ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಂಡಿ ಇಲ್ಲದ ಸಿರಿಗೇರಿ: ರಸ್ತೆಯಲ್ಲಿ ಮಲಿನ ನೀರು

Last Updated 28 ಅಕ್ಟೋಬರ್ 2011, 8:50 IST
ಅಕ್ಷರ ಗಾತ್ರ

ಬಳ್ಳಾರಿ: ಈ ಊರಿನ ಬಹುತೇಕ ಓಣಿಗಳಲ್ಲಿ ಚರಂಡಿ ವ್ಯವಸ್ಥೆಯೇ ಇಲ್ಲದ್ದರಿಂದ ಪ್ರತಿ ಮನೆಗಳಲ್ಲಿ ಬಳಕೆಯಾದ ನೀರು ಬೀದಿಗುಂಟ ಹರಿದು ಮಲಿನಗೊಳ್ಳುತ್ತ, ವಿವಿಧ ಕಾಯಿಲೆಗೆ ಕಾರಣವಾಗುತ್ತಿದೆ.

ಇದನ್ನು ಕಂಡ ಜನರು ಗ್ರಾಮ ಪಂಚಾಯಿತಿಗೆ ಎಷ್ಟೇ ಮನವಿ ಮಾಡಿಕೊಂಡರೂ ಪ್ರಯೋಜನವಾಗದ್ದರಿಂದ, ಈಗೀಗ ಕಂಡೂ ಕಾಣದವರಂತೆ ಸುಮ್ಮನಾಗಿದ್ದಾರೆ.

ಈ ರೀತಿ ಚರಂಡಿ ನೀರು ಊರಿನ ರಸ್ತೆಗಳ ಮಧ್ಯೆ ಹರಿಯುವುದು ಸಾಮಾನ್ಯ ಎಂಬಂತೆ ನಿರ್ಲಿಪ್ತರಾಗಿದ್ದಾರೆ.
ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಸಿರಿಗೇರಿ ಗ್ರಾಮವೇ ಮಲಿನ ನೀರು ನಿಂತಿರುವ ಊರು.

ಪ್ರತಿ ಮನೆಯಲ್ಲೂ ಬಳಕೆಯಾಗುವ ನೀರು ಮನೆಯೆದುರೇ ಹರಿದು ಸಾಗುತ್ತ, ತಗ್ಗು ಪ್ರದೇಶದಲ್ಲಿ ನಿಲ್ಲುತ್ತದೆ. ಹಾಗೆ ನಿಂತ ನೀರು ಮಲಿನಗೊಂಡು, ಸೊಳ್ಳೆಗಳ ಉತ್ಪತ್ತಿ ತಾಣವಾಗಿ ರೂಪುಗೊಳ್ಳುವುದರಿಂದ ಸೊಳ್ಳೆಯ ಕಾಟವೂ ಅಧಿಕವಾಗಿ ಜನ ಬೇಸತ್ತು ಹೋಗಿದ್ದಾರೆ. ಕೆಲವರು ವಿವಿಧ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಚಿಕಿತ್ಸೆ ಫಲಿಸದೆ ಸತ್ತೂ ಹೋಗಿದ್ದಾರೆ.

`ನಮ್ಮ ಊರಿಗೆ ಬರುವವರನ್ನು ಪ್ರತಿ ಓಣಿಯಲ್ಲಿನ ಮಲಿನ ನೀರಿನ ಹರಿಗಳು ಸ್ವಾಗತಿಸುತ್ತವೆ. ದುರ್ನಾತ ಬೀರುವ ಈ ನೀರಿನ ಮೇಲೆ ಮೊಟ್ಟೆ ಇಡುವ ಸೊಳ್ಳೆಗಳು ನೋಡನೋಡುತ್ತಿದ್ದಂತೆಯೇ ಬೆಳೆದು, ದೊಡ್ಡವಾಗಿ ಮನೆಗಳಿಗೇ ಲಗ್ಗೆ ಇಟ್ಟು, ಜನರನ್ನು ಕಚ್ಚುತ್ತ ನಿದ್ರೆಗೆ ಭಂಗ ಉಂಟುಮಾಡುತ್ತವೆ. ಬರೀ ನಿದ್ರೆ ಭಂಗವಾದರೆ ತೊಂದರೆಯಿಲ್ಲ, ಅವು ಮಾರಣಾಂತಿಕ ರೋಗವನ್ನೂ ಹರಡುತ್ತವೆ. ಮಲೇರಿಯಾ ಮತ್ತಿತರ ಕಾಯಿಲೆಗೆ ತುತ್ತಾದವರ ಸಂಖ್ಯೆಯೂ ಅಧಿಕವಾಗಿದೆ. 10 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಊರಲ್ಲಿ ಅದರ ಸಾವಿರ ಪಟ್ಟು ಹೆಚ್ಚು ಸೊಳ್ಳೆಗಳಿವೆ ಎಂದು ಗ್ರಾಮಸ್ಥರು ನೊಂದು ನುಡಿಯುತ್ತಾರೆ.

ಈ ಸಮಸ್ಯೆಯನ್ನೇ ಮನಗಂಡು ಊರನ್ನು `ಸುವರ್ಣ ಗ್ರಾಮ~ ಯೋಜನೆ ಅಡಿ ಸೇರಿಸಿ ಎರಡು ವರ್ಷಗಳೇ ಕಳೆದರೂ ಕಾಮಗಾರಿ ಮಾತ್ರ ಆರಂಭವಾಗೇ ಇಲ್ಲ. ಗ್ರಾಮ ಪಂಚಾಯಿತಿ ಸದಸ್ಯರು ಈ ಕುರಿತು ಜಿಲ್ಲಾ ಪಂಚಾಯಿತಿಗೆ ಹೋಗಿ ಕೇಳಿದರೆ, `ಯೋಜನೆ ಇನ್ನೇನು ಆರಂಭವಾಗಲಿದೆ; ಟೆಂಡರ್ ಕರೆಯಲಾಗಿದೆ~ ಎಂಬ ಉತ್ತರಗಳು ದೊರೆಯುತ್ತವೆ ಎಂಬುದು ಗ್ರಾಮ ಪಂಚಾಯಿತಿಯವರು ನೀಡುವ ಸಮಜಾಯಿಷಿಯಾಗಿದೆ.

ಅನುದಾನವಿಲ್ಲ: ಇಡೀ ಊರಲ್ಲಿ ಚರಂಡಿ ನಿರ್ಮಿಸಬೇಕೆಂದರೆ ಕೋಟ್ಯಂತರ ರೂಪಾಯಿ ಬೇಕು. ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ಚರಂಡಿ ಕಾಮಗಾರಿ ಆರಂಭಿಸಬೇಕೆಂದರೆ, ಸಿಮೆಂಟ್, ಜಲ್ಲಿಕಲ್ಲು, ಉಸುಕು, ಕಲ್ಲು ಖರೀದಿಸಲು ಹಣ ಬೇಕೇಬೇಕು.
 
ಖಾತ್ರಿ ಯೋಜನೆ ಅಡಿ ಹಣ ಬಿಡುಗಡೆಯಾಗಲು ತಿಂಗಳುಗಳೇ ಬೇಕು. ಈ ಸಾಮಗ್ರಿಗಳನ್ನು ಯಾರೂ ಉದ್ರಿ ಕೊಡುವುದಿಲ್ಲ. ಹಾಗಾಗಿ `ಸುವರ್ಣ ಗ್ರಾಮ~ ಯೋಜನೆಗಾಗಿ ಕಾಯುವುದು ಅನಿವಾರ್ಯವಾಗಿದೆ ಎಂದು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಎಸ್.ಎಂ. ಅಡವಿಸ್ವಾಮಿ ಹೇಳುತ್ತಾರೆ.

ರೂ 5 ಕೋಟಿ ಅನುದಾನದ `ಸುವರ್ಣ ಗ್ರಾಮ~ ಯೋಜನೆ ಆರಂಭವಾದರೆ ಊರಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ಶೌಚಾಲಯ ಮತ್ತಿತರ  ಮೂಲ ಸೌಲಭ್ಯಗಳೆಲ್ಲ ದೊರೆಯುತ್ತವೆ. 4 ತಿಂಗಳ ಹಿಂದೆ ಸರ್ಕಾರಿ ಸ್ವಾಮ್ಯದ ಒಂದು ಏಜೆನ್ಸಿಯವರೇ ಊರಿಗೆ ಬಂದು, ಚರಂಡಿಗಾಗಿ ರಸ್ತೆಗಳನ್ನು ಅಳತೆ ಮಾಡಿಕೊಂಡು ಹೋಗಿದ್ದಾರೆ. ಹಾಗೆ ಬಂದು ಹೋದವರು ಮತ್ತೆ ಊರ ಕಡೆ ಬಂದಿಲ್ಲ. ಚರಂಡಿ ನಿರ್ಮಿಸದೇ ಇರುವುದರಿಂದ ಜನತೆಗೆ ತೀವ್ರ ತೊಂದರೆ ಎದುರಾಗುತ್ತಿದೆ ಎಂದೂ ಅವರು ಬೇಸರ ವ್ಯಕ್ತಪಡಿಸುತ್ತಾರೆ.

ಪ್ರತಿ ವರ್ಷ ಪಂಚಾಯಿತಿಗೆ ಕೇವಲ ರೂ 5 ಲಕ್ಷ ಅನುದಾನ ಬಿಡುಗಡೆಯಾಗುತ್ತದೆ. ಇರುವ ಎಲ್ಲ ಏಳೂ ವಾರ್ಡ್‌ಗಳಿಗೆ ಕುಡಿಯುವ ನೀರು ಪೂರೈಕೆ, ಪೈಪ್‌ಲೈನ್ ದುರಸ್ತಿ, ಮೋಟರ್ ದುರಸ್ತಿ ಎಂಬಂತೆ ಹಣ ಖರ್ಚಾಗುತ್ತದೆ. ಚರಂಡಿ ನಿರ್ಮಿಸಲು ವಿಶೇಷ ಯೋಜನೆಗಳೇ ಬೇಕು ಎಂಬುದೂ ಅವರ ಅಭಿಪ್ರಾಯವಾಗಿದೆ.

ಸಾಂಕ್ರಾಮಿಕ ರೋಗ ಹರಡಲು ಕಾರಣವಾಗುವ ಸೊಳ್ಳೆಗಳ ಕಾಟ ವಿಪರೀತವಾಗಿ ಇರುವುದರಿಂದ ಇಲ್ಲಿ ದನಕರುಗಳಿಗೂ ಸೊಳ್ಳೆಪರದೆ ಹಾಕಿ ಮಲಗಿಸಲಾಗುತ್ತಿದೆ. ವಿದ್ಯುತ್ ಸಮಸ್ಯೆ ಇರುವುದರಿಂದ ಜನರು ಸುಖವಾಗಿ ನಿದ್ದೆ ಮಾಡಿದ ಉದಾಹರಣೆಗಳೇ ಇಲ್ಲ ಎಂದೂ ನೊಂದ ಜನ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT