ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಭಾಗದ ಮೂಕರೋದನ

Last Updated 25 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನಗರಪ್ರದೇಶಗಳಲ್ಲಿ ನಡೆಯುವ ಅತ್ಯಾಚಾರ ಪ್ರಕರಣಗಳಿಗೂ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಅತ್ಯಾಚಾರ ಪ್ರಕರಣಗಳಿಗೂ ಅಜಗಜಾಂತರ ವ್ಯತ್ಯಾಸಗಳಿವೆ.

ಹಳ್ಳಿಗಳಲ್ಲಿ ಮುಖ್ಯವಾಗಿ ಕಾಣುವುದು ಬಡವ - ಶ್ರಿಮಂತನೆಂಬ ವರ್ಗಭೇದ.  ಶ್ರಿಮಂತರ ಮತ್ತು ಜಮೀನುದಾರರ ಹೊಲ-ಗದ್ದೆಗಳಲ್ಲಿ, ಮನೆಗಳಲ್ಲಿ ಬಡ ಕೂಲಿಕಾರ್ಮಿಕರು ದುಡಿಯುತ್ತಿರುತ್ತಾರೆ. ಈ ಕೂಲಿಕಾರರ ಮಕ್ಕಳ ಮೇಲೆ ಜಮೀನುದಾರ ಅಥವಾ ಆತನ ಮಕ್ಕಳು ಅತ್ಯಾಚಾರವೆಸಗುತ್ತಿರುವುದನ್ನು ಕಾಣುತ್ತೇವೆ. ಜೊತೆಗೆ ಗ್ರಾಮಗಳಲ್ಲಿ  ಮೇಲುಕೀಳೆಂಬ ಜಾತಿ ಆಧಾರಿತ ಬದುಕಿದೆ. ಮೇಲ್ಜಾತಿಯವರಿಂದ ದಲಿತರ ಮೇಲಿನ ದೌರ್ಜನ್ಯ, ಅತ್ಯಾಚಾರಗಳೂ ಮಾಮೂಲು. ಆದರೆ ಅತ್ಯಾಚಾರಕ್ಕೊಳಗಾದ ಕೀಳು ಕುಲದ ಮಹಿಳೆಗೆ, ತನಗಾದ ಅನ್ಯಾಯದ ವಿರುದ್ಧ ಪ್ರತಿಭಟಿಸಲು ಧ್ವನಿಯೇ ಇರುವುದಿಲ್ಲ.

ಅಧಿಕಾರ ವಿಕೇಂದ್ರೀಕರಣದಿಂದಾಗಿ ಮರಿಪುಢಾರಿಗಳ ಸಂಖ್ಯೆ ಹೆಚ್ಚಾಗಿದೆ. ಒಂದು ಮೌಲ್ಯವಾಗಬೇಕಿದ್ದ ವಿಕೇಂದ್ರೀಕರಣ ಪ್ರಕ್ರಿಯೆ ಅಚಾತುರ್ಯಗಳಿಗೂ ಎಡೆಮಾಡಿಕೊಡುತ್ತಿರುವುದನ್ನು ಹಳ್ಳಿಗಳಲ್ಲಿ ಕಾಣುತ್ತಿದ್ದೇವೆ. ಕೆಲವೊಮ್ಮೆ ಅತ್ಯಾಚಾರಿಯು ಯಾವುದೋ ಪಕ್ಷಕ್ಕೆ ಸೇರಿದವನಾಗಿರಬಹುದು ಅಥವಾ ಯಾವುದೇ ಪಕ್ಷಕ್ಕೆ ಕಾರ್ಯಕರ್ತನಾಗಿರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಆಗ ರಾಜಕಾರಣ ನುಸುಳಿ ಇಡೀ ಪ್ರಕರಣ ಮುಚ್ಚಿ ಹೋಗುತ್ತದೆ.

ಜಾತೀಯ, ರಾಜಕೀಯ ಅಥವಾ ಮನೆತನಗಳ ದ್ವೇಷಗಳು ಹಳ್ಳಿಗಳಲ್ಲಿ ಅತ್ಯಾಚಾರದ ತಿರುವುಗಳನ್ನು ಪಡೆದುಕೊಳ್ಳುತ್ತವೆ. ಗಂಡಸರ ನಡುವಿನ ದ್ವೇಷಗಳು, ಅವರ ಮನೆ ಹೆಂಗಸರನ್ನು ಅತ್ಯಾಚಾರ ಮಾಡುವ ಮೂಲಕ ಸೇಡು ತೀರಿಸಿಕೊಳ್ಳುವಂತೆ ಆಗಿದೆ. ಹೀಗಾದಾಗ ಅತ್ಯಾಚಾರಕ್ಕೊಳಪಟ್ಟ ಕುಟುಂಬದ ಗಂಡಸರು ಅತ್ಯಾಚಾರಿಗಳ ಕುಟುಂಬದ ಮಹಿಳೆಯರ ಮೇಲೆ ಪ್ರತಿ ಅತ್ಯಾಚಾರ ಮಾಡಿರುವ ದಾಖಲೆಗಳಿವೆ. 

ಹಳ್ಳಿಗಳಲ್ಲಿ ಶೌಚಾಲಯಗಳಿಲ್ಲದೆ ಒಬ್ಬಂಟಿ ಮಹಿಳೆ ಬಹಿರ್ದೆಶೆಗೆ ಹೋದಾಗ, ಹೊಲಗದ್ದೆಗಳಿಗೆ ಕೂಲಿಮಾಡಲು ಹೋದಾಗ, ರಾತ್ರಿ ಅಕ್ರಮ ಮರಳು ಸಾಗಣೆ ಕೆಲಸಕ್ಕೆ ಹೋದಾಗ ಮಹಿಳೆಯರ ಮೇಲೆ ಅತ್ಯಾಚಾರಗಳಾಗುತ್ತಿವೆ.

ಗ್ರಾಮೀಣ ಪ್ರದೇಶಗಳಲ್ಲಿನ ಅತ್ಯಾಚಾರಗಳಿಗೆ ಸೂಕ್ತ ಸಾಕ್ಷ್ಯಗಳೇ ಸಿಗುವುದಿಲ್ಲ. ಜಾತಿ ಬಲದಿಂದ ಶ್ರಿಮಂತಿಕೆ ಮದದಿಂದ ರಾಜಕೀಯ ಬೆಂಬಲದಿಂದ ಸಾಕ್ಷಿಗಳನ್ನು ನಾಶಪಡಿಸಲಾಗುತ್ತದೆ. ಅಸಹಾಯಕತೆಯಿಂದ, ಭಯದಿಂದ, ಹಣದಾಸೆಯಿಂದ ಅತ್ಯಾಚಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಇಡೀ ಪ್ರಕರಣವನ್ನು ಬುಡಮೇಲು ಮಾಡಲಾಗುತ್ತಿದೆ ಎನ್ನುವುದು ಸುಳ್ಳಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT