ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ : ಮನೋರಮೆಯರ ತಲ್ಲಣಗಳು

Last Updated 7 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಗೃಹಿಣಿಯರು ಎಂದರೆ ನಾಲ್ಕು ಗೋಡೆಗಳ ಮಧ್ಯೆ ಮನೆ ಕೆಲಸಗಳನ್ನು ಮಾಡಿಕೊಂಡು ಹೇಗೆಂದರೆ ಹಾಗೆ ಇದ್ದುಬಿಡುವವರು ಎಂದರ್ಥವೇ?         
   
ಇತ್ತೀಚೆಗೆ ದೂರದರ್ಶನದ ಕಾರ್ಯಕ್ರಮವೊಂದರಲ್ಲಿ 12 ವರ್ಷದ ಹುಡುಗ, `ನಮ್ಮಮ್ಮ ಬರೀ ಹೌಸ್ ವೈಫ್, ಅವರು ಮನೆಯಲ್ಲೇ ಇರುತ್ತಾರೆ, ಅವರಿಗೆ ಹೊರಗಿನ ಪ್ರಪಂಚದ ಬಗ್ಗೆ ಏನೂ ಗೊತ್ತಾಗೋಲ್ಲ' ಎಂದ.

15 ವರ್ಷದ ನನ್ನ ಮಗನಿಗೆ ಸ್ವಾವಲಂಬಿ ಆಗಬೇಕೆಂದು ಬುದ್ಧಿ ಹೇಳುತ್ತಾ `ನಿನ್ನ ಶೂಗಳನ್ನು ನೀನೇ ತೊಳೆದುಕೊಳ್ಳಲು ಕಲಿ' ಎಂದದ್ದಕ್ಕೆ, `ನೀನು ಹೌಸ್‌ವೈಫ್ ತಾನೇ. ನಿನಗೆ ಮನೆಯಲ್ಲಿ ಇನ್ನೇನು ಕೆಲಸ? ನೀನೇ ತೊಳೆದುಬಿಡು' ಎಂದು ಉತ್ತರ ಕೊಟ್ಟ.

`ಹೌಸ್ ವೈಫ್' ಕುರಿತ ಈ ಬಗೆಯ ವಿಶ್ಲೇಷಣೆ ಇಲ್ಲಿಗೇ ಮುಗಿಯುವುದಿಲ್ಲ...
ಸಾಮಾನ್ಯವಾಗಿ ಹೆಂಗಸರು ಹೊರಗೆ ಹೋದಾಗೆಲ್ಲ ತಪ್ಪದೇ ಎದುರಾಗುವ ಪ್ರಶ್ನೆ ಎಂದರೆ, `ನೀವು ವರ್ಕಿಂಗಾ/ ಹೌಸ್‌ವೈಫಾ?'. ಆದರೆ ನಾನು ಹೋಗುವ ಕಡೆಯೆಲ್ಲ ಯಾರೇ ಹೊಸಬರು ಸಿಕ್ಕಿದರೂ, `ನೀವು ವರ್ಕಿಂಗಾ?' ಎಂದೇ ಪ್ರಶ್ನಿಸುತ್ತಾರೆ. ಇಲ್ಲಿಯವರೆಗೆ ಯಾರೊಬ್ಬರೂ `ನೀವು  ಹೌಸ್‌ವೈಫಾ' ಎಂದು ಕೇಳಿದ್ದೇ ಇಲ್ಲ.

ಜನ ನನ್ನನ್ನು ಹೀಗೆ ತಿಳಿದುಕೊಳ್ಳಲು ಕಾರಣ ಏನಿರಬಹುದು ಎಂದು ನಾನು ಅನೇಕ ಬಾರಿ ಯೋಚಿಸಿದ್ದುಂಟು. ಬಹಳ ಆತ್ಮಾವಲೋಕನ ಮಾಡಿಕೊಂಡ ನಂತರ ನನಗೆ ಹೊಳೆದದ್ದು, ಯಾವುದೇ ಮಹಿಳೆ ಬಾಹ್ಯನೋಟಕ್ಕೆ ಸ್ವಲ್ಪ ಫ್ಯಾಷನಬಲ್ ಆಗಿ ಕಂಡರೂ ಜನ `ನೀವು ವರ್ಕಿಂಗಾ?' ಎಂದೇ ಕೇಳುತ್ತಾರೆ ಎಂಬುದು ನನಗೆ ಅರ್ಥವಾಯಿತು.

ನಾನು ಈಗಿನ ಪ್ರಪಂಚ ನಡೆಯುತ್ತಿರುವ ದಾರಿಯ ಬಗ್ಗೆ, ಹೆಣ್ಣು ಯಾವ ಕ್ಷೇತ್ರದಲ್ಲೂ ಯಾರಿಗೇನೂ ಕಡಿಮೆಯಿಲ್ಲ ಎಂಬಂತಹ ವಿಷಯಗಳ ಬಗ್ಗೆ ಆಳವಾಗಿ ಮಾತನಾಡುವುದನ್ನು ಕೇಳಿ ನನ್ನ ವಾದಗಳನ್ನು ಒಪ್ಪಿಕೊಳ್ಳುವವರು ಸಹ ಕೂಡಲೇ `ನೀವು ವರ್ಕಿಂಗಾ?' ಎಂದು ಕೇಳುತ್ತಾರೆ. ಅರೆ! ಈ ವಿಷಯಗಳು ಕೆಲಸ ಮಾಡುವ ಮಹಿಳೆಯರಿಗಷ್ಟೇ ಗೊತ್ತಿರಬೇಕೇ?, ಗೃಹಿಣಿಯರಿಗೆ ಇಂತಹ ವಿಷಯಗಳ ಬಗ್ಗೆ ಆಳವಾಗಿ ಯೋಚಿಸುವ ಮತ್ತು ವಾದ ಮಂಡಿಸುವ ಸಾಮರ್ಥ್ಯ ಇರುವುದಿಲ್ಲವೇ ಎನಿಸಿ ನನಗೆ ಅಚ್ಚರಿಯಾಗುತ್ತದೆ.

ಅಂತಿಮವಾಗಿ ಇದರಿಂದ ತಿಳಿದುಬರುವ ಅಂಶವೆಂದರೆ, ಗೃಹಿಣಿ ಎಂದರೆ ಕಿಂಚಿತ್ ಪ್ರಾಪಂಚಿಕ ಜ್ಞಾನವೂ ಇಲ್ಲದೆ, ನಾಲ್ಕು ಗೋಡೆಗಳ ಮಧ್ಯೆ ಅಡುಗೆ, ಕಸ ಮುಸುರೆ ಮಾಡಿಕೊಂಡು ಇರುವವಳು, ತನ್ನ ಬಾಹ್ಯ ಸೌಂದರ್ಯವನ್ನೂ ಕಡೆಗಣಿಸಿ ಹೇಗೆಂದರೆ ಹಾಗೆ ಇರುವವಳು ಎಂದೇ ನಮ್ಮ ಸಮಾಜ ತೀರ್ಮಾನಿಸಿ ಬಿಟ್ಟಂತಿದೆ!

ಸಂಸಾರದೊಳಗಿನ ದೊಂಬರಾಟ
ಸಮಯಕ್ಕೆ ಸರಿಯಾಗಿ ಗಂಡ- ಮಕ್ಕಳ ಹೊಟ್ಟೆ ತಣಿಸಿ ಕಚೇರಿ- ಶಾಲೆಗೆ ಕಳುಹಿಸುವುದು, ಅವರೆಲ್ಲ ಹಿಗ್ಗಾಮುಗ್ಗಾ ಚೆಲ್ಲಾಡಿಹೋದ ಸಾಮಾನುಗಳನ್ನೆಲ್ಲ ಜೋಡಿಸಿ ಇಡುವುದು, ಅಡುಗೆ ಮಾಡುವುದು, ಬಿಲ್‌ಗಳನ್ನು ಪಾವತಿಸುವುದು, ಮನೆ ಮಂದಿಯ ಆರೋಗ್ಯದ ಕಾಳಜಿ ವಹಿಸುತ್ತಲೇ ಅವರ ಬೇಕುಬೇಡಗಳಿಗೆ ಸ್ಪಂದಿಸುವುದು... ಇವಿಷ್ಟೇ ಗೃಹಿಣಿಯ ಚಾಕರಿ ಎಂದರ್ಥವೇ?

ಇವುಗಳಲ್ಲಿ ಬಹುತೇಕ ಕಾರ್ಯಗಳನ್ನು ಹಣ ತೆತ್ತು ಆಳುಕಾಳುಗಳಿಂದಲೇ ಮಾಡಿಸಿಕೊಳ್ಳಬಹುದು. ಆದರೆ ಗೃಹಲಕ್ಷ್ಮಿ ತೋರುವ ಪ್ರೀತಿ, ಸೌಹಾರ್ದ, ಆಪ್ತತೆ, ತ್ಯಾಗ ಮನೋಭಾವವನ್ನು ಎಷ್ಟೇ ಹಣ ಸುರಿದರೂ ಬೇರೊಬ್ಬರು ತೋರಲಾರರು. ಅವಳ ಆಸೆ-ಆಕಾಂಕ್ಷೆಗಳು ಬಹುತೇಕ ಬಾರಿ ಸಂಸಾರದ ನೊಗದೊಳಗೇ ಗತಿಸಿಬಿಟ್ಟಿರುತ್ತವೆ. ಏಕೆಂದರೆ ಆಕೆ ತನ್ನ ತನವನ್ನು ಸಂಪೂರ್ಣವಾಗಿ ಮನೆ ಮಂದಿಯ ಕೈಗೆ ಕೊಟ್ಟಿರುತ್ತಾಳೆ.

ಗಂಡ ತನ್ನ ಮಡದಿಯನ್ನು, ಮಕ್ಕಳು ತಾಯಿಯನ್ನು, ಆಕೆಯ ವ್ಯಕ್ತಿತ್ವವನ್ನು ಪ್ರೀತಿಸಿ ಗೌರವಿಸದಿದ್ದರೆ, ಅವಳು ತನ್ನೆಲ್ಲ ಭಾವನೆಗಳನ್ನೂ ಕೊಂದುಕೊಂಡು ಬದುಕಬೇಕಾಗುತ್ತದೆ.ಸಂಸಾರದ ಸುಖ, ಶಾಂತಿ, ನೆಮ್ಮದಿಗಾಗಿ ತಮ್ಮ ವ್ಯಕ್ತಿತ್ವವನ್ನು ಬಲಿಕೊಡಲು ಹಿಂಜರಿಯದ ಇಂತಹ ಮನೋರಮೆಯರ ತಲ್ಲಣಗಳು ಕಿಂಚಿತ್ತಾದರೂ ಮನೆಮಂದಿಗೆ ಅರಿವಾದರೆ ಅವರ ಜೀವನ ಸಾರ್ಥಕವಾದೀತು !

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT