ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳವಳಿಯಜ್ಞಾನ ' ಸಿಜ್ಞಾ '

Last Updated 22 ಜುಲೈ 2013, 19:59 IST
ಅಕ್ಷರ ಗಾತ್ರ

ಕೃಷಿ ಇಲಾಖೆ ಸೇರಿದಂತೆ ಎಂಟು ಇಲಾಖೆಗಳಿಂದ ಮಾಹಿತಿ ಬಯಸಿ ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಅರ್ಜಿ ಸಲ್ಲಿಸಿರುವ ಮಲ್ಲಿಕಾರ್ಜುನ್ ದ್ವಿತೀಯ ಪಿಯುಸಿ ವಿದ್ಯಾರ್ಥಿ. ಈ ಮುನ್ನ ಕೇವಲ ಪಠ್ಯ ಪುಸ್ತಕಗಳಿಗೆ ಮಾತ್ರ ಸೀಮಿತವಾಗಿದ್ದವನು ಈಗ ಗೆಳೆಯರ ಬಳಗದಲ್ಲಿ ಆರ್‌ಟಿಐ ಕಾರ್ಯಕರ್ತ.

ದ್ವಿತೀಯ ಪಿಯು ಪೂರ್ಣಗೊಳಿಸಿ ಒತ್ತಡದಿಂದಲೇ ಕಂಕಣಕ್ಕೆ ಕೊರಳೊಡ್ಡಲು ಸಿದ್ಧವಿದ್ದ ಹಸೀನಾ ಕೌಸರ್, ಸಿದ್ಧಗಂಗಾ ಮಹಿಳಾ ಕಾಲೇಜಿನ ಪ್ರಥಮ ಬಿಎ ವಿದ್ಯಾರ್ಥಿ. ಅಪ್ಪ, ಅಮ್ಮನ ಮನವೊಲಿಸಿ ಮದುವೆಯನ್ನು ಮುಂದೂಡಿದ್ದಾಳೆ. ಪದವಿ ತರಗತಿಯ ಮೆಟ್ಟಿಲಲ್ಲೇ ಸಮಾಜಮುಖಿಯಾಗಿ ತೊಡಗುವ ತುಡಿತ ಆಕೆಯದ್ದು.

ತನ್ನ ನೆರೆ ಹೊರೆಯ ಅಂಗವಿಕಲರಿಗೆ ಮಾಸಾಶನ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕೊಡಿಸುವ ಹೋರಾಟದಲ್ಲಿ ತೊಡಗಿಕೊಂಡಿರುವ ಸೌಂದರ್ಯ, ಪದವಿ ಶಿಕ್ಷಣದ ಜತೆಯಲ್ಲಿಯೇ ಅಂಗವಿಕಲರ ಪರವಾದ ತನ್ನ ಧ್ವನಿಯನ್ನು ಗಟ್ಟಿಗೊಳಿಸಿರುವಾಕೆ.

ವಿದ್ಯಾರ್ಥಿಗಳಲ್ಲಿ ನಾಯಕತ್ವ ಬೆಳೆಸಿ, ಜನಪರ ಹೋರಾಟದ ಮುಖ್ಯವಾಹಿನಿಗೆ ಸೇರಿಸುವ ಉದ್ದೇಶದಿಂದ ತುಮಕೂರಿನಲ್ಲಿ ಸಮಾನ ಮನಸ್ಕ ಗೆಳೆಯರು 2007ರಲ್ಲಿ ಹುಟ್ಟುಹಾಕಿದ ಚಳವಳಿಗಳ ಪಾಠಶಾಲೆ `ಸಿಜ್ಞಾ'ದಲ್ಲಿ ಬದಲಾವಣೆಯ ಕನಸು ಹೊತ್ತು ಬಂದಿರುವ ಇಂತಹ ಹಲವು ವಿದ್ಯಾರ್ಥಿಗಳಿದ್ದಾರೆ.

`ಸಿಜ್ಞಾ'ದ ಗರಡಿಯಲ್ಲಿ ರೂಪು ಪಡೆದ ಹತ್ತು ವಿದ್ಯಾರ್ಥಿಗಳು ಈಗಾಗಲೇ ರೈತ ಸಂಘ, ನ್ಯಾಷನಲ್ ಪೀಪಲ್ ಫಾರ್ ಮೂವ್‌ಮೆಂಟ್, ದಲಿತ ಸಂಘರ್ಷ ಸಮಿತಿ ಸೇರಿದಂತೆ ಪ್ರಗತಿಪರ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದು, ಹೋರಾಟದ ಮುಂಚೂಣಿಯಲ್ಲಿದ್ದಾರೆ. 

ಪರಿಸರ, ಮೌಢ್ಯಗಳ ವಿರುದ್ಧ ಜಾಗೃತಿ, ಅಭಿವೃದ್ಧಿ ಹೆಸರಿನಲ್ಲಿ ಜೀವವೈವಿಧ್ಯಗಳ ನಾಶ, ದುರ್ಬಲ ಮತ್ತು ಅಸಹಾಯಕರ ಪರವಾಗಿ ಹಕ್ಕುಗಳ ಪ್ರತಿಪಾದನೆ ಸೇರಿದಂತೆ ಎಲ್ಲ ಕ್ಷೇತ್ರಗಳ ಸಮಸ್ಯೆಗಳು ಮತ್ತು ಮೌಢ್ಯಗಳ ಬಗ್ಗೆ ನಾಟಕ, ಸಂವಾದ, ಕಾರ್ಯಾಗಾರ, ಹೋರಾಟಗಳ ಮೂಲಕ `ಸಿಜ್ಞಾ' ವಿದ್ಯಾರ್ಥಿಗಳು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. `ನಾವು ನಿಮ್ಮನ್ನು ನಂಬುತ್ತೇವೆ, ನೀವು ಬದಲಾಗಬಹುದು, ಜಗತ್ತನ್ನು ಬದಲಾಯಿಸಬಹುದು' ಎನ್ನುವ ಧ್ಯೇಯದಲ್ಲಿ ಆರಂಭವಾದ ಸಂಸ್ಥೆಯ ಮಾರ್ಗದರ್ಶನದಲ್ಲಿ ಹಲವರ ಬದುಕಿನ ಮಾರ್ಗಗಳು ಬದಲಾಗಿವೆ.

ವಿದ್ಯಾರ್ಥಿಗಳ ಆಯ್ಕೆ
ಶಾಲೆಗಳಿಗೆ ಭೇಟಿ ನೀಡುವ ಸಿಜ್ಞಾದ ಸ್ವಯಂ ಸೇವಕರು, ವಿದ್ಯಾರ್ಥಿಗಳಲ್ಲಿನ ಪರಿಸರ, ಭಾಷಣ ಕಲೆ, ಜನಪರ ಆಸಕ್ತಿಗಳನ್ನು ಗುರುತಿಸುವರು. ನಂತರ ಅವರನ್ನು ವೈಯಕ್ತಿಕವಾಗಿ ಸಂಪರ್ಕಿಸಿ ಸಂಘಟನೆಯಲ್ಲಿ ಗುರುತಿಸಿಕೊಳ್ಳಲು ಆಹ್ವಾನಿಸುವರು. ಇಲ್ಲಿ ಸಮಾನ ಆಸಕ್ತಿಯ ಆಧಾರದಲ್ಲಿ ಗುಂಪು ಮಾಡಲಾಗುತ್ತದೆ. `ಹಸಿರು ಬಳಗ' ಪರಿಸರ ಜಾಗೃತಿಯಲ್ಲಿ ತೊಡಗಿದರೆ, `ಆರ್‌ಟಿಐ ಬಳಗ', ತನ್ನ ಸುತ್ತಲಿನ ಅಕ್ರಮಗಳನ್ನು ಹುಡುಕಿ ಬಯಲು ಮಾಡುತ್ತಿದೆ.

`ಭೀಮ ಸಂದ್ರ ಕೆರೆ ಉಳಿಸಿ' ಅಭಿಯಾನ ತುಮಕೂರು ಬಳಿಯ ಭೀಮಸಂದ್ರ ಕೆರೆಯ ಸಂರಕ್ಷಣೆ, ಒತ್ತುವರಿ, ತ್ಯಾಜ್ಯ ಕೆರೆಗೆ ಸೇರುತ್ತಿರುವ ಬಗ್ಗೆ  ಜಾಗೃತಿಗೆ ಮುಂದಾಗಿದೆ. ತುಮಕೂರು ನಗರ ಪಾಲಿಕೆ ಸದಸ್ಯರೊಬ್ಬರ ಆಸ್ತಿಗೆ ಧಕ್ಕೆಯಾಗುವ ಕಾರಣದಿಂದ ರಸ್ತೆಯ ಒಂದು ಭಾಗವನ್ನು ಮಾತ್ರ ವಿಸ್ತರಣೆ ಮಾಡಿದ್ದನ್ನು ಆರ್‌ಟಿಐ ಮೂಲಕ ಪತ್ತೆ ಹಚ್ಚಿರುವ `ಸಿಜ್ಞಾ' ವಿದ್ಯಾರ್ಥಿಗಳು ಜನಾಭಿಪ್ರಾಯ ರೂಪಿಸಿ ಯಶಸ್ಸು ಸಾಧಿಸಿದ್ದಾರೆ.

ಜನರಿಗೆ ಸಮಸ್ಯೆಗಳನ್ನು ಸರಳವಾಗಿ ಅರ್ಥ ಮಾಡಿಸಲು ಸಾಕ್ಷ್ಯಚಿತ್ರವನ್ನು ಬಳಸಿಕೊಳ್ಳಲಾಗುತ್ತಿದೆ. `ಅಂದು ಉಪ್ಪು- ಇಂದು ಬೀಜ' ಸಾಕ್ಷ್ಯಚಿತ್ರದ ಮೂಲಕ ಬಹುರಾಷ್ಟ್ರೀಯ ಕಂಪೆನಿಗಳು ದೇಶದ ಕೃಷಿ ಕ್ಷೇತ್ರದ ಮೇಲೆ ಸಾಧಿಸುತ್ತಿರುವ ಹಿಡಿತದ ಬಗ್ಗೆ ತಿಳಿ ಹೇಳಲಾಗುತ್ತಿದೆ. ರೈತರ ಆತ್ಮಹತ್ಯೆ, ಮೂಢನಂಬಿಕೆ, ನೆಲ, ಜಲದ ಮೇಲೆ ಬಹುರಾಷ್ಟ್ರೀಯ ಕಂಪೆನಿಗಳ ಪ್ರಭಾವ, ಬಯಲು ಸೀಮೆಗೆ ನೇತ್ರಾವತಿ ಮತ್ತು ಎತ್ತಿನಹೊಳೆ ನದಿ ತಿರುವು ಯೋಜನೆ ಜಾರಿಯ ಸಾಧಕ, ಬಾಧಕಗಳನ್ನು ತಿಳಿಯಲು ವಿದ್ಯಾರ್ಥಿಗಳನ್ನು ಆಯಾ ಸ್ಥಳಕ್ಕೆ ಕರೆದೊಯ್ಯಲಾಗುತ್ತದೆ.

ಸಮಸ್ಯೆಗಳನ್ನು ಅರಿತ ವಿದ್ಯಾರ್ಥಿಗಳು ಯಾವ ರೀತಿ ಜನ ಜಾಗೃತಿಗೆ ಮುಂದಾಗಬೇಕೆಂದು `ಸಿಜ್ಞಾ' ಮಾರ್ಗದರ್ಶನ ನೀಡುತ್ತದೆ. `ಸಿಜ್ಞಾ'ದ ವಿದ್ಯಾರ್ಥಿಗಳು ಜನಪರ ಚಳವಳಿಗಳಲ್ಲಿ ಸ್ವಯಂ ಪ್ರೇರಿತರಾಗಿ ಪಾಲ್ಗೊಂಡು ತಮಟೆ ಬಾರಿಸುತ್ತ, ಕ್ರಾಂತಿಗೀತೆಗಳನ್ನು ಮೊಳಗಿಸುತ್ತ ಹೋರಾಟಕ್ಕೆ ಕಿಚ್ಚು ತುಂಬುವರು. ಈಗಾಗಲೇ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಸ್ಥೆಯಿಂದ ಜನಪರ ಪಾಠ ಕಲಿತಿದ್ದಾರೆ. ಸದ್ಯ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ಗರಡಿಯಲ್ಲಿ ಪಳಗುತ್ತಿದ್ದಾರೆ.

ಚಲನಶೀಲತೆಯ `ಸಿಜ್ಞಾ' ತನ್ನ ಆಡಳಿತ ಮಂಡಳಿಯನ್ನೇ ಪ್ರತಿವರ್ಷ ಬದಲಾಯಿಸುತ್ತದೆ. ಸಕ್ರಿಯವಾಗಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರು ಮಾತ್ರ ಸದಸ್ಯರಾಗಬಹುದು. ಹರೀಶ್, ಜ್ಞಾನಸಿಂಧು ಸ್ವಾಮಿ, ಭರತ್‌ರಾಜ್, ಪ್ರತಿಮಾ, ಫಾರೂಕ್ ಅಬ್ದುಲ್ಲಾ, ರುದ್ರ ಪ್ರಕಾಶ್, ಮಹೇಶ್, ಪ್ರಭಾಕರ್, ಮೋಹನ್ ಸಿಜ್ಞಾದ ಈಗಿನ ಸ್ವಯಂ ಸೇವಕರು.

`ನಮ್ಮ ಚಟುವಟಿಕೆಗಳಿಗೆ ಬೆಂಗಳೂರಿನ ಸಂವಾದ ಸಂಸ್ಥೆ, ಪ್ರಗತಿಪರ ಚಳವಳಿಗಳನ್ನು ಬೆಂಬಲಿಸುವವರು ನೆರವು ನೀಡುತ್ತಿದ್ದಾರೆ. `ಕಲಿಕೆ ಪರ್ಯಾಯ ಶಿಕ್ಷಣ' ಎನ್ನುವ ಯೋಜನೆಯಡಿ ಶುಲ್ಕ ಪಡೆದು ಉಳ್ಳವರ ಮಕ್ಕಳಿಗೂ ಪಠ್ಯೇತರ ಶಿಕ್ಷಣ ನೀಡುವ ಯೋಚನೆ ಇದೆ. ಈ ಶುಲ್ಕದಿಂದ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸಲು ನೆರವಾಗುತ್ತದೆ' ಎಂದು ಭವಿಷ್ಯದ ಯೋಜನೆಗಳನ್ನು ಬಿಚ್ಚಿಡುತ್ತಾರೆ `ಸಿಜ್ಞಾ' ಸ್ವಯಂಸೇವಕ ಜ್ಞಾನ ಸಿಂಧು ಸ್ವಾಮಿ.

`ಸಿಜ್ಞಾ' ಸೇರಿದಂತೆ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಯುವ ಜನಪರ ಸಂಘಟನೆಗಳು `ಯುವ ಚಾವಡಿ ಕರ್ನಾಟಕ' ಹೆಸರಿನಡಿ ಒಗ್ಗೂಡಿ ಕಾರ್ಯಕ್ರಮ ರೂಪಿಸಲು ಮುಂದಾಗಿರುವುದು ಆಶಾದಾಯಕ ಬೆಳೆವಣಿಗೆ. ಜ್ಞಾನ ಸಿಂಧು ಸ್ವಾಮಿ ಅವರನ್ನು (ಮೊ.9449768426) ಸಂಪರ್ಕಿಸಿ `ಸಿಜ್ಞಾ' ಪಾಠಶಾಲೆಯ ಮಾಹಿತಿ ಪಡೆಯಬಹುದು.
-ಡಿ.ಎಂ.ಕುರ್ಕೆ ಪ್ರಶಾಂತ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT