ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಗ್ಲಿವೆಕ್' ಪೇಟೆಂಟ್ ಸಮರ: ನೋವಾರ್ಟಿಸ್ ಗೆ ಸೋಲು, ಭಾರತೀಯ ಕಂಪೆನಿಗಳ ಜಯ

Last Updated 1 ಏಪ್ರಿಲ್ 2013, 9:49 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಕ್ತ ಕ್ಯಾನ್ಸರ್ ಗೆ ನೀಡಲಾಗುವ 'ಗ್ಲಿವೆಕ್' ಔಷಧಕ್ಕೆ ಭಾರತದಲ್ಲಿ ಪೇಟೆಂಟ್ ಗಳಿಸಲು ನಡೆಸಿದ ಏಳು ವರ್ಷಗಳ ಕಾನೂನು ಸಮರದಲ್ಲಿ ಸ್ವಿಸ್ ಔಷಧ ಕಂಪೆನಿ ನೋವಾರ್ಟಿಸ್ ಎಜಿ ಪರಾಭವಗೊಂಡಿದೆ. 'ಗ್ಲಿವೆಕ್' ಔಷಧವನ್ನು ಸಾರ್ವತ್ರಿಕವಾಗಿ ಉತ್ಪಾದಿಸದಂತೆ ಭಾರತೀಯ ಕಂಪೆನಿಗಳನ್ನು ನಿರ್ಬಂಧಿಸುವಂತೆ ಬಹುರಾಷ್ಟ್ರೀಯ ಕಂಪೆನಿ ಮಾಡಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಸೋಮವಾರ ತಿರಸ್ಕರಿಸಿತು.

ಔಷಧದಲ್ಲಿ 'ಹೊಸ ದ್ರವ್ಯ' ಬಳಸಲಾಗಿದೆ ಎಂಬ ನೆಲೆಯಲ್ಲಿ ಈ ಕ್ಯಾನ್ಸರ್ ಔಷಧ ತಯಾರಿಯ ವಿಶೇಷ ಹಕ್ಕು ತನಗಿದೆ ಎಂಬ ಸ್ವಿಸ್ ಕಂಪೆನಿಯ ಪ್ರತಿಪಾದನೆಯನ್ನು ನ್ಯಾಯಮೂರ್ತಿಗಳಾದ ಅಫ್ತಾಬ್ ಆಲಂ ಮತ್ತು ರಂಜನಾ ಪ್ರಕಾಶ ದೇಸಾಯಿ ಅವರನ್ನು ಒಳಗೊಂಡ ಪೀಠವು ತಳ್ಳಿಹಾಕಿತು.

ಜಗತ್ತಿನಾದ್ಯಂತ ಔಷಧ ತಯಾರಿ ಕಂಪೆನಿಗಳು ಅತ್ಯಂತ ಕುತೂಹಲದಿಂದ ವೀಕ್ಷಿಸುತ್ತಿದ್ದ ಈ ಪ್ರಕರಣದಲ್ಲಿ ಬಂದಿರುವ ತೀರ್ಪು, ಭಾರತದಲ್ಲಿ ಕ್ಯಾನ್ಸರ್ ರೋಗಿಗಳಿಗಾಗಿ ಸಾರ್ವತ್ರಿಕವಾಗಿ ಔಷಧ ತಯಾರಿಯ ಮಾರ್ಗದಲ್ಲಿದ್ದ ಅಡಚಣೆಗಳನ್ನು ನಿವಾರಿಸುವುದು.

ರಕ್ತ ಕ್ಯಾನ್ಸರ್ ರೋಗಿಗಳು ಒಂದು ತಿಂಗಳು ತೆಗೆದುಕೊಳ್ಳಬೇಕಾದ 'ಗ್ಲಿವೆಕ್' ಔಷಧಕ್ಕೆ 1.2 ಲಕ್ಷ ರೂಪಾಯಿ ಆಗುತ್ತದೆ. ಭಾರತೀಯ ಕಂಪೆನಿಗಳು ತಯಾರಿಸುವ ಇಷ್ಟೇ ಪ್ರಮಾಣದ ಸಾರ್ವತ್ರಿಕ ಔಷಧದ ಬೆಲೆ ಕೇವಲ 8000 ರೂಪಾಯಿ.

ನೋವಾರ್ಟಿಸ್ ಮನವಿಯನ್ನು ತೀವ್ರವಾಗಿ ವಿರೋಧಿಸಿದ ಭಾರತೀಯ ಔಷಧ ಕಂಪೆನಿಗಳಾದ ರಾನ್ ಬಾಕ್ಸಿ ಮತ್ತು ಸಿಪ್ಲಾ ಪರವಾಗಿ ಹಾಜರಾದ ವಕೀಲೆ ಪ್ರತಿಭಾ ಸಿಂಗ್ ಅವರು 'ತೀರ್ಪು ಭಾರತೀಯ ಕಂಪೆನಿಗಳ ಪಾಲಿನ ವಿಜಯ. ಔಷಧದ ಮೇಲೆ ಪೇಟೆಂಟ್ ಇಲ್ಲದೇ ಇರುವುದರಿಂದ ಈಗ ಭಾರತೀಯ ಕಂಪೆನಿಗಳು ಕಡಿಮೆ ದರದಲ್ಲಿ ಔಷಧಿ ತಯಾರಿಸಬಹುದು' ಎಂದು ಹೇಳಿದರು.

'ಪೇಟೆಂಟ್ ಇನ್ನು ನೈಜ ಸಂಶೋಧನೆಗಳಿಗೆ ಮಾತ್ರ ಲಭಿಸುತ್ತದೆ ಹೊರತಾಗಿ ಪುನರಾವರ್ತಿತ ಸಂಶೋಧನೆಗಳಿಗಲ್ಲ. ನೋವಾರ್ಟಿಸ್ ಔಷಧದಲ್ಲಿ ಹೊಸ ಸಂಶೋಧನೆಯೇನೂ ಇಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ' ಎಂದು ಪ್ರತಿಭಾ ನುಡಿದರು.

'ಈದಿನದ ತೀರ್ಪು ತಮ್ಮ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಎಂದು ವಿದೇಶೀ ಔಷಧ ಕಂಪೆನಿಗಳು ಅಂಜಬೇಕಾಗಿಯೂ ಇಲ್ಲ. ಅವುಗಳ ಸಂಶೋಧನೆ ನೈಜವಾಗಿ ಇರುವವರೆಗೂ ಅವರಿಗೆ ಪೇಟೆಂಟ್ ಲಭಿಸುತ್ತದೆ' ಎಂದೂ ಅವರು ಹೇಳಿದರು.

'ಗ್ಲಿವೆಕ್ ನಲ್ಲಿ ಬಳಸಲಾದ 'ಇಮಾತಿನಿಬ್ ಮೆಸಿಲೇಟ್' ಎಲ್ಲರಿಗೂ ಗೊತ್ತಿರುವಂತಹ ದ್ರವ್ಯ. ಈ ರಾಸಾಯನಿಕವನ್ನು ಬಳಸಿದ್ದಕ್ಕಾಗಿ ನೋವಾರ್ಟಿಸ್ ಪೇಟೆಂಟ್ ಪ್ರತಿಪಾದಿಸುವಂತಿಲ್ಲ' ಎಂದೂ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.

ತನ್ನ ಪೇಟೆಂಟ್ ಮನವಿಯನ್ನು ತಿರಸ್ಕರಿಸಿ ಚೆನ್ನೈಯ ಬೌದ್ಧಿಕ ಆಸ್ತಿಪಾಸ್ತಿ ಮೇಲ್ಮನವಿ ಮಂಡಳಿ (ಐಪಿಎಬಿ) ನೀಡಿದ್ದ ಆದೇಶವನ್ನು ಪ್ರಶ್ನಿಸಿ ನೋವಾರ್ಟಿಸ್ 2009ರಲ್ಲಿ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿತ್ತು. ಬಹುರಾಷ್ಟ್ರೀಯ ಕಂಪೆನಿಯು 2006ರಲ್ಲಿ ಪೇಟೆಂಟ್ ಗಾಗಿ ಈ ಅರ್ಜಿ ಸಲ್ಲಿಸಿತ್ತು.

ತಾವು  ಸಾರ್ವತ್ರಿಕವಾಗಿ ಉತ್ಪಾದಿಸುತ್ತಿರುವ ಈ ಔಷಧಕ್ಕೆ ಪೇಟೆಂಟ್ ನೀಡುವುದನ್ನು ಭಾರತೀಯ ಔಷಧ ಕಂಪೆನಿಗಳು ವಿರೋಧಿಸಿದ್ದವು. ಆರೋಗ್ಯ ನೆರವು ಕಾರ್ಯಕರ್ತರೂ ಬಹುರಾಷ್ಟ್ರೀಯ ಕಂಪೆನಿ ಪ್ರತಿಪಾದನೆಯನ್ನು ಸುಪ್ರೀಂಕೋರ್ಟಿನಲ್ಲಿ ವಿರೋಧಿಸಿದ್ದರು.

ಔಷಧದ ಮೂಲದ್ರವ್ಯಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸ ಮಾಡಿ 'ಸದಾಕಾಲವೂ ತನಗೆ ಲಾಭವಾಗುವಂತಹ' ಪೇಟೆಂಟ್ ನ್ನು ಬಹುರಾಷ್ಟ್ರೀಯ ಕಂಪೆನಿ ಪಡೆಯಲಾಗದು ಎಂದು ಅವರು ವಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT