ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಸರ್ಕಾರಿ ಐಟಿಐಗೆ ವಿದ್ಯಾರ್ಥಿಗಳ ಕೊರತೆ

ಸರ್ಕಾರಿ ಐಟಿಐ ಕಾಲೇಜುಗಳಲ್ಲಿ 236 ಸೀಟು ಲಭ್ಯ
Last Updated 20 ಜುಲೈ 2013, 6:20 IST
ಅಕ್ಷರ ಗಾತ್ರ

ವಿಜಾಪುರ: ಜಿಲ್ಲೆಯಲ್ಲಿ ಮೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ಗಳಿವೆ. ವಿಜಾಪುರ ಮತ್ತು ಬಬಲೇಶ್ವರದ ಸರ್ಕಾರಿ ಐಟಿಐಗಳಿಗೆ ವಿದ್ಯಾರ್ಥಿಗಳು ಹೆಚ್ಚಾಗಿ ಪ್ರವೇಶ ಪಡೆದಿದ್ದರೆ, ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡದ ಸರ್ಕಾರಿ ಐಟಿಐನಲ್ಲಿ 180 ಸ್ಥಾನಗಳು ಖಾಲಿ ಉಳಿದಿವೆ.

ಈ ಮೂರು ಸರ್ಕಾರಿ ಐಟಿಐ ಗಳಲ್ಲಿ ಖಾಲಿ ಇರುವ 236 ಸ್ಥಾನಗಳ (ರಾಜ್ಯದ 158 ಕಾಲೇಜುಗಳಲ್ಲಿ ಉಳಿದಿರುವ ಒಟ್ಟು ಸ್ಥಾನಗಳು 9547) ಭರ್ತಿಗಾಗಿ ಉದ್ಯೋಗ ಮತ್ತು ತರಬೇತಿ ಇಲಾಖೆ ಮತ್ತೊಮ್ಮೆ ಅರ್ಜಿ ಆಹ್ವಾನಿಸಿದೆ.

ಈ ವರೆಗೆ ಅರ್ಜಿ ಸಲ್ಲಿಸದ, ಈ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ದಾಖಲೆಗಳನ್ನು ಪರಿಶೀಲಿಸಿಕೊಳ್ಳದ ಮತ್ತು ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಇದೇ 26ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

`ಅಗತ್ಯ ಮೂಲ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ, ಹತ್ತಿರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ದಾಖಲೆ ಪರಿಶೀಲನೆ ಮಾಡಿಸಿಕೊಳ್ಳಬೇಕು. ಅರ್ಜಿಯೊಂದಿಗೆ ಶುಲ್ಕ ಪಾವತಿಸಬೇಕಿಲ್ಲ. ಆದರೆ, ದಾಖಲೆ ಪರಿಶೀಲನೆಗಾಗಿ ರೂ.50 ಗಳನ್ನು ನಗದು ರೂಪದಲ್ಲಿ ಆ ಸರ್ಕಾರಿ ಐಟಿಐಗಳಲ್ಲಿ ಪಾವತಿಸಬೇಕು' ಎಂಬುದು ಇಲಾಖೆಯ ಮೂಲಗಳ ಮಾಹಿತಿ.

`ಅರ್ಜಿ ಸಲ್ಲಿಸಿದ ನಂತರ ಅಭ್ಯರ್ಥಿಗಳು ಕೇಳಿರುವ ಕಾಲೇಜು ಮತ್ತು ಟ್ರೇಡ್‌ನಲ್ಲಿ ಲಭ್ಯ ಇರುವ ಸ್ಥಾನಗಳನ್ನು ಅವರ ಮೆರಿಟ್ ಆಧಾರದ ಮೇಲೆ ಹಂಚಿಕೆ ಮಾಡಲಾಗುವುದು. ಈ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನೂ ನೀಡಲಾಗುತ್ತದೆ. ತಮಗೆ ಹಂಚಿಕೆಯಾದ ಸರ್ಕಾರಿ ಕಾಲೇಜಿಗೆ ಹಾಜರಾಗಿ ಅವರು ಪ್ರವೇಶ ಪಡೆಯಬುದು'.

`ಎಸ್‌ಎಸ್‌ಎಲ್‌ಸಿ ಪಾಸಾದ ಅಭ್ಯರ್ಥಿಗಳು ಐಟಿಐ ಪ್ರವೇಶಕ್ಕೆ ಅರ್ಹರು. ಶುಲ್ಕ ಕೇವಲ ರೂ.1200 ಇದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಈ ಶುಲ್ಕವನ್ನು ಸಮಾಜ ಕಲ್ಯಾಣ ಇಲಾಖೆ ಮರುಪಾವತಿ ಮಾಡುತ್ತದೆ. ಎಲೆಕ್ಟ್ರಿಷಿಯನ್, ಫಿಟ್ಟರ್ ಮತ್ತಿತರ ವಿಭಾಗಗಳಿಗೆ ಬೇಡಿಕೆ ಇದೆ. ವಿದ್ಯಾರ್ಥಿನಿಯರೂ ಈ ಕೋರ್ಸ್‌ಗಳನ್ನು ಕಲಿಯುತ್ತಿದ್ದಾರೆ' ಎನ್ನುತ್ತಾರೆ ಬಬಲೇಶ್ವರ ಸರ್ಕಾರಿ ಐಟಿಐ ಪ್ರಾಚಾರ್ಯ ಸಿ.ವಿ. ಹಲಕುರ್ಕಿ.

ನಾಯಿಕೊಡೆ: `ಜಿಲ್ಲೆಯಲ್ಲಿ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಮೂಲ ಸೌಲಭ್ಯ ಇಲ್ಲದಿದ್ದರೂ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ. ಪರೀಕ್ಷೆಯಲ್ಲಿ ಗೋಲ್‌ಮಾಲ್ ನಡೆಸಿ ಆ ವಿದ್ಯಾರ್ಥಿಗಳನ್ನು ಪಾಸ್ ಮಾಡುವ ಹೊಣೆಯನ್ನೂ ಆ ಸಂಸ್ಥೆಗಳವರು ಹೊತ್ತುಕೊಂಡಿರುತ್ತಾರೆ' ಎಂಬುದು ವ್ಯಾಪಕವಾಗಿ ಕೇಳಿ ಬರುತ್ತಿರುವ ಆರೋಪ.

`ಒಂದೆಡೆ ಗ್ರಾಮೀಣ ಪ್ರದೇಶದಲ್ಲಿರುವ ನಾಲತವಾಡ ಸರ್ಕಾರಿ ಐಟಿಐಗೆ ವಿದ್ಯಾರ್ಥಿಗಳು ಹೆಚ್ಚಾಗಿ ಪ್ರವೇಶ ಪಡೆದಿಲ್ಲ. ಆದರೆ, ಯಾವುದೇ ಮೂಲಸೌಲಭ್ಯ ಇಲ್ಲದ ಖಾಸಗಿ ಅನುದಾನ ರಹಿತ ಐಟಿಐಗಳಲ್ಲಿ ಪ್ರವೇಶ ಸಂಖ್ಯೆ ಹೆಚ್ಚಾಗಿರುವುದೇ ಇದಕ್ಕೆ   ನಿದರ್ಶನ' ಎನ್ನುತ್ತವೆ ಮೂಲಗಳು.

`ಜಿಲ್ಲೆಯಲ್ಲಿ ಐದು ಅನುದಾನಿತ ಐಟಿಐಗಳಿದ್ದರೆ, ಖಾಸಗಿ ಅನುದಾನ ರಹಿತ ಐಟಿಐಗಳ ಸಂಖ್ಯೆ 30ಕ್ಕಿಂತ ಹೆಚ್ಚು. ಈ ಐಟಿಐಗಳ ಪ್ರವೇಶಕ್ಕೆ ಕೇಂದ್ರೀಕೃತ ವ್ಯವಸ್ಥೆ ಇಲ್ಲ. ಆಯಾ ಕಾಲೇಜಿನವರೇ ಲಭ್ಯ ಸ್ಥಾನಗಳಿಗೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಾರೆ' ಎಂದು ಅನುದಾನ ರಹಿತ ಐಟಿಐನ ಉಪನ್ಯಾಸಕರೊಬ್ಬರು ಹೇಳಿದರು.

ಲಭ್ಯ ಸೀಟುಗಳು: ಬಬಲೇಶ್ವರ ಸರ್ಕಾರಿ ಐಟಿಐ: ಫಿಟ್ಟರ್- 5, ಎಲೆಕ್ಟ್ರಾನಿಕ್ ಮೆಕ್ಯಾನಿಕ್-2, ಎಲೆಕ್ಟ್ರಿಷಿಯನ್-2.
ವಿಜಾಪುರ ಸರ್ಕಾರಿ ಐಟಿಐ: ಫಿಟ್ಟರ್-7, ಟರ್ನರ್-5, ವೆಲ್ಡರ್-8, ಮೆಕ್ಯಾನಿಕ್ಸ್-2, ಇಒಇ-ಎಲೆಕ್ಟ್ರಿಕ್ (ಎನ್‌ಸಿವಿಟಿ)-22, ವೆುಕ್ಯಾನಿಕ್ ಮೋಟಾರ್ ವೆಹಿಕಲ್ (ಎನ್‌ಸಿವಿಟಿ)-3.
ನಾಲತವಾಡ ಸರ್ಕಾರಿ ಐಟಿಐ: ಫಿಟ್ಟರ್-18, ಎಲೆಕ್ಟ್ರಾನಿಕ್ ಮೆಕ್ಯಾನಿಕ್ (ಎನ್‌ಸಿವಿಟಿ)-34, ಎಲೆಕ್ಟ್ರಿಷಿಯನ್ (ಎಸ್‌ಸಿವಿಟಿ)-9, ಸಿಒಇ-ಎಲೆಕ್ಟ್ರಾನಿಕ್ಸ್ (ಎಸ್‌ಸಿವಿಟಿ) -119.
ವೆಬ್‌ಸೈಟ್:    www.emptrg.kar.nic.in/ www.detkarnataka.org.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT