ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಶೇಖರಯ್ಯ ನೇಮಕಕ್ಕೆ ವಿಕ್ರಮಜಿತ್ ಸೇನ್ ತರಾಟೆ

Last Updated 10 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಉಪ ಲೋಕಾಯುಕ್ತ ಸ್ಥಾನಕ್ಕೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಅವರ ನೇಮಕಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್, ನೇಮಕಾತಿ ಆದೇಶವನ್ನು ಕೂಡಲೇ ಹಿಂದಕ್ಕೆ ಪಡೆಯುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಉಪ ಲೋಕಾಯುಕ್ತ ಸ್ಥಾನಕ್ಕೆ ನೇಮಕ ಮಾಡುವ ಮುನ್ನ ಮುಖ್ಯ ನ್ಯಾಯಮೂರ್ತಿಗಳ ಸಲಹೆ ಕಡ್ಡಾಯ ಎಂಬುದನ್ನು ಸರ್ಕಾರ ಮರೆತಿದೆ. ಈ ಸ್ಥಾನಕ್ಕೆ ತಾವು ಸೂಚಿಸದೇ ಇರುವ ವ್ಯಕ್ತಿಯನ್ನು ನೇಮಕ ಮಾಡುವ ಮೂಲಕ ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನು ಅಲಕ್ಷ್ಯ ಮಾಡಲಾಗಿದೆ ಎಂದು ನ್ಯಾ.ಸೇನ್ ಖಾರವಾಗಿ ಹೇಳಿದ್ದಾರೆ.

ಹೆಸರು ಉಲ್ಲೇಖಿಸಿಲ್ಲ: ಮುಖ್ಯ ನ್ಯಾಯಮೂರ್ತಿಗಳು ಏಳು ಪುಟಗಳ ರಹಸ್ಯ ಪತ್ರವನ್ನು ಸದಾನಂದಗೌಡ ಅವರಿಗೆ ಬರೆದಿದ್ದಾರೆ. ಪತ್ರದ ಪ್ರತಿ `ಪ್ರಜಾವಾಣಿ~ಗೆ ಲಭ್ಯವಾಗಿದೆ.

`ಕರ್ನಾಟಕ ಲೋಕಾಯುಕ್ತ ಕಾಯ್ದೆಯ 3(2)(ಬಿ) ಅನ್ವಯ ಉಪ ಲೋಕಾಯುಕ್ತ ಸ್ಥಾನಕ್ಕೆ ನೇಮಕ ಮಾಡುವ ಮುನ್ನ ವಿಧಾನ ಪರಿಷತ್ತಿನ ಸಭಾಪತಿ, ವಿಧಾನಸಭಾಧ್ಯಕ್ಷ, ಉಭಯ ಸದನಗಳ ವಿರೋಧ ಪಕ್ಷದ ನಾಯಕರು ಹಾಗೂ ಇನ್ನಿತರ ಪ್ರಮುಖರ ಜೊತೆಗೆ ಮುಖ್ಯ ನ್ಯಾಯಮೂರ್ತಿಗಳ ಸಲಹೆಯೂ ಅಗತ್ಯ.
 
ಆದರೆ ಇಲ್ಲಿ ಹಾಗಾಗಿಲ್ಲ. ಉಪ ಲೋಕಾಯುಕ್ತ ಸ್ಥಾನಕ್ಕೆ ನ್ಯಾ. ಆರ್.ಗುರುರಾಜನ್ ಅವರು ರಾಜೀನಾಮೆ ನೀಡಿದ ನಂತರ, ಈ ಸ್ಥಾನಕ್ಕೆ ಯೋಗ್ಯ ವ್ಯಕ್ತಿಗಳ ಹೆಸರುಗಳನ್ನು ಶಿಫಾರಸು ಮಾಡುವಂತೆ 2011ರ ಅ.18ರಂದು ಬರೆದಿದ್ದ ಪತ್ರದಲ್ಲಿ ನನ್ನನ್ನು ಕೋರಿದ್ದೀರಿ. 2011ರ ನ.3ರಂದು ನಾನು ನಿಮಗೆ ಕಳುಹಿಸಿದ್ದ ರಹಸ್ಯ ಪತ್ರದಲ್ಲಿ ಚಂದ್ರಶೇಖರಯ್ಯ ಅವರ ಹೆಸರನ್ನು ಉಲ್ಲೇಖಿಸಿಯೇ ಇರಲಿಲ್ಲ. ಆ ನಂತರ ಈ ಹುದ್ದೆ ಕುರಿತು ನಿಮ್ಮಿಂದ ಯಾವುದೇ ಮಾಹಿತಿ ಬಂದಿಲ್ಲ.

ಈಗ ಏಕಾಏಕಿ ನೇಮಕಾತಿ ಮಾಡಲಾಗಿದೆ. ಅಷ್ಟೇ ಅಲ್ಲದೇ ಇವರ ಹೆಸರನ್ನು ಅಂತಿಮಗೊಳಿಸುವ ಪೂರ್ವದಲ್ಲಿ ನನಗೆ ವಿಷಯವನ್ನೂ ತಿಳಿಸಿಲ್ಲ. ಜ. 21ರಂದು ಅವರು ಪ್ರಮಾಣ ವಚನ ಸ್ವೀಕರಿಸುವ ಆಹ್ವಾನ ಪತ್ರ ಬಂದಾಗಲೇ ವಿಷಯ ತಿಳಿಯಿತು. ಈ ಹುದ್ದೆಗೆ ಕಾನೂನಿನ ಅಡಿ ಮಾನ್ಯತೆ ಇಲ್ಲ~.

`ಜ.26ರಂದು ರಾಜ್ಯಪಾಲರು ಸರ್ಕಾರಕ್ಕೆ ಕಳುಹಿಸಿದ್ದ ಪತ್ರದಲ್ಲಿ ಕೂಡ ಉಪ ಲೋಕಾಯುಕ್ತ ಸ್ಥಾನಕ್ಕೆ ಮುಖ್ಯ ನ್ಯಾಯಮೂರ್ತಿಗಳ ಸಲಹೆ ಅಗತ್ಯ ಎಂಬ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಪತ್ರಿಕೆಗಳಲ್ಲಿಯೂ ಪ್ರಕಟವಾಗಿದೆ. ಆದುದರಿಂದ ಸರ್ಕಾರಕ್ಕೆ ಇದೇನು ಗೊತ್ತಿಲ್ಲದ ವಿಷಯವಲ್ಲ~ ಎಂದು ಮುಖ್ಯ ನ್ಯಾಯಮೂರ್ತಿಸೇನ್ ಅವರು ವಿವರಿಸಿದ್ದಾರೆ.

ನಿರ್ಲಕ್ಷ್ಯ ಮೊದಲೇನಲ್ಲ: `ಕಾನೂನನ್ನೂ ಕಡೆಗಣಿಸಿ ಮುಖ್ಯ ನ್ಯಾಯಮೂರ್ತಿಗಳನ್ನು ಸರ್ಕಾರ  ನಿರ್ಲಕ್ಷ್ಯ ಮಾಡಿರುವುದು ಇದೇ ಮೊದಲೇನಲ್ಲ. ಲೋಕಾಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ನಿಮ್ಮ ಹಿಂದಿನ ಮುಖ್ಯಮಂತ್ರಿಗಳು ಕೂಡ ಇದೇ ರೀತಿ ನಡೆದುಕೊಂಡಿದ್ದರು.

ಆಗ ಈ ವಿಷಯವನ್ನು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರು ಅಂದಿನ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಅವರ ಸೂಚನೆ ಮೇರೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರ ಗಮನಕ್ಕೆ ತಂದಿದ್ದರು. ಮುಖ್ಯ ನ್ಯಾಯಮೂರ್ತಿಗಳ ಸಲಹೆ ಎಷ್ಟು ಅಗತ್ಯವಿದೆ ಎಂಬ ಬಗ್ಗೆ ಸುಪ್ರೀಂಕೋರ್ಟ್ ನೀಡಿದ್ದ ವಿವಿಧ ತೀರ್ಪುಗಳನ್ನೂ ಅದರಲ್ಲಿ ಉಲ್ಲೇಖಿಸಲಾಗಿತ್ತು.

`ಇದನ್ನು ನೋಡಿದ ಆಗಿನ ಮುಖ್ಯಮಂತ್ರಿಗಳು ಆ.2ರಂದು ಪತ್ರ ಬರೆದು ತಮ್ಮಿಂದ ಆದ ಅಚಾತುರ್ಯಕ್ಕೆ ಕ್ಷಮೆ ಕೋರಿದ್ದರು. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುವುದಾಗಿ ಅವರು ಭರವಸೆ ನೀಡಿದ್ದರು. ಆದರೆ ಈ ಬಾರಿಯೂ ಅದು ಪುನರಾವರ್ತನೆ ಆಗಿರುವುದು ನೋವಿನ ಸಂಗತಿ.

ಇದು ಉದ್ದೇಶಪೂರ್ವಕವಾಗಿ ಮಾಡಿದ ಕೃತ್ಯ ಎಂದೆನಿಸುತ್ತಿದೆ. ಅಷ್ಟೇ ಅಲ್ಲದೇ, ಹಿಂದಿನ ಕೆಲವು ಘಟನೆಗಳನ್ನು ಗಮನದಲ್ಲಿ ಇಟ್ಟುಕೊಂಡು ಚಂದ್ರಶೇಖರಯ್ಯ ಅವರನ್ನು ಈ ಸ್ಥಾನಕ್ಕೆ  ನೇಮಕ ಮಾಡಲು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಜ. 25ರಂದು ಕಾನೂನು ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಾನು ತಿಳಿಸಿದ್ದೇನೆ. ಆದುದರಿಂದ ನೇಮಕಾತಿ ಆದೇಶ ಹಿಂದಕ್ಕೆ ಪಡೆಯಬೇಕು~ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
 

ಕೈತೊಳೆದುಕೊಂಡ ರಾಜ್ಯಪಾಲ

ಬೆಂಗಳೂರು: ಮುಖ್ಯ ನ್ಯಾಯಮೂರ್ತಿಗಳ ಪತ್ರದಿಂದ ವಿಚಲಿತರಾದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಶುಕ್ರವಾರ ಬೆಳಿಗ್ಗೆ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರಿಗೆ ಪತ್ರ ಬರೆದು, ನ್ಯಾ.ಸೇನ್ ಅವರ ನಿಲುವಿನ ಬಗ್ಗೆ ಸಲಹೆ ನೀಡುವಂತೆ ಕೋರಿದ್ದಾರೆ.

ಇದಕ್ಕೆ ಸಂಜೆ ಪ್ರತಿಕ್ರಿಯೆ ನೀಡಿರುವ ರಾಜ್ಯಪಾಲರು `ನ್ಯಾ.ಸೇನ್ ಪತ್ರಕ್ಕೂ ನನಗೂ ಸಂಬಂಧ ಇಲ್ಲ. ಕಾನೂನಿನ ಅನುಸಾರ ಯಾವ ಕ್ರಮ ಕೈಗೊಳ್ಳಬೇಕೊ ಅದನ್ನು ಕೈಗೊಳ್ಳಿ~ ಎಂದು ಪತ್ರದ ಮೂಲಕವೇ ಮುಖ್ಯಮಂತ್ರಿಯವರಿಗೆ ತಿಳಿಸಿದ್ದಾರೆ.

~ಮುಖ್ಯ ನ್ಯಾಯಮೂರ್ತಿಗಳ ಸಲಹೆ ಪಡೆಯಬೇಕು ಎನ್ನುವುದು ಬರಿಯ ಔಪಚಾರಿಕತೆ ಅಲ್ಲ. ಇದು ಸುಪ್ರೀಂಕೋರ್ಟ್‌ನ ಆದೇಶ ಕೂಡ. ಈ ಹುದ್ದೆಗೆ ಯಾರನ್ನು ನೇಮಕ ಮಾಡಬಹುದು ಎಂಬ ಬಗ್ಗೆ ಕೆಲವು ಹೆಸರುಗಳನ್ನು ಶಿಫಾರಸು ಮಾಡಿ ಎಂದು ನಮ್ಮನ್ನು ಕೇಳುವುದು, ನಂತರ ಶಿಫಾರಸು ಮಾಡದೇ ಇರುವ ವ್ಯಕ್ತಿಗಳ ಹೆಸರನ್ನು ರಾಜ್ಯಪಾಲರಿಗೆ ಕಳುಹಿಸುವುದು. ಇದೆಂಥ ನಿರ್ಲಕ್ಷ್ಯ ಮನೋಭಾವ?~  
        
-ನ್ಯಾ. ವಿಕ್ರಮಜಿತ್ ಸೇನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT