ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚತುಷ್ಪಥ ರಸ್ತೆ: ಪ್ರಯಾಣಿಕರಿಗೆ ದೂಳಿನ ಮಜ್ಜನ...

ಗ್ರಾಮ ಸಂಚಾರ
Last Updated 30 ಸೆಪ್ಟೆಂಬರ್ 2013, 8:08 IST
ಅಕ್ಷರ ಗಾತ್ರ

ರಾಯಚೂರು: ಈ ರಸ್ತೆ ಕೆಲವೇ ತಿಂಗಳಲ್ಲಿ ವಿಶಾಲ ರಸ್ತೆಯಾಗಿ ನಿರ್ಮಾಣಗೊಂಡು ವಾಹನ ಸಂಚಾರ ದಟ್ಟಣೆ ತಗ್ಗಿ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ. ಅಪಘಾತ ರಹಿತ, ದೂಳು ಮುಕ್ತ ರಸ್ತೆಯಾಗಿ ನಗರಕ್ಕೆ ಮೆರುಗು ತರಲಿದೆ ಎಂಬ ನಗರದ ಜನತೆ ಆಶಯ ಹೊಂದಿದ್ದರು. ಆದರೆ, ಅವರ ನಿರೀಕ್ಷೆ ಹುಸಿಯಾಗಿದೆ ಎಂಬುದಕ್ಕೆ ನಗರದ ರೈಲ್ವೆ ಸ್ಟೇಷನ್ ರಸ್ತೆ ನೋಟವೇ ಸಾಕ್ಷಿ.

ಸುಮಾರು ₨ 31 ಕೋಟಿ ಮೊತ್ತದಲ್ಲಿ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಿಂದ ಪ್ರಾದೇಶಿಕ ಸಾರಿಗೆ ಕಚೇರಿವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಅರೆಬರೆಯಾಗಿದೆ. ಬಸವೇಶ್ವರ ವೃತ್ತದಿಂದ ಚಂದ್ರಮೌಳೇಶ್ವರ ವೃತ್ತದವರೆಗೆ ನಿರ್ಮಾಣಗೊಂಡ ಚತುಷ್ಪಥ ರಸ್ತೆ ಸಂಚಾರಕ್ಕೆ ಅನುಕೂಲ ಕಲ್ಪಿಸಿದೆ. ಆದರೆ, ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಿಂದ ರೈಲ್ವೆ ಸ್ಟೇಷನ್‌ವರೆಗೆ ನಿರ್ಮಾಣವಾಗಿರುವ ಚತುಷ್ಪಥ ರಸ್ತೆ ಕಾಟಾಚಾರಕ್ಕೆ ನಿರ್ಮಾಣವಾಗಿದೆ.

ಪೂರ್ಣ ಪ್ರಮಾಣದಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಮಾಡದೇ ತರಾತುರಿಯಲ್ಲಿ ರಸ್ತೆ ವಿಭಜಕ, ವಿದ್ಯುತ್‌ ದೀಪ ಅಳವಡಿಸಲಾಗುತ್ತಿದೆ. ಈ ರಸ್ತೆಯ ಕೆಲ ಕಡೆ ಚತುಷ್ಪಥ ರಸ್ತೆ ನಿರ್ಮಾಣ ಮಾಡುವುದಿರಲಿ, ಮೊದಲಿದ್ದ ರಸ್ತೆಯಲ್ಲಿನ ತಗ್ಗು ಗುಂಡಿ ಮುಚ್ಚುವ ಗೋಜಿಗೂ ಹೋಗಿಲ್ಲ. ಮೊದಲಿದ್ದ ಕೆಲ ಕಟ್ಟಡಗಳನ್ನು ಚತುಷ್ಪಥ ರಸ್ತೆ ನಿರ್ಮಾಣ ಕಾರಣ ನೀಡಿ ಉರುಳಿಸಲಾಗಿದೆ. ಕೆಲವು ಕಡೆ ರಸ್ತೆ ಅಗಲ ಮಾಡಿದ್ದೇ ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗಿದೆ ಎಂಬಂತೆ ಬಿಂಬಿಸಲಾಗುತ್ತಿದೆ.  ಒಳಚರಂಡಿ ನಿರ್ಮಾಣ ಕಾಮಗಾರಿಯೂ ಅರೆಬರೆಯಾಗಿದೆ. ಜನತೆ ಕಣ್ಣಿಗೆ ಮಣ್ಣೆರೆಚುವ ಪ್ರಯತ್ನ ನಡೆದಿದೆ ಎಂಬುದಕ್ಕೆ ನಿತ್ಯ ಈ ರಸ್ತೆಯಲ್ಲಿನ ಮಣ್ಣನ್ನು ಜನ ತಮ್ಮ ಕಣ್ಣಲ್ಲಿ ತುಂಬಿಕೊಂಡು ಸಂಚರಿಸುತ್ತಿರುವುದೇ ಸಾಕ್ಷಿ.

ನಗರದ ರೈಲ್ವೆ ಸ್ಟೇಷನ್‌ ರಸ್ತೆಯಿಂದ ಬಸ್‌ ನಿಲ್ದಾಣ, ನಗರದ ವಿವಿಧ ಬಡಾವಣೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದೆ. ಇದೇ ಮಾರ್ಗವಾಗಿ ರೈಲ್ವೆ ಗೂಡ್ಸ್ ರೈಲುಗಳು, ಬಸ್, ಲಾರಿ, ಭಾರಿ ಸರಕು ವಾಹನ ಸಂಚರಿಸುತ್ತವೆ. ಈ ರಸ್ತೆಯಲ್ಲಿ ಸದಾ ವಾಹನ ಸಂಚಾರ ದಟ್ಟಣೆ ದಿನಪೂರ್ತಿ ಇದ್ದೇ ಇರುತ್ತದೆ. ದ್ವಿಚಕ್ರವಾಹನ ಸವಾರರು ಈ ರಸ್ತೆಯಲ್ಲಿನ ಗುಂಡಿಯಲ್ಲಿ ಪಲ್ಟಿ ಹೊಡೆದು ಬಿಳುವ ದೃಶ್ಯ ಸಾಮಾನ್ಯವಾಗಿವೆ.

ಒಂದೆಡೆ ವಾಹನ ಸಂಚಾರ ದಟ್ಟಣೆ ಸಮಸ್ಯೆ, ಚತುಷ್ಪಥ ರಸ್ತೆ ನಿರ್ಮಾಣ ಹೆಸರಲ್ಲಿ ಮತ್ತಷ್ಟು ಹದಗೆಟ್ಟ ರಸ್ತೆ. ಹೀಗಾಗಿ ವಿಪರೀತ ಧೂಳು ಈ ರಸ್ತೆಯಲ್ಲಿ ಆವರಿಸಿದೆ. ರಸ್ತೆ ಉದ್ದಕ್ಕೂ ದೂಳೋ.. ದೂಳೂ.. ಶ್ವಾಸಕೋಶ ರೋಗಕ್ಕೆ ಜನ ತುತ್ತಾಗುವ ವಾತಾವರಣ ಸೃಷ್ಟಿಸಿದೆ.

ಹೊಟೇಲ್‌, ಮೊಬೈಲ್, ಪೆಟ್ರೊಲ್ ಬಂಕ್, ಆಸ್ಪತ್ರೆ,  ಲ್ಯಾಬ್‌,  ಕಾಲೇಜುಗಳು, ಶಾಲೆಗಳು, ರಂಗಮಂದಿರ ಇದೇ ರಸ್ತೆ ಅಕ್ಕಪಕ್ಕ ಇದ್ದು, ಇಲ್ಲಿಗೆ ಬರುವ ಜನ ರಸ್ತೆಯಲ್ಲಿನ ಧೂಳಿಗೆ ಕಂಗೆಡುವಂತಾಗಿದೆ. ಈಚೆಗೆ, ಮಳೆ ಸುರಿದ ಬಳಿಕವಂತೂ ಮತ್ತಷ್ಟು ರಸ್ತೆ ಹದಗೆಟ್ಟಿದ್ದು, ಚತುಷ್ಪಥ ರಸ್ತೆ ಯಾರ ಹಿತಕ್ಕಾಗಿ ಎಂದು ಜನ ಪ್ರಶ್ನೆ ಮಾಡುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT