ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೋದಯ ಯೋಜನೆಗೆ ಕಲಬೀಳಗಿ

Last Updated 16 ಅಕ್ಟೋಬರ್ 2012, 9:05 IST
ಅಕ್ಷರ ಗಾತ್ರ

ಜಮಖಂಡಿ: ತಾಲ್ಲೂಕಿನ ಗೋಠೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಲಬೀಳಗಿ ಗ್ರಾಮವನ್ನು 5ನೇ ಹಂತದ ಸುವರ್ಣ ಗ್ರಾಮೋದಯ ಯೋಜನೆ ಅಡಿಯಲ್ಲಿ ಆಯ್ಕೆ ಮಾಡಲಾಗಿದ್ದು, ರೂ 49.54 ಲಕ್ಷ ಅನುದಾನ ಮಂಜೂರಾಗಿದೆ ಎಂದು ಶಾಸಕ ಶ್ರೀಕಾಂತ ಕುಲಕರ್ಣಿ ಹೇಳಿದರು.

ತಾಲ್ಲೂಕು ಪಂಚಾಯಿತಿ ಜಮಖಂಡಿ, ಕೆಆರ್‌ಐಡಿಎಲ್ ಜಮಖಂಡಿ ಹಾಗೂ ಗ್ರಾಮ ಪಂಚಾಯಿತಿ ಗೋಠೆ ಆಶ್ರಯದಲ್ಲಿ ತಾಲ್ಲೂಕಿನ ಕಲಬೀಳಗಿ ಗ್ರಾಮದ ಖಾಜಾ ಮನ್ನಾವಲಿ ದರ್ಗಾದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ `ಕಲಬೀಳಗಿ ಗ್ರಾಮ ಸಭೆ~ಯನ್ನು ಉದ್ಘಾಟಿಸಿ ಮಾತನಾಡಿದರು.

ಕಾಂಕ್ರೀಟ್ ರಸ್ತೆ ನಿರ್ಮಾಣ (ರೂ 20.81 ಲಕ್ಷ), ಚರಂಡಿ ನಿರ್ಮಾಣ (ರೂ 13.87 ಲಕ್ಷ), ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣ (ರೂ 4.95 ಲಕ್ಷ), ಸಮುದಾಯ ಭವನ ನಿರ್ಮಾಣ (ರೂ 7.43 ಲಕ್ಷ), ಘನತ್ಯಾಜ್ಯ ವಿಲೇವಾರಿ (ರೂ 149 ಲಕ್ಷ) ಹಾಗೂ ವಿದ್ಯುತ್ ಸಾಮಗ್ರಿ ಖರೀದಿ (ರೂ 0.99 ಲಕ್ಷ) ಕೈಕೊಳ್ಳಲು ಅವಕಾಶವಿದೆ. ಆದಾಗ್ಯೂ ಗ್ರಾಮಸ್ಥರು ನೀಡುವ ಸಲಹೆಯ ಮೇರೆಗೆ ಹಾಗೂ ಅಗತ್ಯತೆ ಆಧಾರದ ಮೇಲೆ ಕಾಮಗಾರಿಗಳನ್ನು ಬದಲಾಯಿಸಲು ಸಾಧ್ಯವಿದೆ ಎಂದರು.

ಜಮಖಂಡಿ ವಿಧಾನಸಭೆ ಮತಕ್ಷೇತ್ರದಲ್ಲಿ ಬರುವ ಅಡಿಹುಡಿ (ರೂ 108.41ಲಕ್ಷ), ಹುಲ್ಯಾಳ (ರೂ 111.91 ಲಕ್ಷ), ಕೊಣ್ಣೂರ (ರೂ 188.38 ಲಕ್ಷ) ಹಾಗೂ ಬುದ್ನಿ (ರೂ 30 ಲಕ್ಷ) ಗ್ರಾಮಗಳು ಕೂಡ ಸುವರ್ಣ ಗ್ರಾಮೋದಯ ಯೋಜನೆಯಲ್ಲಿ ಆಯ್ಕೆ ಮಾಡಲಾಗಿದೆ ಎಂದರು.

ಭೂಸೇನಾ ನಿಗಮದ ಸಹಾಯಕ ನಿರ್ದೇಶಕ ಉದಯ ಚಟ್ಟರಕಿ ಮಾತನಾಡಿ, ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ನೀಡಲು ಸಲಹೆ, ಸೂಚನೆಗಳ ಕುರಿತು ಸ್ಥಾನಿಕ ವಿಚಾರಣೆ ನಡೆಸಿ ಕ್ರಿಯಾಯೋಜನೆ ರೂಪಿಸಿ ಜಿ.ಪಂ.ನಿಂದ ಆಡಳಿತಾತ್ಮಕ ಮಂಜೂರಾತಿ ಪಡೆದುಕೊಂಡು ಹಣ ಬಿಡುಗಡೆ ಆದ ಮೇಲೆ ಕಾಮಗಾರಿ ಆರಂಭಿಸಲಾಗುವುದು ಎಂದರು.

ಗೋಠೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಶೈಲ ಜುಮನಾಳ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಇಒ ಎ.ಜಿ. ಪಾಟೀಲ, ಭಗವಾನ ಕಿತ್ತೂರ, ಗ್ರಾ.ಪಂ. ಸದಸ್ಯರಾದ ರಾಜುಗೌಡ ಪಾಟೀಲ, ತುಕಾರಾಮ ಪವಾರ, ಅಪ್ಪಾಸಾಬ ವೀರಕರ, ಚಂದ್ರಶೇಖರ ಮಾಳಿ, ಗಿರಿಜಾ ಕಿಲಾರಿ, ಪಾರ್ವತಿ ಬೆಳ್ಳನ್ನವರ ಉಪಸ್ಥಿತರಿದ್ದರು.

ಜೀವಪ್ಪ ಮಾಳಿ ಸ್ವಾಗತಿಸಿದರು. ಶಿಕ್ಷಕ ಎ.ಎಸ್. ಕಿಲಾರಿ ನಿರೂಪಿಸಿ, ವಂದಿಸಿದರು. ಪಿಡಿಓ ದೇಸಾಯಿ, ಭೂಸೇನಾ ನಿಗಮದ ಕಿರಿಯ ಎಂಜಿನಿಯರ್ ಗಾಣಿಗೇರ ಗ್ರಾಮ ಸಭೆ ನಡಾವಳಿಗಳನ್ನು ದಾಖಲಿಸಿಕೊಂಡರು.

ಗ್ರಾಮದ ಸ್ಮಶಾನದಲ್ಲಿ ಶವಾಗಾರ ನಿರ್ಮಿಸಿ ಸ್ಮಶಾನದ ಸುತ್ತಲೂ ತಡೆಗೋಡೆ ಕಟ್ಟಬೇಕು ಎಂಬುದು ಗ್ರಾಮಸ್ಥರ ಬೇಡಿಕೆಯಾಗಿತ್ತು. ಗ್ರಾಮದ ಯುವಕರು ಗ್ರಾಮದಲ್ಲಿ ಕ್ರೀಡಾ ಭವನ ನಿರ್ಮಿಸಬೇಕು ಎಂಬ ಬೇಡಿಕೆ ಮುಂದಿಟ್ಟರು. ಶಾಸಕರು ಈ ಬೇಡಿಕೆಗಳ ಈಡೇರಿಕೆಯ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT