ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚದುರಿದ ಬೆಂಬಲ, ಭಿನ್ನರಲ್ಲಿ ಗೊಂದಲ

Last Updated 25 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಒಂದು ಗುಂಪು ಚುನಾವಣೆ ಕಡೆ ಎಳೆಯುತ್ತಿದೆ. ಮತ್ತೊಂದು ಗುಂಪು ಚುನಾವಣೆ ಬೇಡ ಎನ್ನುತ್ತಿದೆ. ವಿರುದ್ಧ ಆಸಕ್ತಿಗಳ ಈ ಗುಂಪುಗಳ ನಡುವೆ ಬಿಜೆಪಿ ಮುಖಂಡ ಯಡಿಯೂರಪ್ಪ ಸಿಲುಕಿದ್ದು ಖಚಿತ ನಿರ್ಧಾರಕ್ಕೆ ಬರಲಾಗದೆ ತೊಳಲಾಡುತ್ತಿದ್ದಾರೆ.

ಇಂತಹದೊಂದು ಗೊಂದಲದ ಸ್ಥಿತಿ ಬಗ್ಗೆ ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿಯೇ ಮಾತುಗಳು ಕೇಳಿಬರುತ್ತಿವೆ. ಮಾಜಿ ಶಾಸಕರು ಸೇರಿದಂತೆ ಶಾಸಕರಾಗಲು ತುದಿಗಾಲ ಮೇಲೆ ನಿಂತಿರುವ ಮುಖಂಡರಿಗೆ ಚುನಾವಣೆ ಬೇಕಾಗಿದೆ. ಅವರು ತಮ್ಮ ನಾಯಕನನ್ನು ಚುನಾವಣೆ ಕಡೆಗೆ ಎಳೆಯುತ್ತಿದ್ದಾರೆ. ಆದರೆ, ಹಾಲಿ ಸಚಿವರು ಮತ್ತು ಶಾಸಕರು `ಪಕ್ಷ ಬಿಡುವುದು ಬೇಡ, ಪಕ್ಷದಲ್ಲಿ ಇದ್ದುಕೊಂಡೇ ಹೋರಾಟ ನಡೆಸೋಣ~ ಎಂದು ಒತ್ತಡ ಹೇರುತ್ತಿದ್ದಾರೆ. ಇದರಿಂದ ಯಡಿಯೂರಪ್ಪ ಇಕ್ಕಟ್ಟಿಗೆ ಸಿಲುಕಿದ್ದಾರೆ ಎಂದು ಹೇಳಲಾಗಿದೆ.

ದುಡುಕಿ ಅಧಿಕಾರ ಕಳೆದುಕೊಳ್ಳಲು ಸಚಿವರು ತಯಾರಿಲ್ಲ. ಅವಧಿಗೆ ಮೊದಲೇ ಚುನಾವಣೆ ಎದುರಿಸಲು ಬಹುಪಾಲು ಶಾಸಕರೂ ಸಿದ್ಧರಾಗಿಲ್ಲ. ಹೀಗಾಗಿ ಸರ್ಕಾರ ಬೀಳಿಸುವಂತಹ ಪ್ರಯತ್ನಗಳು ಬೇಡ ಎನ್ನುವ ತೀರ್ಮಾನಕ್ಕೆ ಬರಲಾಗಿದೆ. `ಪಕ್ಷದಲ್ಲಿದ್ದು ನಡೆಸುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ಇದೆ. ಪಕ್ಷದಿಂದ ಹೊರ ಬರುವ ಚಿಂತನೆಗೆ ಸಹಮತ ಇಲ್ಲ~ ಎಂದು ಕೆಲವರು ನೇರವಾಗಿಯೇ ಹೇಳುತ್ತಿದ್ದಾರೆ. ಇದರಿಂದ ಯಡಿಯೂರಪ್ಪ ಸ್ವಲ್ಪ ವಿಚಲಿತರಾಗಿದ್ದಾರೆ ಎಂದು ಗೊತ್ತಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಖಡಕ್ ಮಾತುಗಳಿಂದ ಬೇಸತ್ತಿರುವ ಯಡಿಯೂರಪ್ಪ ಶನಿವಾರ ಬೆಳಿಗ್ಗೆ ರೇಸ್‌ಕೋರ್ಸ್ ರಸ್ತೆಯ ತಮ್ಮ ಮನೆಯಲ್ಲಿ ಕೆಲವು ಆಪ್ತರ ಜತೆ ಸಮಾಲೋಚನೆ ನಡೆಸಿದರು.

`ಗಡ್ಕರಿ ಅವರ ಹೇಳಿಕೆಗಳಿಂದ ನೋವಾಗಿದೆ. ಬೇರೆ ದಾರಿ ನೋಡಿಕೊಳ್ಳೋಣ~ ಎಂದು ಕೆಲವರು ಅವರನ್ನು ಹುರಿದುಂಬಿಸಿದ್ದಾರೆ. ಇದಕ್ಕೆ ಅವರಿಂದ ಪೂರಕ ಪ್ರತಿಕ್ರಿಯೆ ನಿರೀಕ್ಷಿತ ಮಟ್ಟದಲ್ಲಿ ದೊರೆತಿಲ್ಲ. ಅವರು ತಮ್ಮ 70ನೇ ಹುಟ್ಟುಹಬ್ಬದ (ಸೋಮವಾರ) ತಯಾರಿಯಲ್ಲಿ ತಲ್ಲೆನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಹುಟ್ಟುಹಬ್ಬದ ಅಂಗವಾಗಿ ಅಂದು ಸಂಜೆ ಆಯೋಜಿಸಿರುವ ಶಾಸಕರ ಮತ್ತು ಸಂಸದರ ಔತಣಕೂಟಕ್ಕೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಈಶ್ವರಪ್ಪ ಅವರನ್ನೂ ಆಹ್ವಾನಿಸಲಾಗಿದೆ. ಈ ಸಭೆಯಲ್ಲಿ ತಮ್ಮ ಮುಂದಿನ ನಡೆ ನಿರ್ಧರಿಸುವುದಾಗಿ ಯಡಿಯೂರಪ್ಪ ಅವರು ಈ ಹಿಂದೆ ಘೋಷಿಸಿದ್ದರು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಮಾ. 3ರವರೆಗೂ ಕಾದು ನೋಡುವ ತಂತ್ರ ಅನುಸರಿಸುವ ಸಾಧ್ಯತೆ ಇದೆ.

ಕೆಲವು ಮೂಲಗಳ ಪ್ರಕಾರ ಈ ಸಭೆಯಲ್ಲೇ ಕೆಲ ಸಚಿವರು ಮತ್ತು ಶಾಸಕರಿಗೆ ರಾಜೀನಾಮೆ ನೀಡುವಂತೆ ಸೂಚಿಸುವ ಸಾಧ್ಯತೆ ಇದೆ. ರಾಜೀನಾಮೆ ಪತ್ರಗಳನ್ನು ಈಶ್ವರಪ್ಪ ಅವರಿಗೇ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ. ಆ ಮೂಲಕ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರುವುದು ಅವರ ಉದ್ದೇಶವಾಗಿದೆ. ಆದರೆ ಈ ಕುರಿತು ಅಂತಿಮ ತೀರ್ಮಾನ ಆಗಿಲ್ಲ.
 
ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ ಶೆಟ್ಟರ್ ಅವರು ಯಡಿಯೂರಪ್ಪ ಬಣದಲ್ಲಿ ನೇರವಾಗಿಯೇ ಗುರುತಿಸಿಕೊಂಡಿದ್ದಾರೆ. ಇದು ಯಡಿಯೂರಪ್ಪ ಗುಂಪಿನ ಬಲ ಹೆಚ್ಚಿಸಿದೆ. ಆದರೆ, `ಪಕ್ಷದಲ್ಲಿದ್ದು ಹೋರಾಟ ನಡೆಸಿದರೆ ಮಾತ್ರ ತಮ್ಮ ಬೆಂಬಲ~ ಎಂದು ಶೆಟ್ಟರ್ ಸೂಚ್ಯವಾಗಿ ಹೇಳಿದ್ದಾರೆ. ಇದೇ ವಿಷಯವನ್ನು ಬಿಎಸ್‌ವೈ ಆಪ್ತ ಬಳಗದ ಇನ್ನೂ ಕೆಲವು ಸಚಿವರು, ಶಾಸಕರು ಕೂಡ ಹೇಳಿದ್ದಾರೆ.
 
`ಪಕ್ಷ ಕಟ್ಟಿದ ನೀವು ಪಕ್ಷ ಬಿಡುವ ಬಗ್ಗೆ ಯೋಚನೆ ಮಾಡಬೇಡಿ. ಹಿನ್ನಡೆ ಆಗಿದೆ. ಅದರ ಬಗ್ಗೆ ಹೆಚ್ಚು ಚಿಂತಿಸದೆ ಪಕ್ಷದಲ್ಲಿ ಸ್ಥಾನ ಗಟ್ಟಿ ಮಾಡಿಕೊಂಡರೆ ಸ್ಥಾನಮಾನ ಸಿಕ್ಕೇ ಸಿಗುತ್ತದೆ~ ಎಂದೂ ಸಲಹೆ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಮಾ.3ರಂದು ದೆಹಲಿಯಲ್ಲಿ ನಡೆಯುವ `ಕೋರ್ ಕಮಿಟಿ~ ಸಭೆಗೂ ಮುನ್ನವೇ ವರಿಷ್ಠರ ಜತೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ಬೆಂಬಲಿಗ ಶಾಸಕರ ಸಂಖ್ಯೆ ಹೆಚ್ಚಿಸಿಕೊಳ್ಳುವ ಮೂಲಕ ಸೂಕ್ತ ಸ್ಥಾನಮಾನಕ್ಕೆ ವರಿಷ್ಠರನ್ನು ಮನವೊಲಿಸುವ ಪ್ರಯತ್ನ ಮುಂದುವರಿಸಲಿದ್ದಾರೆ. ಆದರೆ, ಗಡ್ಕರಿ ಹೇಳಿಕೆ ಹೊರಬಿದ್ದ ನಂತರ ಅವರ ಗುಂಪಿನಿಂದ ಕೆಲವರು ಈಗಾಗಲೇ ದೂರ ಸರಿದಿದ್ದಾರೆ. ಯಡಿಯೂರಪ್ಪ ಮಾತಿನ ವರಸೆಯೂ ಬದಲಾಗಿದೆ ಎಂದು ಒಂದು ಗುಂಪು ಹೇಳಿಕೊಂಡಿದೆ.

ಪ್ರಚಾರ ಸಮಿತಿ: ಈ ಎಲ್ಲ ಬೆಳವಣಿಗೆಗಳ ನಡುವೆಯೇ ಯಡಿಯೂರಪ್ಪ ಅವರನ್ನು ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸುತ್ತಾರೆ ಎಂಬ ವದಂತಿಯೂ ಹಬ್ಬಿದೆ. ಇದಕ್ಕೆ ಯಡಿಯೂರಪ್ಪ ಒಪ್ಪಿಲ್ಲ ಎನ್ನಲಾಗಿದೆ.
ಇದರ ಮಧ್ಯೆ ಈಶ್ವರಪ್ಪ ಅವರು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರನ್ನು ಭೇಟಿ ಮಾಡಿ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು. ಯಡಿಯೂರಪ್ಪ ಬಣದಲ್ಲಿರುವ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರೂ ಬೆಳಿಗ್ಗೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. `ನಾಯಕತ್ವ ಬದಲಾವಣೆ ಇಲ್ಲ~ ಎಂದು ಗಡ್ಕರಿ ಸ್ಪಷ್ಟವಾಗಿ ಹೇಳಿದ ನಂತರ ಈ ಭೇಟಿ ನಡೆದಿದ್ದು, `ಗೊಂದಲ~ಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಚರ್ಚೆ ಆಗಿದೆ ಎನ್ನಲಾಗಿದೆ. ಅಲ್ಲದೇ ಬೊಮ್ಮಾಯಿ ಅವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಜತೆಗೂ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.

ಹುನ್ನಾರ ಆರೋಪ
ಚಿಂತನ-ಮಂಥನ ಕಾರ್ಯಕ್ರಮವನ್ನು ಮಾಧ್ಯಮಗಳು ವರದಿ ಮಾಡಿರುವ ರೀತಿಯ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ರೇಸ್‌ಕೋರ್ಸ್ ರಸ್ತೆಯ ನಿವಾಸದಲ್ಲಿ ತಮ್ಮನ್ನು ಶನಿವಾರ ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಕಾರ್ಯಕ್ರಮದಲ್ಲಿ ತಾವು ಆಡಿರದ ಮಾತುಗಳೂ ಮಾಧ್ಯಮಗಳಲ್ಲಿ ಪ್ರಕಟವಾಗಿವೆ ಎಂದು ಗಡ್ಕರಿ ಅವರು ದೂರವಾಣಿಯಲ್ಲಿ ತಮಗೆ ತಿಳಿಸಿದ್ದಾರೆ~ ಎಂದರು. ಆದರೆ, ಈ ಸಂಬಂಧ ಸ್ಪಷ್ಟೀಕರಣ ಬಯಸಿ ಗಡ್ಕರಿ ಅವರಿಂದ ಯಾವುದೇ ಹೇಳಿಕೆ ಬಂದಿಲ್ಲ.

`ನನ್ನನ್ನು ಬಿಜೆಪಿಯಿಂದ ಹೊರಹಾಕಬೇಕು ಎಂದು ಪ್ರತಿಪಕ್ಷಗಳು ಹುನ್ನಾರ ನಡೆಸಿವೆ. ಇದಕ್ಕೆ ಕೆಲವು ಮಾಧ್ಯಮಗಳೂ ಪೂರಕವಾಗಿ ಕೆಲಸ ಮಾಡಿವೆ~ ಎಂದು ಯಡಿಯೂರಪ್ಪ ದೂರಿದರು.

`ಇದೇ 27ರಂದು ಶಾಸಕರು ಮತ್ತು ಸಂಸದರ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಪಕ್ಷ ಸಂಘಟನೆ ಕುರಿತು ಚರ್ಚಿಸಲಾಗುವುದು. 27ರ ನಂತರ ದೆಹಲಿಗೆ ತೆರಳಿ ವರಿಷ್ಠರ ಜತೆ ಸಮಾಲೋಚನೆ ನಡೆಸುತ್ತೇನೆ~ ಎಂದು ತಿಳಿಸಿದರು.


ಬಿಜೆಪಿ ತೊರೆಯುವುದಿಲ್ಲ: ರೇಣುಕಾಚಾರ್ಯ
ಹೊನ್ನಾಳಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಬೆಂಬಲಿಗರು ಬಿಜೆಪಿ ತೊರೆಯುವುದಿಲ್ಲ ಎಂದು ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಸ್ಪಷ್ಟಪಡಿಸಿದರು.

`ಸೋಮವಾರದೊಳಗೆ ಸಿಎಂ ಬದಲಿಸದಿದ್ದರೆ ಬಿಎಸ್‌ವೈ ಬಣ ಪಕ್ಷ ತೊರೆಯಲಿದೆ~ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ಸತ್ಯಕ್ಕೆ ದೂರವಾದುದು ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

 ಯಡಿಯೂರಪ್ಪ ಅವರಿಗೆ ಸೂಕ್ತ ಸಮಯದಲ್ಲಿ ಸೂಕ್ತ ಸ್ಥಾನ-ಮಾನ ನೀಡುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಭರವಸೆ ಕೊಟ್ಟಿದ್ದಾರೆ. ಹಾಗಾಗಿ, ಬಲಾಬಲ ಪ್ರದರ್ಶನಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT