ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಭಾಗದಲ್ಲಿ ಹೆಚ್ಚಿದ ನೀರಿನ ಅಭಾವ

Last Updated 5 ಏಪ್ರಿಲ್ 2013, 6:48 IST
ಅಕ್ಷರ ಗಾತ್ರ

ದೇವದುರ್ಗ: ತಾಲ್ಲೂಕಿನಲ್ಲಿ 41 ಡಿಗ್ರಿ ತಾಪಮಾನದ ರಣ ಬಿಸಿಲಿಗೆ ಅಂತರ್ಜಲ ಬತ್ತಿ ಬಹುತೇಕ ಗ್ರಾಮಗಳಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಬೇಸಿಗೆ ಆರಂಭವಾಗಿ ತಿಂಗಳು ಕಳೆದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯಿಸಿರುವುದರಿಂದ ಕೆಲವು ಗ್ರಾಮಗಳಲ್ಲಿ ಜನರು ಹನಿ ನೀರಿಗಾಗಿ ಪ್ರತಿನಿತ್ಯ ಪರದಾಡುವಂಥ ಸನ್ನಿವೇಶ ಕಂಡು ಬಂದಿದೆ.

ಯಾವುದೇ ಕಾರಣಕ್ಕೂ ಜನರಿಗೆ ಕುಡಿಯುವ ನೀರಿನ ತೊಂದರೆ ಎದುರಾಗದಂತೆ ವರ್ಷಪೂರ್ತಿ ವಿವಿಧ ಕುಡಿಯುವ ನೀರಿನ ಯೋಜನೆಗಳನ್ನು ರೂಪಿಸಿ ಅದಕ್ಕಾಗಿಯೇ ಕೋಟಿಗಟ್ಟಲೇ ಹಣ ಖರ್ಚು ಮಾಡಲಾಗುತ್ತಿದ್ದರೂ ಜನರಿಗೆ ತೃಪ್ತಿಯಾಗಿ ನೀರು ನೀಡಲು ಸಾಧ್ಯವಾಗಿಲ್ಲ. ಕೆಲವು ಯೋಜನೆಗಳು ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೇವಲ ಕಚೇರಿಯ ಕಡತದಲ್ಲಿ ಉಳಿಯುವಂತಾಗಿದೆ.

ತಾಲ್ಲೂಕಿನ 25 ಗ್ರಾಮಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಇರುವುದು ದೃಢಪಟ್ಟಿದೆ. ಸದರಿ ಗ್ರಾಮಗಳಲ್ಲಿ ಅಂತರ್ಜಲ ಕುಸಿದಿದೆ, ಹಳೆಯ ಭಾವಿ ಮತ್ತು ಬೋರ್‌ವೆಲ್‌ಗಳು ನೀರಿಲ್ಲದೆ ಬತ್ತಿಹೋಗಿ ಕುಡಿಯುವ ನೀರಿಗಾಗಿ ಜನರು ಅಲೆದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. 

ಈಗಾಗಲೇ ನೀರಿನ ಹಾಹಾಕಾರ ಸೃಷ್ಟಿಯಾಗಿ ಚಿಕ್ಕಬೂದೂರು, ಸಲಿಕ್ಯಾಪೂರು, ಮಶಿಹಾಳ, ಬೂದೂರು, ಹಿರೇಬುದೂರು, ಹದ್ದಿನಾಳ, ಅಮರಾಪೂರ, ಯರಮಸಾಳ, ಹಂಚಿನಾಳ, ಗುಂಟ್ರಾಳ, ಸೂಗುರಾಳ, ಹಿರೇರಾಯಕುಂಪಿ. ಇಂಗಳದಾಳ, ತಿಪ್ಪಲದಿನ್ನಿ, ಹಾಗೂ ಕಮದಾಳ, ಸೂಗರಾಳ, ವಂದಲಿ, ಗ್ರಾಮದ ಜನ ಮತ್ತು ಜಾನುವಾರಗಳಿಗೆ ನೀರಿನ ತೊಂದರೆ ಕಾಣಿಸಿಕೊಂಡಿರುವ ಬಗ್ಗೆ ತಿಳಿದು ಬಂದಿದೆ.

ಕೆಲವು ಗ್ರಾಮಗಳ ಪಕ್ಕದಲ್ಲಿ ಈ ಹಿಂದೆ ಹರಿಯುತ್ತಿದ್ದ ಹಳ್ಳಗಳು ಬತ್ತಿ ಹೋಗಿದ್ದು, ಅದೇ ಹಳ್ಳದಲ್ಲಿ ತಾಸು ಗಟ್ಟಲೇ ಕುಳಿತು ಒರತೆ ನೀರು ತಂದು ಕುಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸದರಿ ಗ್ರಾಮಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದು ಸಾಮಾನ್ಯವಾಗಿತ್ತು ಆದರೆ ಕಳೆದ ಮೂರು ವರ್ಷಗಳಿಂದ ಮುಂಗಾರು ಮತ್ತು ಹಿಂಗಾರು ಮಳೆ ಸಕಾಲಕ್ಕೆ ಬಾರದೆ ಇರುವುದರಿಂದ ಈ ಬಾರಿ ಬೇಸಿಗೆ ಆರಂಭದಲ್ಲಿಯೇ ನೀರಿನ ತೊಂದರೆ ಉಲ್ಬಣಗೊಂಡಿದೆ.

ತಾಲ್ಲೂಕಿನ ಕರಿಗುಡ್ಡ ಗ್ರಾಮದಲ್ಲಿ ಗ್ರಾಪಂ ಇದ್ದರೂ ವಾರ್ಡ್ ಎರಡರಲ್ಲಿ ನೀರಿನ ತೊಂದರೆ ಕೇಳವರು ಇಲ್ಲ. ಜಾಗೀರ ಜಾಡಲದಿನ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮರಕಂದಿನ್ನಿ, ಆಗ್ರಹಾರ, ಜಾಗಟಗಲ್ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಜಾಗಟಗಲ್ ಗ್ರಾಮದ ಜನರು ದೂರದ ಹೆಗಡದಿನ್ನಿ ಗ್ರಾಮಕ್ಕೆ ಕಾಲ್ನಡಿಗೆ ಮೂಲಕ ಹೋಗಿ ನೀರು ತರಬೇಕಾದ ಅನಿವಾರ್ಯತೆ ಇದೆ.

ಮಲ್ದಕಲ್ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಮಲ್ದಕಲ್ ಮತ್ತು ಗೋವಿಂದಪಲ್ಲಿ ಗ್ರಾಮದಲ್ಲಿ ಕುಡಿಯುವ ನೀರಿಗೆ ಜನರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಇಂದಿಗೂ ಯಾರೊಬ್ಬರೂ ಇತ್ತಕಡೆ ಸುಳಿದ ಉದಾಹರಣೆ ಇಲ್ಲ ಎನ್ನುತ್ತಾರೆ ಗ್ರಾಮದ ಮುದುಕಪ್ಪ ಅವರು.

ವ್ಯವಸ್ಥೆ ಇಲ್ಲ: ಬೇಸಿಗೆ ಆರಂಭವಾಗಿ ಒಂದು ತಿಂಗಳ ಕಳೆದಿದೆ. ಈಗಾಗಲೇ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳ ಸಭೆಗಳು ನಡೆದಿಲ್ಲ. ಕುಡಿಯುವ ನೀರಿನ ಸಮಸ್ಯೆ ನಿರ್ವಾಹಣೆಗಾಗಿ ಸಮಿತಿ ಇದ್ದರೂ ಜನರ ತೊಂದರೆ ಮಾತ್ರ ಕೇಳುವರು ಇಲ್ಲದಂತಾಗಿದೆ ಎಂದು ಹಲವು ಗ್ರಾಮಸ್ಥರು ಆಪಾದಿಸಿದ್ದಾರೆ.

ಕಳೆದ ವರ್ಷ ಬರಗಾಲ ಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿ ಸರ್ಕಾರ ಪ್ರಥಮ ಆದ್ಯತೆ ಮೇರೆಗೆ ತಾಲ್ಲೂಕಿಗೆ ಸುಮಾರು 1.50 ಕೋಟಿ ರೂಪಾಯಿಯನ್ನು ಕುಡಿಯುವ ನೀರಿಗಾಗಿ ಖರ್ಚು ಮಾಡಲಾಗಿದ್ದರೂ ಜನರಿಗೆ ಮಾತ್ರ ನೀರಿನ ತಾಪತ್ರೆ ತಪ್ಪಿಲ್ಲ
ವೆಂಕಟೇಶ ನೀಲಗಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT