ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಕ ತತ್ವ ವಿರೋಧಿಸಿದ್ದ ಟ್ಯಾಗೋರ್

Last Updated 13 ಫೆಬ್ರುವರಿ 2011, 20:00 IST
ಅಕ್ಷರ ಗಾತ್ರ

ಬೆಂಗಳೂರು: ‘ಗಾಂಧೀಜಿಯವರ ಚರಕ ತತ್ವವನ್ನು ಟ್ಯಾಗೋರ್ ಬಹುವಾಗಿ ವಿರೋಧಿಸುತ್ತಿದ್ದರು. ಚರಕ ಸುತ್ತುವುದರಿಂದ ಯಾಂತ್ರಿಕತೆ ಹೆಚ್ಚುತ್ತದೆಯೇ ಹೊರತು ಬೌದ್ಧಿಕ ಚಿಂತನೆಗೆ ಅವಕಾಶವಿರುವುದಿಲ್ಲ ಎಂದು ಟ್ಯಾಗೋರ್ ನಂಬಿದ್ದರು’ ಎಂದು ವಿಮರ್ಶಕ ಪ್ರೊ. ಬಸವರಾಜ ಕಲ್ಗುಡಿ ತಿಳಿಸಿದರು.

ಸಮುದಾಯ ಸಂಘಟನೆ ‘ಪ್ರಜಾವಾಣಿ’ ಸಹಯೋಗದೊಂದಿಗೆ ‘ಟ್ಯಾಗೋರ್ 150 ಸಮುದಾಯ’ ರಾಷ್ಟ್ರೀಯ ಉತ್ಸವದ ಪ್ರಯುಕ್ತ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಟ್ಯಾಗೋರ್ ಮತ್ತು ಗಾಂಧಿ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಟ್ಯಾಗೋರ್ ನೈತಿಕ ನಡಾವಳಿಗಳನ್ನು ಆಧ್ಯಾತ್ಮಿಕ ಚೌಕಟ್ಟಿನಲ್ಲಿ ಕಂಡುಕೊಂಡವರು. ಅವರ ಕವಿತೆಗಳಲ್ಲಿ ನೈತಿಕ ನಡಾವಳಿಗಳು ಆಧ್ಮಾತ್ಮಿಕ ಬೆಳವಣಿಗೆಯ ಅಭಿವ್ಯಕ್ತಿಯಾಗಿ ಹೊರಹೊಮ್ಮುತ್ತದೆ’ ಎಂದರು.

‘ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧೀಜಿ ಸ್ವರಾಜ್ಯ ಪಡೆಯಬೇಕೆಂಬ ಧ್ಯೇಯವಿದ್ದರೆ, ಟ್ಯಾಗೋರ್ ಆಧ್ಯಾತ್ಮಿಕ ಪಯಣವೇ ಮುಖ್ಯ ಎಂದು ತಮ್ಮ ಕವಿತೆಗಳಲ್ಲಿ ಬಿಂಬಿಸುತ್ತಿದ್ದರು. ಗಾಂಧೀಜಿ ಸನಾತನ ಹಿಂದೂ ಮೌಲ್ಯವನ್ನು ಆಧುನಿಕರಣಗೊಳಿಸಲು ಹೊರಟರೆ, ಟ್ಯಾಗೋರ್ ಸನಾತನ ಅನುಭಾವಿಕ ಮೌಲ್ಯಗಳಿಗೆ ನವೀನತೆ ನೀಡಲು ಪ್ರಯತ್ನಿಸಿದರು’ ಎಂದರು.

ಹಿರಿಯ ಪತ್ರಕರ್ತ ಎಂ.ಕೆ.ಭಾಸ್ಕರ್‌ರಾವ್ ಮಾತನಾಡಿ, ‘ಗಾಂಧೀಜಿ ಬೋಳು ತಲೆ, ಬರಿಮೈ ದಾಸನಾದರೆ, ಟ್ಯಾಗೋರ್ ಉಣ್ಣೆ ನಿಲುವಂಗಿಯ ಗಡ್ಡಧಾರಿ. ಗಾಂಧೀಜಿ ಪ್ರಪಂಚ ಸುತ್ತುವ ಜಂಗಮ, ಟ್ಯಾಗೋರ್ ಅಂತರಂಗ ಪ್ರಯಾಣಕ್ಕೆ ಮನ್ನಣೆ ಕೊಟ್ಟ ಸ್ಥಾವರವಿದ್ದಂತೆ’ ಎಂದು ಅಭಿಪ್ರಾಯಪಟ್ಟರು.

‘ಇಬ್ಬರ ನಡುವೆ ಚಿಂತನೆಗಳಲ್ಲಿ ಭಿನ್ನಾಭಿಪ್ರಾಯವಿದ್ದರೂ ಟ್ಯಾಗೋರ್ ಗಾಂಧೀಜಿಗೆ ಬರೆದ ಪತ್ರಗಳಲ್ಲಿ ಮಹಾತ್ಮನೆಂದೇ ಕರೆಯುತ್ತಿದ್ದರು. ಅಂತೆಯೇ ಗಾಂಧೀಜಿ, ಟ್ಯಾಗೋರ್ ಅವರನ್ನು ಗುರುದೇವ್ ಎಂದೇ ಬೋಧಿಸುತ್ತಿದ್ದರು’ ಎಂದು ಅವರು ತಿಳಿಸಿದರು.

ಮೈಸೂರು ರಂಗಾಯಣ ನಿರ್ದೇಶಕ ಪ್ರೊ.ಲಿಂಗದೇವರು ಹಳೆಮನೆ ಮಾತನಾಡಿ, ‘ಗಾಂಧೀಜಿ ಟ್ಯಾಗೋರ್ ಅವರ ‘ಶಾಂತಿನಿಕೇತನ’ ಬಗ್ಗೆ ಆಕರ್ಷಿತರಾಗಿದ್ದರು. ಗಾಂಧಿ ರಾಜಕೀಯ ಕ್ಷೇತ್ರದಲ್ಲಿ ಮುನ್ನಡೆದರೆ, ಟ್ಯಾಗೋರ್ ಸಾಹಿತ್ಯ ಕ್ಷೇತ್ರದಲ್ಲಿ ಅಸ್ತಿತ್ವ ಪಡೆದುಕೊಂಡರು. ಎರಡೂ ವಿಭಿನ್ನ ದೈತ್ಯ ಪ್ರತಿಭೆಯನ್ನು ಹೋಲಿಸುವುದು ಬಹಳ ಕಷ್ಟ’ ಎಂದರು.

ಪಶ್ಚಿಮ ಬಂಗಾಳದ ಮಹಿಳಾ ಆಯೋಗದ ಅಧ್ಯಕ್ಷೆ ಪ್ರೊ.ಮಾಲಿನಿ ಭಟ್ಟಾಚಾರ್ಯ, ಉಪನ್ಯಾಸಕ ಡಾ.ರವಿಕುಮಾರ್ ಬಾಗಿ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT