ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದದ ಅಕ್ಷರಕ್ಕೆ ಬ್ಯೂಟಿ ಟಿಪ್ಸ್

ಕೈ ಬರಹ ಕೈಪಿಡಿ ಭಾಗ 11
Last Updated 17 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಪ್ರತಿಯೊಬ್ಬರಲ್ಲೂ ಸೌಂದರ್ಯ ಪ್ರಜ್ಞೆ ಇರುತ್ತದೆ. ಯಾರು ಚೆನ್ನಾಗಿ ಕಾಣಿಸುತ್ತಾರೆ, ಯಾರು ಕಾಣಿಸುವುದಿಲ್ಲ ಎಂಬುದಷ್ಟೇ ಅಲ್ಲ ತಾನು ಹೇಗೆ ಅಲಂಕರಿಸಿಕೊಂಡರೆ ಚೆನ್ನಾಗಿ ಕಾಣಿಸುತ್ತೇನೆ ಎಂಬುದೂ ತಿಳಿದಿರುತ್ತದೆ. ನಾವು ಕನ್ನಡಿಯ ಮುಂದೆ ನಿಂತಾಗ, ಸುತ್ತಮುತ್ತ ನೋಡುವವರಾರೂ ಇಲ್ಲದಿದ್ದರೆ ವಿವಿಧ ಭಂಗಿ, ಮುಖಭಾವಗಳನ್ನು ಮಾಡಿ ಪರೀಕ್ಷಿಸಿಕೊಳ್ಳುವುದಿಲ್ಲವೇ? ಅಂತಹ ಸೌಂದರ್ಯ ಪ್ರಜ್ಞೆಯನ್ನು ಕೈಬರಹದ ವಿಷಯದಲ್ಲೂ ಬೆಳೆಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಸುಂದರವಾದ ಅಕ್ಷರಗಳನ್ನು ನೀವು ಕೇವಲ ಮೆಚ್ಚಿದರೆ ಸಾಲದು, ಆ ಸೌಂದರ್ಯಕ್ಕೆ ಕಾರಣ ಏನು ಎಂಬುದನ್ನೂ ಸ್ವಲ್ಪ ಯೋಚಿಸಬೇಕು. `ಅಕ್ಷರಗಳ ಸೌಂದರ್ಯ ಪ್ರಜ್ಞೆ' ಬೆಳೆಸಿಕೊಂಡು ನಮ್ಮ ಅಕ್ಷರಗಳಿಗೆ ಬ್ಯೂಟಿ ಪಾರ್ಲರ್ ಚಿಕಿತ್ಸೆಯನ್ನು ನೀಡಬೇಕು!

1. ನೋಟ: ಪ್ರತಿ ಅಕ್ಷರಕ್ಕೂ ಒಂದು ಸೌಂದರ್ಯ ಇರುತ್ತದೆ. ಯಾವುದೇ ಅಕ್ಷರವನ್ನು ಕೆಟ್ಟದಾಗಿಯೂ ಬರೆಯಬಹುದು, ಚೆನ್ನಾಗಿಯೂ ಬರೆಯಬಹುದು. (ದೃಷ್ಟಾಂತ 1 ನೋಡಿ)

2. ಅಕ್ಷರಗಳು ತುಂಬಿಕೊಂಡಿರಲಿ: ಪ್ರತಿ ಅಕ್ಷರ ಬರೆಯಲು ಒಂದು ಚೌಕಟ್ಟಿನ ಸ್ಥಳ ಇದೆ ಎಂದು ಭಾವಿಸೋಣ. ನಾವು ಬರೆಯುವ ಅಕ್ಷರಗಳು ಈ ಚೌಕಟ್ಟನ್ನು ಆದಷ್ಟೂ ತುಂಬಿರುವಂತೆ ಇರಬೇಕು (ದೃಷ್ಟಾಂತ 2).

ತುಂಬಿದ ಕೆನ್ನೆಯ ಮುದ್ದಾದ ಮಗುವಿನಿಂದ ನಾವು ಆಕರ್ಷಿತರಾಗುವುದಿಲ್ಲವೇ? ಅಕ್ಷರಗಳು ಕ್ಷಾಮ ಪೀಡಿತ, ಸೊರಗಿದ ಮಗುವಿನಂತೆ ಇದ್ದರೆ? ಅದರ ಮೇಲೆ ನಮಗೆ `ಅಯ್ಯೋ ಪಾಪ' ಎಂಬ ಕರುಣೆ ಬರಬಹುದು ಅಷ್ಟೆ. ಅಕ್ಷರಗಳು ದುಂಡು ದುಂಡಾಗಿ ಇರಬೇಕೆಂಬ ಕಾರಣದಿಂದಲೇ ದುಂಡಕ್ಷರ ಎಂದೂ ಕರೆಯುವುದಿಲ್ಲವೆ?

3. ಗಾತ್ರ: ಅಕ್ಷರಗಳ ಗಾತ್ರಕ್ಕೂ ಸೌಂದರ್ಯಕ್ಕೂ ನೇರ ಸಂಬಂಧವಿದೆ. ನಾವು ಬಿಳಿ ಹಾಳೆಯಲ್ಲಿ ಬರೆಯುವಾಗ ನಮ್ಮ ಅಕ್ಷರಗಳ ಗಾತ್ರಕ್ಕೆ ತಕ್ಕಂತೆ ಸಾಲುಗಳು ಹಾಗೂ ಪದಗಳ ಅಂತರ ಬಿಡಬಹುದು. ಆದರೆ ಗೆರೆಯುಳ್ಳ ಪುಸ್ತಕದಲ್ಲಿ ಬರೆಯುವಾಗ ನಮಗೆ ಆ ಸ್ವಾತಂತ್ರ್ಯ ಇರುವುದಿಲ್ಲ. ಏಕೆಂದರೆ ಎರಡು ಅನುಕ್ರಮ ಗೆರೆಗಳ ನಡುವೆ ಸರಿಯಾಗಿ 8 ಮಿ.ಮೀ ಅಂತರ ಇರುತ್ತದೆ. ಇದನ್ನು ಮೂರು ಭಾಗ ಮಾಡಿದರೆ ಪ್ರತಿ ಭಾಗವೂ 3 ಮಿ.ಮೀ.ಗಿಂತ ಸ್ವಲ್ಪ ಕಡಿಮೆಯಾಗುತ್ತದೆ. ಅಕ್ಷರಗಳಿಗೆ ಮೇಲ್ಭಾಗ, ಮಧ್ಯ ಭಾಗ ಮತ್ತು ಕೆಳ ಭಾಗ ಇರಬೇಕಾದ್ದರಿಂದ ಈ ಅಳತೆ ಸೂಕ್ತ. ಅಕ್ಷರಗಳು ಇದಕ್ಕಿಂತ ದೊಡ್ಡದಾದರೆ ಖಾಸಗಿ ಟೆಂಪೊದಲ್ಲಿ ಪ್ರಯಾಣಿಕರನ್ನು ತುಂಬಿದಂತೆ ಕಾಣುತ್ತದೆ (ದೃಷ್ಟಾಂತ 3)

ಇನ್ನೂ ಒಂದು ವಿಷಯ ಯೋಚಿಸಬೇಕಾಗುತ್ತದೆ. ಅಕ್ಷರಗಳ ಗಾತ್ರ ತುಂಬಾ ದೊಡ್ಡದಿದ್ದರೆ ನಮ್ಮ ಪೆನ್ನು ಹೆಚ್ಚು ಕಿಲೊಮೀಟರ್ ಓಡಬೇಕಾಗಬಹುದು. ಅವು ತೀರಾ ಸಣ್ಣಗಿದ್ದರೆ ಓದಲು ಕಷ್ಟವಾಗಬಹುದು.

4. ಪ್ರಮಾಣಬದ್ಧತೆ: ಮನುಷ್ಯರ ದೇಹವು ಹೇಗೆ ಪ್ರಮಾಣಬದ್ಧ ಆಗಿರಬೇಕೋ ಹಾಗೇ ಅಕ್ಷರಗಳೂ ಕೂಡ. ಕೈಕಾಲು ಸಣ್ಣ ಹೊಟ್ಟೆ ಡುಮ್ಮ ಇರುವ ವ್ಯಕ್ತಿ ಹೇಗೆ ಕಾಣಬಹುದು? ಆದ್ದರಿಂದ ನಾವು ಬರೆಯುವ ಅಕ್ಷರಗಳ ಪ್ರತಿ ಭಾಗವೂ ಪ್ರಮಾಣಬದ್ಧವಾಗಿದ್ದು ಸರ್ವಾಂಗ ಸುಂದರ ಆಗಿರಬೇಕು (ದೃಷ್ಟಾಂತ 4)

5. ಅಕ್ಷರಗಳು ಮತ್ತು ಪದಗಳ ನಡುವಿನ ಅಂತರ: ಅಕ್ಷರಗಳು ಒತ್ತೊತ್ತಾಗಿದ್ದು ಪದಗಳ ನಡುವೆ ಸಾಕಷ್ಟು ಅಂತರ ಇದ್ದರೆ ನಮ್ಮ ಕೈಬರಹ ಚೆನ್ನಾಗಿರುತ್ತದೆ. ಅಕ್ಷರಗಳು ಸುಂದರವಾದ ದಂತಪಂಕ್ತಿಯಂತೆ ಅಥವಾ ಮುತ್ತು ಪೋಣಿಸಿದಂತೆ ಒತ್ತೊತ್ತಾಗಿ ಇರಬೇಕು. ಒಂದು ಪದಕ್ಕೂ ಇನ್ನೊಂದು ಪದಕ್ಕೂ ನಡುವೆ ಸಮಾನವಾದ ಅಂತರ ಸಾಕಷ್ಟು ಇರಬೇಕು. ಕೆಲವು ಕಾಂನ್ವೆಂಟುಗಳಲ್ಲಿ ಒಂದು ಪದ ಬರೆದ ತಕ್ಷಣ ಕಿರು ಬೆರಳನ್ನು ಇಡುವಂತೆ ಹೇಳಿ, ಅಷ್ಟು ಜಾಗ ಬಿಟ್ಟು ಮುಂದಿನ ಪದ ಬರೆಯುವಂತೆ ಅಭ್ಯಾಸ ಮಾಡಿಸುತ್ತಾರೆ. ಆದರೆ ಪದಗಳ ನಡುವಿನ ಅಂತರವು ಸಾಲುಗಳ ನಡುವಿನ ಅಂತರಕ್ಕಿಂತ ಹೆಚ್ಚಾಗಿರಬಾರದು (ದೃಷ್ಟಾಂತ 5)

6. ಇಡೀ ಪುಟದ ವಿನ್ಯಾಸ: ನೀವು ಪತ್ರಿಕೆಗಳ ಕೆಲವು ಜಾಹೀರಾತನ್ನು ಗಮನಿಸಿರಬಹುದು. ಇಡೀ ಪುಟದಲ್ಲಿ ಕೆಲವೇ ಅಕ್ಷರಗಳಿರುವ ಜಾಹೀರಾತು ಎದ್ದು ಕಾಣುತ್ತದೆ. ಆದರೆ ಸ್ವಲ್ಪ ಜಾಗದಲ್ಲೇ ಅತಿ ಹೆಚ್ಚು ಮಾಹಿತಿಯನ್ನು ಜಾಹೀರಾತಿನಲ್ಲಿ ತುರುಕಿದ್ದರೆ ಅದು ಚೆನ್ನಾಗಿ ಕಾಣಿಸುವುದಿಲ್ಲ. ನಾವು ಬರೆಯುವ ಪುಟದಲ್ಲೂ ಸುಮಾರು ಮೂರನೇ ಒಂದು ಭಾಗ ಅಕ್ಷರಗಳಿಂದ ತುಂಬಿದ್ದು, ಉಳಿದ ಭಾಗ ಖಾಲಿ ಇದ್ದರೆ ಬರಹ ಎದ್ದು ಕಾಣಲು ಸಹಾಯಕ.

7. ಹೊಸ ಪ್ಯಾರಾ: ಹೊಸ ಪ್ಯಾರಾದ ಮೊದಲ ಸಾಲನ್ನು ಸ್ವಲ್ಪ ಜಾಗ ಬಿಟ್ಟು ಬರೆಯುತ್ತಾರೆ. ಇದನ್ನು ಇಂಡೆಂಟ್ ಎನ್ನುತ್ತಾರೆ. ಹೀಗೆ ಬಿಡುವುದು ಸಾಂಪ್ರದಾಯಿಕ ಶೈಲಿ. ಇಂಡೆಂಟ್ ಬಿಡದೆ ಒಂದು ಸಾಲನ್ನೇ ಬಿಟ್ಟು ಹೊಸ ಪ್ಯಾರಾ ಪ್ರಾರಂಭಿಸುವುದು ಆಧುನಿಕ ಶೈಲಿ.
ಮುಂದಿನ ವಾರ: ಚಂದದ ಅಕ್ಷರಕ್ಕೆ ಬ್ಯೂಟಿ ಟಿಪ್ಸ್-2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT