ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳವಳಿ ಹತ್ತಿಕ್ಕುವ ಯತ್ನ: ಬಿ.ಎಸ್.ಪೈ

Last Updated 8 ಜೂನ್ 2011, 7:15 IST
ಅಕ್ಷರ ಗಾತ್ರ

ಕಾರವಾರ: ಕಪ್ಪುಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಯೋಗ ಗುರು ಬಾಬಾ ರಾಮದೇವ್ ಆರಂಭಿಸಿರುವ ಚಳಿವಳಿಗೆ ದೇಶದಾದ್ಯಂತ ವ್ಯಾಪಕ ಬೆಂಬಲ ಸಿಕ್ಕಿರುವುದನ್ನು ನೋಡಿ ಕಂಗಾಲಾಗಿರುವ ಕಾಂಗ್ರೆಸ್ ಚಳವಳಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ಹಿಂದು ಜಾಗರಣ ವೇದಿಕೆಯ ರಾಜ್ಯ ಕಾರ್ಯದರ್ಶಿ ಬಿ.ಎಸ್. ಪೈ ದೂರಿದರು.

ನಗರದಲ್ಲಿ ಈಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸತ್ಯಾಗ್ರಹಿಗಳು ನಿದ್ದೆ ಮಾಡುತ್ತಿರುವ ಸಂದರ್ಭದಲ್ಲಿ ಏಕಾಏಕಿ ದಾಳಿ ನಡೆಸಿದ ಪೊಲೀಸರು ಬಾಬಾ ಅವರಿಗೆ ವಿನಾಕಾರಣ ಹಿಂಸೆ ನೀಡಿರುವುದರ ಹಿಂದೆ ಕಾಂಗ್ರೆಸ್ ಪಿತೂರಿ ಅಡಗಿದೆ ಎಂದು ಆರೋಪಿಸಿದರು.

ಸತ್ಯಾಗ್ರಹ ಸ್ಥಳದ ಮೇಲೆ ನಡೆದಿರುವ ಪೊಲೀಸ್ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಅವರು, ಇದು ತುರ್ತು ಪರಿಸ್ಥಿತಿಯ ಸಂದರ್ಭವನ್ನು ನೆನಪಿಗೆ ತರುವಂತಿದೆ. ಒಂದು ರೀತಿಯ ಭಯದ ವಾತಾವರಣವನ್ನು ಸೃಷ್ಟಿ ಮಾಡಲು ಕಾಂಗ್ರೆಸ್ ಹೊರಟಿದೆ ಎಂದರು.

ವಿದೇಶದ ಬ್ಯಾಂಕ್‌ಗಳಲ್ಲಿರುವ ಕೋಟಿಗಟ್ಟಲೆ ಹಣವನ್ನು ತಂದು ಅದನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಣೆ ಮಾಡಬೇಕು ಎನ್ನುವುದು ರಾಮ್‌ದೇವ್ ಅವರ ಬೇಡಿಕೆ ಆಗಿದೆ. ಇದಕ್ಕೆ ಕಾಂಗ್ರೆಸ್ ಪಕ್ಷ ಸುತಾರಾಂ ಒಪ್ಪುತ್ತಿಲ್ಲ ಏಕೆಂದರೆ ವಿದೇಶದಲ್ಲಿರುವ ಹೆಚ್ಚಿನ ಹಣ ಕಾಂಗ್ರೆಸ್ ಪಕ್ಷದವರಿಗೆ ಸೇರಿದೆ ಎಂದರು.

ಸಂಘ ಪರಿವಾರ ಬೆಂಬಲದಿಂದಲೇ ಬಾಬಾ ರಾಮ್‌ದೇವ್ ಅವರ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಹೇಳುತ್ತಿದೆ. ಎಲ್ಲ ಒಳ್ಳೆಯ ಕೆಲಸಕ್ಕೆ ಸಂಘ ಪರಿವಾರ ಬೆಂಬಲ ನೀಡುತ್ತದೆ ಇದರಲ್ಲೇನು ತಪ್ಪಿದೆ ಎಂದರು.

ಯಾವುದೇ ರಾಜಕೀಯ ಪಕ್ಷದ ಬೆಂಬಲವಿಲ್ಲದೆ ರಾಮ್‌ದೇವ್ ಸತ್ಯಾಗ್ರಹ ಕೈಗೊಂಡಿರುವ ಬಾಬಾ ರಾಮ್‌ದೇವ್ ಯೋಗದ ಮೂಲಕ ದೇಶದ ಸಂಸ್ಕೃತಿಯನ್ನು ಇಡೀ ಜಗತ್ತಿಗೆ ಪರಿಚಯಿಸುತ್ತಿದ್ದಾರೆ ಎಂದು ಪೈ ನುಡಿದರು.

ಪಶ್ಚಿಮ ಏಷ್ಯಾ ಹಾಗೂ ಆಫ್ರಿಕಾದಲ್ಲಿ ಜನರು ಸರ್ಕಾರದ ವಿರುದ್ಧ ದಂಗೆ ಎದ್ದಂತೆ ಕಾಮನ್‌ವೆಲ್ತ್ ಕ್ರೀಡಾಕೂಟ ಹಗರಣ, ಆದರ್ಶ ಅಪಾರ್ಟ್‌ಮೆಂಟ್ ಹಗರಣ, 2ಜಿ ಸ್ಪೆಕ್ಟ್ರಮ್ ಹಗರಣದಲ್ಲಿ ಮುಳುಗಿರುವ ಯುಪಿಎ ಸರ್ಕಾರದ ವಿರುದ್ಧವೂ ಜನರು ದಂಗೆ ಏಳಲಿದ್ದಾರೆ ಎನ್ನುವ ಭಯದಿಂದ ಚಳವಳಿಯನ್ನು ಬೇರು ಮಟ್ಟದಲ್ಲಿ ಕಿತ್ತೊಗೆಯಲು ಕೇಂದ್ರ ಸರ್ಕಾರ ಹುನ್ನಾರ ನಡೆಸಿದೆ ಎಂದರು.

ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಬಂದಿರುವ ಕಾರಣ ಪೊಲೀಸರು ದಾಳಿ ನಡೆಸಿದರು ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ, ಇದೊಂದು ಅಹಿಂಸಾತ್ಮಕ ಚಳವಳಿ ಎಂದು ರಾಮ್‌ದೇವ್ ಮೊದಲೇ ಹೇಳಿದ್ದರು. ಒಟ್ಟಿನಲ್ಲಿ ದೇಶದ್ರೋಹಿಗಳಿಗೆ ಈ ಚಳವಳಿ ಬೇಡವಾಗಿದೆ ಎಂದು ಪೈ ಆಕ್ರೋಶ ವ್ಯಕ್ತಪಡಿಸಿದರು.

ಯುಪಿಎ ಅಧ್ಯಕ್ಷೆ  ಸೋನಿಯಾಗಾಂಧಿ ಈ ಎಲ್ಲ ನಾಟಕೀಯ ಘಟನೆಯ ಸೂತ್ರಧಾರರಾಗಿದ್ದಾರೆ. ದೇಶದಲ್ಲಿ ಹಿಂದು ಸಮಾಜವನ್ನು ನಿಶ್ಯಕ್ತ ಮಾಡಿ ಕ್ರಿಶ್ಚಿಯನ್ ಧರ್ಮವನ್ನು ಹೇರಲು ಅವರು ಹೊರಟ್ಟಿದ್ದಾರೆ. ಆರ್.ಎಸ್.ಎಸ್. ಸಂಘವನ್ನು ನಿಷೇಧ ಮಾಡುವ ಹುನ್ನಾರವನ್ನೂ ಅವರು ನಡೆಸಿದ್ದಾರೆ ಎಂದು ಪೈ ದೂರಿದರು. ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಮಹೇಶ ಹರಿಕಂತ್ರ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT