ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾರಕ

ಖಾಸಗಿ ವೃತ್ತಿಪರ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ರದ್ದು
Last Updated 17 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಖಾಸಗಿ ವೃತ್ತಿಪರ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ರದ್ದಾಗಿರುವುದರಿಂದ ಬಡವರು ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಾರಕ­ವಾಗಲಿದೆ ಎಂಬ ಆತಂಕ ಎದುರಾಗಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಪ್ರತಿಷ್ಠಿತ ಕಾಲೇಜುಗಳಲ್ಲಿ ಮೆರಿಟ್‌ ಆಧಾರದ ಮೇಲೆ ಬಡವರು, ಗ್ರಾಮೀಣ ಭಾಗದವರಿಗೆ ಇದುವರೆಗೆ ಸುಲಭವಾಗಿ ಸರ್ಕಾರಿ ಕೋಟಾದಡಿ ಸೀಟು ಲಭ್ಯವಾಗುತ್ತಿತ್ತು.

ಆದರೆ, 2006ರ ಕರ್ನಾಟಕ ವೃತ್ತಿಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಕಾಯ್ದೆ ಜಾರಿಯಿಂದಾಗಿ ಸರ್ಕಾರಿ ಕೋಟಾ ರದ್ದಾಗಲಿದ್ದು, ಇದರಿಂದ ಗ್ರಾಮೀಣ ಭಾಗದವರಿಗೆ ತೊಂದರೆಯಾಗ­ಲಿದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದರು.

ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಗಳಿಸುವ ಅಂಕಗಳ ಆಧಾರದ ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಸೀಟು ಆಯ್ಕೆ ಮಾಡಿಕೊಳ್ಳುವ ಅವಕಾಶ ಇದುವರೆಗೆ ಇತ್ತು. ಆದರೆ, ಈಗ ಅದಕ್ಕೂ ಸಂಚಕಾರ ಬಂದಿದೆ ಎಂದು ಪೋಷಕ ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದರು.

‘ನಮ್ಮ ಮಗಳು ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಸಿಇಟಿಗೆ ಈಗಿನಿಂದಲೇ ಸಿದ್ಧತೆ ನಡೆಸಿದ್ದಾಳೆ. ಆದರೆ, ಸರ್ಕಾರಿ ಕೋಟಾ ಸೀಟುಗಳು ರದ್ದಾಗಿರುವುದರಿಂದ ಮುಂದೇನು ಮಾಡಬೇಕು ಎಂದು ತೋಚದೆ ಆತಂಕಕ್ಕೆ ಒಳಗಾಗಿದ್ದೇವೆ’ ಎಂದರು.

ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ದುಬಾರಿ ಶುಲ್ಕ ನೀಡಿ ಓದಿಸುವಷ್ಟು ಆರ್ಥಿಕ ಸಾಮರ್ಥ್ಯ ಇಲ್ಲ. ಸರ್ಕಾರಿ ಕೋಟಾದಡಿ ಸೀಟು ದೊರೆತರೆ ಹೇಗೋ ನಿಭಾಯಿಸ­ಬಹುದು ಅಂದುಕೊಂಡಿದ್ದೆವು. ಈಗ ಸರ್ಕಾರಿ ಕೋಟಾ ಸೀಟು ರದ್ದಾಗಿರುವುದರಿಂದ ನಮ್ಮ ಲೆಕ್ಕಾಚಾರ ತಲೆಕೆಳಗಾಗಿದೆ ಎಂದು ತಿಳಿಸಿದರು.

ಸಿಇಟಿ ವ್ಯವಸ್ಥೆ ಜಾರಿಗೆ ಬಂದ ನಂತರ ಬಡ ವಿದ್ಯಾರ್ಥಿಗಳು ಕೂಡ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ, ಎಂಜಿನಿಯರಿಂಗ್‌ ಶಿಕ್ಷಣ ಪಡೆದಿದ್ದಾರೆ. ಇಡೀ ದೇಶಕ್ಕೆ ಮಾದರಿಯಾಗಿದ್ದ ಸಿಇಟಿ ವ್ಯವಸ್ಥೆಯ ಬುಡವನ್ನೇ ಅಲುಗಾಡಿಸಲು ಹೊರಟಿರುವುದು ಸರಿಯಲ್ಲ ಎಂದು ಮತ್ತೊಬ್ಬ ಪೋಷಕ ಎನ್‌.ಜಗದೀಶ್‌ ಹೇಳಿದರು.

ಸರ್ಕಾರಿ ಕೋಟಾ ಸೀಟು ರದ್ದಾದರೆ ಬಡವರು, ಗ್ರಾಮೀಣ ಭಾಗದವರು ವೃತ್ತಿಪರ ಶಿಕ್ಷಣದಿಂದ ವಂಚಿತರಾಗಬೇಕಾಗುತ್ತದೆ. ದುಬಾರಿ ಶುಲ್ಕ ನೀಡಿ ಖಾಸಗಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಸಾಮರ್ಥ್ಯ ಅವರಿಗೆ ಇಲ್ಲ ಎಂದರು.

ಮುಂದೇನು?
ಸುಪ್ರೀಂ ಕೋರ್ಟ್‌ ತೀರ್ಪು ಆಧರಿಸಿ 2006ರ ಕಾಯ್ದೆ ರೂಪಿಸಿರುವುದರಿಂದ ರಾಜ್ಯ ಸರ್ಕಾರದ ಬಳಿ ಹೆಚ್ಚಿನ ಆಯ್ಕೆಗಳು ಇಲ್ಲ ಎನ್ನುತ್ತಾರೆ ತಜ್ಞರು.

ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ಏಕರೂಪ ಕಾನೂನು ಜಾರಿಗೊಳಿಸಬೇಕು. ಆಗ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ತಿಳಿಸಿದರು.

2002ರಲ್ಲಿ ನೀಡಿರುವ ತೀರ್ಪು ಪುನರ್‌ ಪರಿಶೀಲಿಸುವಂತೆ ಕೋರಿ ಸುಪ್ರೀಂಕೋರ್ಟ್‌ ಮೊರೆ ಹೋಗಲು ಅವಕಾಶ ಇದೆ. ಈ ಕಾರ್ಯವನ್ನು ತುರ್ತಾಗಿ ಮಾಡಬೇಕು. ಎಲ್ಲ ರಾಜಕೀಯ ಪಕ್ಷಗಳಲ್ಲಿ ವೃತ್ತಿಪರ ಕಾಲೇಜುಗಳನ್ನು ಹೊಂದಿ­ರುವ ನಾಯಕರು ಇದ್ದಾರೆ. ಹೀಗಾಗಿ ಅವರಿಗೆ ಕೋರ್ಟ್ ಮೊರೆ ಹೋಗುವ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT