ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚದುರಂಗ ಚೌಕದಲ್ಲಿ ಮೈಸೂರು ಪಾರಮ್ಯ

Last Updated 28 ಜುಲೈ 2013, 19:59 IST
ಅಕ್ಷರ ಗಾತ್ರ

`ರಸಬಾಳೆ'ಯ ಊರು ನಂಜನಗೂಡು ತಾಲ್ಲೂಕಿನ ಕಳಲೆ ಗ್ರಾಮದ ಬಡ ಕುಟುಂಬಗಳ ಮೂವರು ಬಾಲಕಿಯರು  ಕೇರಳದ ತಿರುಚ್ಚಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಹಿಳಾ ಚೆಸ್ ಟೂರ್ನಿಯಲ್ಲಿ ಮಿಂಚುತ್ತಿದ್ದಾರೆ!

ಕರ್ನಾಟಕ ಮಹಿಳಾ ತಂಡವನ್ನು ಪ್ರತಿನಿಧಿಸುತ್ತಿರುವ ಕಳಲೆಯ ಸುಮತಿ, ಜೀವಿತಾ ಮತ್ತು ನಿಶಾ ಅವರ ಪ್ರತಿಭೆಯನ್ನು ಆ ಊರಿನ ಶಿಕ್ಷಕ ಗೋಪಿನಾಥ್ ಗುರುತಿಸಿ ಮೈಸೂರಿಗೆ ಕರೆದು ತಂದಾಗ, ಮೈಸೂರು ಜಿಲ್ಲಾ ಚೆಸ್ ಸಂಸ್ಥೆ (ಎಂಡಿಸಿಸಿ) ಮತ್ತು ಮೈಸೂರು ಚೆಸ್ ಸೆಂಟರ್ (ಎಂಸಿಸಿ) ಒತ್ತಾಸೆಯಾಗಿ ನಿಂತಿತು.

ನುರಿತ ತರಬೇತುದಾರರಿಂದ ತರಬೇತಿ ಪಡೆದ ಈ ಹುಡುಗಿಯರು ಇತ್ತೀಚೆಗೆ ನಡೆದ ರಾಜ್ಯ ಮಹಿಳಾ ಚೆಸ್ ಟೂರ್ನಿಯಲ್ಲಿ ಅಗ್ರ ನಾಲ್ಕು ಆಟಗಾರ್ತಿಯರಲ್ಲಿ ಸ್ಥಾನ ಪಡೆದು ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅವರಿಗೆ ರಾಷ್ಟ್ರೀಯ ಟೂರ್ನಿಗೆ ಹೋಗಲು ಎಂಸಿಸಿ ಪ್ರಾಯೋಜಕತ್ವ ನೀಡಿದೆ.

ಕಳೆದ ಆರು ತಿಂಗಳಲ್ಲಿ ಅಖಿಲ ಭಾರತ ಫಿಡೆ ರೇಟಿಂಗ್ ಚೆಸ್ ಟೂರ್ನಿಯೂ ಸೇರಿದಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದ 20 ಟೂರ್ನಿಗಳು ಮೈಸೂರಿನಲ್ಲಿ ನಡೆದಿವೆ. ಜುಲೈ 1 ರಿಂದ ಈಚೆಗೆ ರಾಜ್ಯ ಮಹಿಳಾ, ಸಬ್ ಜೂನಿಯರ್ ಬಾಲಕ, ಬಾಲಕಿಯರು, ಜಿಲ್ಲಾಮಟ್ಟದ 25 ವರ್ಷದೊಳಗಿನವರ, ಮಹಿಳೆಯರ ಮತ್ತು ಸಬ್ ಜೂನಿಯರ್ ಬಾಲಕ ಬಾಲಕಿಯರ ಒಟ್ಟು ಏಳು ಟೂರ್ನಿಗಳು ನಡೆದಿವೆ.

ಜೂನ್‌ನಲ್ಲಿಯೂ 9 ವರ್ಷದೊಳಗಿನ ಮತ್ತು 14 ವರ್ಷದೊಳಗಿನ ಟೂರ್ನಿಗಳು ನಡೆದಿದ್ದವು. ಪ್ರತಿ ತಿಂಗಳೂ ಒಂದಿಲ್ಲೊಂದು ಟೂರ್ನಿ ನಡೆದೇ ನಡೆಯುತ್ತದೆ. ಇದರಿಂದಾಗಿ ಈಗ ಮೈಸೂರಿನಲ್ಲಿ ಸುಮಾರು 200 ಚೆಸ್ ಆಟಗಾರರು ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ. ಗಾಯಗೊಳ್ಳುವ ಮತ್ತು ದೈಹಿಕ ಶ್ರಮ ಕಡಿಮೆಯಿರುವ ಈ ಆಟಕ್ಕೆ ಮಕ್ಕಳನ್ನು ಕಳಿಸಲೂ ಪಾಲಕರು ಆಸಕ್ತಿ ವಹಿಸುತ್ತಿದ್ದಾರೆ.

ಇದೆಲ್ಲದರ ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಇಲ್ಲಿಯ `ಸ್ಟಾರ್' ಆಟಗಾರರೂ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ. ಗ್ರ್ಯಾಂಡ್‌ಮಾಸ್ಟರ್ ಕಿರೀಟದ ಸಮೀಪದಲ್ಲಿರುವ ಎಂ.ಎಸ್. ತೇಜಕುಮಾರ್, ವಿಶ್ವ ಯೂತ್ ಚಾಂಪಿಯನಷಿಪ್ ವಿಜೇತ ಗಿರೀಶ ಕೌಶಿಕ್, 16 ವರ್ಷದೊಳಗಿನ ಬಾಲಕರ ವಿಭಾಗದ ಚಾಂಪಿಯನ್ ಸಿ. ಪವನ್, ಕರ್ನಾಟಕ ರಾಜ್ಯ ಬ್ಲಿಟ್ಜ್ (ಧಾರವಾಡದಲ್ಲಿ ನಡೆದ ಟೂರ್ನಿ) ಚೆಸ್ ಟೂರ್ನಿಯ ಚಾಂಪಿಯನ್ ವಿಜೇಂದ್ರ ಇಲ್ಲಿಯ ಪ್ರತಿಭೆಗಳು.

ಎಂಸಿಸಿ, ಮೈಸೂರು ಚೆಸ್ ಕ್ಲಬ್, ಪ್ರೊಫೆಷನಲ್ ಚೆಸ್ ಅಕಾಡೆಮಿ, ಎಫ್‌ಕೆಆರ್. ಅಕಾಡೆಮಿಗಳು ನುರಿತ ತರಬೇತುದಾರರೊಂದಿಗೆ ಮಕ್ಕಳಿಗೆ ತರಬೇತಿ ನೀಡುತ್ತಿವೆ. ಈ ಎಲ್ಲ ಚಟುವಟಿಕೆಗಳಿಂದ ಮತ್ತಷ್ಟು ಪ್ರತಿಭಾವಂತರು ರಾಜ್ಯದ ಚದುರಂಗ ಪಟದಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ.

  ಈ ಬಾರಿ ಮಹಿಳೆಯರ ವಿಭಾಗ, 19 ಮತ್ತು 15 ವರ್ಷದೊಳಗಿನವರ ವಿಭಾಗಗಳಲ್ಲಿ ರಾಷ್ಟ್ರೀಯ ಟೂರ್ನಿಗಳಲ್ಲಿ ಕರ್ನಾಟಕ ತಂಡಗಳನ್ನು ಮುನ್ನಡೆಸುತ್ತಿರುವ ಎಚ್.ಆರ್. ಮಾನಸ, ಎಂ.ತುಳಸಿ, ಗಂಗಮ್ಮ,  ಯಶಸ್ಕರ್ ಜೋಯಿಸ್, ಅಮೋಘ , ಎಸ್.ಎನ್. ಜತಿನ್  ಭರವಸೆಯ ಪ್ರತಿಭೆಗಳಾಗಿವೆ. ರಷ್ಯಾದಲ್ಲಿ ಈಚೆಗೆ ನಡೆದ ವಿಶ್ವ ಮೂಕ ಮತ್ತು ಕಿವುಡರ ವಿಭಾಗದ  ಚೆಸ್ ಟೂರ್ನಿಯಲ್ಲಿ ಭಾಗವಹಿಸಿದ್ದ ಆದೀಶ್ ದೊಡ್ಡ ಸಾಧನೆ ಮಾಡುವ ವಿಶ್ವಾಸ ಮೂಡಿಸಿದ್ದಾರೆ. ಇಂತಹ ಹಲವಾರು ಪ್ರತಿಭಾನ್ವಿತರಿಂದಾಗಿ  ಚೆಸ್ ಕ್ರೀಡೆಯಲ್ಲಿ  ಮೈಸೂರಿನ ಪಾರಮ್ಯ ಮುಂದುವರೆದಿದೆ.

ಸಾಗಿ ಬಂದ ದಾರಿ...
ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತದ ಕಾಲದಿಂದಲೂ ಚೆಸ್ ಮತ್ತು ಪಟದ ಆಟಗಳಿಗೆ ಇಲ್ಲಿ ಪ್ರೋತ್ಸಾಹ ಸಿಕ್ಕಿದೆ.

`1970ರಲ್ಲಿ ಲೀಲಾ ಅಂಜನಪ್ಪ, ಸಚ್ಚಿದಾನಂದನ್, ಡಾ. ಚಂದ್ರಶೇಖರ್ ಮತ್ತು ಸಿ.ಎಸ್. ವೆಂಕೋಬರಾವ್ ಅವರಿಂದ ಎಂಡಿಸಿಎ ಸ್ಥಾಪನೆಯಾದ ಮೇಲೆ ಜಿಲ್ಲೆಯ ಚದುರಂಗದಾಟ ಮತ್ತಷ್ಟು ಚುರುಕಾಗಿದೆ.

1982 ಮೈಸೂರು ಚೆಸ್ ಇತಿಹಾಸದಲ್ಲಿಯೇ ಅವಿಸ್ಮರಣೀಯ ವರ್ಷ. ರಷ್ಯಾ ದೇಶದ 9 ಮಂದಿ ಗ್ರ್ಯಾಂಡ್‌ಮಾಸ್ಟರ್‌ಗಳು ಇಲ್ಲಿಯ ಲಲಿತ್ ಮಹಲ್ ಹೋಟೆಲ್‌ನಲ್ಲಿ ಪ್ರದರ್ಶನ ಪಂದ್ಯ ಆಡಿದ್ದರು. ಈ ಸಂದರ್ಭದಲ್ಲಿ ಪಂದ್ಯ ಡ್ರಾ ಮಾಡಿಕೊಂಡಿದ್ದ ರಾಮಕೃಷ್ಣರಾವ್ ಮತ್ತು ಗ್ರ್ಯಾಂಡ್‌ಮಾಸ್ಟರ್ ಎಂ.ಎನ್. ಕೃಷ್ಣರಾವ್ ಹಲವಾರು ಆಟಗಾರರಿಗೆ ತರಬೇತಿ ನೀಡಿದರು. ಇದರಿಂದಾಗಿ ಹಲವು ಪ್ರತಿಭಾವಂತ ಆಟಗಾರರು ಪ್ರವರ್ಧಮಾನಕ್ಕೆ ಬಂದರು' ಎಂದು ಎಂಡಿಸಿಎ ಅಧ್ಯಕ್ಷರು ತಿಳಿಸಿದರು.

1990ರ ನಂತರ ಮೈಸೂರು ಚೆಸ್ ಆಟದಲ್ಲಿ ಸುವರ್ಣ ಕಾಲ ಕಂಡಿತು. ಎನ್. ಸಂಜಯ್ ಐದು ಬಾರಿ ರಾಜ್ಯದ ಚಾಂಪಿಯನ್ ಆದರು. ಕೆ.ಎನ್. ಚೇತನ್, ಎಂ. ಕಾವ್ಯಶ್ರೀ, ಎಂ. ಕವನ ಮಿಂಚಿದರು. 2001ರಲ್ಲಿ ಕೆ. ವಿಜಯಕೀರ್ತಿ 11 ವರ್ಷದೊಳಗಿನವರ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದರು. ನಂತರ ಸ್ಪೇನ್‌ನಲ್ಲಿ ನಡೆದ ಏಷ್ಯಾ ಯೂತ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗಳಿಸಿದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT