ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ

Last Updated 4 ಏಪ್ರಿಲ್ 2013, 7:53 IST
ಅಕ್ಷರ ಗಾತ್ರ

ಶಹಾಪುರ: ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದ್ದಂತೆ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಮೆಲ್ಲನೆ ಉಲ್ಬಣಿಸತೊಡಗಿದೆ. ಸಮರ್ಪಕವಾಗಿ ನೀರಿನ ಲಭ್ಯತೆಯಿದ್ದ ಕಡೆ ನಿರ್ವಹಣೆ ಬರವಿದೆ. ಕಿರು ನೀರು ಸರಬರಾಜು ಮೂಲಕ ವಿತರಿಸುವ ಕಡೆ ವಿದ್ಯುತ್ ಸಮಸ್ಯೆಯಿಂದ ಕುಡಿಯುವ ನೀರಿಗೂ ಸಂಚಕಾರ ಬಂದಿದೆ.

ತಾಲ್ಲೂಕಿನ ಕೃಷ್ಣಾ ನದಿ ಪಾತ್ರದ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಾಣಿಸುವುದಿಲ್ಲ. ಅದರ ನಿರ್ವಹಣೆಯ ವಿಫಲತೆಯಿಂದ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ. ನಿರಂತರವಾಗಿ ಕೃಷ್ಣಾನದಿ ಪಾತ್ರದಲ್ಲಿ ಅಕ್ರಮ ಮರಳು ಸಾಗಾಟದ ಬಿಸಿ ಈಗ ಅದರ ಅಕ್ಕಪಕ್ಕದ ಗ್ರಾಮದ ಜನತೆ ಅನುಭವಿಸುವಂತಾಗಿದೆ. ನದಿಯಲ್ಲಿ ಹಿಟಾಚಿಯ ಮೂಲಕ ಮರಳು ಅಗೆದು ಸಾಗಾಟ ಮಾಡಿದ್ದರಿಂದ ತಗ್ಗು ಪ್ರದೇಶದಲ್ಲಿ ಒಂದಿಷ್ಟು ನೀರು ನಿಂತಿವೆ. ಜಾನುವಾರು ಬಿಸಿಲಿಗೆ ಕಾಯ್ದ ನೀರು ಕುಡಿಯುತ್ತಲಿವೆ  ರೋಗದ ಭೀತಿ ಗ್ರಾಮಸ್ಥರನ್ನು ಕಾಡುತ್ತಲಿದೆ. ಇನ್ನೂ ಎರಡು ತಿಂಗಳು ಎಂತಹ ಅಗ್ನಿಪರೀಕ್ಷೆ ಕಾದಿದೆ ಎಂಬ ಆತಂಕವನ್ನು ಸಾಯಿಬಣ್ಣ ಗೊಂದೆನೂರ ವ್ಯಕ್ತಪಡಿಸುತ್ತಾರೆ.

ಹಳ್ಳಿಗಳಲ್ಲಿ ಕೆಟ್ಟು ನಿಲ್ಲುವ ಬೊರವೆಲ್ ದುರಸ್ತಿಗೆ ವಾರಗಟ್ಟಲೇ ಸಮಯವನ್ನು ತೆಗೆದುಕೊಳ್ಳುತ್ತಾರೆ. ಹಿಡಿಶಾಪ ಹಾಕಿ ನೀರಿನ ಲಭ್ಯತೆಯ ಕಡೆ ತೆರಳಿ ತರುವಂತಾಗಿದೆ ಎನ್ನುತ್ತಾರೆ ಶಿವಪ್ಪ. ಹಳ್ಳದ ದಂಡೆಯಲ್ಲಿ ಬಿಸಿ ನೀರಿಗಾಗಿ ವರತಿಯನ್ನು (ಗುಂಡಾ ತೊಡಿ) ಒಡೆದು ಬಟ್ಟಲಿನಿಂದ ನೀರನ್ನು ತುಂಬಿಕೊಂಡು ಕೊಡದಲ್ಲಿ ಹಾಕಿಕೊಳ್ಳುತ್ತೇವೆ. ಅದೇ ಕಲುಷಿತ ನೀರು ಅಮೃತವಾಗಿದೆ. ಪ್ರತಿವರ್ಷ ನೀರಿನ ಸಮಸ್ಯೆ ಎದುರಾಗುತ್ತಲಿದೆ ಸಮರ್ಪಕವಾಗಿ ಅಧಿಕಾರಿ ಸ್ಪಂದಿಸದೆ ಕುಡಿಯುವ ನೀರಿನ ಸಮಸ್ಯೆಯನ್ನು ಜೀವಂತವಾಗಿ ಇರಿಸಿದ್ದಾರೆ ಎನ್ನುತ್ತಾರೆ ಹತ್ತಿಗುಡೂರ ಗ್ರಾಮದ ಶರಣುರಡ್ಡಿ.

ಕೆಲ ಹಳ್ಳಿಗಳಲ್ಲಿ ಮೆಲ್ಲನೆ ಅಂತರ್ಜಲಮಟ್ಟ ಕುಸಿಯುತ್ತಲಿದೆ. ಬೊರವೆಲ್ ನೀರು ಕೂಡಾ ಇಲ್ಲವಾಗಿದ್ದು ಮುಂದೇನು ಎಂಬ ಭಯ ಆವರಿಸಿದೆ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ರಾಜಕೀಯ ಮುಖಂಡರು ಬೆಳಿಗ್ಗೆ ಎದ್ದು ಪಟ್ಟಣ ಪ್ರದೇಶಕ್ಕೆ ಆಗಮಿಸಿ ವಿಧಾನ ಸಭೆ ಕ್ಷೇತ್ರದ ಅಭ್ಯರ್ಥಿಯ ಜೊತೆ ಚರ್ಚಿಸುವುದು ಹಾಗೂ ಗ್ರಾಮಸ್ಥರನ್ನು ಭೇಟಿ ಮಾಡುವುದರಲ್ಲಿ ಮಗ್ನರಾಗಿದ್ದಾರೆ. ಸ್ಥಳೀಯ ಸಮಸ್ಯೆಗಳು ಚುನಾವಣೆಯ ಮುಂದೆ ನಗಣ್ಯವಾಗಿವೆ. ಗ್ರಾಮದ ಜನತೆಯೂ ಒಂದಿಲ್ಲ ಒಂದು ಆಸೆಯ ಬಲೆಯಲ್ಲಿ ಬಿದ್ದಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗಟ್ಟಿಯಾಗಿ ಹೇಳುವ ನೈತಿಕ ಶಕ್ತಿಯನ್ನು ಕಳೆದುಕೊಂಡಿದ್ದರಿಂದ ಸಂಕಷ್ಟಗಳನ್ನು ಎದುರಿಸಿಕೊಂಡು ಕಾಲ ಕಳೆಯುವಂತಾಗಿದೆ ಎನ್ನುತ್ತಾರೆ ಕಿರಿ ಹೈಯ್ಯಾಳ ಗ್ರಾಮದ ವ್ಯಕ್ತಿಯೊಬ್ಬರು.

ಇನ್ನೂ ಎರಡು ತಿಂಗಳು ಕಾಲ ಕಳೆಯುವುದು ಹೇಗೆ ಎಂಬ ಭೀತಿ ಪ್ರತಿ ಹಳ್ಳಿಯ ಜನತೆಯಲ್ಲಿ ಮೂಡಿದೆ. ಮುಂದೇನು ಎಂಬುವುದನ್ನು ನೆನಸಿಕೊಂಡು ಮುಖದ ಮೇಲಿನ ಬೆವರು ಒರಿಸಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT