ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚತುಷ್ಪಥ ಹೆದ್ದಾರಿ ಕೆಲಸಕ್ಕೆ ಜನರ ಅಡ್ಡಿ

Last Updated 20 ಫೆಬ್ರುವರಿ 2012, 6:15 IST
ಅಕ್ಷರ ಗಾತ್ರ

ಕುಷ್ಟಗಿ: ಪಟ್ಟಣಲ್ಲಿನ ಕೃಷ್ಣಗಿರಿ ಕಾಲೊನಿಗೆ ಸಂರ್ಪಕ ಕಲ್ಪಿಸುವಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಕೆಳಸೇತುವೆ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿರುವುದನ್ನು ವಿರೋಧಿಸಿ ಅಲ್ಲಿಯ ನಾಗರಿಕರು ಮತ್ತು ಕರವೇ (ಟಿಎಎನ್ ಬಣ)ದ ಕಾರ್ಯಕರ್ತರು ಚತುಷ್ಪಥ ಹೆದ್ದಾರಿ ಕಾಮಗಾರಿಯನ್ನೇ ಸ್ಥಗಿತಗೊಳಿಸಿದ ಘಟನೆ ಭಾನುವಾರ ಸಂಜೆ ನಡೆದಿದೆ.

ಅನೇಕ ಬಾರಿ ಹೋರಾಟ ನಡೆಸಿದ ನಂತರ ಈ ಅಂಡರ್‌ಪಾಸ್ ನಿರ್ಮಾಣಕ್ಕೆ ಹೆದ್ದಾರಿ ಪ್ರಾಧಿಕಾರ ಮುಂದಾಗಿತ್ತಾದರೂ ನಿರ್ಮಾಣದ ಗುತ್ತಿಗೆ ಪಡೆದಿರುವ ಓರಿಯಂಟಲ್ ಇನ್‌ಫ್ರಾಸ್ಟ್ರಕ್ಚರ್ ಕಂಪೆನಿ ಕೆಲಸ ಸ್ಥಗಿತಗೊಳಿಸಿದೆ. ಆದರೆ ಅಕ್ಕ ಪಕ್ಕದಲ್ಲಿ ಪರ್ಯಾಯ ರಸ್ತೆ ನಿರ್ಮಾಣದ ಕೆಲಸವನ್ನು ಭರದಿಂದ ನಡೆಸಿದ್ದು ಮುಂದೆ ಅಂಡರ್‌ಪಾಸ್ ಕೆಲಸ ಕೈಬಿಟ್ಟರೆ ಹೇಗೆ ಎಂಬ ಚಿಂತೆ ಅಲ್ಲಿಯ ಜನರನ್ನು ಕಾಡುತ್ತಿದೆ.

ಅಂಡರ್‌ಪಾಸ್ ಕೆಲಸ ಆರಂಭಿಸುವವರೆಗೂ ರಸ್ತೆ ಕೆಲಸ ನಡೆಸಬಾರದು ಎಂದು ಜನ ಒತ್ತಾಯಿಸಿದ್ದರು. ಆದರೆ ಮತ್ತೆ ಅಂಥ ಪ್ರಯತ್ನ ನಡೆದಿದೆ ಎಂದು ದೂರಿ ಭಾನುವಾರ ಅಲ್ಲಿ ಜಮಾಯಿಸಿದ ನಾಗರಿಕರು ಮತ್ತು ಕರವೇ (ಟಿಎಎನ್ ಬಣ)ದ ಕಾರ್ಯಕರ್ತರು ಪರ್ಯಾಯ ರಸ್ತೆ ಕೆಲಸ ನಡೆಸಕೂಡದು ಎಂದು ಪಟ್ಟು ಹಿಡಿದರು.

ಈ ಸಂದರ್ಭದಲ್ಲಿ ಕಂಪೆನಿ ಸಿಬ್ಬಂದಿ ಮತ್ತು ಜನರ ಮಧ್ಯೆ ಮಾತಿನ ಚಕಮಕಿ ನಡೆಯಿತು. ನಂತರ ಒತ್ತಡಕ್ಕೆ ಮಣಿದ ಓರಿಯಂಟಲ್ ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿ ಹೋದರು. ಕರವೇ ಜಿಲ್ಲಾಧ್ಯಕ್ಷ ಬಸನಗೌಡ ಪೊಲೀಸ್‌ಪಾಟೀಲ ಮತ್ತಿತರರು ಹಾಜರಿದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT