ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಂಡಿ ನೀರಿನಿಂದ ಆವೃತವಾದ ‘ಕೊಂಕಲ್‌’

Last Updated 4 ಡಿಸೆಂಬರ್ 2013, 8:46 IST
ಅಕ್ಷರ ಗಾತ್ರ

ಯಾದಗಿರಿ: ಗ್ರಾಮದಲ್ಲಿ ರಸ್ತೆಗಳೇ ಸಿಗುವುದಿಲ್ಲ. ಎಲ್ಲಿ ನೋಡಿದರೂ, ಚರಂಡಿ ನೀರು ತುಂಬಿರುವ ರಸ್ತೆಗಳಲ್ಲಿ ಹೆಜ್ಜೆ ಇಡುವುದಕ್ಕೂ ಆಗದಂತಹ ಸ್ಥಿತಿ. ಗ್ರಾಮದ ಆಡಳಿತ ನಡೆಸುವ ಪಂಚಾ­ಯಿತಿ ಎದುರೇ ಇಂತಹ ದೃಶ್ಯ ನಿತ್ಯ ಕಾಣುವಂತಾಗಿದೆ. ಜನರ ಗೋಳು ಕೇಳುವವರೂ ಇಲ್ಲದಂತಾಗಿದೆ.

ಯಾದಗಿರಿ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಶಹಾಪುರ ತಾಲ್ಲೂಕಿನ ಕೊಂಕಲ್ ಗ್ರಾಮದ ಚಿತ್ರಣವಿದು. ಪಂಚಾಯಿತಿ ಕಚೇರಿ ಮುಂಭಾಗ­ದಲ್ಲಿಯೇ ಚರಂಡಿ ನೀರು ನಿಂತು ಸಣ್ಣ ಕೆರೆ ನಿರ್ಮಾಣವಾದಂತೆ ಭಾಸವಾ­ಗುತ್ತದೆ. ಸುತ್ತಲೂ ದುರ್ವಾಸನೆ ಬೀರುತ್ತಿದ್ದು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಚುನಾಯಿತ ಸದಸ್ಯರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸು­ವಂತಾಗಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಪಿಡಿಒ, ಕಾರ್ಯದರ್ಶಿಗಳು ಕೆಸರು ನೀರಿನಲ್ಲಿಯೇ ದಾಟಿಕೊಂಡು ಪಂಚಾಯಿತಿ ಕಟ್ಟಡವನ್ನು ಪ್ರವೇಶಿ­ಸುತ್ತಾರೆ. ಪ್ರತಿನಿಧಿಗಳೇ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ. ಸಭೆಗಳು ನಡೆದರೂ ಕಚೇರಿ ಮುಂಭಾಗದಲ್ಲಿ ದುರ್ವಾಸನೆಯನ್ನು ಸಹಿಸಿಕೊಳ್ಳಲು ಸಾಧ್ಯವಾಗದಂತಾಗಿದೆ. ನೀರು ಸರಾಗವಾಗಿ ಹರಿಯಲಿಕ್ಕೆ ಸೂಕ್ತ ಚರಂಡಿ ನಿರ್ಮಿಸಿಲ್ಲ ಎಂದು ಜನರು ದೂರುವಂತಾಗಿದೆ.

ಇದು ಕೇವಲ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಮಾತ್ರವಲ್ಲದೇ, ಪಂಚಾಯಿತಿ ಹಿಂಭಾಗ, ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ, ಸಾರ್ವಜನಿಕ ಗ್ರಂಥಾಲಯ ಮುಂಭಾಗ, ಮುಖ್ಯ ರಸ್ತೆ ಸೇರಿದಂತೆ ಗ್ರಾಮದ ಇನ್ನೂ ಅನೇಕ ಕಡೆಗಳಲ್ಲಿ ಚರಂಡಿಗಳ ನೀರು ನಿಂತು ದುರ್ವಾಸನೆ ಬೀರುತ್ತಿದೆ.

ಚರಂಡಿಗಳ ನೀರು ನಿಲ್ಲದಂತೆ ನೋಡಿಕೊಳ್ಳಿ. ಡೆಂಗೆ ಜ್ವರದಂತಹ ಸಾಂಕ್ರಾಮಿಕ ರೋಗಗಳು ಹಡದಂತೆ ಎಚ್ಚರಿಕೆ ವಹಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನ ಆಗುತ್ತಿಲ್ಲ.

ಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿದ್ದರಿಂದ ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಮಳೆ ಬಂದರೆ ಮಳೆ ನೀರು ಮತ್ತು ಚರಂಡಿಗಳ ನೀರು ಎಲ್ಲವೋ ಕಚೇರಿಗೆ ನುಗ್ಗಿದ ಘಟನೆಗಳು ಸಂಭವಿಸಿವೆ ಎನ್ನುತ್ತಾರೆ ಗ್ರಾಮಸ್ಥರು.

ಕೊಂಕಲ್ ಗ್ರಾಮ ಪಂಚಾಯಿತಿ 15 ಜನ ಸದಸ್ಯರನ್ನು ಹೊಂದಿದೆ. ಸುತ್ತ­ಮುತ್ತಲಿನ ಗ್ರಾಮಗಳಾದ ಗೊಂದೆ­ನೋರ್, ಚೆನ್ನೂರ, ಕೊಂಕಲ್, ಕುರಿ­ಯಾಳ, ಅನಸುಗೂರ ಹೀಗೆ ಹಲವು ಗ್ರಾಮಗಳು ಕೊಂಕಲ್ ಗ್ರಾಮ ಪಂಚಾ­ಯಿತಿ ವ್ಯಾಪ್ತಿಗೆ ಒಳಪಟ್ಟಿದೆ. ಗ್ರಾಮ ಪಂಚಾಯಿತಿ ಮುಂಭಾಗದಲ್ಲಿಯೇ ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಇನ್ನು ಇತರ ಗ್ರಾಮಗಳ ಸ್ಥಿತಿಯನ್ನು ಊಹಿಸಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮದ ಜನರು ಹೇಳುತ್ತಿದ್ದಾರೆ.

ಗ್ರಾಮೀಣ ಉದ್ಯೋಗ ಖಾತರಿ, ಗ್ರಾಮ ಸ್ವರಾಜ್, ಸುವರ್ಣ ಗ್ರಾಮೋ­ದಯ ಹೀಗೆ ಹತ್ತಾರು ಯೋಜನೆಗಳನ್ನು ರೂಪಿಸಿದ್ದು, ಮೂಲ ಸೌಕರ್ಯಗಳಾದ ಕುಡಿಯುವ ನೀರು, ಬೀದಿ ದೀಪಗಳ ವ್ಯವಸ್ಥೆ, ಚರಂಡಿಗಳ ನಿರ್ಮಾಣ, ಸಿಸಿ ರಸ್ತೆ ಹೀಗೆ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದು. ಆದರೆ ಈ ಗ್ರಾಮದಲ್ಲಿ ಈ ಎಲ್ಲ ಯೋಜನೆಗಳೂ ಅನುಷ್ಠಾನ ಆಗಿಯೇ ಇಲ್ಲ ಎನ್ನುವಂತೆ ಭಾಸವಾಗುತ್ತದೆ.

ಜಿಲ್ಲಾ ಕೇಂದ್ರ ಯಾದಗಿರಿ ಹಾಗೂ ತಾಲ್ಲೂಕು ಕೇಂದ್ರ ಶಹಾಪುರ ತಾಲ್ಲೂ­ಕಿ­ನಿಂದ ಸುಮಾರು 50 ಕಿ.ಮೀ. ದೂರವಿರುವ ಕೊಂಕಲ್‌ ಗ್ರಾಮಕ್ಕೆ ತಾಲ್ಲೂಕಿನ ಅಧಿಕಾರಿಗಳಾದ ತಹಶೀ­ಲ್ದಾರರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿದಂತೆ ಯಾವುದೇ ಇಲಾಖೆಯ ಅಧಿಕಾರಿಗಳು ಭೇಟಿ ನೀಡುತ್ತಿಲ್ಲ ಎಂದು ಗ್ರಾಮದ ಮಲ್ಲಯ್ಯ ದೂರುತ್ತಾರೆ.

ಗ್ರಾಮಗಳನ್ನು ಶುಚಿಯಾಗಿ­ಡು­ವುದು ಗ್ರಾಮ ಪಂಚಾಯಿತಿಗಳ ಕರ್ತವ್ಯ. ಇದಕ್ಕಾಗಿಯೇ ಪ್ರತಿ ವರ್ಷ ಲಕ್ಷಾಂತರ ಅನುದಾನವನ್ನು ಸರ್ಕಾರ ನೀಡುತ್ತದೆ. ಗ್ರಾಮ ಪಂಚಾಯಿತಿಗಳಿಗೆ ಯಾವುದೇ ಸೂಚನೆಗಳನ್ನು ಮೇಲಾಧಿ­ಕಾರಿಗಳು ನೀಡುತ್ತಿಲ್ಲ ಎಂದು ಆಪಾದಿಸುತ್ತಾರೆ.

ಯಾದಗಿರಿ ಮತಕ್ಷೇತ್ರದಿಂದ ಐದು ಬಾರಿ ಶಾಸಕರಾಗಿರುವ ಡಾ.ಎ.ಬಿ. ಮಾಲಕರಡ್ಡಿ ಅವರಾದರೂ, ಈ ಗ್ರಾಮದತ್ತ ಗಮನ ನೀಡಬೇಕು. ಈಗಲಾದರೂ ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರು ಕೊಂಕಲ್ ಗ್ರಾಮದ ಸ್ಥಿತಿ ಸುಧಾರಣೆ ಮುಂದಾಗ­ಬೇಕು. ಶಹಾಪುರ ತಾಲ್ಲೂಕಿನ ಅಧಿಕಾರಿಗಳು ಕೊಂಕಲ್ ಗ್ರಾಮಕ್ಕೆ    ಭೇಟಿ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT