ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಸೊಗಡಿನ ಚೌಡೇಶ್ವರಿ ನಗರ ಹಬ್ಬ

Last Updated 21 ಜನವರಿ 2011, 14:20 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿದ್ದೂ ಹಳ್ಳಿ ಸೊಗಡು ಉಳಿಸಿಕೊಂಡ ಲಗ್ಗೆರೆಯ ಚೌಡೇಶ್ವರಿನಗರದಲ್ಲಿ 108 ದೇವರ ಉತ್ಸವ ನಡೆಯುತ್ತಿದೆ.

ಹಬ್ಬದ ಅಂಗವಾಗಿ ಎಲ್ಲಾ 108 ಊರ ದೇವತೆಗಳನ್ನು ಹೂವು ಹಸಿರು ತೋರಣ ಒಡವೆ ವಸ್ತ್ರಗಳಿಂದ ಸಿಂಗರಿಸಿಕೊಂಡು ಚೌಡೇಶ್ವರಿ ನಗರದ ಹೆಬ್ಬಾಗಿಲಿನ ಬಳಿ ತರುತ್ತಾರೆ. ಮುತ್ತೈದೆಯರು, ಹೆಣ್ಣುಮಕ್ಕಳು ತಲೆಯ ಮೇಲೆ ಕಳಸ ಹಾಗೂ ಆರತಿಗಳನ್ನು ಹೊತ್ತುಕೊಂಡು ಸೋಬಾನೆ ಪದಗಳನ್ನು ಹೇಳುತ್ತಾ ಮಂಗಳ ವಾದ್ಯಗಳ ಜೊತೆಗೆ  ದೇವತೆಗಳಿಗೆ ಪೂಜೆ ಸಲ್ಲಿಸಿ ಬರಮಾಡಿ ಕೊಳ್ಳುತ್ತಾರೆ.

ಈ ಸಂದರ್ಭದಲ್ಲಿ ಎಲ್ಲೆಲ್ಲೂ ಹಬ್ಬದ ವಾತಾವರಣ, ಮನೆ ಮುಂದೆ ರಂಗೋಲಿ ಬಾಗಿಲಿಗೆ, ಹಸಿರು ತೋರಣ. ಮನೆಗೆ ಬಂದ ನೆಂಟರು ಮತ್ತು ಸ್ನೇಹಿತರಿಗೆ ವಿಶೇಷ ಭೋಜನ. ಅಲ್ಲದೆ ಸಾಮೂಹಿಕ ಅನ್ನದಾನವೂ ನಡೆಯುತ್ತದೆ. ಕೊನೆಯಲ್ಲಿ ಪಲ್ಲಕ್ಕಿ ಉತ್ಸವ, ರಥೋತ್ಸವ, ಲಕ್ಷ ದೀಪೋತ್ಸವ ಇರುತ್ತದೆ.

ಕಳೆದ ಅನೇಕ ವರ್ಷಗಳಿಂದ ಕೆ. ಶ್ರೀನಿವಾಸ ಹಾಗೂ ಸಿ.ಜಯರಾಂ ಮತ್ತಿತರರ ಮುಖಂಡತ್ವದಲ್ಲಿ ಈ ಉತ್ಸವ ನಡೆದುಕೊಂಡು ಬರುತ್ತದೆ. ಈ ಸಲ ಬುಧವಾರ ಆರಂಭವಾಗಿದ್ದು  ಭಾನುವಾರ ಮುಕ್ತಾಯವಾಗಲಿದೆ.

ಇತಿಹಾಸ: ಮೊದಲು ಲಗ್ಗೆರೆ ಸುತ್ತಮುತ್ತ ಹೆಗ್ಗನಹಳ್ಳಿ, ಕುರುಬರಹಳ್ಳಿ, ಅಗ್ರಹಾರ, ಗೊರಗುಂಟೆಪಾಳ್ಯ, ತಿಪ್ಪೇನಹಳ್ಳಿ, ಪೀಣ್ಯ ಕೈಗಾರಿಕೆ ನಗರ, ರಾಜಗೋಪಾಲನಗರ ಸೇರಿದಂತೆ 108 ಗ್ರಾಮಗಳಿದ್ದವು. ಲಗ್ಗೆರೆ ಇವುಗಳ ಮುಖ್ಯ ಕೇಂದ್ರವಾಗಿತ್ತು. ಅದರ ಕುರುಹಾಗಿ ಇಲ್ಲಿ ದೊಡ್ಡ ಆಲದ ಮರ, ಬೃಹತ್ ಪಂಚಾಯತಿ ಕಟ್ಟೆಯನ್ನು ಈಗಲೂ ನೋಡಬಹುದು. ಪುರಾತನ ದುಗಾಲಮ್ಮ, ಭೈರವ ಹಾಗೂ ಈಶ್ವರ, ವೀರಾಂಜನೇಯ ಸ್ವಾಮಿ ದೇವಾಲಯಗಳನ್ನು ಕಾಣಬಹುದು.

ಇಲ್ಲಿನ ಜನರಲ್ಲಿ ಅನೇಕರು ಈಗಲೂ ವ್ಯವಸಾಯ ಮಾಡುತ್ತಾರೆ. ವಿಧವಿಧದ ಹೂ, ತರಕಾರಿ ಬೆಳೆದು ಮಾರುಕಟ್ಟೆಗೆ ಪೂರೈಸುತ್ತಿದ್ದಾರೆ. ಇಲ್ಲಿ ಅನೇಕ ಮನೆಗಳ ಮುಂದೆ ಸೋರೆಕಾಯಿ ಬೆಳೆಯುವುದು ಕಣ್ಣಿಗೆ ಬೀಳುತ್ತದೆ. ಇಲ್ಲಿನ ಚೌಡೇಶ್ವರಿ ದೇವಿ ನಗರದ ವಿವಿಧೆಡೆಯಲ್ಲಿನ ನೇಕಾರರ ಕುಲದೇವತೆ. ಅದಕ್ಕಾಗಿಯೇ ಚೌಡೇಶ್ವರಿ ನಗರ ಎಂಬ ಹೆಸರು ಬಂದಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT