ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರೀನ್ ಮಾರುಕಟ್ಟೆ ಹಂದಿಗಳ ವಿಹಾರ

Last Updated 3 ಡಿಸೆಂಬರ್ 2012, 7:10 IST
ಅಕ್ಷರ ಗಾತ್ರ

ಗದಗ: ನಗರದ ಹೃದಯಭಾಗದಲ್ಲಿರುವ ಗ್ರೇನ್ ಮಾರುಕಟ್ಟೆಗೆ ಸಮಸ್ಯೆಗಳಿಗೂ ಬಿಡಿಸಲಾರದ ನಂಟು. ಮಾರುಕಟ್ಟೆ ತುಂಬ ಕಸದ ರಾಶಿ ಸಂಗ್ರಹಗೊಂಡು ಅವ್ಯವಸ್ಥೆ ಆಗರವಾಗಿದೆ.

ದಿನನಿತ್ಯದ ಆಹಾರ ಪದಾರ್ಥ ಕೊಂಡುಕೊಳ್ಳಲು ಬರುವ ಸಾವಿರಾರು ಜನರು, ಲಕ್ಷಾಂತರ ರೂಪಾಯಿ ವಹಿವಾಟು ನಡೆಸುವ ವರ್ತಕರು ಹಾಗೂ ಕೆಲಸಗಾರರು ಇರುವ ಮಾರುಕಟ್ಟೆಯಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ನೋಡಬಹುದು. ಏಕೈಕ ಶೌಚಾಲಯವೂ ಸೂಕ್ತ ನಿರ್ವಹಣೆ ಇಲ್ಲದೆ ಹಾಳಾಗಿದೆ. ಅದರ ಸುತ್ತಮುತ್ತ ಮೂತ್ರ ವಿಸರ್ಜನೆ ಮಾಡುವುದರಿಂದ  ಹತ್ತಿರ ಸುಳಿಯಲು ಆಗದಷ್ಟು ದುರ್ನಾತ ಬೀರುತ್ತಿದೆ. ಜನರು  ಮೂಗು ಮುಚ್ಚಿಕೊಂಡು ಓಡಾಡಬೇಕು.  ಹಂದಿಗಳ ವಿಹಾರ ತಾಣವಾಗಿದೆ. ಸ್ವಚ್ಚತೆ ಎಂಬುದು ಮರೀಚಿಕೆಯಾಗಿದೆ.

ಇಷ್ಟಾದರೂ ನಗಸಭೆ ಸದಸ್ಯರಾಗಲಿ, ಅಧಿಕಾರಿಗಳಾಗಲಿ ಯಾರು ಇತ್ತ ಸುಳಿದಿಲ್ಲ.  ಹಲವು ಬಾರಿ ವ್ಯಾಪಾರಿಗಳು, ಸಾರ್ವಜನಿಕರು ನಗರಸಭೆ ಆರೋಗ್ಯಾಧಿಕಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

ಈ ಎಲ್ಲ ಅವ್ಯವಸ್ಥೆಗೆ ಕಾರಣ ಮಾರುಕಟ್ಟೆಯಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದೇ ಇರುವುದು. ಕೆಲ ಭಾಗದಲ್ಲಿ ಮಾತ್ರ ಚರಂಡಿ ವ್ಯವಸ್ಥೆ ಇದ್ದು, ಅವು ಸಹ ಕಸದ ರಾಶಿಯಿಂದ ತುಂಬಿ ಹೋಗಿದೆ. ಅಂಗಡಿಗಳ ಸ್ವಚ್ಛ ಮಾಡಿದ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಇಲ್ಲದೆ ಕಸವೂ ಕೊಳೆತು ನಾರುತ್ತಿದೆ.

ನಗರ ಪ್ರದೇಶವಲ್ಲದೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಜನರು ಮಾರುಕಟ್ಟೆಗೆ ತರಕಾರಿ ತೆಗೆದುಕೊಂಡು ಹೋಗಲು ಬರುತ್ತಾರೆ. ಅಂತಹ ಮಾರುಕಟ್ಟೆಯಲ್ಲಿ ಸೂಕ್ತವಾದ ಶೌಚಾಲಯದ ವ್ಯವಸ್ಥೆ ಮಾಡುವಂತೆ ಹಲವು ಬಾರಿ ನಗರಸಭೆಗೆ ವರ್ತಕರು ಮನವಿ ಮಾಡಿದ್ದಾರೆ. ಇರುವ ಶೌಚಾಲಯವೂ ಸೂಕ್ತ ನಿರ್ವಹಣೆ ಇಲ್ಲದೆ ಗಬ್ಬೆದ್ದು ನಾರುತ್ತಿದೆ. ಇದರಿಂದಾಗಿ ಜನರು ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.

`ಮಾರುಕಟ್ಟೆ ಸಮಸ್ಯೆ ನಿನ್ನೆ ಮೊನ್ನೆಯದಲ್ಲ.  ಹಲವು ವರ್ಷಗಳಿಂದ ಮಾರುಕಟ್ಟೆಯಲ್ಲಿ ಕಸ ತುಂಬಿಕೊಂಡರು ಯಾರು ಸ್ವಚ್ಛ ಮಾಡಲು ಬರುವುದಿಲ್ಲ. ಅಮಾವಾಸ್ಯೆ, ಹುಣ್ಣಿಮೆಗೆ ಬಂದು ಹೋಗುತ್ತಾರೆ.
ಸಾಕಷ್ಟು ಬಾರಿ ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ಪ್ರಯೋಜನವಾಗಿಲ್ಲ.

ನಗರಸಭೆ ಸದಸ್ಯರು ಇತ್ತ ಬರುವುದಿಲ್ಲ. ಮಳೆ ಬಂದರಂತೂ ಚರಂಡಿ ನೀರು ಅಂಗಡಿಯೊಳಗೆ ಬರುತ್ತದೆ. ಕಸದ ರಾಶಿಯಲ್ಲಿಯೇ ನಡೆದು ಹೋಗಬೇಕು. ಶೌಚಾಲಯದಿಂದ ಕೆಟ್ಟ ವಾಸನೆ ಬರುತ್ತದೆ. ಸ್ವಚ್ಛ ಮಾಡುವಂತೆ ಹೇಳಿದರೂ ಇತ್ತ ತಿರುಗಿ ನೋಡಿಲ್ಲ. ಏನು ಮಾಡಬೇಕು ಅಂತ ಗೊತ್ತಾಗುತ್ತಿಲ್ಲ' ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡರು.

`ದೀಪಾವಳಿ ಹಬ್ಬ ಬಂದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಕಸದ ರಾಶಿ ತುಂಬಿಕೊಂಡಿದೆ. ಇದನ್ನು ತೆರವುಗೊಳಿಸಲು ಸ್ವಲ್ಪ ದಿನ ಬೇಕಾಗಲಿದೆ. ಮಾರುಕಟ್ಟೆಯಲ್ಲಿ ಸಾಕಷ್ಟು ಸಮಸ್ಯೆಗಳಿರುವುದು ಗಮನಕ್ಕೆ ಬಂದಿದೆ.

ನವೀಕರಣಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ವರ್ತಕರ ಜತೆ ಮಾತುಕತೆ ನಡೆಸಲಾಗುವುದು' ಎಂದು ನಗರಸಭೆ ಅಧ್ಯಕ್ಷ ಶಿವಣ್ಣ ಮುಳಗುಂದ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT