ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕರ ವೇದಿಕೆ: ಬಜಾಜ್ ಸಂಸ್ಥೆಗೆ ರೂ 25 ಸಾವಿರ ದಂಡ

Last Updated 8 ಜನವರಿ 2012, 19:25 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಹಕರೊಬ್ಬರು ಪಡೆದುಕೊಂಡ ಸಾಲವನ್ನು ಸಂಪೂರ್ಣವಾಗಿ ಪಾವತಿ ಮಾಡಿದರೂ ಅದು ಪಾವತಿಯಾಗಿಲ್ಲ ಎಂದು ತೊಂದರೆ ನೀಡಿದ `ಬಜಾಜ್ ಆಟೊ ಫೈನಾನ್ಸ್~ ಸಂಸ್ಥೆಗೆ 25 ಸಾವಿರ ರೂಪಾಯಿಗಳ ದಂಡ ವಿಧಿಸಿ 3ನೇ ಜಿಲ್ಲಾ ಹೆಚ್ಚುವರಿ ಗ್ರಾಹಕರ ವೇದಿಕೆ ಆದೇಶಿಸಿದೆ.

ಈ ಹಣವನ್ನು ಅರ್ಜಿದಾರರಾಗಿರುವ ಬನಶಂಕರಿ ನಿವಾಸಿ ಆರ್. ರಮೇಶ್ ಅವರಿಗೆ ಪರಿಹಾರದ ರೂಪದಲ್ಲಿ ನೀಡಬೇಕು ಎಂದು ವೇದಿಕೆ ಅಧ್ಯಕ್ಷ ಟಿ.ರಾಜಶೇಖರಯ್ಯ ಅವರು ಆದೇಶಿಸಿದ್ದಾರೆ. ರಮೇಶ್ ಅವರು ಮಳಿಗೆಯೊಂದರಿಂದ ಎಲ್‌ಸಿಡಿ ಖರೀದಿಸಿದ್ದರು. ಇದಕ್ಕಾಗಿ ಬಜಾಜ್ ಸಂಸ್ಥೆಯಿಂದ ಸಾಲ ಪಡೆದಿದ್ದರು. ಅವರು ಸಾಲವನ್ನು ನಿಗದಿತ ಅವಧಿಗಿಂತ ಮುನ್ನವೇ ಸಂಪೂರ್ಣ ಪಾವತಿ ಮಾಡಿದ್ದರು.

ಪುಣೆಯಲ್ಲಿರುವ  ತಮ್ಮ ಪ್ರಧಾನ ಕಚೇರಿಯಿಂದ ಹಣದ ಪಾವತಿ ಕುರಿತು ದಾಖಲೆ ಬರಬೇಕಿರುವ ಹಿನ್ನೆಲೆಯಲ್ಲಿ ರಸೀತಿ ನೀಡಲು ವಿಳಂಬ ಆಗುವುದಾಗಿ ಸಂಸ್ಥೆ ತಿಳಿಸಿತ್ತು. ಅದಕ್ಕೆ ರಮೇಶ್ ಒಪ್ಪಿದ್ದರು. ಆದರೆ ಸ್ವಲ್ಪ ದಿನಗಳ ಬಳಿಕ `ನಿಮ್ಮ ಸಾಲ ಬಾಕಿ ಇದ್ದು ಅದನ್ನು ವಾಪಸು ನೀಡಿ~ ಎಂದು ಅರ್ಜಿದಾರರಿಗೆ ಸಂಸ್ಥೆಯಿಂದ ಮೊಬೈಲ್ ದೂರವಾಣಿಯಲ್ಲಿ ಸಂದೇಶ ಬರತೊಡಗಿತು.

ಸಾಲ ಮರುಪಾವತಿ ಮಾಡಲಾಗಿದೆ ಎಂದು ಅರ್ಜಿದಾರರು ಮುಖ್ಯ ಕಚೇರಿ ಸೇರಿದಂತೆ ಬೆಂಗಳೂರಿನ ಕಚೇರಿಗೆ ಹಲವು ಬಾರಿ ದೂರು ದಾಖಲಿಸಿದರೂ ಪ್ರಯೋಜನ ಆಗಲಿಲ್ಲ.  ಅಷ್ಟೇ ಅಲ್ಲದೇ ಅವರ ಬ್ಯಾಂಕ್ ಖಾತೆಯಿಂದ 1,713 ರೂಪಾಯಿಗಳನ್ನು ಕಂಪೆನಿ ಪಡೆದುಕೊಂಡಿತು. ಈ ಹಿನ್ನೆಲೆಯಲ್ಲಿ ಅವರು ವೇದಿಕೆ ಮೊರೆ ಹೋದರು.

ಬ್ಯಾಂಕ್‌ನಿಂದ ಪಡೆದುಕೊಂಡ ಸಂಪೂರ್ಣ ಹಣವನ್ನು ಅವರು ಹಣ ಪಾವತಿಸಿದ ದಿನದಿಂದ ಅನ್ವಯ ಆಗುವಂತೆ ಶೇ 12ರ ಬಡ್ಡಿದರಲ್ಲಿ ನೀಡುವಂತೆ ವೇದಿಕೆ ಆದೇಶಿಸಿದೆ. ಇದರ ಜೊತೆಗೆ ಐದು ಸಾವಿರ ರೂಪಾಯಿ ನ್ಯಾಯಾಲಯದ ವೆಚ್ಚ ನೀಡುವಂತೆ ಹಾಗೂ ಸಾಲ ಸಂಪೂರ್ಣ ನೀಡಲಾಗಿದೆ ಎಂಬ ಬಗ್ಗೆ ಸೂಕ್ತ ದಾಖಲೆ ಒದಗಿಸುವಂತೆ ವೇದಿಕೆ ಸೂಚಿಸಿದೆ.

ಹಣ ವಾಪಸ್‌ಗೆ ಆದೇಶ
ಹೆಚ್ಚು ಬಡ್ಡಿ ಹಣ ನೀಡುವುದಾಗಿ ಆಮಿಷ ಒಡ್ಡಿ ಹಿರಿಯ ನಾಗರಿಕರೊಬ್ಬರಿಗೆ ವಂಚನೆ ಮಾಡಿದ `ಯುನಿಟೆಕ್ ಲಿಮಿಟೆಡ್~ಗೆ ಪರಿಹಾರದ ರೂಪದಲ್ಲಿ ದಂಡ ವಿಧಿಸಿ 3ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ.

ಈ ದಂಡದ ಹಣವನ್ನು  10ಸಾವಿರ ರೂಪಾಯಿಗಳ ನ್ಯಾಯಾಲಯದ ವೆಚ್ಚದ ಜೊತೆಗೆ, ದೂರುದಾರರಾದ ಕುಮಾರಕೃಪ ರಸ್ತೆ ನಿವಾಸಿ ಸಿ.ಎಸ್.ಶ್ರೀನಿವಾಸನ್ ಅವರಿಗೆ ನೀಡುವಂತೆ ವೇದಿಕೆ ಅಧ್ಯಕ್ಷ ಟಿ.ರಾಜಶೇಖರಯ್ಯ ನೇತೃತ್ವದ ಪೀಠ ಆದೇಶಿಸಿದೆ.

ತಮ್ಮಲ್ಲಿ ಭದ್ರತಾ ಠೇವಣಿ ಇಡುವ ಹಿರಿಯ ನಾಗರಿಕರಿಗೆ ವಾರ್ಷಿಕ ಶೇ 11.5 ಬಡ್ಡಿದರದಲ್ಲಿ ಹಣ ವಾಪಸು ನೀಡಲಾಗುವುದು ಎಂದು ಜಾಹೀರಾತು ನೀಡಲಾಗಿತ್ತು. ಇದರ ಆಧಾರದ ಮೇಲೆ  ಅರ್ಜಿದಾರರು 25ಸಾವಿರ ರೂಪಾಯಿ ಠೇವಣಿ ಇಟ್ಟಿದ್ದರು.

ಅರ್ಜಿದಾರರು ಹಲವು ಬಾರಿ ಕೋರಿಕೊಂಡರೂ ಅವರ ಹಣ ವಾಪಸು ನೀಡಲಾಗಿಲ್ಲ. ಇದರಿಂದ ಅವರು ವೇದಿಕೆ ಮೊರೆ ಹೋಗಿದ್ದರು. ಅರ್ಜಿದಾರರು ನೀಡಿರುವ 25ಸಾವಿರ ರೂಪಾಯಿಗಳನ್ನು ವಾಪಸು ಮಾಡುವಂತೆ ಹಾಗೂ ಐದು ಸಾವಿರ ರೂಪಾಯಿಗಳ ಪರಿಹಾರ ನೀಡುವಂತೆ ವೇದಿಕೆ ಆದೇಶಿಸಿದೆ.

ವಿನಾಕಾರಣ ತೊಂದರೆ: ಬ್ಯಾಂಕ್‌ಗೆ ದಂಡ
ಗ್ರಾಹಕರೊಬ್ಬರು ನೀಡಿದ್ದ ಚೆಕ್ ನಗದಾಗದೆ ವಾಪಸು (ಚೆಕ್ ಬೌನ್ಸ್) ಬಂದಿದೆ ಎಂದು ವಿನಾಕಾರಣ ಅವರಿಗೆ ತೊಂದರೆ ನೀಡಿದ ಐಸಿಐಸಿಐ ಬ್ಯಾಂಕ್‌ಗೆ 15ಸಾವಿರ ರೂಪಾಯಿ ದಂಡ ವಿಧಿಸಿ 3ನೇ ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ.

ಈ ದಂಡದ ಹಣವನ್ನು ಪರಿಹಾರದ ರೂಪದಲ್ಲಿ ಗ್ರಾಹಕ ಎಂ. ಅಭಿಲಾಷ್ ಅವರಿಗೆ ನೀಡುವಂತೆ ವೇದಿಕೆ ಅಧ್ಯಕ್ಷ ಟಿ. ರಾಜಶೇಖರಯ್ಯ ನೇತೃತ್ವದ ಪೀಠ ಆದೇಶಿಸಿದೆ. ಅಭಿಲಾಷ್ ಅವರು ಈ ಬ್ಯಾಂಕ್‌ನಿಂದ ವಾಹನ ಸಾಲ ಪಡೆದುಕೊಂಡಿದ್ದರು. ಸಾಲದ ಮರುಪಾವತಿಯನ್ನು ಚೆಕ್ ಮೂಲಕ ಅವರು ಕಾಲಕಾಲಕ್ಕೆ ಸರಿಯಾಗಿ ಮಾಡುತ್ತಿದ್ದರು.

ಒಂದು ದಿನ ಬ್ಯಾಂಕ್‌ನಿಂದ ಅವರಿಗೆ ದೂರವಾಣಿ ಕರೆ ಬಂತು. ಬ್ಯಾಂಕ್ ಸಿಬ್ಬಂದಿ, `ನೀವು ಸಾಲದ ಮರುಪಾವತಿಗೆ ನೀಡಿದ ಚೆಕ್ ನಗದಾಗದೆ ವಾಪಸು ಬಂದಿದೆ~ ಎಂದು ತಿಳಿಸಿದರು. ಆದರೆ ಈ ಕುರಿತು ಅಭಿಲಾಷ್ ಅವರು, ವಿಚಾರಣೆ ನಡೆಸಿದಾಗ ಆ ರೀತಿ ಆಗಿಲ್ಲ ಎನ್ನುವುದು ತಿಳಿದುಬಂತು. ಇದನ್ನು ಬ್ಯಾಂಕ್‌ಗೆ ತಿಳಿಸಿದರು.

ಕೆಲವು ತಾಂತ್ರಿಕ ಕಾರಣಗಳಿಂದ ಈ ರೀತಿ ತಪ್ಪು ಆಗಿದೆ ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದರೂ, ಅದನ್ನು ಹಲವು ದಿನಗಳವರೆಗೆ ಸರಿಪಡಿಸಲಿಲ್ಲ. ಇದನ್ನು ಸರಿಪಡಿಸಲು ಅಭಿಲಾಷ್ ಅವರು ಹಲವು ಬಾರಿ ಬ್ಯಾಂಕ್‌ಗೆ ಓಡಾಟ ನಡೆಸಿದರೂ ಪ್ರಯೋಜನ ಆಗಲಿಲ್ಲ.

ತಮ್ಮ ದಾಖಲೆಯಲ್ಲಿ ಇನ್ನೂ ಸಾಲ ಬಾಕಿ ಇದೆ ಎಂದೇ ತೋರಿಸಲಾಗುತ್ತಿದೆ. ಇದರಿಂದ ತಾವು ಗೃಹ ಸಾಲ ಪಡೆದುಕೊಳ್ಳಲು ಕಷ್ಟವಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮಕ್ಕೆ ಆದೇಶಿಸಬೇಕು ಎಂದು ಅವರು ವೇದಿಕೆ ಮೊರೆ ಹೋದರು. ಬ್ಯಾಂಕ್ ಕರ್ತವ್ಯ ಲೋಪ ಎಸಗಿದೆ ಎಂದು ವೇದಿಕೆ ಅಭಿಪ್ರಾಯಪಟ್ಟಿದೆ.

ಲೋಪವನ್ನು ಶೀಘ್ರದಲ್ಲಿ ಸರಿಪಡಿಸುವಂತೆ ಹಾಗೂ ಅಭಿಲಾಷ್ ಅವರಿಗೆ ವಿನಾಕಾರಣ ತೊಂದರೆ ಆದುದಕ್ಕೆ ಪರಿಹಾರವನ್ನು ಇನ್ನು 30 ದಿನಗಳ ಒಳಗೆ ನೀಡುವಂತೆ ವೇದಿಕೆ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT