ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘಮಘಮಿಸಲಿದೆ ಮದ್ದುಸೊಪ್ಪಿನ ಪಾಯಸ

ಕೃಷಿ ಚಟುವಟಿಕೆಯ ಅವಿಭಾಜ್ಯ ಅಂಗ: ಕಕ್ಕಡ ಪದಿನೆಟ್‌ ಸಂಭ್ರಮ ಇಂದು
Last Updated 3 ಆಗಸ್ಟ್ 2016, 6:38 IST
ಅಕ್ಷರ ಗಾತ್ರ

ನಾಪೋಕ್ಲು: ಜಿಲ್ಲೆಯ ಜನರ ಕೃಷಿ ಚಟುವಟಿಕೆಯ ಭಾಗವಾಗಿ ಬುಧವಾರ ಆಚರಿಸಲಾಗುವ ಕಕ್ಕಡ ಪದಿನೆಟ್‌ಗೆ ಸಂಬಂಧಿಸಿ ಮಂಗಳವಾರ ಮಧುಬನ (ಮದ್ದು) ಸೊಪ್ಪಿನ ವ್ಯಾಪಾರ ಬಿರುಸಿನಿಂದ ನಡೆಯಿತು.

ಪಟ್ಟಣ ಸೇರಿದಂತೆ ಮೂರ್ನಾಡು, ಮಡಿಕೇರಿ ಮತ್ತಿತರ ಕಡೆಗಳಲ್ಲಿ ರಸ್ತೆ ಬದಿಗಳಲ್ಲಿ ಸೊಪ್ಪಿನ ರಾಶಿ ಕಂಡುಬಂತು. ಕಕ್ಕಡ ಪದಿನೆಟ್‌ ಆಚರಣೆ ಮಾಡುವವರು ಹಳ್ಳಿಗಳಿಂದ ಮಾರು ಕಟ್ಟೆಗೆ ಬಂದ ತಾಜಾ ಸೊಪ್ಪನ್ನು ಖರೀದಿಸಿದರು. ಆಚರಣೆಯ ಅರಿವಿಲ್ಲ ದವರು ವ್ಯಾಪಾರಸ್ಥರಿಂದ ಮಾಹಿತಿ ಪಡೆದರು.

ಆಷಾಢ ಎಂಬ ಪದ ಸಮಾನಾರ್ಥಕವಾಗಿ ಕೊಡವ ಭಾಷೆಯಲ್ಲಿ ಕಕ್ಕಡ ಎಂದೂ ತುಳು ಭಾಷೆಯಲ್ಲಿ ಆಟಿ ಎಂದು ಕರೆಯಲಾಗುತ್ತದೆ. ಪ್ರತಿವರ್ಷ ಆ. 3ರಂದು ಕಕ್ಕಡ ಪದಿನೆಟ್‌ ಅನ್ನು ಕೊಡವ ಭಾಷಿಕರು ಸೇರಿದಂತೆ ಜಿಲ್ಲೆಯ ಜನತೆ ಸಂಭ್ರಮದಿಂದ ಆಚರಿಸುತ್ತಾರೆ.

ಸಾಂಪ್ರದಾಯಿಕ ಸಾಮೂಹಿಕ ಭತ್ತದ ನಾಟಿ ಕೆಲಸ ಪೂರ್ಣಗೊಂಡ ಬಳಿಕ ಕೃಷಿಕರ ಮನೆಗಳಲ್ಲಿ ಮದ್ದುಸೊಪ್ಪಿನ ಪಾಯಸ ಮಾಡಲಾಗುತ್ತದೆ. ಅಂತೆಯೇ ಈ ದಿನ ಮದ್ದುಸೊಪ್ಪಿನ ಬಳಕೆ ವ್ಯಾಪಕವಾಗಿದೆ. ಮಳೆಗಾಲದಲ್ಲಿ ದೇಹದ ಉಷ್ಣಾಂಶವನ್ನು ಹೆಚ್ಚಿಸಿ ಶೀತದಿಂದ ರಕ್ಷಿಸುತ್ತದೆ ಎಂಬ ನಂಬಿಕೆ ಇದೆ. ರಭಸದ ಮಳೆ , ಶೀತ ಹವೆ ಇಲ್ಲದಿದ್ದರೂ ಮದ್ದುಸೊಪ್ಪಿನ ಪಾಯಸದ ಘಮ ಮಾತ್ರ ಕುಂದಿಲ್ಲ.

ಔಷಧೀಯ ಸಸ್ಯದ ಖಾದ್ಯ
ಶನಿವಾರಸಂತೆ: ಕೊಡಗಿನಲ್ಲಿ ಕಕ್ಕಡ ಮಾಸ ಅಥವಾ ಆಟಿ ತಿಂಗಳ 18ನೇ ದಿನವನ್ನು ಆಯುರ್ವೇದ ಸಂಬಂಧದ ಜಾನಪದ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಅಂದು ಸಂಪ್ರದಾಯದಂತೆ ಸಾಮೂಹಿಕವಾಗಿ ಗದ್ದೆಯಲ್ಲಿ ನಾಟಿ ಕಾರ್ಯ ಮಾಡಲಾಗುತ್ತದೆ. ಆನಂತರ ಮನೆಯಲ್ಲಿ ಮಧುಬನ ಅಥವಾ ಮದ್ದುಸೊಪ್ಪಿನ ಪಾಯಸ ಹಾಗೂ ಮರಕೆಸುವಿನ ಪತ್ರೊಡೆಯೊಂದಿಗೆ ಆಚರಿಸಲಾಗುತ್ತದೆ.

ಕಕ್ಕಡ ಪದಿನೆಟ್ ಹಾಗೂ ಆಟಿ ಪದಿನೆಣ್ಮದ ವೈಶಿಷ್ಟ್ಯವೇ ಮದ್ದುಸೊಪ್ಪಿನ ಪಾಯಸ ಸೇವನೆ. ಮಧುಬನ ಹಸಿರು ಎಲೆಗಳಿಂದ ಕೂಡಿದ ಪೊದೆಯಂತೆ ಬೆಳೆಯುವ ಸಸ್ಯ. ಉದ್ದನೆಯ ಕಡ್ಡಿಯಲ್ಲಿ ಎಲೆಗಳು ತುಂಬಿರುತ್ತವೆ. ಕಕ್ಕಡ ಅಥವಾ ಆಟಿ ತಿಂಗಳ ಆರಂಭ ದಿನಗಳಿಂದ ಹಿಡಿದು ಮಧುಬನ ಗಿಡದಲ್ಲಿ ಒಂದೊಂದು ವಿಧದ ಔಷಧೀಯ ಗುಣಗಳು ಸೇರಲಾರಂಭಿಸುತ್ತವೆ. 18ನೇ ದಿನದಂದು 18 ವಿಧದ ಔಷಧಗಳು ಸೇರಿ ಸಂಪೂರ್ಣವಾಗುತ್ತದೆ ಎಂಬುದು ಪ್ರತೀತಿ. ಈ ದಿನದಂದು ಮಾತ್ರ ಅದು ಸುವಾಸನೆಭರಿತವಾಗಿರುತ್ತದೆ.

‘ಮನೆಯ ಹಿತ್ತಲಲ್ಲಿ ಬೆಳೆಯುವ ಮಧುಬನ ಗಿಡದ ಸೊಪ್ಪನ್ನು ಕಕ್ಕಡ ಪದಿನೆಟ್ ರಂದು ಕೊಯ್ದು ಅಕ್ಕಿಯೊಂದಿಗೆ ಪಾಯಸ, ಕೇಸರಿಬಾತ್ ಮಾಡಿ ಸವಿಯುತ್ತೇವೆ. ಅಲ್ಲದೇ ಬಂಧುಗಳಿಗೆ, ಸ್ನೇಹಿತರಿಗೆ ಹಾಗೂ ಅಕ್ಕಪಕ್ಕದವರಿಗೆಲ್ಲ ಮದ್ದುಸೊಪ್ಪು ಹಂಚಿ, ಖುಷಿ ಪಡುತ್ತೇವೆ’ ಎನ್ನುತ್ತಾರೆ ವಲ್ಲಂಡ ಗಂಗಮ್ಮ ಹಾಗೂ ಬೆಳ್ಳಿಯಪ್ಪ ದಂಪತಿ.
18ನೇ ದಿನದಂದು ಮಧುಬನವನ್ನು ತಂದು ಕೇಸರಿ ಬಾತ್ ಹಾಗೂ ಅಕ್ಕಿ ಪಾಯಸ ಇಲ್ಲವೇ ವಿವಿಧ ರೀತಿಯ ಅನ್ನದ ಅಡುಗೆಯನ್ನು ತಯಾರಿಸಿ ಸವಿಯಲಾಗುತ್ತದೆ.

ಮದ್ದುಸೊಪ್ಪನ್ನು  ದಂಟಿನ ಸಹಿತ ನೀರಿನಲ್ಲಿ ಚೆನ್ನಾಗಿ ಬೇಯಿಸಲಾಗುತ್ತದೆ. ನಂತರ ಆ  ನೀರನ್ನು ಸೋಸಿ ಕಡು ನೆರಳೆ ಹಣ್ಣಿನ ಬಣ್ಣದ ನೀರನ್ನು ಬಳಸಿ, ರವೆ, ಸಕ್ಕರೆ, ಗೋಡಂಬಿ–ದ್ರಾಕ್ಷಿ ಮತ್ತು ತುಪ್ಪ ಸೇರಿಸಿ ಕೇಸರಿಭಾತ್ ಮಾಡಲಾಗುತ್ತದೆ.

ಇಲ್ಲವೇ ಆ ನೀರಿನಲ್ಲಿ ಅಕ್ಕಿ, ಬೆಲ್ಲ, ಕಾಯಿತುರಿ ಸೇರಿಸಿ ಅನ್ನ ಮಾಡುತ್ತಾರೆ. ಸುವಾಸನೆಯುಕ್ತ ಕಡುಬಣ್ಣದ ಖಾದ್ಯ ಸವಿಯಲು ತುಂಬಾ ರುಚಿಯಾಗಿರುತ್ತದೆ. 
ಗೌಡ ಜನಾಂಗದವರು ಸಹ ಆಷಾಢದ ಕೊನೆಯಲ್ಲಿ ಆಟಿ ಅಮಾವಾಸ್ಯೆಯ ದಿನ ಮದ್ದುಸೊಪ್ಪಿನ ರಸದಿಂದ ತಯಾರಿಸಿದ ವೈವಿಧ್ಯಮಯ ಅಡುಗೆಯನ್ನು ಸವಿದು ಸಂಭ್ರಮಿಸುತ್ತಾರೆ.

ಕರ್ಕಾಟಕ ಮಾಸದಲ್ಲಿ ಕಾಡಿನಲ್ಲಿ ಸಸ್ಯಗಳು ಸಮೃದ್ಧವಾಗಿ ಬೆಳೆಯುತ್ತವೆ. ಮರದ ಮೇಲೆ ಬಿಡುವ ‘ಮರಕೆಸ’ ಎಂಬ ಸೊಪ್ಪು ಕೂಡ ಔಷಧ ರೂಪ ತಾಳುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮರಕೆಸವನ್ನು ಬಳಸುತ್ತಾರೆ. ಆಟಿ ಮಾಸದಲ್ಲಿ ಯಾವ ದಿನವಾದರೂ ಈ ಸೊಪ್ಪನ್ನು ಉಪಯೋಗಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎನ್ನಲಾಗಿದೆ. ಮರಕೆಸದಿಂದ ಪತ್ರೊಡೆ ಮಾಡಿ ಸವಿಯಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT