ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಮಿನಾರ್!

Last Updated 3 ಮೇ 2012, 19:30 IST
ಅಕ್ಷರ ಗಾತ್ರ

`ಚಕೋರಂಗೆ ಚಂದ್ರಮನ ಚಿಂತೆ~ಯಾದರೆ ಚಂದ್ರನಿಗೆ ಚಾರ್‌ಮಿನಾರ್ ಚಿಂತೆ ಎನ್ನಬಹುದು. `ತಾಜ್‌ಮಹಲ್~ ಚಿತ್ರದ ಮೂಲಕ ಪ್ರೇಮಕತೆ ಹೇಳಿದ್ದ ನಿರ್ದೇಶಕ ಆರ್.ಚಂದ್ರು ದೇಶದ ಮತ್ತೊಂದು ಐತಿಹಾಸಿಕ ವಾಸ್ತುಶಿಲ್ಪದ ಬೆನ್ನಿಗೆ ಬಿದ್ದಿದ್ದಾರೆ.

ಚಿತ್ರಕ್ಕೆ `ಚಾರ್‌ಮಿನಾರ್~ ಎಂದು ಹೆಸರಿಟ್ಟಿದ್ದಾರೆ. ಚಿತ್ರಕ್ಕೂ ಹೈದರಾಬಾದಿನ ಮೋಹಕ ಕಟ್ಟಡ ಚಾರ್‌ಮಿನಾರ್‌ಗೂ ಯಾವುದೇ ಸಂಬಂಧ ಇಲ್ಲವಂತೆ. `ತಂದೆತಾಯಿ, ಸ್ನೇಹ, ವಿದ್ಯಾರ್ಥಿ ಜೀವನ ಹಾಗೂ ಜೀವನ ಸಂಗಾತಿ ಈ ನಾಲ್ಕೂ ಕಂಬಗಳು ಬದುಕಿಗೆ ಅತ್ಯಗತ್ಯ. ಇದು ಇಂಥ ನಾಲ್ಕು ಕಂಬಗಳ ಕತೆಯಾಗಿರುವಂತೆಯೇ ನಾಲ್ಕು ಕಂಬನಿಗಳ ಕತೆಯೂ ಆಗಿದೆ~ ಎಂಬುದು ಚಂದ್ರು ಮಾತು. ಅಲ್ಲೇ ಇದ್ದ ಚಿತ್ರದ ಅಡಿಸಾಲು `ನಾಲ್ಕು ಕಂಬನಿಗಳ ಕಹಾನಿ~ ಎಂದು ಸಾರಿ ಹೇಳುತ್ತಿತ್ತು.

ಕನ್ನಡದ ನಟಿಯರೇ ಬೇಕು ಎಂದು ಪಟ್ಟು ಹಿಡಿದು ಮೇಘನಾ ಹಾಗೂ ಕುಮುದಾ ಅವರನ್ನು ಚಿತ್ರಕ್ಕೆ ಆಯ್ಕೆ ಮಾಡಲಾಗಿದೆ. ಮೇಘನಾ ಈಗಾಗಲೇ `ನಂ ಏರಿಯಾಲ್ ಒಂದಿನ~, `ವಿನಾಯಕ ಗೆಳೆಯರ ಬಳಗ~ ಮತ್ತು `ತುಗ್ಲಕ್~ ಚಿತ್ರಗಳಲ್ಲಿ ನಟಿಸಿದ ಅನುಭವ ಹೊಂದಿದವರು. ಕುಮುದಾ ಹೊಸಮುಖ.
 
ಅಂದಹಾಗೆ ಚಂದ್ರು ಅವರದ್ದು ಇದು ಐದನೇ ಚಿತ್ರವಾದರೂ ಮೊದಲಿನ ಚಿತ್ರ ತಂಡವೇ ಬಹುತೇಕ ಇಲ್ಲಿಯೂ ಮುಂದುವರಿದಿದೆ. ಮುಹೂರ್ತದ ದಿನದಿಂದ ಎಂಟು ದಿನಗಳ ಕಾಲ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳ ಚಿತ್ರೀಕರಣ. ಅಂದಹಾಗೆ ಇದು ನೈಜ ಘಟನೆಯೊಂದರಿಂದ ಸ್ಫೂರ್ತಿ ಪಡೆದ ಚಿತ್ರ. ಚಂದ್ರು ತಮ್ಮ ಸ್ನೇಹಿತನೊಬ್ಬನಿಂದ ಕೇಳಿದ ಕತೆಯೇ ಚಿತ್ರವಾಗಿದೆ. ಸಿನಿಮಾಕ್ಕೆ ಬೇಕಾದಂತೆ ಸನ್ನಿವೇಶ ಹಾಗೂ ಕ್ಲೈಮ್ಯಾಕ್ಸ್ ಬದಲಿಸಿಕೊಳ್ಳಲಾಗಿದೆ ಅಷ್ಟೇ.

ಚಿತ್ರದಲ್ಲಿ ನಾಯಕ ನಟ ಪ್ರೇಮ್ ಕಾಲದ ಹಿಂದಕ್ಕೆ ಸರಿಯಲಿದ್ದಾರೆ! ಅರ್ಥಾತ್ ಅವರನ್ನು ಪಿಯುಸಿ ಹುಡುಗನಂತೆ ಬಿಂಬಿಸುವ ತಯಾರಿ ನಡೆಯುತ್ತಿದೆ. ಪಿಯು ನಂತರ ಪದವಿ ಓದುವ ಹುಡುಗನಾಗಿ ಕಾಣಿಸಿಕೊಳ್ಳಬೇಕು. ದೈಹಿಕವಾಗಿ ಚಿಕ್ಕವನಂತೆ ಕಾಣಿಸಿಕೊಳ್ಳಲು ಪ್ರೇಮ್ ಸಾಕಷ್ಟು ಮುತುವರ್ಜಿ ವಹಿಸಿದ್ದಾರಂತೆ. ಅದಕ್ಕಾಗಿ ಕೈಯಲ್ಲಿರುವ ಮೂರು ಚಿತ್ರಗಳನ್ನೂ ಬದಿಗಿಟ್ಟು ಒಟ್ಟಿಗೇ ಚಾರ್‌ಮಿನಾರ್ ಮುಗಿಸುವ ಪಣ ತೊಟ್ಟಿದ್ದಾರೆ. ಅವರಿಗೆ ನಿರ್ದೇಶಕರ ಬದ್ಧತೆ ಖುಷಿ ತಂದಿದೆ.

ಮೇಘನಾ ಅವರ ಪಾಲಿಗೆ ಅನೇಕ ಏರಿಳಿತಗಳಿರುವ ಪಾತ್ರ ದೊರೆತಿದೆಯಂತೆ. `ನಾಲ್ಕೂ ಕಂಬಗಳಲ್ಲಿ ನನ್ನ ಪಾತ್ರವೂ ಮುಖ್ಯವಾದ ಕಂಬ ಎಂದು~ ಅಂಜಿಕೆಯಿಂದಲೇ ಹೇಳಿದರು.

ಕನ್ನಡ ಅಷ್ಟಾಗಿ ಬಾರದ ಸಂಗೀತ ನಿರ್ದೇಶಕ ಹರಿ ತೆಲುಗು ಶೈಲಿಯ ಇಂಗ್ಲಿಷ್‌ನಲ್ಲಿ ಮಾತಿಗಿಳಿದರು. `ಚಿತ್ರಕ್ಕೆ ಒಟ್ಟು ನಾಲ್ಕು ಹಾಡುಗಳು. ಅವುಗಳಲ್ಲಿ ಮೂರು ಹಾಡುಗಳಿಗೆ ಸಂಗೀತ ಸಂಯೋಜನೆ ಪೂರ್ಣಗೊಂಡಿದೆ~ ಎಂದರು. 

42 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ರಂಗಾಯಣ ರಘು, ರಾಜು ತಾಳಿಕೋಟೆ, ಪದ್ಮಜಾ ರಾವ್, ಮಿತ್ರ, ಸಾಧು ಕೋಕಿಲಾ, ಬುಲೆಟ್ ಪ್ರಕಾಶ್ ಚಿತ್ರದ ಪೋಷಕ ಪಾತ್ರಗಳಲ್ಲಿದ್ದಾರೆ. ಚಿತ್ರದ ಮೊದಲ ದೃಶ್ಯಗಳನ್ನು ಅಮೆರಿಕದಲ್ಲಿ ಸೆರೆ ಹಿಡಿಯಲು ನಿರ್ಧರಿಸಲಾಗಿದೆ. ಲಂಡನ್, ಸಿಂಗಪೂರಗಳಲ್ಲಿ ಕೂಡ ಚಿತ್ರೀಕರಣಕ್ಕೆ ಸಿದ್ಧತೆ ನಡೆಸಲಾಗಿದೆ.

ಪ್ರೇಮ್ ಅವರನ್ನು ಚಿಕ್ಕ ಹುಡುಗನಾಗಿ ತೋರಿಸುವ ಉತ್ಸಾಹದಲ್ಲಿದ್ದರು ಛಾಯಾಗ್ರಾಹಕ ಕೆ.ಎಸ್.ಚಂದ್ರಶೇಖರ್. ನಟ ಶಿವರಾಜ್‌ಕುಮಾರ್ ತಂಡಕ್ಕೆ ಶುಭ ಕೋರಿದರು. ನಿರ್ಮಾಪಕರಾದ ರಾಜಶೇಖರ್ ನಾಯ್ಡು, ಶಿವಕುಮಾರ್, ಮಂಜುನಾಥ್ ಮತ್ತಿತರರು ಚಿತ್ರದ ಮುಹೂರ್ತ ಸಮಾರಂಭದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT