ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಮ ವಾದ್ಯ- ಸಂಶೋಧನಾ ಕೇಂದ್ರಕ್ಕೆ ಆಗ್ರಹ

Last Updated 14 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಕೆಳವರ್ಗಕ್ಕೆ ಮಾತ್ರ ಸೀಮಿತವಾಗಿರುವ ಚರ್ಮ ವಾದ್ಯದಂತಹ ಜನಪದ ಕಲೆಯ ಕುರಿತು ಆಳವಾಗಿ ಅಧ್ಯಯನ ನಡೆಸಲು ಜಾನಪದ ಅಕಾಡೆಮಿಯಲ್ಲಿ ಸಂಶೋಧನಾ ಕೇಂದ್ರವನ್ನು ತೆರೆಯಬೇಕು~ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ ಒತ್ತಾಯಿಸಿದರು.

ಕರ್ನಾಟಕ ಜಾನಪದ ಸಂಗೀತ ಕಲಾ ಪರಿಷತ್ ಕನ್ನಡ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2ನೇ ಅಖಿಲ ಕರ್ನಾಟಕ ಚರ್ಮ ವಾದ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

`ಅರಸರ ಪದ್ದತಿ ಇದ್ದಾಗಿನಿಂದಲೂ ವೀಣೆ, ಕೊಳಲು, ತಬಲ, ಮೃದಂಗದಂತಹ ಶಾಸ್ತ್ರೀಯ ವಾದ್ಯಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿತ್ತು. ಆದರೆ ಈ ಚರ್ಮ ವಾದ್ಯಗಳನ್ನು ನುಡಿಸುವ ಕಲಾವಿದರನ್ನು ಕೇವಲ ಅರಮನೆ, ಕೋಟೆಯ ಮುಂದಿನ ಬಾಗಿಲಿಗೆ ಮೀಸಲು ಮಾಡಲಾಗಿತ್ತು. ಜಾತಿ  ಮತ್ತು ಅಂತಸ್ತಿನ ತಾರತಮ್ಯದಿಂದಲೇ ಚರ್ಮವಾದ್ಯದಂತಹ ಅದ್ಭುತ ಕಲೆ ನಶಿಸುತ್ತಿದೆ~ ಎಂದು ವಿಷಾದಿಸಿದರು.

`ಚರ್ಮವಾದ್ಯದ ಕಲೆಯು ಉಳಿದಿರುವುದು ಕೇವಲ ಕೆಳವರ್ಗದ ಜನಾಂಗದಲ್ಲಿ. ಹಾಗಾಗಿ ಇವರಿಗೆ ಸೂಕ್ತ ಪ್ರೋತ್ಸಾಹ ನೀಡುವಲ್ಲಿ ಸರ್ಕಾರ ಇನ್ನಷ್ಟು ಯೋಜನೆಗಳನ್ನು ರೂಪಿಸಬೇಕು. ಇದರೊಂದಿಗೆ ಸರ್ಕಾರ ಜನಪದ ಕಲಾವಿದರಿಗೆ ಹೆಚ್ಚಿನ ಅನುದಾನ ನೀಡಬೇಕು~ ಎಂದು ಆಗ್ರಹಿಸಿದರು.

ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ.ಮಲ್ಲೇಪುರಂ ಜಿ.ವೆಂಕಟೇಶ್, `ಚರ್ಮವಾದ್ಯ ಮತ್ತು ಸಾಮಾಜಿಕ ವ್ಯವಸ್ಥೆ ಒಂದಕ್ಕೊಂದು ಸಂಬಂಧವನ್ನು ಹೊಂದಿದೆ. ಹಾಗಾಗಿ ಚರ್ಮವಾದ್ಯ ಕಲೆಯನ್ನು ಅಭಿವೃದ್ಧಪಡಿಸುವತ್ತ ಕಲಾವಿದರ ಸಮೂಹ ಮುಂದೆ ಬರಬೇಕು~ ಎಂದು ಸಲಹೆ ನೀಡಿದರು.

`ರಾಜ್ಯದಲ್ಲಿರುವ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅನೇಕ ವಿಚಾರಗಳ ಕುರಿತು ಮಹಾಪ್ರಬಂಧವನ್ನು ಮಂಡಿಸಲಾಗುತ್ತಿದೆ. ಆದರೆ ಚರ್ಮವಾದ್ಯದ ಬಗ್ಗೆ ಪಿಎಚ್.ಡಿಗಳನ್ನು ಮಂಡಿಸುವ ಮೂಲಕ ವಿಶ್ವವಿದ್ಯಾಲಯದ ಮಟ್ಟದಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು~ ಎಂದು ತಿಳಿಸಿದರು.

ಸಮ್ಮೇಳನದ ಅಂಗವಾಗಿ ಕಲಾವಿದರು ಕರಡಿಮಜಲು, ಸಂಬಾಳ ವದನ, ಚೌಡಿಕೆ ವಾದನ, ಕಂಜರಿ ವಾದನ, ತಮಟೆ, ನಗಾರಿ, ಬುಡುಬುಡಿಕೆ ವಾದನ ಸೇರಿದಂತೆ ವಿವಿಧ ಜಾನಪದ ಕಲೆಗಳನ್ನು ಪ್ರದರ್ಶಿಸಿದರು.

ಏಕತ ಚಾರಿಟಬಲ್ ಟ್ರಸ್ಟ್‌ನ ಶಿವಕುಮಾರ ಸ್ವಾಮಿ ನಾಶಿಮಠ, ಜಿ.ಕೆ. ಸಮೂಹ ಸಂಸ್ಥೆಯ ಎಂ.ಕೃಷ್ಣಾರೆಡ್ಡಿ, ಆರ್‌ಪಿಐ ಮುಖಂಡ ಎಂ.ವೆಂಕಟಸ್ವಾಮಿ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಆರ್. ಮೋಹನ್‌ರಾಜ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT