ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ರಸ್ತೆ ಅಭಿವೃದ್ಧಿ: ಶೆಟ್ಟರ್

Last Updated 2 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ರಾಜ್ಯದ 189 ವಿಧಾನಸಭಾ ಕ್ಷೇತ್ರಗಳ ಗ್ರಾಮೀಣ ಪ್ರದೇಶಗಳಲ್ಲಿ 2012-13ನೇ ಸಾಲಿನಲ್ಲಿ `ನಮ್ಮ ಗ್ರಾಮ, ನಮ್ಮ ರಸ್ತೆ~ ಯೋಜನೆಯಡಿ ತಲಾ 30 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಪ್ರಸ್ತಾವ ಸರ್ಕಾರದ ಮುಂದಿದೆ~ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು (ಎಫ್‌ಕೆಸಿಸಿಐ) ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ `ಕರ್ನಾಟಕದಲ್ಲಿ ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಾಣ ಪ್ರಾಯೋಗಿಕ ಯೋಜನೆಗಳಿಗೆ ಒತ್ತು~ ವಿಷಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

`2011-12ನೇ ಸಾಲಿನಲ್ಲಿ `ನಮ್ಮ ಗ್ರಾಮ, ನಮ್ಮ ರಸ್ತೆ~ ಯೋಜನೆಯಡಿ 189 ವಿಧಾನಸಭಾ ಕ್ಷೇತ್ರಗಳ ಗ್ರಾಮೀಣ ಪ್ರದೇಶದಲ್ಲಿ ತಲಾ 20 ಕಿ.ಮೀ. ಉದ್ದದ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ತಲಾ 30 ಕಿ.ಮೀ. ರಸ್ತೆ ಅಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ ನೀಡುವಂತೆ ಮನವಿ ಮಾಡಲಾಗುವುದು~ ಎಂದರು.

`ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ (ಪಿಎಂಜಿಎಸ್‌ವೈ) ರಾಜ್ಯದಲ್ಲಿ 16,115 ಕಿ.ಮೀ. ಉದ್ದದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಅನುಮೋದನೆ ದೊರೆತಿದೆ~ ಎಂದು ತಿಳಿಸಿದರು. `ಅದರಂತೆ ಈವರೆಗೆ ಆರು ಹಂತದ ಕಾಮಗಾರಿಗಳು ಮುಗಿದಿದ್ದು, ಏಳನೇ ಹಂತದ ಕಾಮಗಾರಿ ಮಾರ್ಚ್ ಹೊತ್ತಿಗೆ ಪೂರ್ಣಗೊಳ್ಳಲಿದೆ. ಈ ಯೋಜನೆ ಜಾರಿಯಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ~ ಎಂದು ಹೇಳಿದರು.

`ಹಾಗಿದ್ದರೂ ಕೇಂದ್ರ ಸರ್ಕಾರ ಕಳೆದ ಎರಡು ವರ್ಷಗಳಲ್ಲಿ ಒಂದು ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿಗೂ ಅನುದಾನ ನೀಡಿಲ್ಲ. ಆ ಹಿನ್ನೆಲೆಯಲ್ಲಿ `ನಮ್ಮ ಗ್ರಾಮ, ನಮ್ಮ ರಸ್ತೆ~ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಒಂದು ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿಗೆ 28 ಲಕ್ಷ ರೂಪಾಯಿ ವೆಚ್ಚ ಮಾಡಲಾಗುತ್ತಿದ್ದು, ಪಿಎಂಜಿಎಸ್‌ವೈ ಯೋಜನೆಯ ಗುಣಮಟ್ಟವನ್ನೇ ಕಾಯ್ದುಕೊಳ್ಳಲಾಗಿದೆ. ಒಟ್ಟು 1,069 ಕೋಟಿ ರೂಪಾಯಿ ವೆಚ್ಚದಲ್ಲಿ 3,713 ಕಿ.ಮೀ. ಉದ್ದದ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ~ ಎಂದರು.

ಎಫ್‌ಕೆಸಿಸಿಐ ಅಧ್ಯಕ್ಷ ಜೆ.ಆರ್. ಬಂಗೇರಾ, `ದೇಶದಲ್ಲಿ ಕೈಗಾರಿಕೆ ಮತ್ತು ಆರ್ಥಿಕ ಬೆಳವಣಿಗೆಗೆ ಪೂರಕವಾಗಿ ರಸ್ತೆ ಸಂಪರ್ಕ ವ್ಯವಸ್ಥೆ ಅಭಿವೃದ್ಧಿಯಾಗಿಲ್ಲ. ಈಗಲಾದರೂ ಇನ್ನಷ್ಟು ಹೆದ್ದಾರಿಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕಿದೆ~ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ವಿಶೇಷ ಕಾರ್ಯದರ್ಶಿಯೂ ಆದ ಮಹಾ ನಿರ್ದೇಶಕ (ರಸ್ತೆ ಅಭಿವೃದ್ಧಿ ವಿಭಾಗ) ಸಿ.ಕಂದಸಾಮಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಜಪಾನ್ ಇಂಟರ್‌ನ್ಯಾಷನಲ್ ಕೋ ಆಪರೇಷನ್ ಏಜೆನ್ಸಿ (ಜೆಐಸಿಎ) ತಜ್ಞ ಡಾ. ಮಸಾಹಿರೊ ಶಿರಟೊ, ಎಫ್‌ಕೆಸಿಸಿಐ ಹಿರಿಯ ಉಪಾಧ್ಯಕ್ಷ ಕೆ. ಶಿವಷಣ್ಮುಗಂ ಸೇರಿದಂತೆ   ಇತರರು ವಿಚಾರ ಸಂಕಿರಣದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT