ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಟಗಳ ಬಿಡಿಸುವ ದೇವರ ಕಾಲ

Last Updated 4 ಜನವರಿ 2012, 19:30 IST
ಅಕ್ಷರ ಗಾತ್ರ

ಚಪ್ಪಲಿಯಿಲ್ಲದ ಪಾದಗಳು ದ್ವಿಚಕ್ರ ವಾಹನದ ಬ್ರೇಕ್ ತುಳಿಯುತ್ತಿವೆ. ಎಲ್ಲರಿಗೂ ಒಂದೇ ಸಂಬೋಧನೆ- `ಸ್ವಾಮಿ~. ಕೆಲವರ ಈ ಸ್ವಾಮಿನಿಷ್ಠೆ ಎಷ್ಟಿರುತ್ತದೆಯೆಂದರೆ, ಅವರು ವಸ್ತುಗಳನ್ನೂ ಸ್ವಾಮಿ ಎಂದೇ ಹೇಳತೊಡಗುತ್ತಾರೆ. ಅಯ್ಯಪ್ಪನ ಮೇಲಿನ ಭಕ್ತಿಯ ಪರಾಕಾಷ್ಠೆ ಅವರನ್ನು ಹಾಗೆಲ್ಲಾ ಮಾತನಾಡಿಸುತ್ತದೆ.

ಕಾಲ ಬದಲಾದರೂ ಆ ದೇವರ ಮೇಲಿನ ಭಕ್ತಿ ಎಳ್ಳಷ್ಟೂ ಕಡಿಮೆಯಾಗಿಲ್ಲ. ವರ್ಷದಿಂದ ವರ್ಷಕ್ಕೆ ಅಯ್ಯಪ್ಪನ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.  ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಬೆಳಿಗ್ಗೆ ಸಂಜೆ ತಣ್ಣೀರ ಸ್ನಾನ ಮಾಡಿ ಸ್ವಾಮಿಯನ್ನು ಭಜಿಸಿ ಸ್ವಯಂಪಾಕ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವುದು ಅಯ್ಯಪ್ಪನ ಭಕ್ತರ ರೀತಿ ನೀತಿ. ಮಾಲೆ ಹಾಕಿದ ಕೂಡಲೇ ಆತ ಸ್ವಯಂ ಅಯ್ಯಪ್ಪನ ಅಂಶವೇ ಆಗುತ್ತಾನೆ, ಬಣ್ಣಬಣ್ಣದ ವಸ್ತ್ರಗಳನ್ನು ತ್ಯಜಿಸಿ ಕಪ್ಪು ಉಡುಪನ್ನು ತೊಟ್ಟು ಮೇಲೊಂದು ಕಪ್ಪು ಟವಲನ್ನು ಸುತ್ತಿ ತನ್ನ ದೈನಂದಿನ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು. ಕನ್ನಡಿ ನೋಡುವಂತಿಲ್ಲ. ಚಪ್ಪಲಿ ಹಾಕುವಂತಿಲ್ಲ. ಧೂಮಪಾನ ಮದ್ಯಪಾನದಿಂದ ದೂರವಿರಬೇಕು. ಕಟ್ಟುನಿಟ್ಟಿನ ಬ್ರಹ್ಮೆಚರ್ಯ ಪಾಲಿಸಬೇಕು. ಸುಳ್ಳು ಹೇಳುವಂತಿಲ್ಲ. ಜಗಳ, ಮೋಸ, ವಂಚನೆ, ಕಪಟ, ಪರನಿಂದೆ ಎಲ್ಲವನ್ನೂ ಬಿಡಬೇಕು. ಸುಖದ ಉತ್ಕಟತೆಯಲ್ಲಿ ತೇಲಿದ ವ್ಯಕ್ತಿ ಶಿಸ್ತುಬದ್ಧ ಬದುಕಿನ ಚೌಕಟ್ಟಿಗೆ ಒಳಪಡುವಂತೆ ಮಾಡುವ `ಭಕ್ತಿಮಾರ್ಗ~ ಇದು ಎಂದೇ ಅನೇಕರ ಭಾವನೆ. ಮಾಲೆ ಹಾಕಿ ಕಪ್ಪುಡುಗೆ ತೊಟ್ಟವರನ್ನು ಎಲ್ಲರೂ `ಸ್ವಾಮಿ~ ಎಂದೇ ಸಂಬೋಧಿಸಬೇಕು. ಹಿಂದೆ 42 ದಿನಗಳ ವ್ರತನಿಷ್ಠೆ ಕಡ್ಡಾಯವಾಗಿತ್ತು. ಆದರೆ ಕೆಲಸಕಾರ್ಯಗಳ ತುರ್ತಿನಿಂದ ಈ ಕಾಲಾವಧಿ 21, 18 ದಿನಗಳಿಗೆ ಕುಸಿದು ಈಗ ಕೇವಲ ಎರಡು ದಿನಗಳ ಮೊದಲು ಮಾಲೆ ಹಾಕಿ ಶಬರಿಮಲೆ ಹಾದಿ ತುಳಿಯುವಷ್ಟು ಮಾರ್ಪಾಟಾಗಿದೆ. 12 ರಿಂದ 54 ವರ್ಷ ವಯಸ್ಸಿನವರೆಗಿನ ಹೆಣ್ಣುಮಕ್ಕಳು ಶಬರಿಮಲೆಗೆ ಹೋಗುವಂತಿಲ್ಲ.

ನಗರದ ವಿವಿಧ ಬಡಾವಣೆಗಳಲ್ಲಿ ಸುಮಾರು 40 ಅಯ್ಯಪ್ಪ ದೇವಸ್ಥಾನಗಳಿವೆ. ಇವುಗಳಲ್ಲಿ ಮೊದಲು ಪ್ರತಿಷ್ಠಾಪನೆಯಾದ ಅಯ್ಯಪ್ಪ ದೇವಸ್ಥಾನ ಜಾಲಹಳ್ಳಿಯದ್ದು. 1967 ಏಪ್ರಿಲ್ ತಿಂಗಳಲ್ಲಿ ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಪೂಜಾರಿಯಾಗಿದ್ದ ತಾಳಮಠ ಶಂಕರರು ಇದರ ಪ್ರತಿಷ್ಠಾ ಕರ್ಮವನ್ನು ನೆರವೇರಿಸಿದ್ದರು. ಸಾರ್ವಜನಿಕರ ಸಹಕಾರದೊಂದಿಗೆ ಕೆ.ಎಂ.ಪಿ. ನಂಬಿಯಾರ್ ಎಂಬುವವರು ಈಗಿನ ಜಾಲಹಳ್ಳಿ ದೇವಸ್ಥಾನಕ್ಕೆ ಸ್ಥಳದಾನ ಮಾಡಿದ್ದರು. ಜಾಲಹಳ್ಳಿಯ ನಂತರ ಮುನಿರೆಡ್ಡಿಪಾಳ್ಯ, ವಸಂತನಗರ, ಮಲ್ಲೇಶ್ವರಂ, ವಯ್ಯೊಲಿಕಾವಲ್, ಓಕ್ಲಿಪುರಂ, ಪ್ರಕಾಶನಗರ, ಜಯನಗರ, ವಿಜಿನಪುರ, ಸಿಟಿ ರೈಲ್ವೆ ಸ್ಟೇಷನ್, ಶ್ರೀರಾಂಪುರ, ಯಶವಂತಪುರ ಮುಂತಾಗಿ ಅನೇಕ ಕಡೆ ಈಗ ಅಯ್ಯಪ್ಪ ದೇವಸ್ಥಾನಗಳು ಹುಟ್ಟಿಕೊಂಡಿವೆ. ಜಾಲಹಳ್ಳಿ ದೇವಸ್ಥಾನದ ಭಕ್ತರಲ್ಲಿ ಈಗಿನ ಮುಖ್ಯಮಂತ್ರಿ ಸೇರಿದಂತೆ ಅನೇಕ ಮಾಜಿ ಹಾಲಿ ಹಾಜಕಾರಣಿಗಳು, ಸಿನಿಮಾ ನಟರು ಕೂಡ ಇದ್ದಾರೆ.

ಅಯ್ಯಪ್ಪನ ಹುಟ್ಟಿನ ಬಗ್ಗೆ ಅನೇಕ ಕಥೆಗಳಿವೆ. ಹರಿ ಮತ್ತು ಹರರ ಸಂಗಮದಿಂದ ಹುಟ್ಟಿದವನು ಅಯ್ಯಪ್ಪನೆಂಬುದು ಬಹಳ ಪ್ರಚಲಿತವಾಗಿರುವ ಕತೆ. ಹಿಂದೆ ಶೈವ-ವೈಷ್ಣವರ ನಡುವೆ ಉಂಟಾದ ಘರ್ಷಣೆ ತಾರಕಕ್ಕೇರಿದಾಗ ಹರಿಹರ ಪುತ್ರನ ಸಂಕಲ್ಪವನ್ನು ಹುಟ್ಟುಹಾಕಿರಬಹುದೆಂದು ಜಾಲಹಳ್ಳಿ ಅಯ್ಯಪ್ಪ ದೇವಸ್ಥಾನದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಅಲ್ಲತ್ತ್ ಉಣ್ಣಿಕಷ್ಣನ್ ಅಭಿಪ್ರಾಯ ಪಡುತ್ತಾರೆ. ಈ ಸಂಕಲ್ಪದಿಂದ ಶೈವ-ವೈಷ್ಣವರು ಒಟ್ಟಾಗಿ ಶಾಂತಿಯಿಂದ ಹರಿಹರ ಪುತ್ರನನ್ನು ಭಜಿಸತೊಡಗಿದರೆಂದು ಹೇಳುತ್ತಾರೆ.

ಬೆಂಗಳೂರಿನ ಬಹುತೇಕ ಅಯ್ಯಪ್ಪ ದೇವಸ್ಥಾನಗಳನ್ನು ಸ್ಥಾಪಿಸಿದವರಲ್ಲಿ ಕೇರಳಿಗರೇ ಪ್ರಮುಖರಾಗಿ ಕಂಡುಬರುತ್ತಾರೆ. ಶಬರಿಮಲೆಗೆ ಹೋಗುವವರಲ್ಲಿ ಎಲ್ಲಾ ಜಾತಿಮತದವರೂ ಇದ್ದಾರೆ. ಇವು ಮಲಯಾಳಿಗಳಿಂದ ಸ್ಥಾಪಿತವಾದ ದೇವಸ್ಥಾನಗಳಾದರೂ ಇತರೆ ಭಾಷಿಗರೂ ಅಯ್ಯಪ್ಪನ ಭಕ್ತರಾಗಿದ್ದಾರೆ. ಮಲಯಾಳಂ- ಕನ್ನಡ ಭಾಷಾ ಸಾಮರಸ್ಯ ಹಾಗೂ ಮಲಯಾಳಿ ಕನ್ನಡಿಗರ ನಡುವಿನ ಸೌಹಾರ್ದ ಸಂಬಂಧಕ್ಕೆ ಅಯ್ಯಪ್ಪ ದೇವರ ಕೊಡುಗೆಯೂ ಇದೆ ಎಂದು ಉಣ್ಣಿಕಷ್ಣನ್ ಹೇಳುತ್ತಾರೆ.

ಮಾಲೆ ಹಾಕಿ ದೀಕ್ಷೆ ಪಡೆದು ಕಪ್ಪುಡುಗೆ ತೊಟ್ಟವರೆಲ್ಲಾ ಸಮಾನರೆಂಬ ಭಾವನೆ ಬರುತ್ತದೆ. ಜಾತಿ, ಮತ, ಭಾಷೆಗಳ ನಡುವೆ ಸಾಮರಸ್ಯವನ್ನು ತರುವ ದೇವರು ಅಯ್ಯಪ್ಪ. ಸಮವಸ್ತ್ರವೆಂಬುದು ಸಮಾಜವಾದದ ಸಂಕೇತ. ಪಂಡಿತ - ಪಾಮರ, ಬಡವ-ಬಲ್ಲಿದರೆಂಬ ಭಾವನೆಗಳನ್ನು ಈ ಕಪ್ಪುಡುಗೆ ತೊಡೆದುಹಾಕುತ್ತದೆ. ಸಮಾಜವಾದ ಮತ್ತು ಸಮತಾವಾದದ ತತ್ವಗಳು ಈ ಭಕ್ತರ ನಡುವೆ ಅವರಿಗೆ ತಿಳಿಯದೆ ಮನೆ ಮಾಡಿರುತ್ತದೆ.

ಜಾಲಹಳ್ಳಿ ಅಯ್ಯಪ್ಪ ಕ್ಷೇತ್ರದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಕಥಕ್ಕಳಿ ಓಟ್ವಂತುಳ್ಳಲ್, ಕಥಾ ಪ್ರಸಂಗಂ, ನೃತ್ಯ ಮುಂತಾದ ಕೇರಳದ ಸಾಂಸ್ಕೃತಿಕ ಕಾರ್ಯಕ್ರಗಳೂ ಅಲ್ಲದೆ ಕರ್ನಾಟಕದ ಯಕ್ಷಗಾನ, ಹರಿಕತೆ, ಡೊಳ್ಳುಕುಣಿತದಂತಹ ವಿಶೇಷ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ.

ವ್ರತದಲ್ಲಿರುವ ಭಕ್ತರು ಮದ್ಯಪಾನ ಮಾಡುವುದು ನಿಷಿದ್ಧ ಎಂಬ ಕಾರಣಕ್ಕೆ `ಶಬರಿಮಲೆಯ ಸೀಸನ್~ನಲ್ಲಿ ಮದ್ಯಮಾರಾಟವು ಶೇಕಡ 20ರಷ್ಟು ಕಡಿಮೆಯಿರುತ್ತದೆಂಬ ಅಂದಾಜಿದೆ. ಶಬರಿ ಮಲೆಗೆ ಹೋಗಿ ಬಂದ ಮೇಲೆ ಕೆಲವರು ಕುಡಿಯುವುದನ್ನು ಸಂಪೂರ್ಣವಾಗಿ ತ್ಯಜಿಸಿದ ಉದಾಹರಣೆಗಳೂ ಇವೆ. ಇನ್ನೂ ಕೆಲವರು ಅಷ್ಟು ದಿನ ಕುಡಿಯದೆ ಇದ್ದುದನ್ನೆಲ್ಲಾ ಒಂದೆರೆಡು ದಿನಗಳಲ್ಲೇ ಕುಡಿದು ಸಮಸ್ಯೆಯಾದ ಉದಾಹರಣೆಗಳೂ ಇವೆ.

ಮೈಕಿನ ಸದ್ದು, ಟ್ರಾಫಿಕ್ ಜಾಮ್ ಮೊದಲಾದ ನಗರಕೇಂದ್ರಿತ ಸಮಸ್ಯೆಗಳನ್ನು ಈ ದೇವಸ್ಥಾನಗಳು ಸೃಷ್ಟಿಸಿದ್ದರೂ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಮಾತ್ರ ಗಣನೀಯವಾಗಿ ಏರುತ್ತಿದೆ. ಹಾಗಾಗಿಯೇ ನಗರದಲ್ಲಿನ ಅಯ್ಯಪ್ಪ ದೇಗುಲಗಳ ಸಂಖ್ಯೆಯೂ ಹೆಚ್ಚಾಗುತ್ತಲೇ ಇರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT