ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಗಿರಿಯಲ್ಲಿ ಕಾಂಗ್ರೆಸ್ ಗೆಲುವು ಕಂಡು 24 ವರ್ಷ

Last Updated 3 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯಕ್ಕೆ ಮುಖ್ಯಮಂತ್ರಿ ನೀಡಿದ ಜಿಲ್ಲೆಯ ಏಕೈಕ ಕ್ಷೇತ್ರ ಚನ್ನಗಿರಿ ವಿಧಾನಸಭಾ ಕ್ಷೇತ್ರ. ಈ ಕ್ಷೇತ್ರದಲ್ಲಿ ಸ್ಪರ್ಧಿಸಿ ಶಾಸಕರಾದ ಸಮಾಜವಾದಿ ಹಿನ್ನೆಲೆಯ ವರ್ಣರಂಜಿತ ವ್ಯಕ್ತಿತ್ವದ ಜೆ.ಎಚ್.ಪಟೇಲ್ 1996ರಿಂದ 1999ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆರಂಭದಿಂದಲೂ ಕಾಂಗ್ರೆಸ್-ಜನತಾ ಪರಿವಾರದ ಜುಗಲ್‌ಬಂದಿಯ ಗೆಲುವು ಕಾಣುತ್ತಿದ್ದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಕೊನೆಯ ಗೆಲುವು ಕಂಡು 24 ವರ್ಷಗಳೇ ಗತಿಸಿವೆ.

ಪಟೇಲರು ಮುಖ್ಯಮಂತ್ರಿಯಾಗಿದ್ದ ಅವಧಿ ಅವರ ಶಾಸಕತ್ವದ ಕೊನೆಯ ಅವಧಿಯೂ ಹೌದು. ಅವರು 4 ಬಾರಿ ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಜನತಾ ಪರಿವಾರದಿಂದ ಸ್ಪರ್ಧಿಸಿ ಶಾಸಕರಾಗಿದ್ದರು. 1978ರಲ್ಲಿ ಮೊದಲ ಬಾರಿ ಜನತಾ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ, 1983 ಹಾಗೂ 1985ರಲ್ಲಿ ಸತತವಾಗಿ ಗೆಲುವು ಸಾಧಿಸುವ ಮೂಲಕ `ಹ್ಯಾಟ್ರಿಕ್' ಸಾಧನೆ ಮಾಡಿದ್ದರು. 1994ರಲ್ಲಿ ಮತ್ತೆ ಜನತಾದಳದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದರು. 

ಪಟೇಲರು ಕೊನೆಯ ಬಾರಿ ಸ್ಪರ್ಧಿಸಿದ್ದು 1999ರ ಚುನಾವಣೆಯಲ್ಲಿ. ಅಂದು ಮುಖ್ಯಮಂತ್ರಿಯಾಗಿದ್ದ ಪಟೇಲರನ್ನು ಸೋಲಿಸಿದ್ದು ಪಕ್ಷೇತರ ಅಭ್ಯರ್ಥಿ ವಡ್ನಾಳ್ ರಾಜಣ್ಣ. ನಂತರ, ಕಾಂಗ್ರೆಸ್ ಸೇರಿ 2004ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ವಡ್ನಾಳ್ ಅವರನ್ನು ಸೋಲಿಸುವ ಮೂಲಕ ಜೆ.ಎಚ್. ಪಟೇಲರ ಪುತ್ರ ಮಹಿಮ ಪಟೇಲ್ ತಂದೆಯ ಸೋಲಿನ ಸೇಡು ತೀರಿಸಿಕೊಂಡಿದ್ದರು.

ಕ್ಷೇತ್ರದಲ್ಲಿ 4 ಬಾರಿ ಕಾಂಗ್ರೆಸ್, 5 ಬಾರಿ ಜನತಾ ಪರಿವಾರ ಗೆಲುವು ಸಾಧಿಸಿದರೆ, ತಲಾ ಒಂದು ಬಾರಿ ಕಿಸಾನ್ ಮಜ್ದೂರ್ ಪಕ್ಷ (ಕೆಎಂಪಿ), ಪ್ರಜಾ ಸೋಷಿಯಲಿಸ್ಟ್ ಪಕ್ಷ (ಪಿಎಸ್‌ಪಿ) ಹಾಗೂ ಬಿಜೆಪಿ ಗೆಲುವು ಸಾಧಿಸಿವೆ. ಕಾಂಗ್ರೆಸ್ ಅಭ್ಯರ್ಥಿ ಎನ್.ಜಿ. ಹಾಲಪ್ಪ ಈ ಕ್ಷೇತ್ರದಿಂದ ಸ್ಪರ್ಧಿಸಿ, 1989ರಲ್ಲಿ ಗೆಲುವು ಸಾಧಿಸಿದ್ದೇ ಕಾಂಗ್ರೆಸ್‌ನ ಕೊನೆಯ ಗೆಲುವು.

1962, 67ರಲ್ಲಿ ಕುಂದೂರು ರುದ್ರಪ್ಪ, 1967, 1972ರಲ್ಲಿ ಎನ್.ಜಿ. ಹಾಲಪ್ಪ ಸತತವಾಗಿ ಎರಡು ಬಾರಿ, 1978, 1983, 1985ರಲ್ಲಿ ಜೆ.ಎಚ್. ಪಟೇಲ್ ಸತತವಾಗಿ ಮೂರು ಬಾರಿ ಗೆಲುವು ಸಾಧಿಸಿದ್ದರು. 1985ರ ನಂತರ ಯಾವುದೇ ಅಭ್ಯರ್ಥಿ ಸತತವಾಗಿ ಎರಡನೇ ಬಾರಿ ಗೆಲುವು ಕಂಡಿಲ್ಲ.

ಜೀವನವಿಡೀ ಕಾಂಗ್ರೆಸ್ ವಿರೋಧಿಸಿಕೊಂಡು ಬಂದ ಜೆ.ಎಚ್. ಪಟೇಲರ ಪುತ್ರ ಪ್ರಸ್ತುತ ಕಾಂಗ್ರೆಸ್ ಸೇರಿದ್ದು, ಈ ಬಾರಿ ಚನ್ನಗಿರಿ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಪಟೇಲರನ್ನು ಸೋಲಿಸಿ ರಾಜ್ಯದಾದ್ಯಂತ ಹೆಸರು ಮಾಡಿದ್ದ ಅಂದಿನ ಪಕ್ಷೇತರ ಅಭ್ಯರ್ಥಿ ವಡ್ನಾಳ್ ಅವರೂ ಕಾಂಗ್ರೆಸ್‌ನಲ್ಲಿದ್ದು ಕಾಂಗ್ರೆಸ್ ಟಿಕೆಟ್‌ಗಾಗಿ ಮಹಿಮ ಜತೆ ಪೈಪೋಟಿಗೆ ಇಳಿದಿದ್ದಾರೆ.
2008ರಲ್ಲಿ ಮೊದಲ ಬಾರಿ ಬಿಜೆಪಿಯಿಂದ ಗೆಲುವು ಸಾಧಿಸಿ ಶಾಸಕರಾಗಿದ್ದ ಮಾಡಾಳ್ ಈ ಬಾರಿ ಕೆಜೆಪಿ ಅಭ್ಯರ್ಥಿ. ಜೆಡಿಎಸ್‌ನಿಂದ ಹೊದಿಗೆರೆ ರಮೇಶ್ ಕಣಕ್ಕೆ ಇಳಿದಿದ್ದಾರೆ.

2008ರ ಕ್ಷೇತ್ರ ಪುನರ್‌ವಿಂಗಡಣೆಯ ನಂತರ ಕ್ಷೇತ್ರದ ಸ್ವರೂಪ ಸ್ವಲ್ಪ ಬದಲಾಗಿದ್ದು, ಹಿಂದಿನ ಹೊಳೆಹೊನ್ನೂರು ಕ್ಷೇತ್ರದ ಕೆಲಭಾಗ ಚನ್ನಗಿರಿ ಕ್ಷೇತ್ರಕ್ಕೆ ಸೇರ್ಪಡೆಯಾದರೆ, ಚನ್ನಗಿರಿ ಕ್ಷೇತ್ರದ ಕೆಲಭಾಗ ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ವಿಲೀನವಾಗಿದೆ. ಈ ಬಾರಿ ಸ್ಪರ್ಧೆ ಬಯಸಿರುವ ಅಭ್ಯರ್ಥಿಗಳಲ್ಲಿ ಇಬ್ಬರು ಮಾಜಿ ಶಾಸಕರು,   ಹಾಲಿ ಶಾಸಕರು ಇದ್ದು, ಯಾರೇ ಗೆಲುವು ಕಂಡರೂ ಎರಡನೇ ಬಾರಿ ಗೆಲುವು ಸಾಧಿಸಿದ ಶ್ರೇಯ ಅವರಿಗೆ ಲಭಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT