ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಕ್ರ ಮೂರು... ಹಸಿವಿಗೆ ಸೂರು

Last Updated 24 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಬೆಂಗಳೂರಿಗೆ ಬಂದು ಹತ್ತಾರು ಬಗೆಯ ಭಾತ್‌ಗಳನ್ನು ಸವಿದಿರಲೇಬೇಕಲ್ವಾ? ಇದೀಗ `ಬೆಂಗಳೂರು ಬೇಳೆಭಾತ್ ' ಸರದಿ. ಇದೆಂಥದು ಬೆಂಗಳೂರು ಭಾತ್? ಬಿಸಿಬೇಳೆ ಭಾತ್ ಥರಾನೇ ಇರ‌್ಬೇಕು ಅಂದುಕೊಂಡಿರಾ? ಅಲ್ಲ ಮಾರಾಯ್ರೆ, ಬೆಂಗಳೂರು ಬೇಳೆ ಭಾತ್ ಅನ್ನೋದು ಕಾರ್ಕಳದ ತರುಣನೊಬ್ಬ ಪುಣೆಯ ಸ್ನೇಹಿತನ ಸಹಕಾರದೊಂದಿಗೆ ಶುರು ಮಾಡಿರುವ ಫಟಾಫಟ್ ಊಟ-ತಿಂಡಿ ಕೇಂದ್ರದ ಹೆಸರು.

ಬೆಂಗಳೂರಿನ ಬದುಕು ನಿಮ್ಮನ್ನು ಎಷ್ಟೋ ಬಾರಿ ರಸ್ತೆ ಬದಿಯ ಕೈಗಾಡಿಗಳಲ್ಲಿ ಊಟೋಪಹಾರ ಸ್ವೀಕರಿಸಲೇಬೇಕಾದ ಅನಿವಾರ್ಯತೆಗೆ ಒಡ್ಡಿರಬಹುದು.

ಕೊಚ್ಚೆ ಬಳಿಯೇ ಕೈಗಾಡಿ ನಿಂತಿದೆ, ಎಂಜಲು ತಟ್ಟೆಯನ್ನು ಅರೆಬರೆ ತೊಳೆದಿದ್ದಾರೆ, ಭಾತ್ ತುಂಬಿರುವ ಪಾತ್ರೆ ಶುಚಿಯಾಗಿಲ್ಲ, ಪೂರಿ ಕರಿದಿರುವ ಎಣ್ಣೆ ಕರ‌್ರಗಾಗಿದೆ ಇತ್ಯಾದಿ ದೂರು ದುಮ್ಮಾನಗಳನ್ನು ಮೂಟೆ ಕಟ್ಟಿಟ್ಟು ಅವರು ಹಾಕಿಕೊಟ್ಟದ್ದನ್ನು ಕಣ್ಣುಮುಚ್ಚಿ ತಿನ್ನಲೇಬೇಕಾದ ಅನಿವಾರ್ಯತೆ.

ರಸ್ತೆ ಬದಿಯಲ್ಲಿಯೂ ಅತ್ಯುತ್ತಮ ಗುಣಮಟ್ಟದ ಊಟ, ತಿಂಡಿ ಜೇಬಿಗೆ ಭಾರವೆನಿಸದ ದರದಲ್ಲಿ ಸಿಗುವುದುಂಟೇ ಎಂದು ಕರುಬುತ್ತಿದ್ದೀರಾ?

`ಬನ್ನಿ ಮಾರಾಯ್ರೆ ನಾವು ನಿಮಗೆ ಒಳ್ಳೆ ಊಟ ಕೊಡ್ತೇವೆ ಕಾಸೂ ಜಾಸ್ತಿಯೇನಿಲ್ಲ' ಅಂತ ಕೈಬೀಸಿ ಕರೆಯುತ್ತಿದ್ದಾರೆ, `ಬೆಂಗಳೂರು ಬೇಳೆಭಾತ್ 'ನ ರೂವಾರಿ ರೋಹನ್ ಪೈ.

ಉಡುಪಿ ಜಿಲ್ಲೆ ಕಾರ್ಕಳ ಮೂಲದ ರೋಹನ್ ಹೋಟೆಲ್ ಉದ್ಯಮದಲ್ಲಿ ದಶಕಗಳಿಂದ ತೊಡಗಿಸಿಕೊಂಡು ಹೋಟೆಲ್‌ನಿಂದ ಹಿಡಿದು ಕೈಗಾಡಿಗಳವರೆಗಿನ ಆಳ ವಿಸ್ತಾರ, ಗುಟ್ಟು, ಮಟ್ಟುಗಳನ್ನು ಅರಿತವರು.

ಗಾಲಿ ಮೇಲೆ ಹೋಟೆಲ್

“ಆಟೊ, ಟ್ಯಾಕ್ಸಿ ಚಾಲಕರು, ಮಾರ್ಕೆಟಿಂಗ್‌ಗಳಲ್ಲಿ ದುಡಿಯುವ ಹುಡುಗರ, ಹೋಟೆಲ್‌ನಲ್ಲಿ ದುಬಾರಿ ದರ ತೆರಲಾಗದವರ ಆಯ್ಕೆ ಕೈಗಾಡಿ ಊಟ-ತಿಂಡಿಯೇ. ಅಲ್ಲಿ ಸಿಗುವ ನೀರು, ತಿಂಡಿ, ಊಟದಲ್ಲಿ ಶುಚಿತ್ವಕ್ಕೆ ಎಳ್ಳಷ್ಟೂ ಗಮನ ಕೊಟ್ಟಿರುವುದಿಲ್ಲ. ಇದನ್ನು ಗಮನಿಸಿದಾಗ ಗುಣಮಟ್ಟ, ಶುಚಿ, ರುಚಿಯಿರುವ ಬಿಸಿ ಬಿಸಿಯಾದ ಊಟ ಉಪಾಹಾರವನ್ನು ಕೈಗೆಟಕುವ ದರದಲ್ಲಿ ಒದಗಿಸುವ ನಿರ್ಧಾರ ಮಾಡಿದೆ.

ಮೊದಲು ಮಾಮೂಲಿ ಸೈಕಲ್‌ನಲ್ಲಿ ಕ್ಯಾರಿಯರ್‌ಗಳನ್ನು ಇಟ್ಟುಕೊಂಡು ನಿಗದಿತ ಸ್ಥಳಕ್ಕೆ ಕೊಂಡೊಯ್ಯುತ್ತಿದ್ದೆವು. ಆಮೇಲೆ ಮೂರು ಚಕ್ರದ ಸೈಕಲ್‌ನಲ್ಲಿ `ಕಿಚನ್' ಒಯ್ಯುವುದು ಸುಲಭ ಎಂಬುದನ್ನು ಕಂಡುಕೊಂಡೆವು” ಎಂದು ವಿವರಿಸುತ್ತಾರೆ ರೋಹನ್.

ಈಗ ಎಲ್ಲಾ 10 ಶಾಖೆಗಳಲ್ಲೂ ಮೂರು ಚಕ್ರದ ಸೈಕಲ್‌ಗಳನ್ನೇ ಬಳಸಲಾಗುತ್ತಿದೆ. ಬೆಳಗಿನ ಉಪಾಹಾರಕ್ಕೆ ದಿನಕ್ಕೊಂದು ಬಗೆಯ ಭಾತ್ ಕೊಡುತ್ತಾರೆ. ಬೆಲೆ 20 ರೂಪಾಯಿ. ಮಧ್ಯಾಹ್ನದ ಊಟಕ್ಕೆ ಫುಲ್ ಮೀಲ್ಸ್. ಅನ್ನ, ಸಾರು, ಸಾಂಬಾರು, ಪಲ್ಯ, ಉಪ್ಪಿನಕಾಯಿ, ಹಪ್ಪಳ ಮತ್ತು ಮಸಾಲಾ ಮಜ್ಜಿಗೆ; ಬೆಲೆ 25 ರೂಪಾಯಿ. ಇನ್ನೂ ಸ್ವಲ್ಪ ಬೇಕು ಅನ್ನೋರು ಅದಕ್ಕೆ ಪ್ರತ್ಯೇಕವಾಗಿ ಪಾವತಿಸಬೇಕು.

ಒಮ್ಮೆ ನಮ್ಮ ತಿಂಡಿ/ಊಟದ ರುಚಿ ನೋಡಿದವರು ಮತ್ತೆ ಮತ್ತೆ ಬರುತ್ತಿರುತ್ತಾರೆ. ಇದು ನಮ್ಮ ಅಡುಗೆಯ ರುಚಿ, ಗುಣಮಟ್ಟ, ಶುಚಿತ್ವ ಹಾಗೂ ಬೆಲೆಯ ಬಗ್ಗೆ ಗ್ರಾಹಕರು ಕೊಡುವ ಗೌರವ ಎಂದೇ ಭಾವಿಸುತ್ತೇನೆ. ಬೆಂಗಳೂರು ಬೇಳೆಭಾತ್ ಶುರುಮಾಡಿ ಎಂಟು ತಿಂಗಳಾಗಿದೆ ಅಷ್ಟೆ.

ದಕ್ಷಿಣ ಬೆಂಗಳೂರಿನಲ್ಲಿ ಈಗಾಗಲೇ 10 ಕಡೆ ಶಾಖೆ ನಡೆಯುತ್ತಿದೆ. ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಪೂರ್ವ, ಪಶ್ಚಿಮ ಮತ್ತು ಉತ್ತರ ಭಾಗಗಳೂ ಸೇರಿ ಈ ವರ್ಷಾಂತ್ಯದೊಳಗೆ ಕನಿಷ್ಠ 100 ಶಾಖೆಗಳು ಕಾರ್ಯಾರಂಭ ಮಾಡಬೇಕು ಎಂಬುದು ನಮ್ಮ ಗುರಿ. ಎಲ್ಲಾ ಕಡೆಯೂ ಯಶಸ್ಸು ಸಿಗುತ್ತದೆ ಎಂಬ ವಿಶ್ವಾಸವಿದೆ' ಎನ್ನುತ್ತಾರೆ ಅವರು.

ಹುಟ್ಟುಹಬ್ಬದಂತಹ ಸಣ್ಣಪುಟ್ಟ ಸಮಾರಂಭಕ್ಕೆ ಊಟ, ತಿಂಡಿ ಆರ್ಡರ್ ಕೊಟ್ಟರೆ ಆಹಾರ ಪೂರೈಸುವ ಹೊಸ ಕಾರ್ಯಕ್ರಮವನ್ನೂ ರೋಹನ್ ಶುರು ಮಾಡಿದ್ದಾರೆ.ರೂ 25ಕ್ಕೆ ಸತ್ಕಾರ!

ಪಾಕಶಾಲೆಯಿಂದ ಕೈಗಾಡಿಗೆ...

`ಬೆಂಗಳೂರು ಬೇಳೆ ಭಾತ್ ' ವ್ಯವಸ್ಥಿತ ಯೋಜನೆ. ಎಲ್ಲಾ ಕೈಗಾಡಿಗಳಿಗೂ ಒಂದೇ ಬಗೆಯ ಊಟ ತಿಂಡಿ ಪೂರೈಸುವ ಉದ್ದೇಶದಿಂದ ಕೇಂದ್ರೀಕೃತ ಪಾಕಶಾಲೆ (ಸೆಂಟ್ರಲೈಸ್ಡ್ ಕಿಚನ್), ಬನ್ನೇರುಘಟ್ಟ ರಸ್ತೆಯಲ್ಲಿರುವ ವಿಜಯಾ ಬ್ಯಾಂಕ್ ಬಡಾವಣೆಯಲ್ಲಿ ತೆರೆದಿರುವುದು ವಿಶೇಷ.

ನಮ್ಮ ಕಿಚನ್‌ನಿಂದ ತಿಂಡಿಯ ಕ್ಯಾರಿಯರ್‌ಗಳನ್ನು ಹೊತ್ತ ಆಟೊ ಬೆಳಿಗ್ಗೆ 7ರೊಳಗೆ ಎಲ್ಲಾ ಗಾಡಿಗಳಿಗೆ ಉಪಾಹಾರ ಪೂರೈಸುತ್ತದೆ. ಖಾಲಿಯಾದ ತಕ್ಷಣ ಅದೇ ಆಟೊ ಒಂದೊಂದೇ ಗಾಡಿಯಿಂದ ಕ್ಯಾರಿಯರ್‌ಗಳು ಮತ್ತು ತಟ್ಟೆಗಳನ್ನು ಸಂಗ್ರಹಿಸಿಕೊಂಡು ಕಿಚನ್‌ಗೆ ವಾಪಸಾಗುತ್ತದೆ. ಮತ್ತದೇ ಆಟೊ ಮಧ್ಯಾಹ್ನ 12ರೊಳಗೆ ಎಲ್ಲಾ ಗಾಡಿಗಳಿಗೂ ಊಟ ಸರಬರಾಜು ಮಾಡುತ್ತದೆ.

ಬೆಂಗಳೂರು ಬೇಳೆ ಭಾತ್‌ನ ಮತ್ತೊಂದು ವೈಶಿಷ್ಟ್ಯವೆಂದರೆ ಗ್ರಾಹಕರು ಬಳಸಿದ ತಟ್ಟೆಗಳನ್ನು ಮರಳಿ ಬಳಸುವುದಿಲ್ಲ. ತಟ್ಟೆ ಮೇಲೊಂದು ಪ್ಲಾಸ್ಟಿಕ್ ಹಾಳೆ ಹಾಸಿ ತಿಂಡಿ/ಊಟ ನೀಡಲಾಗುತ್ತದೆ. ಆ ತಟ್ಟೆಯನ್ನು ಸೆಂಟ್ರಲ್ ಕಿಚನ್‌ನಲ್ಲೇ ತೊಳೆಯಲಾಗುತ್ತದೆ.

ಇದು, `ಊಟದ ಕಟ್ಟೆ'ಗಳಲ್ಲಿ ತಟ್ಟೆಗಳ ಶುಚಿತ್ವ ಕಾಪಾಡಲು ಮತ್ತು ನಿರ್ವಹಣಾ ವೆಚ್ಚದಲ್ಲಿ ಕಡಿತ ಮಾಡಲು ಸಹಕಾರಿಯಾಗಿದೆ. ಕಿಚನ್‌ನಲ್ಲಿ ನಾಲ್ಕು ಮಂದಿ ಬೆಳಿಗ್ಗೆ ಮತ್ತು ಸಂಜೆ ಬರುವ ತಟ್ಟೆಗಳನ್ನು ತೊಳೆದು ಮರುದಿನಕ್ಕೆ ಓರಣ ಮಾಡುತ್ತಾರೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT