ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಪ್ರತಿಭೆಗಳ ನೃತ್ಯ ವೈಭವ...!

Last Updated 25 ಜನವರಿ 2012, 5:30 IST
ಅಕ್ಷರ ಗಾತ್ರ

ಚಳ್ಳಕೆರೆ ತಾಲ್ಲೂಕು ಕೇಂದ್ರದಿಂದ 35 ಕಿ.ಮೀ. ದೂರದಲ್ಲಿರುವ ವೇದಾವತಿ ನದಿಯ ದಂಡೆಯಲ್ಲಿ ಪುಟ್ಟ ದ್ವೀಪದಂತೆ ಕಾಣುತ್ತಾ, ನೀರಾವರಿ ಪ್ರದೇಶಗಳಲ್ಲಿ ನೆಟ್ಟಿರುವ ತೆಂಗು, ಬಾಳೆ ಗಿಡಗಳನ್ನು ಹೊತ್ತು ಸುಂದರ ಪರಿಸರದಿಂದ ಕಂಗೊಳಿಸುವ ಗ್ರಾಮ ನಾರಾಯಣಪುರ.

ಈ ಗ್ರಾಮದಲ್ಲಿ ಈಗ್ಗೆ ಎರಡು ದಶಕಗಳ ಹಿಂದೆ(1991) ಹಳ್ಳಿ ಮಕ್ಕಳಿಗೆ ಅಕ್ಷರ ಕಲಿಸುವ ಪಣತೊಟ್ಟು ಹಿರಿಯ ಸಮಾಜವಾದಿ, ಬುದ್ಧ ಮಾರ್ಗದ ಅಪರೂಪದ ರಾಜಕಾರಣಿ ಕೆ.ಎಚ್. ರಂಗನಾಥ್ ಅವರ ಅಂತರಂಗದ ಗೆಳೆಯ ಬಿ.ವಿ ಮಾಧವರ ಕನಸಿನ ಕೂಸು ಶ್ರೀಮತಿ ಲಲಿತಮ್ಮ ಕೆ.ಎಚ್. ರಂಗನಾಥ್ ಸಂಯುಕ್ತ ಪದವಿಪೂರ್ವ ಕಾಲೇಜು.

ವೇದಾವತಿ ನದಿಯ ದಡದಲ್ಲಿ ಮೌನವಾಗಿಯೇ 21ವರ್ಷಗಳಿಂದ ಗ್ರಾಮೀಣರ ಮಕ್ಕಳಿಗೆ ಪದವಿಪೂರ್ವ ಶಿಕ್ಷಣ ನೀಡುತ್ತಾ ಬಂದಿರುವ ಕಾಲೇಜಿನಲ್ಲಿ ಈಚೆಗೆ ಆಯೋಜಿಸಿದ್ದ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಅಪ್ಪಟ ಗ್ರಾಮೀಣ ಮಕ್ಕಳು ತಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ನೃತ್ಯದ ಮೂಲಕ ಅನಾವರಣಗೊಳಿಸಿದ ಪರಿ ಗ್ರಾಮಮಟ್ಟದಲ್ಲಿ ಅನನ್ಯವಾದುದು.

ಪ್ರತಿ ವರ್ಷ ಅತ್ಯಂತ ವಿಜೃಂಭಣೆಯಿಂದ ಆಚರಿಸುವ ಕಾಲೇಜು ವಾರ್ಷಿಕೋತ್ಸವ 2012ರ ಹೊಸವರ್ಷದ ಮೊದಲ ತಿಂಗಳ 21ರಂದು ಸಂಜೆ ಆಯೋಜಿಸಲಾಗಿತ್ತು. ಇಂತಹ ಸುಂದರ ಸಮಾರಂಭಕ್ಕೆ ಯಲಗಟ್ಟೆ, ಗೊಲ್ಲರಹಟ್ಟಿ, ಬೆಳಗೆರೆ, ತೊರೆಬೀರನಹಳ್ಳಿ, ಕೊನಿಗರ ಹಳ್ಳಿ ರಂಗನಾಥ ಪುರ, ಗೊರ‌್ಲತ್ತು ಸೇರಿದಂತೆ ಸುತ್ತಲ ಹತ್ತೆಂಟು ಹಳ್ಳಿಗಳ ಜನರು ಆಗಮಿಸಿದ್ದು, ವಿಶೇಷ.

ಪುಟ್ಟ ಗ್ರಾಮವಾದ ನಾರಾಯಣಪುರ ಅತ್ಯಂತ ಹೆಚ್ಚು ವಿದ್ಯಾವಂತರಿರುವ ಊರು ಎಂಬ ಖ್ಯಾತಿ ಗಳಿಸಿರುವುದು ಇಲ್ಲಿನ ಶೈಕ್ಷಣಿಕ ಹಿನ್ನೆಲೆಗೆ ಹಿಡಿದ ಕನ್ನಡಿಯಾಗಿದೆ. ಇಂತಹ ಊರಿನಲ್ಲಿ ಮೊನ್ನೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸುಮಾರು 3ರಿಂದ 4 ಸಾವಿರ ಜನ ಸೇರಿರುವುದು ಎದ್ದು ಕಾಣಿಸುವಂತಿತ್ತು.
ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ನಡೆಯುವ ಪೌರಾಣಿಕ ನಾಟಕಗಳಿಗೆ ಇಷ್ಟೊಂದು ಸೇರುತ್ತಿದ್ದರು. ಆದರೆ, ಮಕ್ಕಳ ಕುಣಿತ, ಏಕಪಾತ್ರಾಭಿನಯಗಳನ್ನು ನೋಡಲು ಇಷ್ಟೊಂದು ಜನರೇ? ಎಂದು ಕಣ್ಣು ಹುಬ್ಬೇರಿಸುವಂತೆ ಬಂದ ಅತಿಥಿಗಳು ತದೇಕಚಿತ್ತದಿಂದ ಗಮನಿಸುತ್ತಿದ್ದರು.

21ರ ಸಂಜೆ 5ರಿಂದ ಪ್ರಾರಂಭವಾಗಿ ರಾತ್ರಿ 11ರವರೆಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಿಯು ವಿದ್ಯಾರ್ಥಿಗಳು ದೇಶದ ಏಕತೆ, ಸಾಮಾಜಿಕ ಸೌಹಾರ್ದ, ದೇಶಿ ಶೈಲಿಯ ಜನಪದ ನೃತ್ಯ, ಪೌರಾಣಿಕ ನಾಟಕಗಳಲ್ಲಿ ಬರುವ ಪ್ರಸಿದ್ಧಪಾತ್ರದ ದೃಶ್ಯಗಳ ಅಭಿನಯ ಕಾಲೇಜಿನ ವಿಶಾಲ ಬಯಲಿನಲ್ಲಿ ಹಾಕಿದ್ದ ವೇದಿಕೆಯಲ್ಲಿ ಗ್ರಾಮೀಣ ಪ್ರತಿಭೆಗಳ ಪ್ರತಿಭಾ ಕಲರವ ನೋಡುಗರ ಮನತಣಿಸುವಂತೆ ಅನಾವರಣಗೊಳ್ಳುತ್ತಿತ್ತು.

ಪ್ರತಿಯೊಂದು ನೃತ್ಯ, ಜನಪದ ಹಾಡಿಗೆ ತಕ್ಕ ಹೆಜ್ಜೆ ಹಾಕಿದ ದೃಶ್ಯಗಳು ಮಕ್ಕಳನ್ನು ಈ ಪರಿ ಸಹಪಠ್ಯ ಚಟುವಟಿಕೆಗಳಿಗೆ ತಯಾರಾಗುವಂತೆ ಪ್ರೇರೇಪಣೆ ನೀಡಿದ ಕಾಲೇಜು ಬೋಧಕವರ್ಗ ನೆರೆದಿದ್ದ ಪೋಷಕರು, ಸಾರ್ವಜನಿಕರ ಮೆಚ್ಚುಗೆ ಗಳಿಸುವಂತೆ ಮಾಡಿತ್ತು.
ಜಡೇಕುಂಟೆ ಮಂಜುನಾಥ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT