ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ ಬಳಿಕವೇ `ಐತೀರ್ಪು' ಪ್ರಕಟಣೆಗೆ ಶೆಟ್ಟರ್ ಒತ್ತಾಯ

Last Updated 27 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ಒಳಗೊಂಡಂತೆ ಕಾವೇರಿ ನದಿ ಪಾತ್ರದ ಎಲ್ಲ ರಾಜ್ಯಗಳ ಜತೆ ಸಮಾಲೋಚನೆ ನಡೆಸಿದ ಬಳಿಕವಷ್ಟೇ ನ್ಯಾಯಮಂಡಳಿ `ಐತೀರ್ಪು' ಅಧಿಸೂಚನೆ ಹೊರಡಿಸುವ ಕುರಿತು ತೀರ್ಮಾನ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಗುರುವಾರ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಪ್ರಧಾನಿ ಮನಮೋಹನ್‌ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ `ರಾಷ್ಟ್ರೀಯ ಅಭಿವೃದ್ಧಿ ಮಂಡಳಿ' (ಎನ್‌ಡಿಸಿ) ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ, ಕಾವೇರಿ ನ್ಯಾಯಮಂಡಳಿ ಐತೀರ್ಪು ಪ್ರಶ್ನಿಸಿ ಕರ್ನಾಟಕ ಮತ್ತಿತರ ರಾಜ್ಯಗಳು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಮೇಲ್ಮನವಿಗಳು ವಿಚಾರಣೆ ಹಂತದಲ್ಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಮಾಡುವ ಮೊದಲು ರಾಜ್ಯಗಳ ಜತೆ ಚರ್ಚಿಸಬೇಕೆಂದು ಒತ್ತಾಯಿಸಿದ್ದಾರೆ.

ಕಾವೇರಿ ನ್ಯಾಯಮಂಡಳಿ ಐತೀರ್ಪು ಪ್ರಕಟಣೆಗೆ ಮುನ್ನ ಸಂಬಂಧಪಟ್ಟ ರಾಜ್ಯಗಳ ಜತೆ ಸಮಾಲೋಚನೆ ನಡೆಸುವಂತೆ ಪ್ರಧಾನ ಮಂತ್ರಿ ಮನಮೋಹನ್‌ಸಿಂಗ್ ಅವರಿಗೆ ಪತ್ರ ಬರೆಯಲಾಗಿದೆ ಎಂದು ಶೆಟ್ಟರ್ ತಿಳಿಸಿದ್ದಾರೆ.

ರಾಜ್ಯದ ನೀರಾವರಿ ಯೋಜನೆಗಳ ಪ್ರಗತಿ ಕುರಿತು ಪ್ರಸ್ತಾಪಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಕಾವೇರಿ ವಿವಾದವನ್ನು ಉಲ್ಲೇಖಿಸಿದ್ದಾರೆ. ಕರ್ನಾಟಕ `2011- 2020' ಅವಧಿಯನ್ನು `ನೀರಾವರಿ ಯೋಜನೆಗಳ ವರ್ಷ' ಎಂದು ಪ್ರಕಟಿಸಿದೆ. ಕಳೆದ ಮೂರು ವರ್ಷಗಳಲ್ಲಿ ಬಾಕಿ ಉಳಿದಿದ್ದ 14 ಯೋಜನೆಗಳನ್ನು ಪೂರ್ಣಗೊಳಿಸಿದೆ. 12ನೇ ಯೋಜನೆಯಲ್ಲಿ ನೀರಾವರಿ ಯೋಜನೆಗಳನ್ನು ಆದ್ಯತೆ ಮೇಲೆ ಪೂರ್ಣಗೊಳಿಸುವ ಕೇಂದ್ರದ ಆಶಯಗಳಿಗೆ ರಾಜ್ಯ ಬೆಂಬಲವಾಗಿ ನಿಲ್ಲಲಿದೆ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.

ನಮ್ಮ ಪ್ರಗತಿ ಕೇವಲ ಆರ್ಥಿಕ ದರ ವೃದ್ಧಿ (ಜಿಡಿಪಿ) ಗೆ ಮಾತ್ರ ಸೀಮಿತವಾಗಬಾರದು. ಒಟ್ಟಾರೆ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು.ರಾಜ್ಯ 11ನೇ ಯೋಜನೆಯಲ್ಲಿ ಗಣನೀಯ ಅಂದರೆ ಶೇ.8.0ರಷ್ಟು ಪ್ರಗತಿ ದಾಖಲಿಸಿದೆ. ಈಗಾಗಲೇ 12ನೇ ಯೋಜನೆ ಗೊತ್ತು- ಗುರಿ ಕುರಿತು ದೂರದೃಷ್ಟಿ ದಾಖಲೆ ಸಿದ್ಧಪಡಿಸಿದೆ ಎಂದು ವಿವರಿಸಿದ್ದಾರೆ.

ರಾಜ್ಯ 11ನೇ ಯೋಜನೆಯಲ್ಲಿ ಕೃಷಿಯಲ್ಲಿ ಶೇ.5.7ರಷ್ಟು ಪ್ರಗತಿ ಸಾಧಿಸಿದೆ. 2010ರಲ್ಲಿ ಅತ್ಯಂತ ಹೆಚ್ಚು ಅಂದರೆ 139ಲಕ್ಷ ಟನ್ ಆಹಾರ ಧಾನ್ಯ ಉತ್ಪಾದನೆ ಮಾಡಿದೆ. ಇದು ಭೂ ಚೇತನ, ಕೃಷಿಪರ ಬಜೆಟ್ ಮಂಡನೆ, ಕೃಷಿ ವಹಿವಾಟು ಉತ್ತೇಜನ ಹಾಗೂ ಜಾಗತಿಕ ಕೃಷಿ ಹೂಡಿಕೆದಾರರ ಮೇಳದಿಂದ ಸಾಧ್ಯವಾಗಿದೆ. 12ನೇ ಯೋಜನೆಗೆ 143ಲಕ್ಷ ಟನ್ ಆಹಾರಧಾನ್ಯ ಉತ್ಪಾದನೆ ಗುರಿ ಹೊಂದಲಾಗಿದೆ ಎಂದು ಜಗದೀಶ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.

ರೇಷ್ಮೆ ಮೇಲಿನ ಆಮದು ಸುಂಕವನ್ನು ಶೇ. 30ರಿಂದ 5ಕ್ಕೆ ಇಳಿಸಿರುವುದರಿಂದ ರೇಷ್ಮೆ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಕ್ಕಿದ್ದಾರೆ. ರಾಜ್ಯ ಸರ್ಕಾರ ಹಲವು ಸಲ ಸಮಸ್ಯೆಯನ್ನು ಕೇಂದ್ರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ರೇಷ್ಮೆ ಆಮದು ಸುಂಕವನ್ನು ತಕ್ಷಣ ಮೊದಲಿನಂತೆ ಶೇ.30ಕ್ಕೆ ಹೆಚ್ಚಳ ಮಾಡಬೇಕು ಎಂದು ಮುಖ್ಯಮಂತ್ರಿ ಒತ್ತಾಯಿಸಿದ್ದಾರೆ.

ಪ್ರಾದೇಶಿಕ ಅಸಮಾನತೆ ನಿವಾರಣೆಯಾದರೆ ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಹೈದರಾಬಾದ್- ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 371 (ಜೆ) ತಿದ್ದುಪಡಿಯಿಂದ ಆರು ಜಿಲ್ಲೆಗಳ ಅಭಿವೃದ್ಧಿ ಆಗಲಿದೆ ಎಂದು ಶೆಟ್ಟರ್ ಅಭಿಪ್ರಾಯಪಟ್ಟಿದ್ದಾರೆ. ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿ ಯೋಜನೆಯಡಿ ನೀಡುತ್ತಿರುವ ನೆರವನ್ನು ಇನ್ನು ಮೂರು ಜಿಲ್ಲೆಗಳಿಗೆ ವಿಸ್ತರಿಸಬೇಕು ಎಂದು ಮನವಿ ಮಾಡಿದ್ದಾರೆ.

`ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ' (ಪಿಎಂಜಿಎಸ್‌ವೈ) ಅಡಿ ರಾಜ್ಯದಲ್ಲಿ ಸುಮಾರು 20ಸಾವಿರ ಕಿ.ಮೀ. ರಸ್ತೆ ಮೇಲ್ದರ್ಜೆಗೆ ಏರಬೇಕಾಗಿದೆ. ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ದೊರೆಯುತ್ತಿರುವ ಅನುದಾನವನ್ನು ಕನಿಷ್ಠ ಶೇ.75ಕ್ಕೆ ಹೆಚ್ಚಳ ಮಾಡಬೇಕು. ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ನೀಡುತ್ತಿರುವ ಅನುದಾನವನ್ನು 651 ಕೋಟಿಯಿಂದ ಸಾವಿರ ಕೋಟಿಗೆ ಏರಿಸಬೇಕು. ಬರಗಾಲ ಮತ್ತು ಪ್ರವಾಹದಂಥ ಪರಿಸ್ಥಿತಿ ನಿಭಾಯಿಸಲು ನೀಡುತ್ತಿರುವ ನೆರವು ಪ್ರಮಾಣ ಹೆಚ್ಚಬೇಕೆಂದು ಮುಖ್ಯಮಂತ್ರಿ ಹೇಳಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT