ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚ್‌ಗಳಲ್ಲಿ ಕನ್ನಡ ಕಡೆಗಣನೆ: ಪ್ರತಿಭಟನೆ

Last Updated 2 ಡಿಸೆಂಬರ್ 2012, 20:54 IST
ಅಕ್ಷರ ಗಾತ್ರ

ಬೆಂಗಳೂರು: ರಾಜಾಜಿನಗರದ ಡಾ.ರಾಜ್‌ಕುಮಾರ್ ರಸ್ತೆಯ ಸೇಂಟ್ ತೆರೆಸಾ ಆಸ್ಪತ್ರೆಯ ಆವರಣದಲ್ಲಿರುವ ಚರ್ಚ್‌ಗಳಲ್ಲಿ ಕೊಂಕಣಿ ಭಾಷೆಯಲ್ಲಿ ಪ್ರಾರ್ಥನೆ ನಡೆಸುವ ಮೂಲಕ ಕನ್ನಡವನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘದ ಸದಸ್ಯರು ಚರ್ಚ್ ಎದುರು ಭಾನುವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ರಫಾಯಲ್ ರಾಜ್, `ಸೇಂಟ್ ತೆರೆಸಾ ಆಸ್ಪತ್ರೆಯ ಆವರಣದಲ್ಲಿ ಮೂರು ಚರ್ಚ್‌ಗಳಿದ್ದು, ಇವುಗಳಲ್ಲಿ ಗೋವಾ ಮಾದರಿಯಲ್ಲಿ ಪೂಜಾ ವಿಧಾನ ಮತ್ತು ಕೊಂಕಣಿ ಭಾಷೆಯಲ್ಲಿ ಪ್ರಾರ್ಥನೆ ನಡೆಸಲಾಗುತ್ತಿದೆ. ಈ ಮೂಲಕ ಚರ್ಚ್‌ಗಳ ಮುಖ್ಯಸ್ಥರು ಕನ್ನಡ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ' ಎಂದು ಆರೋಪಿಸಿದರು.

`ಬೆಂಗಳೂರಿನ ಕ್ಯಾಥೋಲಿಕ್ ಮುಖ್ಯ ಧರ್ಮಗುರುಗಳ ಗಮನಕ್ಕೆ ತರದೇ ಕನ್ನಡ ಬಿಟ್ಟು, ಬೇರೆ ಭಾಷೆಯಲ್ಲಿ ಪ್ರಾರ್ಥನೆ ನಡೆಸುವಂತಿಲ್ಲ. ಪೂಜಾ ವಿಧಾನವನ್ನು ಬದಲಾವಣೆ ಮಾಡುವ ಮುನ್ನವೂ ಧರ್ಮಗುರುಗಳ ಗಮನಕ್ಕೆ ತರಬೇಕು. ಆದರೆ, ಈ ಚರ್ಚ್‌ಗಳಲ್ಲಿ ಈ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಮುಂದಿನ ದಿನಗಳಲ್ಲಿ ಚರ್ಚ್‌ನ ಮುಖ್ಯಸ್ಥರು ಕನ್ನಡ ವಿರೋಧಿ ನೀತಿಯನ್ನು ಕೈಬಿಡದೇ ಹೋದರೆ, ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು' ಎಂದು ಅವರು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT