ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಲನಚಿತ್ರೋತ್ಸವ ಆತ್ಮವಿಶ್ವಾಸದ ಸಂಜೀವಿನಿ

Last Updated 5 ನವೆಂಬರ್ 2011, 19:45 IST
ಅಕ್ಷರ ಗಾತ್ರ

ಬೆಂಗಳೂರು: `ಚಲನಚಿತ್ರೋತ್ಸವ ಪ್ರೇಕ್ಷಕರಲ್ಲಿ ಅಭಿರುಚಿ ಬೆಳೆಸುವ ಜತೆಗೆ ಚಿತ್ರೋದ್ಯಮಕ್ಕೆ ಆತ್ಮವಿಶ್ವಾಸ ಮೂಡಿಸಲಿದೆ~ ಎಂದು ಹಿರಿಯ ನಟಿ ಜಯಮಾಲಾ ಅಭಿಪ್ರಾಯಪಟ್ಟರು.

ಕರ್ನಾಟಕ ಚಲನಚಿತ್ರ ಅಕಾಡೆಮಿಯು ಕರ್ನಾಟಕ ಮಾಧ್ಯಮ ಅಕಾಡೆಮಿಯ ಸಹಯೋಗದಲ್ಲಿ ನಗರದ ಬಾದಾಮಿ ಹೌಸ್‌ನ ಪ್ರಿಯದರ್ಶಿನಿ ಚಿತ್ರಮಂದಿರದಲ್ಲಿ ಬೆಂಗಳೂರಿನ ನಾಲ್ಕನೇ ಅಂತರರಾಷ್ಟ್ರೀಯ ಸಿನಿಮೋತ್ಸವದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

`ಚಲನಚಿತ್ರ ಎಂಬುದು ಗಡಿ, ಎಲ್ಲೆಗಳನ್ನು ಮೀರಿದ ಪ್ರಭಾವಶಾಲಿ ಮಾಧ್ಯಮ. ಅದೊಂದು ವಿಶ್ವಮಾನವ ಕಲ್ಪನೆಯ ಸಾಕಾರ. ಚಲನಚಿತ್ರೋತ್ಸವಗಳಿಂದ ಪ್ರೇಕ್ಷಕರಲ್ಲಿ ಚಿತ್ರ ವೀಕ್ಷಿಸುವ ದೃಷ್ಟಿಕೋನ ಬೆಳೆಸಬಹುದು. ಚಿತ್ರೋದ್ಯಮಿಗಳಿಗೂ ವಿಶ್ವದ ಸಮಕಾಲೀನ ಸಂಗತಿಗಳ ಪಾಠವಿದ್ದಂತೆ~ ಎಂದರು.

`ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳು ಎಲ್ಲೆಡೆ ನಡೆಯುತ್ತಿವೆ. ಇದರಿಂದ ಜಗತ್ತಿನ ಪ್ರತಿಭಾವಂತ ನಿರ್ದೇಶಕರು, ತಂತ್ರಜ್ಞರನ್ನು ಪರಿಚಯಿಸಲು ಅನುಕೂಲವಾಗಲಿದೆ. ಪ್ರಪಂಚದಲ್ಲಿನ ಆಗುಹೋಗುಗಳ ಬಗ್ಗೆ ತಿಳಿವಳಿಕೆ ಹೆಚ್ಚುತ್ತದೆ. ಬೇರೆ ರಾಜ್ಯ- ರಾಷ್ಟ್ರಗಳ ಚಿತ್ರಗಳನ್ನು ಹೋಲಿಸಿ ನೋಡುವ ಅವಕಾಶ ಒಂದೆಡೆ ಸಿಗಲಿದೆ~ ಎಂದು ಹೇಳಿದರು.

`ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಬೇಕು ಎಂಬ ಕನ್ನಡಿಗರ ಕನಸು ನನಸಾಗುವ ಸಂದರ್ಭವಿದು. ಇದೇ ರೀತಿಯಲ್ಲಿ ಚಲನಚಿತ್ರ ಅಮೃತ ಮಹೋತ್ಸವ ಭವನ ನಿರ್ಮಾಣ ಹಾಗೂ ಕನ್ನಡ ಚಿತ್ರೋದ್ಯಮದ ಸಮೀಕ್ಷೆ ಕಾರ್ಯ ಕೂಡ ಶೀಘ್ರವಾಗಿ ನಡೆಯಬೇಕು~ ಎಂದು ಅವರು ಹೇಳಿದರು.

ಸ್ವಾಗತ ಭಾಷಣ ಮಾಡಿದ ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯರಾದ `ಪ್ರಜಾವಾಣಿ~ ಸುದ್ದಿ ಸಂಪಾದಕ ಗಂಗಾಧರ ಮೊದಲಿಯಾರ್, `ರಾಷ್ಟ್ರದಲ್ಲಿ ಬೆಂಗಳೂರು ಸದಭಿರುಚಿಯ ಪ್ರೇಕ್ಷಕರನ್ನು ಹೊಂದಿದ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಲನಚಿತ್ರ ಒಂದು ಸಂಸ್ಕೃತಿಯಾಗಿ ಬೆಳೆದು ಬಂದಿರುವ ಬೆಂಗಳೂರು, ಸಿನಿಮಾ ಅಕಾಡೆಮಿ ಮೂಲಕ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕೇಂದ್ರವಾಗಿ ಮೂಡುತ್ತಿರುವುದು ಸಿನಿ ಪ್ರೇಮಿಗಳಿಗೆ ಪುಳಕ ತರುವ ಸಂಗತಿ~ ಎಂದು ಹೇಳಿದರು.

`ಕರ್ನಾಟಕ ಚಲನಚಿತ್ರ ಅಕಾಡೆಮಿ ಚಿತ್ರಪ್ರೇಮಿಗಳ ನಿರೀಕ್ಷೆಯನ್ನು ಹುಸಿಗೊಳಿಸದೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಎಲ್ಲರನ್ನೂ ಒಳಗೊಂಡು ಚಿತ್ರೋತ್ಸವ ನಡೆಸಲಿದೆ ಎಂಬ ವಿಶ್ವಾಸವಿದೆ. ಆ ಮೂಲಕ ಸಂಸ್ಕೃತಿ ರೂಪುಗೊಳ್ಳಲಿದೆ~ ಎಂದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ.ಎಸ್. ನಾಗಾಭರಣ ಮಾತನಾಡಿ, `ಚಿತ್ರೋದ್ಯಮದವರು ಕನಸುಗಳನ್ನು ಮಾರಾಟ ಮಾಡುವವರು. ಕನಸು ಕಾಣುವುದೇ ಅವರ ವೃತ್ತಿ. ಆದರೆ ಕನ್ನಡ ಚಿತ್ರರಂಗ ದ್ವೀಪದಂತಾಗಿದ್ದು, ಅದರಿಂದ ಹೊರ ಬರಬೇಕಿದೆ~ ಎಂದು ಹೇಳಿದರು.

`ನಮ್ಮ ಸಿನಿಮಾ ಸಂಸ್ಕೃತಿಯಲ್ಲಿ ಏನನ್ನು ಕಳೆದುಕೊಂಡಿದ್ದೇವೆ ಎಂಬುದನ್ನು ತಿಳಿಯಲು ಹಾಗೂ ಅನುಭವಿಸಲು ಈ ಚಿತ್ರೋತ್ಸವ ಸಹಕಾರಿಯಾಗಲಿದೆ~ ಎಂದು ನಾಗಾಭರಣ ಅಭಿಪ್ರಾಯಪಟ್ಟರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಡಿ.ಪಿ. ಪರಮೇಶ್ವರ್, `ಚಲನಚಿತ್ರ ಎಂಬುದು ನೆರಳು- ಬೆಳಕಿನ ಅನುಭವ ಹಂಚಿಕೊಳ್ಳುವ ಮಾಧ್ಯಮ. ಕನ್ನಡದ್ಲ್ಲಲಿ ಅತಿ ಹೆಚ್ಚಿನ ಸಂಖ್ಯೆಯ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಅಂತರರಾಷ್ಟ್ರೀಯ ದರ್ಜೆಯ ಚಿತ್ರಗಳೂ ಮೂಡಿಬರುತ್ತಿವೆ. ಇದೀಗ ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಚಿತ್ರೋತ್ಸವ ನಡೆಯುತ್ತಿರುವುದು ಸ್ವಾಗತಾರ್ಹ~ ಎಂದರು.

ವಿಚಾರಸಂಕಿರಣದಲ್ಲಿ ಎಚ್.ಎನ್.ನರಹರಿರಾವ್, ಕೇಸರಿ ಹರವೂ, ಬಿ.ಎನ್. ಸುಬ್ರಹ್ಮಣ್ಯ, ಕೃಷ್ಣ ಮಾಸಡಿ ಪ್ರಬಂಧ ಮಂಡಿಸಿದರು. ಸುಚಿತ್ರಾ ಫಿಲಂ ಸೊಸೈಟಿ ಕಾರ್ಯದರ್ಶಿ ಎನ್. ವಿದ್ಯಾಶಂಕರ್ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶ್ ಬೆಳವಾಡಿ ಕಾರ್ಯಕ್ರಮ ನಿರೂಪಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT