ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದನ ಶಾಲೆಗೆ ದಶಮಾನೋತ್ಸವ ಸಂಭ್ರಮ

Last Updated 12 ಡಿಸೆಂಬರ್ 2012, 8:39 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: `ಮಕ್ಕಳಿಗಾಗಿ ಆಸ್ತಿ ಮಾಡಬೇಡಿ. ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ' ಎಂಬ ಪರಿಕಲ್ಪನೆಯೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ ಟಿ.ಈಶ್ವರ ಅವರು ಹತ್ತು ವರ್ಷಗಳ ಹಿಂದೆ ಲಕ್ಷ್ಮೇಶ್ವರದಲ್ಲಿ ಸ್ಕೂಲ್ ಚಂದನ ಶಿಕ್ಷಣ ಸಂಸ್ಥೆ ತೆರೆದರು. 

ನಗರ ಪ್ರದೇಶದ ಮಕ್ಕಳು ಪಡೆಯುವಂಥ ಗುಣಮಟ್ಟದ ಶಿಕ್ಷಣ ಗ್ರಾಮೀಣ ಮಕ್ಕಳಿಗೂ ದೊರೆಯಬೇಕು ಎಂಬುದು ಟಿ.ಈಶ್ವರ  ಅವರ ಮುಖ್ಯ ಧ್ಯೇಯ. ಅದನ್ನು ಈಗ ಅವರ ಸ್ಕೂಲ್ ಚಂದನ ಈಡೇರಿಸಿದೆ.

ಮಕ್ಕಳು ಕೇವಲ ಪಠ್ಯಪುಸ್ತಕ, ಪರೀಕ್ಷೆ, ಹೋಂವರ್ಕ್‌ಗಳಿಗೆ ಸೀಮಿತಗೊಳ್ಳದೆ ಜೀವನದಲ್ಲಿ ಎದುರಾಗುವ ಎಲ್ಲ ಸಮಸ್ಯೆಗಳನ್ನು ಅವರು ಧೈರ್ಯವಾಗಿ ಎದುರಿಸುವ ಶಕ್ತಿ ತುಂಬುವುದೇ ಈ ಶಾಲೆಯ ವಿಶಿಷ್ಟತೆಯಾಗಿದೆ. ಮಕ್ಕಳು ಶಿಸ್ತು ಹಾಗೂ ನೈತಿಕತೆಯೊಂದಿಗೆ ಬೆಳೆಯಬೇಕು. ಕೇವಲ ತಮ್ಮ ಉದ್ಧಾರ ಮಾಡಿಕೊಳ್ಳದೆ ಇಡೀ ದೇಶವನ್ನೇ ಪ್ರಗತಿ ಪಥದತ್ತ ಕೊಂಡೊಯ್ಯುವ  ಸೈನಿಕರಾಗ ಬೇಕು ಎಂಬುದು ಶಾಲೆಯ ಆಡಳಿತ ಮಂಡಳಿ ಧ್ಯೇಯವಾಗಿದೆ. ಹೀಗಾಗಿ ಚಂದನ ಶಾಲಾ ಮಕ್ಕಳು ಶಿಸ್ತನ್ನು ರೂಢಿಸಿಕೊಂಡು ಬೆಳೆಯು ತ್ತಿದ್ದಾರೆ.

ಮಕ್ಕಳು ಕೇವಲ ಅಭ್ಯಾಸಕ್ಕೆ ಅಂಟಿಕೊಳ್ಳದೆ ಇತರೇ ರಚನಾತ್ಮ ಚಟುವಟಿಕೆಗಳಲ್ಲಿ ಭಾಗವಹಿಸಿ ಒಬ್ಬ ಉತ್ತಮ ಪ್ರಜೆಯಾಗಿ ಹೊರಹೊಮ್ಮಬೇಕು ಎಂಬ ಉದ್ದೇಶದಿಂದ ಆಡಳಿತ ಮಂಡಳಿ ನಿತ್ಯ ಶ್ರಮಿಸುತ್ತಿದೆ.

ಮಕ್ಕಳಲ್ಲಿ ಸಂವಿಧಾನದ ಕುರಿತು ಕಲ್ಪನೆ ಮೂಡಿ ಸುವ ನಿಟ್ಟಿನಲ್ಲಿ ಶಾಲಾ ಸಂಸತ್ತನ್ನು ಪ್ರತಿ ವರ್ಷ ರಚಿಸಲಾಗುತ್ತಿದೆ. ಅದರ ಜೊತೆಗೆ ಸಾಹಿತ್ಯ, ಸಂಗೀತ, ಚಿತ್ರಕಲೆ, ನಾಟ್ಯಕಲೆ ಸೇರಿದಂತೆ ಮತ್ತಿತರ ಸೃಜನಾತ್ಮಕ ರಂಗಗಳಲ್ಲಿ ಚಂದನದ ಮಕ್ಕಳು ಮೊದಲಿಗರಾಗಿರಬೇಕು ಎಂಬುದು ಸಂಸ್ಥಾಪಕ ಟಿ.ಈಶ್ವರ ಅವರ ಬಯಕೆ.

ಚಂದನ-ಸ್ಪಂದನ ಕಾರ್ಯಕ್ರಮದಡಿಯಲ್ಲಿ ದೇಶದ ಅನೇಕ ಮಹನೀಯರು ಶಾಲೆಗೆ ಭೇಟಿ ನೀಡಿ ಇಲ್ಲಿನ ಮಕ್ಕಳ ಪ್ರತಿಭೆ ಕಂಡು ಖುಷಿ ಯಾಗಿದ್ದಾರೆ. ಬಿಜಾಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ, ಡಾ.ಎ.ಪಿ.ಜೆ. ಅಬ್ದುಲ್ ಕಲಾಂ, ಡಾ.ಚಂದ್ರಶೇಖರ ಕಂಬಾರ, ಡಾ.ಮನು ಬಳಿಗಾರ, ಐಎಎಸ್ ಹಿರಿಯ ಅಧಿಕಾರಿ ವಿ.ಪಿ. ಬಳಿಗಾರ, ಸಂಗೀತಾ ಕಟ್ಟಿ, ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ, ಕೆಪಿಎಸ್‌ಸಿ ಅಧ್ಯಕ್ಷ ಗೋನಾಳ ಭೀಮಪ್ಪ, ಜಿ.ಟಿ. ಚಂದ್ರಶೇಖರಪ್ಪ, ಖನ್ನಿರಾಮ್, ಅಮೆರಿಕಾದ ಡೆನಿಶ್ ಮ್ಯಾಡಮ್, ಡಾ.ಶಿವಾನಂದ, ಕೇರಳದ ಡಾ.ನಾಯರ್, ಪ್ರಜಾವಾಣಿ ಖ್ಯಾತ ಅಂಕಣಕಾರ ಡಾ.ಗುರುರಾಜ ಕರ್ಜಗಿ, ಮಹಿಮಾ ಪಟೇಲ್ ಹೀಗೆ ಗಣ್ಯರ ಪಟ್ಟಿ ಬೆಳೆಯುತ್ತ ಹೋಗುತ್ತದೆ.

ಸುಂದರ ಪರಿಸರ, ಅನುಭವಿ ಬೋಧಕ ಸಿಬ್ಬಂದಿ, ಆಧುನಿಕ ಕಲಿಕಾ ಸಾಮಗ್ರಿ, ಸುಸಜ್ಜಿತ ಗ್ರಂಥಾಲಯ, ಪ್ರಯೋಗಾಲ ಯವಿದ್ದು, ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಶಿಕ್ಷಣ ಕಲಿಸುತ್ತಿರುವ ಚಂದನ ಶಾಲೆ ಪ್ರಯತ್ನ ನಿಜಕ್ಕೂ ಶ್ಲಾಘನೀಯ ವಾಗಿದೆ. ದಶಮಾನೋತ್ಸವ ಆಚರಣೆ  ಮೊದಲ ಭಾಗವಾಗಿ ಡಿ.13ರಂದು ಪ್ರಜಾವಾಣಿಯ ಖ್ಯಾತ ಅಂಕಣಕಾರ ಡಾ.ಗುರುರಾಜ ಕರ್ಜಗಿ ಅವರಿಂದ `ಮಕ್ಕಳ ಬೆಳವಣಿಗೆಯಲ್ಲಿ ನಮ್ಮ ಪಾತ್ರ' ಕುರಿತು ಉಪನ್ಯಾಸ ಏರ್ಪಡಿಸಲಾಗಿದೆ.

ನಾಡೋಜ ಡಾ.ಪಾಟೀಲ ಪುಟ್ಟಪ್ಪ ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದು ಅವರಿಗೆ `ಚಂದನ ಶ್ರೀ'ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಮಾರಂಭಕ್ಕೆ ಪ್ರಜಾವಾಣಿಯ ಕಾರ್ಯ ನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ, ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಸೇರಿದಂತೆ ಅನೇಕ ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪ್ರೊ.ಸಿ.ವಿ. ಕೆರಿಮನಿ ಹಾಗೂ ಶಂಕರ ಕುಂಬಿ ಹಾಗೂ ಲಕ್ಷ್ಮೇಶ್ವರದ ಅಂಚೆ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಗೀತಾ ಕುಲಕರ್ಣಿ ಅವರಿಗೆ ಸನ್ಮಾನ ಕೂಡ ಹಮ್ಮಿಕೊಳ್ಳಲಾಗಿದೆ.
ನಾಗರಾಜ ಎಸ್. ಹಣಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT