ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಗುತ್ತಿಯ ಅಭಿವೃದ್ಧಿಗೆ ಬದ್ಧ

Last Updated 21 ಜನವರಿ 2011, 8:20 IST
ಅಕ್ಷರ ಗಾತ್ರ

ಸೊರಬ: ಚಂದ್ರಗುತ್ತಿ ಕ್ಷೇತ್ರದ ನೂತನ ಜಿ.ಪಂ. ಸದಸ್ಯರಾದ ಬಿಜೆಪಿಯ ಯುವ ಮುಖಂಡ ಗುರುಕುಮಾರ್ ಎಸ್. ಪಾಟೀಲ್ ‘ಪ್ರಜಾವಾಣಿ’ ಜತೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

* ನಿಮ್ಮ ಆಯ್ಕೆ ಬಗ್ಗೆ ಪ್ರತಿಕ್ರಿಯೆ?

ಈವರೆಗೆ ಕ್ಷೇತ್ರದ ವ್ಯಾಪ್ತಿಯ ಹೊರಗಿನವರೇ ಹೆಚ್ಚಾಗಿ ಸದಸ್ಯರಾಗಿದ್ದರು. ಕ್ಷೇತ್ರದವನೇ ಆದ ನನ್ನ ಆಯ್ಕೆ ನನ್ನಷ್ಟೇ ಸ್ಥಳೀಯರಿಗೂ ಸಂತಸ ತಂದಿದೆ. ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ. ಮುಖ್ಯಮಂತ್ರಿ ಯಡಿಯೂರಪ್ಪ, ಶಾಸಕರಾದ ಹಾಲಪ್ಪ ಅವರಿಗೆ ನನ್ನ ಮೊದಲ ಅಭಿನಂದನೆ.

* ಕಿರಿಯ ವಯಸ್ಸಿನಲ್ಲಿಯೇ ರಾಜಕಾರಣ ಪ್ರವೇಶಿಸಲು ಪ್ರೇರಣೆ?
ಪ್ರೌಢಶಾಲೆಗೆ ಹೋಗುವಾಗ ಪಟ್ಟ ಕಷ್ಟ. ದ್ವೀಪದಂತಹ ಗ್ರಾಮದಿಂದ ಶಾಲೆಗೆ ತೆರಳಲು ಮಳೆಗಾಲದಲ್ಲಿ ಅಸಾಧ್ಯವಾಗುತ್ತಿತ್ತು. ಹಳ್ಳಿಯನ್ನು ಮುಂದೆ ತರಲು ರಾಜಕೀಯ ಮಾರ್ಗ ಅನುಕೂಲಕರ ಎಂಬ ಭಾವನೆ ಚಿಕ್ಕಂದಿನಿಂದಲೇ ಮೂಡಿತ್ತು.

* ಇತಿಹಾಸ, ಪುರಾಣ ಪ್ರಸಿದ್ಧ ಚಂದ್ರಗುತ್ತಿ ಕ್ಷೇತ್ರದ ಸಮಸ್ಯೆ?

ನೀರು. ಸಮೀಪವೇ ನದಿಯಿದ್ದರೂ ಕುಡಿಯುವ ನೀರಿನ ಸಮಸ್ಯೆ ಶಾಪದಂತೆ ಕಾಡುತ್ತಿದೆ. ಪ್ರಯತ್ನಗಳಿಗೆ ಫಲ ಸಿಕ್ಕಿಲ್ಲ. ಚಂದ್ರಗುತ್ತಿ ಪ್ರವಾಸಿ ಕ್ಷೇತ್ರವಾಗಿ ಅಭಿವೃದ್ಧಿ ಕಂಡಿಲ್ಲ.

* ಯಾವ ರೀತಿ ಪರಿಹಾರ ಕಂಡುಕೊಳ್ಳುವಿರಿ?
ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆ ತೀರಿದರೆ ಎಲ್ಲಾ ಸಮಸ್ಯೆ ತೀರಿದಂತೆ. ಗ್ರಾ.ಪಂ. ಅಧ್ಯಕ್ಷನಾಗಿ ಹೊಳೆಮರೂರಿನಿಂದ ನೀರು ತರುವ ಪ್ರಕ್ರಿಯೆಗೆ ಕ್ರಿಯಾ ಯೋಜನೆ ರೂಪಿಸಿದ್ದು, ಶತಾಯ ಗತಾಯ ಅನುಷ್ಠಾನಗೊಳಿಸುತ್ತೇನೆ. ಚಂದ್ರಗುತ್ತಿಯನ್ನು ಪ್ರವಾಸಿಕ್ಷೇತ್ರ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ. ಈಗಾಗಲೇ, ರೂ 50 ಲಕ್ಷ ಬಿಡುಗಡೆ ಆಗಿದ್ದು, ಗ್ರಾಮದ ಹಿರಿಯರ ಸಲಹೆ ಪಡೆದು ಯಾತ್ರಿನಿವಾಸ, ಕಲ್ಯಾಣ ಮಂಟಪ, ಸಾಮೂಹಿಕ ಶೌಚಾಲಯಗಳ ನಿರ್ಮಾಣಕ್ಕೆ ಸಹಕರಿಸುತ್ತೇನೆ.

ಹೋಬಳಿಯಲ್ಲಿ 5-6 ಮನೆಗಳಿರುವ ಹಳ್ಳಿಗಳಿದ್ದು, ಸಮೀಪದ ಪಟ್ಟಣಗಳಿಗೆ ರಸ್ತೆ ಸಂಪರ್ಕಕ್ಕೆ ಆದ್ಯತೆ ನೀಡುತ್ತೇನೆ. ಬಸ್ತಿಕೊಪ್ಪಕ್ಕೆ ಸೇತುವೆ ನಿರ್ಮಾಣಕ್ಕೆ ಮರುಜೀವ ನೀಡುತ್ತೇನೆ. ಪ.ಪೂ. ಕಾಲೇಜು ಮಂಜೂರಾತಿ, ಗ್ರಿಡ್ ಕಾಮಗಾರಿ ಪೂರ್ಣಗೊಳಿಸುವುದು, ಗುಡವಿ ಪಕ್ಷಧಾಮದ ಅಭಿವೃದ್ಧಿ, ಬಳ್ಳಿಬೈಲು-ದುಗ್ಲಿ ರಸ್ತೆ ನಿರ್ಮಾಣಕ್ಕೆ ಆದ್ಯತೆ. ಸರ್ಕಾರದ ಕಾರ್ಯಕ್ರಮಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎನ್ನುವುದು ನನ್ನ ಪ್ರಮುಖ ಗುರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT