ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕರಿಗೆ ಕಾದ ಹೆಸ್ಕಾಂ ಅಧಿಕಾರಿಗಳು!

Last Updated 10 ಡಿಸೆಂಬರ್ 2013, 5:20 IST
ಅಕ್ಷರ ಗಾತ್ರ

ಶಿರಸಿ: ಹೆಸ್ಕಾಂ ವಿರುದ್ಧ ಸಾರ್ವಜನಿಕರಿಗೆ ಆಕ್ರೋಶ ಇದ್ದರೂ ಗ್ರಾಹಕರ ಸಭೆಗೆ ಬಂದು ದೂರು ತಿಳಿಸುವವರೇ ಇಲ್ಲ. ಇದಕ್ಕೆ ನಿದರ್ಶನ ಎಂಬಂತೆ ಸೋಮವಾರ ಇಲ್ಲಿ ನಡೆದ ತಾಲ್ಲೂಕು ಮಟ್ಟದ ಹೆಸ್ಕಾಂ ಗ್ರಾಹಕರ ಸಭೆಗೆ ಗ್ರಾಹಕರಿಗಾಗಿ ಶಿರಸಿ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್‌ ಟಿ.ಪಿ.ಶೆಟ್ಟಿ, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಅಣ್ಣಪ್ಪ ಲಮಾಣಿ ಹಾಗೂ ನಾಲ್ವರು ಅಧಿಕಾರಿಗಳು ಒಂದು ತಾಸು ಕಾದರು!

ಹಾಜರಿದ್ದ ಏಕೈಕ ಗ್ರಾಹಕನ ಸಮಸ್ಯೆ ಆಲಿಸುವ ಮೂಲಕ ಒಂದು ತಾಸು ತಡವಾಗಿ ಸಭೆ ಪ್ರಾರಂಭವಾಯಿತು. ಗೌಡಳ್ಳಿ ಭಾಗದ ಗ್ರಾಮ ಪಂಚಾಯ್ತಿ ಸದಸ್ಯ ಅಬ್ದುಲ್‌ ಮುನಾಫ್‌ ಮಾತನಾಡಿ, ‘ನಮ್ಮ ಭಾಗದ 30–35 ಜನರಿಗೆ ವಿದ್ಯುತ್‌ ಬಳಕೆಯ ಲೋಡ್‌ ಹೆಚ್ಚಾಗಿದೆ ಎಂದು ₨ 360 ದಂಡ ವಿಧಿಸಿ ಪತ್ರ ಬಂದಿದೆ. ದಂಡ ಹಾಕುವ ಮೊದಲು ಗ್ರಾಹಕರಿಗೆ ನೋಟಿಸ್‌ ನೀಡಬಹುದಿತ್ತು’ ಎಂದರು.

‘ಕೆಆರ್‌ಸಿ ನಿಯಮದ ಪ್ರಕಾರ ಅನುಮತಿಗಿಂತ ಹೆಚ್ಚಿನ ವಿದ್ಯುತ್‌ ಬಳಸಿದರೆ ದಂಡ ವಿಧಿಸಲಾಗುತ್ತದೆ’ ಎಂದು ಲಮಾಣಿ ಉತ್ತರಿಸಿದರು.

‘ವಿದ್ಯುತ್‌ ಬಿಲ್‌ ತುಂಬುವ ಕೇಂದ್ರದಲ್ಲಿ ಒಂದು ಬೆಂಚ್‌ ಮಾತ್ರ ಇದ್ದು ಹಿರಿಯರು, ಮಹಿಳೆಯರಿಗೆ ತೊಂದರೆಯಾಗುತ್ತಿದೆ’ ಎಂದು ಗ್ರಾಹಕರ ಕುಂದುಕೊರತೆ ವೇದಿಕೆ ಸದಸ್ಯ ಜಿ.ಜಿ.ಹೆಗಡೆ ದೂರಿದರು.

‘ನಗರ ವ್ಯಾಪ್ತಿಯಲ್ಲಿ ವಿದ್ಯುತ್‌ ಮಾರ್ಗ ತಾಗುವ ಮರದ ಕೊಂಬೆ ಕಡಿಯುವ ಕಾರ್ಯ ಹೆಸ್ಕಾಂ ಮಾಡುತ್ತಿಲ್ಲ. ಹೆಸ್ಕಾಂ ಕಚೇರಿ ಬರುವ ದಾರಿಯಲ್ಲಿ ಕ.ವಿ.ಪ್ರ.ನಿ. ಎಂಬ ದೊಡ್ಡ ಫಲಕ ಹಾಕಲಾಗಿದೆ. ಹೀಗಾಗಿ ಗ್ರಾಹಕರು ಹೆಸ್ಕಾಂ ಎಲ್ಲಿದೆ ಎಂದು ಹುಡುಕಬೇಕಾಗಿದೆ’ ಎಂದು ಅವರು ಆಕ್ಷೇಪಿಸಿದರು.

‘ಹೆಸ್ಕಾಂ ಕಚೇರಿಯನ್ನು ಕ.ವಿ.ಪ್ರ.ನಿ. ಯಿಂದ ಬಾಡಿಗೆಗೆ ಪಡೆಯಲಾಗಿದೆ. ಹೆಸ್ಕಾಂ ಕಚೇರಿಗೆ ಪ್ರತ್ಯೇಕ ಫಲಕ ಹಾಕ ಲಾಗುವುದು. ವಿದ್ಯುತ್‌ ಮಾರ್ಗದ ದಾರಿಯಲ್ಲಿ ರೆಂಬೆ–ಕೊಂಬೆ ಕಡಿಯುವ ಕಾರ್ಯ ಶೀಘ್ರ ಮಾಡಲಾಗುವುದು’ ಎಂದು ಟಿ.ಪಿ.ಶೆಟ್ಟಿ ಹೇಳಿದರು.

ನಗರಸಭೆ ಬಿಲ್‌ ಬಾಕಿ ₨ 4.52 ಕೋಟಿ!:‘ಶಿರಸಿ ನಗರಸಭೆಯ ಬಿಲ್‌ ಬಾಕಿ ಮೊತ್ತ ₨ 4.52 ಕೋಟಿಗೆ ಏರಿಕೆಯಾಗಿದೆ. ಗ್ರಾಹಕನೊಬ್ಬ ಬಿಲ್‌ ತುಂಬಲು ವಿಳಂಬವಾದರೆ ವಿದ್ಯುತ್‌ ಸಂಪರ್ಕ ಕಡಿತವಾಗುತ್ತದೆ. ಸರ್ಕಾರಿ ಇಲಾಖೆಗೆ ವಿನಾಯಿತಿ ಯಾಕೆ ಎಂಬ ಆಕ್ಷೇಪ ಕೇಳಿಬಂತು. ಹೆಸ್ಕಾಂ ಕಚೇರಿ ಮೂಲಕ ಪೌರಾಡಳಿತ ನಿರ್ದೇಶನಾಲಯಕ್ಕೆ ಪತ್ರ ಬರೆಯಲಾಗಿದ್ದು, ಬಿಲ್‌ ಮೊತ್ತ ಪಡೆಯಲು ಪ್ರಯತ್ನ ನಡೆದಿದೆ’ ಎಂದು ಅಧಿಕಾರಿ ತಿಳಿಸಿದರು.

ಸಭೆಯ ಮುಗಿಯುವ ವೇಳೆ ಮತ್ತೆ ಮೂವರು ಗ್ರಾಹಕರು ಆಗಮಿಸಿದರು. ‘ಚಿಂಚಳಿಕೆ ಗ್ರಾಮದಲ್ಲಿ ವೋಲ್ಟೇಜ್‌ ಕೊರತೆಯಿಂದ ಚಿಮಣಿ ದೀಪದಂತೆ ವಿದ್ಯುತ್‌ ದೀಪ ಬೆಳಗುತ್ತದೆ. ಇಲ್ಲಿ ಪ್ರತ್ಯೇಕ ವಿದ್ಯುತ್‌ ಪರಿವರ್ತಕ (ಟಿಸಿ) ಅಳವಡಿಸುವಂತೆ ಐದು ವರ್ಷಗಳಿಂದ ವಿನಂತಿಸುತ್ತಿದ್ದರೂ ಪ್ರಯೋಜನ ವಾಗಿಲ್ಲ. ಆದಷ್ಟು ಶೀಘ್ರ ಟಿಸಿ ಹಾಕಬೇಕು’ ಎಂದು ಎಸ್‌.ಕೆ. ಭಾಗವತ ಹೇಳಿದರು.

‘ಕಂಬಗಳ ಕೊರತೆಯಿಂದ ಶಾಲೆಗಳ ಮೇಲೆ ಹಾದುಹೋಗಿರುವ ವಿದ್ಯುತ್‌ ಮಾರ್ಗದ ಬದಲಾವಣೆಗೆ ವಿಳಂಬವಾಗಿದೆ’ ಎಂದು ಟಿ.ಪಿ.ಶೆಟ್ಟಿ ಹೇಳಿದರು. ಗ್ರಾಹಕರ ಸಭೆ ಕುರಿತು ಪ್ರತಿ ಗ್ರಾಮ ಪಂಚಾಯ್ತಿಗೆ ಪತ್ರ ಕಳುಹಿಸಿ ಸಾರ್ವಜನಿಕರಿಗೆ ಸುದ್ದಿ ತಲುಪಿಸಬೇಕು ಎಂಬ ಆಗ್ರಹ ವ್ಯಕ್ತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT