ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಲೈಡರ್, ಲಘು ವಿಮಾನದಿಂದ ಆರಂಭದ ಝಲಕ್

Last Updated 13 ಜನವರಿ 2012, 6:25 IST
ಅಕ್ಷರ ಗಾತ್ರ

ಮಂಗಳೂರು: ರಾಷ್ಟ್ರೀಯ ಯುವಜನೋತ್ಸವದ ಉದ್ಘಾಟನಾ ಸಮಾರಂಭದ ತಂಡಗಳ ಪೆರೇಡ್ ಕಾರ್ಯಕ್ರಮ ಸಂಜೆ 5 ಗಂಟೆಗೆ ಆರಂಭವಾಗಬೇಕಿತ್ತು. ಆದರೆ 5.15 ಆದರೂ ಕಾರ್ಯಕ್ರಮ ಆರಂಭವಾಗಲಿಲ್ಲ. ಆಗಲೇ ಆಗಸದಲ್ಲಿ ಕಾಣಿಸಿಕೊಂಡವು ಮೂರು ಪ್ಯಾರಾಗ್ಲೈಡರ್‌ಗಳು.

ಹದ್ದುಗಳ ಜತೆಗೆ ಅವುಗಳು ಹಾರಾಟದಲ್ಲಿ ಪೈಪೋಟಿ ನಡೆಸುತ್ತಿವೆಯೋ ಎಂಬಂತೆ ನಾಲ್ಕಾರು ಹದ್ದುಗಳ ನಡುವೆ ಅವುಗಳು ಕ್ರೀಡಾಂಗಣದ ಬಹಳ ಸಮೀಪಕ್ಕೆ ಬಂದು ರಂಜಿಸಿಬಿಟ್ಟವು. ಯಂತ್ರಚಾಲಿತ ಗ್ಲೈಡರ್‌ನಲ್ಲಿ ಕುಳಿತಿದ್ದ ಸಾಹಸಿಗಳು ಆಗಸದಲ್ಲಿ ತಮ್ಮ ಹಾರಾಟದ ಮೂಲಕ ಚಿತ್ತಾರ ಮೂಡಿಸಿದರು. ಇವರಿಂದಾಗಿ ಒಂದಿಷ್ಟು ರಂಜನೆ ದೊರಕಿತು. ಜತೆಗೆ ಯುವಜನೋತ್ಸವದ ಅದ್ದೂರಿತನಕ್ಕೂ ಸಾಕ್ಷಿಯಾಯಿತು.

ಬಳಿಕ ಪುಪ್ಪ ಪಕಳೆಗಳನ್ನು ತುಂಬಿದ್ದ ಮೈಕ್ರೋಲೈಟ್ ವಿಮಾನ ನಾಕ್ಕಾರು ಬಾರಿ ಕ್ರೀಡಾಂಗಣದ ಮೇಲ್ಭಾಗದಲ್ಲಿ ರೊಯ್ಯನೆ ಹಾರಿಯೋಯಿತು. ಅದು ಸುರಿಸಿದ ಹೂವಿನ ಪಕಳೆಗಳು ಪ್ರೇಕ್ಷಕರ ಮೈಮೇಲೆ ಬಿದ್ದು ಪುಳಕ ನೀಡಿದವು.

ಆಗಲೇ ನೂರಾರು ಕೇಸರಿ, ಬಿಳಿ, ಹಸಿರು ಬಣ್ಣದ ಬಲೂನು ಗೊಂಚಲು ಹಿಡಿದಿದ್ದ ಹತ್ತಾರು ಯುವತಿಯರು ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಗಣ್ಯರು ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಅವರು ಒಮ್ಮೆಲೇ ಬಲೂನುಗಳನ್ನು ಬಿಟ್ಟಾಗ ಅಲ್ಲೂ ವಿಹಂಗಮ ದೃಶ್ಯ ನಿರ್ಮಾಣವಾಗಿತ್ತು.
 
ಕಲಾತಂಡಗಳು ವೇದಿಕೆಯ ಮುಂಭಾಗ ಪೆರೇಡ್ ಆರಂಭಿಸುವುದಕ್ಕೆ ಮೊದಲಾಗಿ 17 ಸಿಡಿಮದ್ದುಗಳು ಸ್ಫೋಟಿಸಿ ಪೆರೇಡ್ ಆರಂಭವಾಗುತ್ತಿರುವುದನ್ನು ತಿಳಿಸಿಕೊಟ್ಟಿತು. ಸೂರ್ಯ ಮುಳುಗುತ್ತಿದ್ದಂತೆಯೇ ಕ್ರೀಡಾಂಗಣದ ಸುತ್ತ ಅಳವಡಸಿದ್ದ ಗೂಡು ದೀಪಗಳು ಗಮನ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT