ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಪ್ಪ ನಮ್ಮಊರಿಗೆ ಬಂದಾನ...

Last Updated 4 ಅಕ್ಟೋಬರ್ 2011, 5:45 IST
ಅಕ್ಷರ ಗಾತ್ರ

ಹುಕ್ಕೇರಿ: ಬೆಳಗಾವಿಯ ಜಿಲ್ಲೆಯ ಹುಕ್ಕೇರಿ ತಾಲೂಕಿನ ಘೋಡಗೇರಿಯಲ್ಲಿ ಸೋಮವಾರ ಸಂಭ್ರಮವೋ ಸಂಭ್ರಮ. ಗ್ರಾಮದ ಎಲ್ಲೆಡೆ ಹಬ್ಬದ ವಾತಾವರಣ. ಯಾಕಂದ್ರ ಚಂದ್ರಪ್ಪ (ಡಾ.ಚಂದ್ರಶೇಖರ ಕಂಬಾರ) ಬಂದಾನ....

ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯಾಗಿರುವ ಡಾ. ಕಂಬಾರ ಅವರು ಪ್ರಥಮ ಬಾರಿಗೆ ತಮ್ಮೂರಾದ ಘೋಡಗೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.

ಚಂದ್ರಪ್ಪ ಊರಿಗೆ ಬಂದಾನೆಂದು ತಿಳಿದು ಗ್ರಾಮಸ್ಥರು ಗುಂಪು ಗುಂಪಾಗಿ ಕಂಬಾರ ಅವರನ್ನು ನೋಡಲು, ಮಾತನಾಡಿಸಲು ಬಂದಾಗ ಡಾ. ಚಂದ್ರಶೇಖರ ಕಂಬಾರರು ಭಾವುಕರಾದದ್ದು ಕಂಡುಬಂತು.

ಚಿಕ್ಕವರು ಕಾಲಿಗೆ ಎರಗಿದರೆ, ಸಮಾನ ವಯಸ್ಕರು ಚಂದ್ರಪ್ಪನನ್ನು ಆಲಿಂಗಿಸಿ ಸಂತಸ ಪಟ್ಟರು. ತನ್ನ ಜೊತೆ ಕಲಿತ ಸ್ನೇಹಿತರು-ಸಹಪಾಠಿಗಳು ಎದುರಿಗೆ ಬಂದಾಗ ಡಾ.ಕಂಬಾರರು ತಮ್ಮ ಹಳೆಯ ಶೈಲಿಯಲ್ಲಿ ಅವರನ್ನು ಮಾತನಾಡಿಸಿದರು. ಕಷ್ಟದ ಕಾಲದಲ್ಲಿ ಸಹಾಯ ಮಾಡಿದ ಹಿರಿಯರನ್ನು ಕಂಡು ನಮಸ್ಕರಿಸಿದರು.

ಡಾ.ಕಂಬಾರ ಅವರು ವಾಹನದಿಂದ ಕೆಳಗಿಳಿಯುತ್ತಿದ್ದಂತೆಯೇ  ಬೀರ ದೇವರ ಗುಡಿಗೆ ಹೋಗಿ ನಮಸ್ಕರಿಸಿದರು.
ಅದೇ ಸಮಯದಲ್ಲಿ ಆಗಮಿಸಿದ ಸಹಪಾಠಿ ವೆಂಕಪ್ಪ ತುರಮರಿ ಅವರನ್ನು ಕಂಡಾಗ `ಯಾಕೋ ಹೇಂಗದಿ...?~ ಎಂದು ವಿಚಾರಿಸಿ ಅಪ್ಪಿಕೊಂಡು ಭಾವುಕರಾದರು.

ತಾವು ಕಲಿಯುವಾಗ ಆ ದೇವಸ್ಥಾನದಲ್ಲಿ ನಡೆದ ವಿವಿಧ ಕಾರ್ಯಕ್ರಮ, ಡೊಳ್ಳಿನ ಪದಗಳ ಮೆಲುಕು ಹಾಕಿದ ಕಂಬಾರರು ಭಾವುಕತೆಯಿಂದ ಕಣ್ಣಲ್ಲಿ ನೀರು ತುಂಬಿಕೊಂಡರು. ತನ್ನ ಸಹಪಾಠಿ ವೆಂಕಪ್ಪ ಮತ್ತು ಬಸವಣ್ಣಿ ಜೊತೆ ತಾವು ಕಲಿತ ಕನ್ನಡ ಶಾಲೆಯ ಒಳಗೆ ಹೋಗಿ ಕಟ್ಟೆಯ ಮೇಲೆ ಕುಳಿತುಕೊಂಡು, ಹಳೆಯ ನೆನಪುಗಳನ್ನು ಮೆಲುಕು ಹಾಕಿ ಸಂತಸ ಪಟ್ಟರು.

`ನಮ್ಮ ಸ್ನೇಹಿತನಿಗೆ ಪ್ರಶಸ್ತಿ ಬಂದದ್ದು ನಮಗೆ ಖುಷಿ ಅಷ್ಟೇ ಅಲ್ಲ, ನಮ್ಮ ಹಳ್ಳಿಯ ಹೆಸರನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪರಿಚಯಿಸಿದ್ದು ಹೆಮ್ಮೆಯ ಸಂಗತಿ~ ಎಂದು ಸಹಪಾಠಿಗಳು ಹೇಳಿ ಅವರನ್ನು ಬಿಗಿದಪ್ಪಿಕೊಂಡರು.
ಬೀದಿಯಲ್ಲಿ ಹೋಗುವಾಗ ಜನರು ಕಂಬಾರರನ್ನು ಅಚ್ಚರಿ ಮತ್ತು ಸಂತಸದಿಂದ ನೋಡಿ ತಮ್ಮದೇಯಾದ ಶೈಲಿಯಲ್ಲಿ ಮಾತನಾಡಿಸಿ ಕುಶಲೋಪರಿ ವಿಚಾರಿಸಿದರು.

ನೇರವಾಗಿ ಅಣ್ಣ ಪರಸಪ್ಪನ ಮನೆಗೆ ತೆರಳಿದ ಕಂಬಾರರು, ಮನೆಯಲ್ಲಿ ಎಲ್ಲರ ಕ್ಷೇಮ ವಿಚಾರಿಸಿದರು. ನಂತರ ತಮಗೆ ಕಷ್ಟದ ಕಾಲದಲ್ಲಿ ಸಹಾಯ ಮಾಡಿದ ಸ್ವಾತಂತ್ರ್ಯಯೋಧ ಬಸವಣ್ಣೆಪ್ಪ ನಿರ್ವಾಣೆಪ್ಪ ಭೂಷಿ ಅವರ ಮನೆಗೆ ತೆರಳಿ ಅವರಿಗೆ ನಮಸ್ಕರಿಸಿದರು. `ನಮ್ಮ ಊರಿನ ಮಗನಿಗೆ ಪ್ರಶಸ್ತಿ ಬಂದದ್ದು ನಮಗೆಲ್ಲ ಬಹಳ ಸಂತಸವಾಗಿದೆ~ ಎಂದು ಸ್ವಾತಂತ್ರ್ಯಯೋಧ ಬಸವಣ್ಣಿ ಹೇಳಿದರು.

ಸತ್ಕಾರ: ಪ್ರಥಮ ಬಾರಿಗೆ ಗ್ರಾಮಕ್ಕೆ ಆಗಮಿಸಿದ ಡಾ.ಚಂದ್ರಶೇಖರ ಕಂಬಾರರನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ ಭೂಷಿ ಸತ್ಕರಿಸಿದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರಕಾಶ ದೇಶಪಾಂಡೆ ಒಳಗೊಂಡು ಮತ್ತಿತರರು ಹಾಜರಿದ್ದರು.ಕಂಬಾರರ ಆಗಮನದಿಂದಾಗಿ ಘೋಡಗೇರಿ ಗ್ರಾಮದಲ್ಲಿ ಸೋಮವಾರ ಇಡೀ ದಿನ ಸಂತಸದ ವಾತಾವರಣ ಕಂಡು ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT