ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಲನಚಿತ್ರ ವೀಕ್ಷಣೆ: ಮಕ್ಕಳಿಗೆ ಬಲವಂತದ ಮಾಘಸ್ನಾನ

Last Updated 19 ಡಿಸೆಂಬರ್ 2012, 6:57 IST
ಅಕ್ಷರ ಗಾತ್ರ

ಹಾಸನ: `ಕಳೆದ ವರ್ಷವೂ ಇದೇ ಚಿತ್ರಗಳನ್ನು ನೋಡಿದ್ದೆವು, ಈ ವರ್ಷವೂ ಅದನ್ನೇ ಏಕೆ ನೋಡಬೇಕು? ನಮಗೆ `ಸಂಗೊಳ್ಳಿ ರಾಯಣ್ಣ' ತೋರಿಸಿ ಎಂದು ಹೊಳೆನರಸೀಪುರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಶಿಕ್ಷಕರಿಗೆ ದುಂಬಾಲು ಬಿದ್ದಿದ್ದಾರೆ.

ಮಕ್ಕಳಿಗೆ ಉತ್ತಮ ಸಂದೇಶದ ಚಲನಚಿತ್ರಗಳನ್ನು ತೋರಿಸಿ, ಅವರಲ್ಲಿ ಸದಭಿರುಚಿ ಮೂಡಿಸುವ ಉದ್ದೇಶದಿಂದ ಜಿಲ್ಲಾಡಳಿತ ಕೆಲವು ವರ್ಷಗಳಿಂದ ಮಕ್ಕಳ ಚಲನಚಿತ್ರೋತ್ಸವ ಆಯೋಜಿಸುತ್ತಿದೆ. ಆದರೆ ಪ್ರತಿ ವರ್ಷವೂ ಅದೇ ಚಿತ್ರಗಳ ಪ್ರದರ್ಶನದಿಂದ ಮಕ್ಕಳು ಬೇಸತ್ತಿದ್ದಾರೆ. `ಎರಡು ವರ್ಷಗಳಿಂದ `ಬೇಬೀಸ್ ಡೇ ಔಟ್' ಮತ್ತು `ಕೇರ್ ಆಫ್ ಫುಟ್‌ಪಾತ್' ಸಿನಿಮಾಗಳನ್ನು ನೋಡುತ್ತಿದ್ದೇವೆ. ಈ ಚಲನಚಿತ್ರಗಳನ್ನು ಟಿ.ವಿ.ಯಲ್ಲಿಯೂ ಹಲವು ಬಾರಿ ನೋಡಿದ್ದೇವೆ. ಬೇಕಾದರೆ ಇನ್ನೂ ಐದು ರೂಪಾಯಿ ಹೆಚ್ಚು ಕೊಡುತ್ತೇವೆ, ಬೇರೆ ಸಿನಿಮಾ ತೋರಿಸಿ' ಎಂದು ವಿದ್ಯಾರ್ಥಿಗಳು ಗೋಗರೆಯುತ್ತಿದ್ದಾರೆ.

ಡಿ.10ರಿಂದ ಜಿಲ್ಲೆಯಲ್ಲಿ ಮಕ್ಕಳ ಚಲನಚಿತ್ರೋತ್ಸವ ಆರಂಭವಾಗಿದ್ದು, ಮಕ್ಕಳಿಂದ ತಲಾ ಹತ್ತು ರೂಪಾಯಿ ಪಡೆದು ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಪ್ರತಿ ತರಗತಿಗೆ 56 ಟಿಕೆಟ್‌ಗಳಂತೆ ಶಾಲೆಗಳಿಗೆ ಟಿಕೆಟ್‌ಗಳನ್ನು ಕಳುಹಿಸಲಾಗಿದೆ.

ತರಗತಿಯಲ್ಲಿ 45 ರಿಂದ 50 ಮಕ್ಕಳಿರುತ್ತಾರೆ, ಉಳಿದ ಹಣವನ್ನು ಯಾರು ಕೊಡಬೇಕು? ಹಳೆಯ ಚಿತ್ರ ಎಂದರೆ ಮಕ್ಕಳು ನಮಗೆ ಬೇಡ ಎನ್ನುತ್ತಾರೆ ನಾವೇನು ಮಾಡಬೇಕು? ಎಂಬುದು ಶಿಕ್ಷಕರ ಪ್ರಶ್ನೆ. ಕೆಲವು ಶಿಕ್ಷಕರಂತೂ 560 ರೂಪಾಯಿಯನ್ನು ನಾವೇ ಕೊಡುತ್ತೇವೆ, ಚಲನಚಿತ್ರೋತ್ಸವಕ್ಕೆ ಹೋಗಿ ಬನ್ನಿ ಎಂದು ಮಕ್ಕಳಿಗೆ ಹೇಳಿದ್ದಾರೆ.

ಹೊಳೆನರಸೀಪುರ ಪ್ರೌಢಶಾಲೆಯ ಕೆಲವು ಮಕ್ಕಳು ಉಪ ಪ್ರಾಂಶುಪಾಲರಿಗೆ ಪತ್ರ ಬರೆದು, ನಮಗೆ ಬೇರೆ ಚಿತ್ರ ತೋರಿಸಿ ಎಂದು ಮನವಿ ಮಾಡಿಕೊಂಡ್ದ್ದಿದರು. ಆದರೆ ಅಸಹಾಯಕರಾಗಿರುವ ಅವರು `ಜಿಲ್ಲಾಧಿಕಾರಿ ಆದೇಶವಿದೆ ಚಿತ್ರ ನೋಡಿ ಬನ್ನಿ' ಎಂಬ ಉತ್ತರ ನೀಡಿದ್ದಾರೆ.

ಮಕ್ಕಳಿಂದ ಇಂಥ ದೂರು ಬಂದಿರುವ ಹಿನ್ನೆಲೆಯಲ್ಲಿ ಶಾಲೆಯ ಕೆಲವು ಶಿಕ್ಷಕರು ಚಿತ್ರಮಂದಿರದ ವ್ಯವಸ್ಥಾಪಕರನ್ನು ಭೇಟಿ ಮಾಡಿ, ಬೇರೆ ಚಿತ್ರ ಪ್ರದರ್ಶಿಸಲು ಸಾಧ್ಯವೇ? ಎಂದು ಕೇಳಿಕೊಂಡಿದ್ದಾರೆ. `ಅಂಥ ಧೈರ್ಯ ತೋರಿಸಿದರೆ ನಮ್ಮ ಪರವಾನಗಿಯೇ ರದ್ದಾಗಬಹುದು' ಎಂಬ ಭೀತಿಯನ್ನು ಅವರು ವ್ಯಕ್ತಪಡಿಸಿದ್ದಾರೆ.

ಸಂಬಂಧಪಟ್ಟ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದರೆ, `ಜಿಲ್ಲಾಧಿಕಾರಿಯಿಂದ ಆದೇಶವಾಗಿದೆ, ಬದಲಿಸಲು ಸಾಧ್ಯವೇ ಇಲ್ಲ' ಎಂದಿದ್ದಾರೆ. ಕೊನೆಗೆ ಕೆಲವು ವಿದ್ಯಾರ್ಥಿಗಳ ಪಾಲಕರು ಮಾಧ್ಯಮದವರಿಗೆ ಈ ವಿಚಾರ ತಿಳಿಸಿದ್ದಾರೆ.

ಹೊಳೆನರಸೀಪುರ ತಾಲ್ಲೂಕಿನಲ್ಲಿ ಎರಡು ವರ್ಷಗಳಿಂದ ಅದೇ ಚಿತ್ರಗಳು ಪ್ರದರ್ಶನಗೊಂಡಿವೆ. ಅರಸೀಕೆರೆಯಲ್ಲೂ ಕಳೆದ ವರ್ಷ `ಕೊಟ್ರೇಶಿ ಕನಸು' ಪ್ರದರ್ಶನವಾಗಿತ್ತು. ಈ ವರ್ಷವೂ `ಕೊಟ್ರೇಶಿ ಕನಸು' ಮತ್ತು `ಕುಹೂ ಕುಹೂ' ಚಿತ್ರ ಪ್ರದರ್ಶನ ಕಂಡಿದೆ.

ಉಳಿದ ತಾಲ್ಲೂಕುಗಳಲ್ಲಿ ಬೇರೆಬೇರೆ ಚಿತ್ರಗಳನ್ನು ಪ್ರದರ್ಶಿಸಿದ್ದರೂ, ಅವು ಯಾವುವೂ ಹೊಸ ಚಿತ್ರಗಳಲ್ಲ. ಸಕಲೇಶಪುರದಲ್ಲಿ ಕಳೆದ ವರ್ಷ `ಮಕ್ಕಳ ಸಾಹಸ' ಪ್ರದರ್ಶಿಸಿದ್ದರೆ. ಈ ವರ್ಷ `ಕಲರವ' ಪ್ರದರ್ಶಿಸಿದ್ದಾರೆ. ಈ ಚಿತ್ರವನ್ನು ಚಂದನ ವಾಹಿನಿ ಹಲವು ಬಾರಿ ಪ್ರಸಾರ ಮಾಡಿದೆ, ನಾವು ನೋಡಿದ್ದೇವೆ ಎನ್ನುತ್ತಾರೆ ಮಕ್ಕಳು.

ಕೆಲವು ವರ್ಷಗಳಿಂದ ಮಕ್ಕಳಿಗೆ `ಜುರಾಸಿಕ್ ಪಾರ್ಕ್', `ಚಿನ್ನಾರಿಮುತ್ತ', `ಕುಹೂ ಕುಹೂ', `ಕೊಟ್ರೇಶಿ ಕನಸು', `ಚಿಲಿಪಿಲಿ ಹಕ್ಕಿಗಳು'...  ಹೀಗೆ ಕೆಲವೇ ಕೆಲವು ಆಯ್ದ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.

ಇವೆಲ್ಲವೂ ಹಳೆಯ ಮತ್ತು ಹಲವು ಬಾರಿ ನೋಡಿದ ಚಿತ್ರಗಳು. ಮತ್ತೆ ಮತ್ತೆ ಏಕೆ ನೋಡಬೇಕು ಎಂಬುದು ಮಕ್ಕಳ ಪ್ರಶ್ನೆಯಾದರೆ, ದುಡ್ಡು ಸಂಗ್ರಹಿಸಿ ಮಕ್ಕಳನ್ನು ಚಿತ್ರಮಂದಿರಕ್ಕೆ ಕರೆದೊಯ್ಯುವುದು ಶಿಕ್ಷಕರಿಗೆ ಹಿಂಸೆಯಾಗುತ್ತಿದೆ. ಇಂಥ ಬಲವಂತದ ಮಾಘಸ್ನಾನ ಯಾಕೆ ಎಂದು ಶಿಕ್ಷಕರು ಪ್ರಶ್ನಿಸುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT