ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂಗಚಹಳ್ಳಿಗೆ ಸುತ್ತಿಕೊಂಡ ಸಮಸ್ಯೆಗಳ ಬಳ್ಳಿ

Last Updated 11 ಜನವರಿ 2012, 8:20 IST
ಅಕ್ಷರ ಗಾತ್ರ

ಯಳಂದೂರು: ಕಳೆದ ಒಂದು ವರ್ಷದಿಂದಲೂ ತೆರೆದ ಚರಂಡಿಗೆ ಮುಚ್ಚದ ಚಪ್ಪಡಿಗಳು, ಹೂಳು ತುಂಬಿದ ಮೋರಿಗಳು, ನೀರು ಸರಬರಾಜು ಮಾಡುವ ಒಡೆದ ಪೈಪ್‌ಗಳು, ಉರಿಯದ ಬೀದಿ ದೀಪಗಳು, ಸೋರುವ ಒವರ್‌ಹೆಡ್ ಟ್ಯಾಂಕ್....

-ಇವು ತಾಲ್ಲೂಕಿನ ಚಂಗಚಹಳ್ಳಿಯ ನಿತ್ಯ ಸಮಸ್ಯೆಗಳು. ಗ್ರಾಮದ ಬಹುತೇಕ ರಸ್ತೆಗಳಿಗೆ ಅನೇಕ ಅನುದಾನಗಳಿಂದ ರಸ್ತೆಗಳನ್ನು ನಿರ್ಮಿಸಲಾಗಿದೆ. ಆದರೆ ಇವುಗಳಿಗೆ ಮಣ್ಣನ್ನು ಮಾತ್ರ ಸುರಿಯಲಾಗಿದೆ. ಇಲ್ಲಿನ ಮೋರಿಗಳಲ್ಲಿ ಹೂಳೆತ್ತಿ ತಿಂಗಳುಗಳೇ ಕಳೆದಿದ್ದು, ಇವೆಲ್ಲಾ ಗಬ್ಬು ನಾರುತ್ತಿವೆ. ಕೆಲವು ಬೀದಿಗಳಲ್ಲಿ ಚರಂಡಿಯೇ ನಿರ್ಮಿಸಿಲ್ಲ.

ಗ್ರಾಮದ ದಲಿತರ ಬಡಾವಣೆಯಲ್ಲಿರುವ ನೀರಿನ ತೊಂಬೆ ಕೇವಲ ಸ್ಮಾರಕವಾಗಿದೆ. ಇಲ್ಲಿಗೆ ಯಾವ ಸಂಪರ್ಕ ವನ್ನೂ ಕಲ್ಪಿಸಿಲ್ಲ. ಕೆಲವು ಕೈಪಂಪು ಗಳೂ ಕೆಟ್ಟು ನಿಂತಿದ್ದು ಇನ್ನೂ ದುರಸ್ತಿಯಾಗಿಲ್ಲ. ಬಹುತೇಕ ಬೀದಿ ದೀಪಗಳು ಕೆಟ್ಟು ನಿಂತಿವೆ. ರಾತ್ರಿ ವೇಳೆ ಇಲ್ಲಿನ ಬೀದಿಗಳು ಕಗ್ಗತ್ತಲಲ್ಲಿ ಮುಳುಗುತ್ತದೆ.

ದಲಿತರ ಬಡಾವಣೆಯ ಬೀದಿಯೊಂದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಡ್ಡಲಾಗಿ ಚರಂಡಿ ನಿರ್ಮಿಸಿ ಅದಕ್ಕೆ ಕಾಲುವೆಯನ್ನೂ ನಿರ್ಮಿಸಲಾಗಿದೆ. ಆದರೆ ಇದರ ಮಧ್ಯದಲ್ಲಿರುವ ಚಪ್ಪಡಿ ಕಲ್ಲು ಕುಸಿದು ವರ್ಷ ಉರುಳಿದೆ.

ವಾಹನ ಸವಾರರು ಚಲಿಸುವುದು ಕಷ್ಟವಾಗಿದೆ. ಇಲ್ಲಿ ಮಕ್ಕಳು ಬಿದ್ದು ಗಾಯಗೊಂಡ ಉದಾಹರಣೆಗಳು ಇವೆ. ಈ ಬಗ್ಗೆ ಸಂಬಂಧಪಟ್ಟ ಪಂಚಾಯಿತಿಗೆ ದೂರು ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮದ ಮಲ್ಲಿಕಾರ್ಜುನಯ್ಯ ದೂರುತ್ತಾರೆ.

ಗ್ರಾಮಕ್ಕೆ ನೀರು ಸರಬರಾಜು ಮಾಡುವ ಪೈಪ್‌ಗಳು ತುಂಬಾ ಹಳೆಯದಾಗಿದೆ. ಹಾಗಾಗಿ ಅಲ್ಲಲ್ಲಿ ಒಡೆದು ನೀರು ಸೋರುತ್ತದೆ. ಇದರ ಜೊತೆ ಕಲ್ಮಶಗಳೂ ಕುಡಿಯುವ ನೀರನ್ನು ಸೇರುವ ಅಪಾಯವಿದೆ. ಒವರ್‌ಹ್ಯಾಡ್ ಟ್ಯಾಂಕ್ ಕೂಡ ಸೋರುತ್ತದೆ. ಆದ್ದರಿಂದ ಇದನ್ನು ದುರಸ್ತಿ ಪಡಿಸಿ ಹೊಸ ಪೈಪ್‌ಲೈನ್‌ಗಳನ್ನು ನಿರ್ಮಿಸಬೇಕು ಎಂಬುದು ಗ್ರಾಮದ ಸಿದ್ಧರಾಜು ಅವರ ಒತ್ತಾಯ.

ಈ ಗ್ರಾಮಕ್ಕೆ ಎಲ್ಲಾ ಸೌಲಭ್ಯ ಕಲ್ಪಿಸಿ ಕೊಡುವ ಮೂಲಕ ಮಾದರಿ ಗ್ರಾಮವನ್ನಾಗಿ ಪರಿವರ್ತಿಸುವ ಎಲ್ಲಾ ಲಕ್ಷಣಗಳೂ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂಬುದು ಇಲ್ಲಿನ ನಾಗರೀಕರ ದೂರು. ಈಗಲಾದರೂ ಈ ಬಗ್ಗೆ ಕ್ರಮ         ಕೈಗೊಂಡು ಗ್ರಾಮ ಅಭಿವೃದ್ಧಿಗೆ ಪಣ ತೊಡುವರೇ ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT