ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಂಡಿ ಸಮಸ್ಯೆ: ನಗರಸಭೆಯ ನಿರ್ಲಕ್ಷ್ಯ

Last Updated 23 ಸೆಪ್ಟೆಂಬರ್ 2013, 9:59 IST
ಅಕ್ಷರ ಗಾತ್ರ

ಚಾಮರಾಜನಗರ: ಕಳೆದ ಐದಾರು ದಿನದ ಹಿಂದೆ ಮಳೆರಾಯನ ಆರ್ಭಟಕ್ಕೆ ಜಿಲ್ಲಾ ಕೇಂದ್ರದ ಕೊಳಚೆ ಪ್ರದೇಶದ ಬದುಕು ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಅಗತ್ಯವಿರುವೆಡೆ ಮಳೆನೀರು ಚರಂಡಿ ನಿರ್ಮಾಣದ ಕೊರತೆ ಹಾಗೂ ಹಾಲಿ ಇರುವ ಮಳೆನೀರು ಚರಂಡಿಯಲ್ಲಿ ಸಂಗ್ರಹ ಗೊಂಡಿರುವ ಹೂಳು ತೆಗೆಸಲು ನಗರಸಭೆ ಆಡಳಿತ ತಳೆದಿದ್ದ ನಿರ್ಲಕ್ಷ್ಯವೇ ಜನರು ಈ ಸಂಕಷ್ಟ ಅನುಭವಿಸಲು ಮೂಲ ಕಾರಣ ಎಂಬ ಸತ್ಯ ಈಗ ಬೆಳಕಿಗೆ ಬಂದಿದೆ. ಜತೆಗೆ, ಕೆಲವೆಡೆ ಚರಂಡಿ ಒತ್ತುವರಿ ಮಾಡಿಕೊಂಡಿದ್ದ ಪರಿಣಾಮ ಮಳೆನೀರು ಸರಾಗವಾಗಿ ಹರಿದು ಹೋಗಲಿಲ್ಲ. ಒತ್ತುವರಿ ತೆರವಿಗೆ ನಗರ ಸ್ಥಳೀಯ ಆಡಳಿತ ತಳೆದ ನಿರ್ಲಕ್ಷ್ಯ ಹಾಗೂ ಜನರ ಮನೋಧರ್ಮಕ್ಕೆ ಮಳೆರಾಯ ಪಾಠ ಕಲಿಸಿದ್ದಾನೆ.

ಜಿಲ್ಲಾಡಳಿತ ಭವನಕ್ಕೆ ಹೊಂದಿಕೊಂಡಂತೆ ಸಂತೇಮರಹಳ್ಳಿ ರಸ್ತೆಯತ್ತ ಕೊಳಚೆ ನೀರು ಹರಿದು ಹೋಗಲು ಮಳೆನೀರು ಚರಂಡಿ ನಿರ್ಮಿಸಲಾಗಿದೆ. ಹಲವೆಡೆಯಿಂದ ಈ ದೊಡ್ಡಚರಂಡಿಗೆ ಸಣ್ಣಪುಟ್ಟ ಚರಂಡಿಗಳಿಂದ ಸಂಪರ್ಕ ಕಲ್ಪಿಸಲಾಗಿದೆ. ಈ ಚರಂಡಿ­ಯಲ್ಲಿ ಸಾಕಷ್ಟು ಹೂಳು ತುಂಬಿಕೊಂಡಿತ್ತು. ಇದರ ಪರಿಣಾಮ ಬಿ. ರಾಚಯ್ಯ ಜೋಡಿರಸ್ತೆಯಲ್ಲಿ ಮಳೆ ನೀರು ನಿಂತು ವಾಹನ ಸವಾರರು ಪರದಾಡಿದರು.

ಕೆಲವರು ಮುನ್ನುಗ್ಗುವ ಭರದಲ್ಲಿ ಕೈಕಾಲಿಗೆ ಊನ ಮಾಡಿಕೊಂಡರು. ಕೊನೆಗೆ, ಫುಟ್‌ಪಾತ್‌ ಒಡೆದು ರಸ್ತೆಯಲ್ಲಿ ನಿಂತಿದ್ದ ನೀರು ಹೊರಹೋಗುವ ವ್ಯವಸ್ಥೆ ಮಾಡಲಾಯಿತು. ಜೋಡಿರಸ್ತೆ ಅಭಿವೃದ್ಧಿಯಾಗ ದಿರುವುದು ಕೂಡ ಈ ಅನಾಹುತಕ್ಕೆ ಕಾರಣ ಎಂಬುದು ನಾಗರಿಕರ ಆರೋಪ.

ಪ್ರಸ್ತುತ ರೂ. 1.50 ಕೋಟಿ ವೆಚ್ಚದಡಿ ಎಲ್‌ಐಸಿ ವೃತ್ತದ ಬಳಿ ನಗರೋತ್ಥನಾ ಯೋಜನೆಯಡಿ ಮಳೆನೀರು ಚರಂಡಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಪ್ರಾದೇಶಿಕ ಸಾರಿಗೆ ಕಚೇರಿ ಮುಂಭಾಗದಿಂದ ಡಾ.ಬಿ.ಆರ್‌. ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದವರೆಗೆ, ಕ್ರೀಡಾಂಗಣದಿಂದ ಎಲ್ಐಸಿ ಕಚೇರಿ– ಐಒಸಿ ಪೆಟ್ರೋಲ್ ಬಂಕ್‌ವರೆಗೆ, ವಾರ್ಡ್‌ ನಂ. 16ರ ಜೆಮ್ಸ್ ವೆಸ್ಲಿಯವರ ಮನೆಯಿಂದ ದೊಡ್ಡಮೋರಿವರೆಗೆ, ರೈಲ್ವೆ ಬಡಾವಣೆಯಿಂದ ಕೇಂದ್ರೀಯ ವಿದ್ಯಾಲಯದ ಶಾಲೆಯ ಮೂಲೆವರೆಗೆ ಮಳೆನೀರು ಚರಂಡಿ ನಿರ್ಮಿಸಲಾಗುತ್ತಿದೆ.

ರೈಲ್ವೆ ಬಡಾವಣೆ ಜನರು ಮಳೆಯಿಂದ ತತ್ತರಿಸಿದ್ದರು. ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ನೋವು ಅನುಭವಿಸಿದ್ದಾರೆ. ಈಗ ಮಳೆನೀರು ಚರಂಡಿ ನಿರ್ಮಿಸುತ್ತಿರುವುದು ಈ ಭಾಗದ ಜನರಲ್ಲಿ ಕೊಂಚ ಸಮಾಧಾನ ಮೂಡಿಸಿದೆ.

ನಗರಸಭೆ ವ್ಯಾಪ್ತಿ ಮಳೆಯಿಂದ ಸುಮಾರು ರೂ.3 ಕೋಟಿಗೂ ಹೆಚ್ಚು ಮೊತ್ತದ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಸ್ಥಳೀಯ ಸಂಸ್ಥೆಯಲ್ಲಿ ಪ್ರಕೃತಿ ವಿಕೋಪ ಎದುರಿಸುವಂತಹ ಸಂಪನ್ಮೂಲದ ಕೊರತೆಯಿದೆ. ಜತೆಗೆ, ಸಿಬ್ಬಂದಿಗೆ ಸೂಕ್ತ ತರಬೇತಿ ಇಲ್ಲ. ಹೀಗಾಗಿ, ಮಳೆ ನಿಂತು ವಾರ ಕಳೆದರೂ ಹಳಿತಪ್ಪಿದ ಜನರ ಬದುಕು ಇನ್ನೂ ಸರಿದಾರಿಗೆ ಬಂದಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ.

‘ನಗರಸಭೆ ಆಡಳಿತ ಅಗತ್ಯವಿರುವೆಡೆ ಮಳೆನೀರು ಚರಂಡಿ ನಿರ್ಮಿಸಿ, ಸಂಗ್ರಹಗೊಂಡಿದ್ದ ಹೂಳು ತೆಗೆದಿದ್ದರೆ ಮನೆಗಳಿಗೆ ನೀರು ನುಗ್ಗುವುದನ್ನು ತಡೆಯಬಹುದಿತ್ತು. ಜತೆಗೆ, ಕೆಲವೆಡೆ ತಗ್ಗುಪ್ರದೇಶದಲ್ಲಿ ಮನೆಗಳಿವೆ. ಅಂತಹ ಕುಟುಂಬಗಳನ್ನು ಸ್ಥಳಾಂತರಿಸಿ ಸೂರು ನಿರ್ಮಿಸಿಕೊಡಬೇಕು. ಇಲ್ಲವಾದರೆ ಮಳೆ ಬಂದಾಗ ಮತ್ತೆ ಸಮಸ್ಯೆ ತಲೆದೋರುತ್ತದೆ’ ಎಂದು ರಾಮಸಮುದ್ರದ ಸಂತ್ರಸ್ತ ಪ್ರಕಾಶ್‌ ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT