ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಭಾರತದ ಖರೀದಿ ಸಾಮರ್ಥ್ಯ!

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಎರಡು ದಶಕಗಳ ಹಿಂದೆ ಆರಂಭವಾದ ಆರ್ಥಿಕ ಸುಧಾರಣೆ ಕ್ರಮಗಳ ಪರಿಣಾಮವಾಗಿ ದೇಶದ ಗ್ರಾಮೀಣ ಪ್ರದೇಶಗಳಲ್ಲಿನ ಉಪಭೋಗ ಗುಣವು (ಕನ್‌ಸಂಪ್ಷನ್) ನಗರ ಪ್ರದೇಶಕ್ಕಿಂತಲೂ ಅಧಿಕ ವೇಗದಲ್ಲಿ  ಹೆಚ್ಚುತ್ತಿದೆ ಎನ್ನುತ್ತದೆ ಇತ್ತೀಚೆಗೆ ಈ ಕುರಿತಂತೆ ಸಮೀಕ್ಷೆ ನಡೆಸಿದ `ಕ್ರಿಸಿಲ್~ ಸಂಸ್ಥೆ.

2011ರ ಜನಗಣತಿ ಪ್ರಕಾರ ದೇಶದ ಜನಸಂಖ್ಯೆ 121 ಕೋಟಿ. ಅದರಲ್ಲಿ 83.3 ಕೋಟಿ (ಶೇ 69ರಷ್ಟು) ಜನರು ಗ್ರಾಮೀಣ ಪ್ರದೇಶಗಳಲ್ಲಿಯೇ ವಾಸವ್ದ್ದಿದಾರೆ. ಇಷ್ಟು ದೊಡ್ಡ ಪ್ರಮಾಣದ ಜನಸಂಖ್ಯೆ, ಸರಕುಗಳ ಮೌಲ್ಯ ಮತ್ತು ಗ್ರಾಹಕ ಸೇವೆಗಳಿಗೆ ತಮ್ಮದೇ ಆದ ರೀತಿಯಲ್ಲಿ ದೊಡ್ಡ ಪ್ರಮಾಣದ ಕೊಡುಗೆ ನೀಡುತ್ತಾ ಬಂದಿದೆ.

ಆದರೆ, ಕಳೆದೊಂದು ದಶಕದಲ್ಲಿ ಹೆಚ್ಚುತ್ತಿರುವ ಉದಾರೀಕರಣ ಮತ್ತು ನಗರೀಕರಣದ ಪ್ರಭಾವದಿಂದಾಗಿ ನಗರ ಹಾಗೂ ಗ್ರಾಮೀಣ ಪ್ರದೇಶಗಳ ನಡುವೆ ಇದ್ದ ಅಗಾಧ ಪ್ರಮಾಣದಲ್ಲಿದ್ದ ಉಪಭೋಗ ಗುಣದ ಅಂತರದ ಪ್ರಮಾಣ ಕಡಿಮೆಯಾಗುತ್ತಿದೆ ಎನ್ನುತ್ತದೆ ಸಮೀಕ್ಷೆ.

`ಆಶ್ಚರ್ಯಕರ ರೀತಿಯಲ್ಲಿ ಹೆಚ್ಚುತ್ತಿರುವ ಗ್ರಾಮೀಣ ಜನರ ಖರೀದಿ ಸಾಮರ್ಥ್ಯದ ಮೂಲ ಯಾವುದು ಎಂದರೆ, ಅದು ಹೆಚ್ಚುತ್ತಿರುವ ಕೃಷಿಯೇತರ ಉದ್ಯೋಗ ಅವಕಾಶಗಳು ಹಾಗೂ ಗ್ರಾಮೀಣ ಪ್ರದೇಶಗಳನ್ನೇ ಕೇಂದ್ರೀಕರಿಸಿ ಸರ್ಕಾರ ಜಾರಿಗೊಳಿಸುತ್ತಿರುವ ಉದ್ಯೋಗ ಸೃಷ್ಟಿ ಯೋಜನೆಗಳೇ ಆಗಿವೆ~ ಎನ್ನುತ್ತಾರೆ ಕ್ರಿಸಿಲ್‌ನ ವ್ಯವಸ್ಥಾಪಕ ನಿರ್ದೇಶಕಿ ರೂಪಾ ಕುಡ್ವ.

2009-10 ಮತ್ತು 2011-12ರಲ್ಲಿ ನಗರ ಪ್ರದೇಶದ ಜನರು ರೂ. 2994 ಲಕ್ಷ ಕೋಟಿ ಮೌಲ್ಯದ ಖರೀದಿ ವಹಿವಾಟು ನಡೆಸಿದ್ದರೆ, ಗ್ರಾಮೀಣ ಪ್ರದೇಶದವರೂ ರೂ. 3750 ಲಕ್ಷ ಕೋಟಿ ವಹಿವಾಟು ನಡೆಸಿದ್ದು, ವಸ್ತುಗಳ ಉತ್ಪಾದಕರೇ ಹುಬ್ಬೇರಿಸುವಂತೆ ಮಾಡಿದ್ದಾರೆ. ಈ ಎರಡು ವರ್ಷಗಳಲ್ಲಿ ಆರ್ಥಿಕ ಕ್ಷೇತ್ರದಲ್ಲಿ ಕಾಣುತ್ತಿರುವ ಹಿಮ್ಮುಖ ಚಲನೆಯ ಪ್ರವೃತ್ತಿಯು `ಅಭಿವೃದ್ಧಿ ಅರ್ಥಶಾಸ್ತ್ರದ ಇಳಿಕೆಯ ಸಿದ್ಧಾಂತದ ಸಾಕ್ಷ್ಯ~ದಂತಿದೆ ಎನ್ನುತ್ತಾರೆ ರೂಪಾ.

ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಸ್ಥೆಯ (ಎನ್‌ಎಸ್‌ಎಸ್‌ಒ) ಅಂಕಿ-ಅಂಶ ಹೇಳುವಂತೆ 2004-05ರಿಂದ 2009-10ರ ಮಧ್ಯದ ಅವಧಿಯಲ್ಲಿ ಕೃಷಿ ಆಧಾರಿತ ಉದ್ಯೋಗಗಳು 24.90 ಕೋಟಿಯಿಂದ 22.90 ಕೋಟಿ ಸಂಖ್ಯೆಗೆ ಇಳಿದಿರುವ ನಡುವೆಯೇ ಕೃಷಿಯೇತರ ಉದ್ಯೋಗಗಳು ಶೇ 88ರಷ್ಟು ಹೆಚ್ಚಿವೆ.

ಅಲ್ಲದೆ, ನಗರಕ್ಕೆ ವಲಸೆ ಬರುವ ಗ್ರಾಮೀಣ ಜನರಿಗೆ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ವಿಫುಲ ಉದ್ಯೋಗಾವಕಾಶ ದೊರೆಯುತ್ತಿವೆ. ಇವರು ಉಳಿಸಿದ ಹಣ ಊರಿನಲ್ಲಿರುವ ಮನೆ  ಮಂದಿಗೆ ರವಾನಿಸುತ್ತಾರೆ. ಇದು ಗ್ರಾಮದಲ್ಲಿ ಉಳಿದುಕೊಂಡಿರುವವರ ಖರೀದಿ ಶಕ್ತಿಯನ್ನು ಹೆಚ್ಚಿಸಿದೆ. ಇದುವೇ ಗ್ರಾಮೀಣ ಭಾಗಗಳ `ತುಷ್ಟಿಗುಣ ಹೆಚ್ಚಳ~ಕ್ಕೆ ಕಾರಣ ಎನ್ನುತ್ತದೆ `ಕ್ರಿಸಿಲ್~ ವರದಿ.

ನಗರ ಪ್ರದೇಶದ ಒಟ್ಟು ಕಾರ್ಮಿಕ ವರ್ಗ ಪಡೆಯುವ ನಿವ್ವಳ ಆದಾಯದಲ್ಲಿ ಶೇ 70ರಷ್ಟು ನಗರಕ್ಕೆ ವಲಸೆ ಬಂದ ಕುಟುಂಬಗಳಿಗೆ ಸೇರಿದ್ದು ಅದು ಗ್ರಾಮೀಣ ಪ್ರದೇಶಕ್ಕೆ ರವಾನೆಯಾಗುತ್ತದೆ ಎಂಬುದು ಅಂಶ ಗಮನಾರ್ಹ ಅಂಶವಾಗಿದೆ.

2006ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು(ಎನ್‌ಆರ್‌ಇಜಿಎ) 2008ರಲ್ಲಿ ದೇಶದಾದ್ಯಂತ ವಿಸ್ತರಿಸಲಾಯಿತು. ಜತೆಗೆ ಅನುಷ್ಠಾನಗೊಂಡ ಅನೇಕ ಗ್ರಾಮೀಣಾಭಿವೃದ್ಧಿ ಯೋಜನೆಗಳೂ ಸಾಂಪ್ರದಾಯಿಕ ಕೃಷಿ ಆದಾಯದ ಜತೆಗೆ ಗ್ರಾಮೀಣ ಜನರಿಗೆ ಹೆಚ್ಚುವರಿ ಆದಾಯ ಒದಗಿಸುವ ಮೂಲಗಳಾದವು.

2009-10ನೇ ಸಾಲಿನಲ್ಲಿ `ಎನ್‌ಆರ್‌ಇಜಿಎ~ ಒಂದರಲ್ಲೇ ಶೇ 27ರಷ್ಟು ಗ್ರಾಮೀಣ ಕುಟುಂಬಗಳು ಉದ್ಯೋಗಾವಕಾಶ ಪಡೆದಿವೆ. ಎನ್‌ಆರ್‌ಇಜಿಎ ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿರುವುದು ಗ್ರಾಮೀಣ ಅನುಭೋಗ ವೃದ್ಧಿಗೆ ಕಾರಣವಾಗಿದೆ ಎನ್ನುತ್ತದೆ ಕ್ರಿಸಿಲ್ ಸಮೀಕ್ಷೆ.

ಗ್ರಾಮೀಣ ಆರ್ಥಿಕತೆಯ ಮೇಲೆ ಸರ್ಕಾರದ ಯೋಜನೆಗಳ ಪರಿಣಾಮ ಕುರಿತಂತೆ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಮ್) ನಡೆಸಿರುವ ಸಮೀಕ್ಷೆಯು `ಸದ್ಯ ಗ್ರಾಮೀಣಾಭಿವೃದ್ಧಿಯನ್ನೇ ಗುರಿಯಾಗಿರಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ

(ಎಮ್‌ಜಿಎನ್‌ಆರ್‌ಇಜಿಎ), ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಮಿಷನ್ (ಎನ್‌ಎಫ್‌ಆರ್‌ಎಲ್‌ಎಂ), ಇಂದಿರಾ ಆವಾಸ ಯೋಜನಾ (ಐಎವೈ), ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ (ಎನ್‌ಆರ್‌ಡಿಡಬ್ಲೂಪಿ), ಪೂರ್ಣ ಸ್ವಚ್ಛತಾ ಆಂದೋಲನ (ಟಿಎಸ್‌ಪಿ), ಸಮಗ್ರ ಜಲಾನಯನ ಅಭಿವೃದ್ಧಿ ಯೋಜನೆ (ಐಡಬ್ಲೂಡಿಪಿ), ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನಾ (ಪಿಎಮ್‌ಜಿಎಸ್‌ವೈ) ಮತ್ತು ರಾಜೀವ್ ಗಾಂಧಿ ಗ್ರಾಮೀಣ ವಿದ್ಯುತೀಕರಣ ಯೋಜನಾ (ಆರ್‌ಜಿಜಿವಿವೈ) ಈ ಎಲ್ಲ  ಕೇಂದ್ರ ಸರ್ಕಾರದ ಯೋಜನೆಗಳ ಫಲವಾಗಿ ಗ್ರಾಮೀಣ ಭಾಗದಲ್ಲಿ ಬಹುಬಗೆಯ ಉದ್ಯೋಗಗಳು ಸೃಷ್ಟಿಯಾಗಿ ಗ್ರಾಮೀಣ ಜನರ ಗುಣಮಟ್ಟದ ಜೀವನಕ್ಕೆ ಕಾರಣವಾಗಿದೆ~ ಎನ್ನುತ್ತದೆ.

ಅಗತ್ಯ ಸರಕು ಖರೀದಿಯು ವಿವೇಚನೆಯ ಸರಕು ಖರೀದಿಯಾಗಿ ಬದಲಾಗಿರುವುದು ಗ್ರಾಮೀಣ ಅನುಭೋಗ ಗುಣದ ಮತ್ತೊಂದು ಗಮನಾರ್ಹ ವಿದ್ಯಮಾನವಾಗಿದ್ದು, ಭಾರತದಲ್ಲಿ ಬಡರಾಜ್ಯಗಳು ಎಂದು ಹೇಳಬಹುದಾದ ಬಿಹಾರ ಮತ್ತು ಒರಿಸ್ಸಾದಂತಹ ರಾಜ್ಯಗಳಲ್ಲಿ ಇಂದು ಪ್ರತಿ ಮೂರು ಗ್ರಾಮೀಣ ಕುಟುಂಬಗಳ ಪೈಕಿ ಒಂದು ಕುಟುಂಬದಲ್ಲಿ ಮೊಬೈಲ್ ಫೋನ್ ಇದ್ದರೆ, ಇತರ ರಾಜ್ಯಗಳಲ್ಲಿ ಎರಡು ಗ್ರಾಮೀಣ ಕುಟುಂಬಗಳ ಪೈಕಿ ಒಂದಕ್ಕಿಂತಲೂ ಅಧಿಕ ಕುಟುಂಬಗಳಲ್ಲಿ ಮೊಬೈಲ್ ಫೋನ್ ಇವೆ ಎನ್ನುತ್ತದೆ ಕ್ರಿಸಿಲ್ ವರದಿ.

2009- 10ನೇ ಸಾಲಿನಲ್ಲಿ ಶೇ 42ರಷ್ಟು ಗ್ರಾಮೀಣ ಮನೆಗಳನ್ನು `ಟಿವಿ~ ಪ್ರವೇಶಿಸಿದೆ. ಐದು ವರ್ಷಗಳ ಹಿಂದಿನ ಗ್ರಾಮೀಣ ಪ್ರದೇಶಗಳಲ್ಲಿನ ಟಿವಿ ಸಂಖ್ಯೆಗೆ ಹೋಲಿಸಿದರೆ ಶೇ 26ರಷ್ಟು ಹೆಚ್ಚಳವಾಗಿದೆ. 2009-10ರಲ್ಲಿ ಶೇ 14ರಷ್ಟು ಗ್ರಾಮೀಣ ಕುಟುಂಬಗಳು ದ್ವಿಚಕ್ರ ವಾಹನ ಹೊಂದಿವೆ. ಇದು 2004-05ನೇ ಸಾಲಿಗೆ ಹೋಲಿಸಿದರೆ ದುಪ್ಪಟ್ಟಾಗಿದೆ. ಭಾರತದಲ್ಲಿ ದಿನೇ ದಿನೇ ಏರುತ್ತಿರುವ ಯುವಜನರ ಆದಾಯ ಕೂಡ ಗ್ರಾಮೀಣ ಪ್ರದೇಶದ ಅನುಭೋಗ ಗುಣದ ಹೆಚ್ಚಳಕ್ಕೆ ಪ್ರಮುಖ ಕಾರಣ ಎನ್ನುತ್ತದೆ ಸಮೀಕ್ಷೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT