ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಲಾಮರ್ ಮಂತ್ರವ ಜಪಿಸೋ...

Last Updated 18 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

`ನಾನು ಕನ್ನಡದಲ್ಲಿ ನಟಿಸಿದ್ದೇ ನಾಲ್ಕು ಚಿತ್ರಗಳು. ಕನ್ನಡದ ನಿರ್ಮಾಪಕರು ನನಗೆ ಉತ್ತಮ ಪಾತ್ರಗಳನ್ನೇ ನೀಡಿದ್ದಾರೆ. ಆದರೆ ಬೇರೆ ಭಾಷೆಯಲ್ಲಿ ನನಗೆ ಸೌಂದರ್ಯ, ಅಭಿನಯ ಎರಡಕ್ಕೂ ಆದ್ಯತೆ ಇರುವ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ನಿಜ ಹೇಳ್ಲಾ? ನನಗೆ ಗ್ಲಾಮರ್ ಅಂದರೆ ತುಂಬಾ ಇಷ್ಟ' ಎಂದು ಕೊಂಚ ನಾಚಿಕೆಯಿಂದ ನುಡಿದರು ರಾಧಾ ನಾಯರ್.

`ಸೌಭಾಗ್ಯ ಲಕ್ಷ್ಮಿ', `ಸಾವಿರ ಸುಳ್ಳು', `ರಣಚಂಡಿ' ಸೇರಿದಂತೆ ಕೆಲವು ಕನ್ನಡ ಚಿತ್ರಗಳಲ್ಲಿ ನಟಿಸಿದ ಬಟ್ಟಲು ಕಂಗಳ ಚಲುವೆ ರಾಧಾ. ನಟಿ ಅಂಬಿಕಾ ಅವರ ಸೋದರಿಯಾದ ಇವರು ಬಹಳ ವರ್ಷಗಳ ನಂತರ ಕನ್ನಡದತ್ತ ಮುಖ ಮಾಡಿದ್ದಾರೆ; ಅದೂ ಮಗಳು ಕಾರ್ತಿಕಾ ನಾಯರ್ ಅವರಿಗೆ ಕನ್ನಡದ `ಬೃಂದಾವನ' ಚಿತ್ರದಲ್ಲಿ ದೊರೆತ ಅವಕಾಶದ ನೆಪದಲ್ಲಿ. ಮಗಳೊಂದಿಗೆ ಇತ್ತೀಚೆಗೆ ಅವರು ನಗರಕ್ಕೆ ಬಂದಿದ್ದರು. ಬರುತ್ತಲೇ `ನೀವು ತೆಲುಗಾ... ತಮಿಳಾ....' ಎಂದು ಕೇಳಿದ ಅವರು, `ಎಲ್ಲರೂ ಕನ್ನಡದವರೇನಾ...' ಎನ್ನುತ್ತಾ ಮಾತಿಗಿಳಿದರು.

ಒಂದು ಕಾಲದಲ್ಲಿ ಸಪೂರವಾಗಿದ್ದು, ಬಳುಕುವ ಸೊಂಟವಿದ್ದ ರಾಧಾ ಅವರನ್ನು ನೋಡಿದವರಿಗೆ ಈಗ ಅವರನ್ನು ನೋಡಿದರೆ ಅಚ್ಚರಿಯಾಗಬಹುದು. `ಇವರೇನಾ ಆ ರಾಧಾ?' ಎನ್ನುವಷ್ಟರ ಮಟ್ಟಿಗೆ ಬದಲಾಗಿದ್ದಾರೆ. ಕಪ್ಪು ಸಲ್ವಾರ್ ತೊಟ್ಟಿದ್ದ ಅವರ ದೇಹದ ತೂಕ ಹೆಚ್ಚಾಗಿದ್ದರೂ ತುಂಟತನ ಮಾತ್ರ ಮಾಸಿಲ್ಲ. ತಮ್ಮ ಸಿನಿಮಾ ಯಾತ್ರೆ ಕುರಿತು ರಾಧಾ `ಮೆಟ್ರೊ'ದೊಂದಿಗೆ ಮಾತಾಡಿದರು...
ನಿಮ್ಮ ಸಿನಿಮಾ ಯಾತ್ರೆ ಆರಂಭವಾಗಿದ್ದು ಎಂದು?

ನನಗೆ ಆಗ ಹದಿನೈದು ವರ್ಷ. ಭರತನಾಟ್ಯದಲ್ಲಿ ಪ್ರವೀಣೆಯಾಗಿದ್ದ ನನ್ನನ್ನು ತಮಿಳಿನ ಖ್ಯಾತ ನಿರ್ದೇಶಕ ಭಾರತಿರಾಜಾ ಕರೆದು ಅವಕಾಶ ಕೊಟ್ಟರು. `ಅಲೈಗಾಲ್ ಓವಿತ್ತಲೈ' ಎಂಬ ಚಿತ್ರ ಅದು. ಅಲ್ಲಿಂದ ನನ್ನ ಸಿನಿಮಾ ವೃತ್ತಿಜೀವನ ಆರಂಭವಾಯಿತು. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಸೇರಿದಂತೆ ಒಟ್ಟು 125 ಸಿನಿಮಾಗಳಲ್ಲಿ ನಟಿಸಿದ್ದೇನೆ.

ನಟನೆ ಒಲಿದದ್ದು ಹೇಗೆ? ಚಿತ್ರರಂಗದಲ್ಲಿನ ನಿಮ್ಮ ಸಾಧನೆ ಏನು?
ನಟನೆ ಎನ್ನುವುದು ರಕ್ತದಿಂದಲೇ ಬರಬೇಕು ಎಂಬುದರಲ್ಲಿ ನನಗೆ ನಂಬಿಕೆ ಇಲ್ಲ. ಒಬ್ಬ ನಟಿಗೆ ಒಂದಿಷ್ಟು ಸೌಂದರ್ಯ ಅತ್ಯಗತ್ಯ. ಅದರೊಂದಿಗೆ ಕ್ಯಾಮೆರಾ ಎದುರಿಸುವ ಧೈರ್ಯ, ನಿರ್ದೇಶಕರು ಹೇಳಿಕೊಟ್ಟಿದ್ದನ್ನು ಅಚ್ಚುಕಟ್ಟಾಗಿ ಅಭಿನಯಿಸುವ ಕಲೆ ಗೊತ್ತಿರಬೇಕು. ಎರಡು ತಲೆಮಾರಿನ ನಟರೊಂದಿಗೆ ಅಭಿನಯಿಸಿದ ಶ್ರೇಯ ನನ್ನದಾಗಿದೆ. ಸಂದ ಪ್ರಶಸ್ತಿಗಳು ಕೆಲವೇ ಆದರೂ ವೃತ್ತಿಬದುಕಿನ ಕುರಿತು ಹೆಮ್ಮೆ ಇದೆ.

ಮಗಳು ನಟಿಯಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ. ನಿಮ್ಮ ಕಾಲಕ್ಕೆ ಹೋಲಿಸಿದಲ್ಲಿ ಈಗಿನ ಚಿತ್ರರಂಗ ಹೇಗಿದೆ?
ಈಗಿನ ಚಿತ್ರರಂಗದಲ್ಲಿ ನಾಯಕ-ನಾಯಕಿಯರು ಹೆಚ್ಚು ಪ್ರಯೋಗಶೀಲರಾಗಿದ್ದಾರೆ. ಪರಸ್ಪರ ಗೌರವಿಸುವ ಗುಣ ಹೊಂದಿದ್ದಾರೆ. ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸುವಷ್ಟು ವೃತ್ತಿಪರತೆ ಅವರಲ್ಲಿ ಕಾಣಬಹುದು. ಇದು ನಮ್ಮ ಕಾಲದಲ್ಲಿ ತೀರಾ ವಿರಳವಾಗಿತ್ತು. ನಾಯಕರು ಹಿರಿಯರಾಗಿರುತ್ತಿದ್ದರು. ಅವರೊಂದಿಗೆ ತಗ್ಗಿಬಗ್ಗಿ ನಡೆಯುತ್ತಾ, ಭಯದಿಂದಲೇ ನಟಿಸಬೇಕಾಗಿತ್ತು. ಈಗ ಪರಿಸ್ಥಿತಿ ಹಾಗಿಲ್ಲ ಎನ್ನುವುದೇ ಸಮಾಧಾನ.

ಚಿತ್ರರಂಗದಿಂದ ಒಮ್ಮೆಲೆ ಹೊರಗೆ ಉಳಿದದ್ದು ಏಕೆ?
ಆರ್.ಎಸ್.ನಾಯರ್ ಅವರೊಂದಿಗೆ ಮದುವೆಯಾಯಿತು. ನಂತರ ಒಬ್ಬರಾದ ಮೇಲೆ ಒಬ್ಬರಂತೆ ಮೂರು ಮಕ್ಕಳ ಜನನ. ಅವರ ಆರೈಕೆಯಲ್ಲಿ ಸಿನಿಮಾದಲ್ಲಿ ನಟಿಸಬೇಕು ಎಂಬುದನ್ನೇ ಮರೆತುಬಿಟ್ಟೆ.

ನಟನೆಗೆ ಕುಟುಂಬದವರ ಬೆಂಬಲವಿತ್ತೆ?
ಚಿತ್ರರಂಗಕ್ಕೆ ಹೆಣ್ಣುಮಕ್ಕಳನ್ನು ಕಳುಹಿಸಲು ಹಿಂಜರಿಯುತ್ತಿದ್ದ ಆ ಕಾಲದಲ್ಲೇ ನನ್ನ ಪೋಷಕರು ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಸಿನಿಮಾಕ್ಕೆ ಕಳುಹಿಸುವಷ್ಟು ವಿಶಾಲ ಮನೋಭಾವದವರು. ನನ್ನ ಪತಿಯ ಬೆಂಬಲವೂ ಇತ್ತು.

ಮಕ್ಕಳಿಗೆ ನಿಮ್ಮ ಕಿವಿಮಾತು ಏನು?
ವೃತ್ತಿಪರತೆ ಮರೆಯದಿರಿ, ವೃತ್ತಿಯನ್ನು ಸದಾ ಗೌರವಿಸಿ.

ಚಿತ್ರರಂಗದ ನಂತರ ತಾಯಿಯಾಗಿ ಕೌಟುಂಬಿಕ ಜೀವನ ಹೇಗಿತ್ತು?
ಪ್ರತಿ ದಿನವೂ ಹೊಸ ಪಾಠ, ಹೊಸ ಅನುಭವ. ಮಗ ವಿಘ್ನೇಶ್ ನಾಯರ್. ಕಾರ್ತಿಕಾ ನಾಯರ್, ತುಳಸಿ ನಾಯರ್ ಇಬ್ಬರು ಹೆಣ್ಣುಮಕ್ಕಳು. ಇಬ್ಬರೂ ಚಿತ್ರರಂಗ ಪ್ರವೇಶಿಸಿದ್ದಾರೆ.

ಚಿತ್ರರಂಗಕ್ಕೆ ಬಾರದಿದ್ದರೆ ಬೇರೆ ಏನಾಗುತ್ತಿದ್ದಿರಿ?
ನನಗೆ ಶಿಕ್ಷಕಿಯಾಗಬೇಕೆಂಬ ಕನಸಿತ್ತು. ಗಣಿತದಲ್ಲಿ ಬಹಳ ಹಿಂದಿದ್ದೆ. ಶಿಕ್ಷಕಿಯರಿಂದ ಸದಾ ಬೈಯಿಸಿಕೊಳ್ಳುತ್ತಲೇ ಇದ್ದೆ. ಹೀಗಾಗಿ ಮುಂದೆ ನಾನು ಶಿಕ್ಷಕಿಯಾಗಿ ಅದೇ ರೀತಿ ಶಿಕ್ಷೆ ನೀಡಬೇಕು ಎಂದು ಕೆಲವೊಮ್ಮೆ ಮನಸ್ಸಾಗುತ್ತಿತ್ತು!

ಕನ್ನಡ ಚಿತ್ರರಂಗದಲ್ಲಿನ ನಿಮ್ಮ ಅನುಭವ?
ರವಿಚಂದ್ರನ್ ಅವರನ್ನು ಹೊರತುಪಡಿಸಿ ನಾನು ನಟಿಸಿದ ಇಬ್ಬರೂ ನಟರು ಹಿರಿಯರು, ಅನುಭವಿಗಳು. ವಿಷ್ಣು ಸರ್ ಹಾಗೂ ಅಂಬರೀಷ್ ಎದುರು ನಟಿಸಲು ಮೊದಮೊದಲು ಭಯವಾಗುತ್ತಿತ್ತು. ಅಂಬರೀಷ್ ನನಗೆ ಅಣ್ಣ ಇದ್ದಂತೆ.

ದಕ್ಷಿಣದ ಎಲ್ಲಾ ಭಾಷೆಗಳನ್ನು ಮಾತಾಡುತ್ತೀರಿ. ಕನ್ನಡ ಬರುವುದಿಲ್ಲವೇಕೆ?
ಒಟ್ಟು 125ರಲ್ಲಿ ಕನ್ನಡದಲ್ಲಿ ನಟಿಸಿದ್ದೇ ನಾಲ್ಕು ಸಿನಿಮಾ. ಮತ್ತಷ್ಟು ಸಿನಿಮಾಗಳನ್ನು ಮಾಡಿದ್ದರೆ ಬಹುಶಃ ಅಕ್ಕನಂತೆ ನಾನೂ ಚೆನ್ನಾಗಿ ಕನ್ನಡ ಮಾತಾನಾಡುತ್ತಿದ್ದೆ.

ಅಕ್ಕ ಅಂಬಿಕಾ ಬಗ್ಗೆ...?
ಅಕ್ಕ ಮೊದಲು ಚಿತ್ರರಂಗ ಪ್ರವೇಶಿಸಿದಳು. ಅಕ್ಕನಿಗಿಂತ ನಾನು ಕಪ್ಪಗಿದ್ದೆ. ಹೀಗಾಗಿ ಚಿತ್ರರಂಗದಲ್ಲಿ ನಾನು ಅವಳಷ್ಟು ಎತ್ತರ ಬೆಳೆಯಲು ಸಾಧ್ಯವ್ಲ್ಲಿಲ ಎನಿಸಿತ್ತು. ಮದುವೆ ನಂತರ ನಾನು ಚಿತ್ರರಂಗದಿಂದ ದೂರವಾದೆ. ಈಗ ಮತ್ತೆ ಮಗಳೊಂದಿಗೆ ಬಂದಿದ್ದೇನೆ. ಅಕ್ಕ ಅಂಬಿಕಾಗೆ ಸಿಕ್ಕ ಯಶಸ್ಸೇ ನನ್ನ ಮಗಳಿಗೂ ದೊರೆಯಲಿ ಎನ್ನುವುದು ನನ್ನ ಆಸೆ.

ಸಾಧಿಸಲು ಆಗದ್ದು?
`ಅಣ್ಣಾವ್ರ' (ರಾಜ್‌ಕುಮಾರ್) ಜತೆ ನಟಿಸುವ ಅವಕಾಶ ಅಕ್ಕನಿಗೆ ಲಭಿಸಿತು. ನನಗೆ ಅಂಥದ್ದೊಂದು ಸದವಕಾಶ ದೊರೆಯಲಿಲ್ಲವಲ್ಲ ಎಂಬ ಕೊರಗು ಸದಾ ಕಾಡುತ್ತಿರುತ್ತದೆ.

ಸಂದರ್ಶನ: ಇ.ಎಸ್. ಸುಧೀಂದ್ರ ಪ್ರಸಾದ್
ಚಿತ್ರ: ಎಸ್.ಕೆ. ದಿನೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT