.ಬಿ.ಮುಳ್ಳೊಳ್ಳಿ ತಿಳಿಸಿದರು.

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಆಶ್ರಯ ಮನೆಗಳು, ಇಂದಿರಾ ಆವಾಸ್, ಸ್ವರ್ಣಜಯಂತಿ ಗ್ರಾಮ ಸ್ವರೋಜಗಾರ, ಸಂಪೂರ್ಣ ಸ್ವಚ್ಛತಾ ಆಂದೋಲನ ಕುರಿತು ವಿವರವಾದ ಚರ್ಚೆ ನಡೆಯಿತು.
ಜಿಪಂ ಅಧ್ಯಕ್ಷ ಅಡಿವೆಪ್ಪ ಮನಮಿ, ಜಾಗೃತ ಸಮಿತಿ ನಾಮನಿರ್ದೇಶಿತ ಸದಸ್ಯರಾದ ಮೌನೇಶ ಬಡಿಗೇರ, ವೀಣಾ ಕುಲಕರ್ಣಿ, ಯಡವಣ್ಣವರ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT